ಬೆಂಗಳೂರು: ನಗರದ ಕೆಂಪೇಗೌಡನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವರದಿ ಸಲ್ಲಿಸಲು ₹1 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ, ಪೊಲೀಸ್ ಇನ್ಸ್‌ಪೆಕ್ಟರ್ (PI ) ಶಿವಾಜಿ ರಾವ್ ಮತ್ತು ಉಪ ನಿರೀಕ್ಷಕ (PSI) ಶಿವಾನಂದ ಜಿ ಅವರನ್ನು ಲೋಕಾಯುಕ್ತ ಪೊಲೀಸರು ಎಚ್ಚರಿಕೆಯಿಂದ ದಾಳಿ ನಡೆಸಿ ಬಂಧಿಸಿದ್ದಾರೆ.
ಆವಲಹಳ್ಳಿ ನಿವಾಸಿ ಕೇಶವಮೂರ್ತಿ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅವರ ಹೆಸರನ್ನು ಕೈಬಿಡಲು ಈ ಇಬ್ಬರು ಅಧಿಕಾರಿಗಳು ಒಟ್ಟು ₹6 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಅಸಮಾಧಾನಗೊಂಡ ಕೇಶವಮೂರ್ತಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಡಿವೈಎಸ್‌ಪಿ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ತಂಡ ಕಾರ್ಯಾಚರಣೆ ರೂಪಿಸಿತು. ಅವರ ಸೂಚನೆಯಂತೆ ಕೇಶವಮೂರ್ತಿ ಅವರು ಶಂಕಿತ ಅಧಿಕಾರಿಗಳಿಗೆ ₹1 ಲಕ್ಷನ್ನು ಕೆಂಪೇಗೌಡನಗರ ಪೊಲೀಸ್ ಠಾಣೆಯ ಬಳಿ ನೀಡಿದ ವೇಳೆ, ತಕ್ಷಣವೇ ದಾಳಿ ನಡೆಸಿ ಪಿಐ ಮತ್ತು ಪಿಎಸ್‌ಐ ಅವರನ್ನು ಸ್ಥಳದಲ್ಲೇ ಬಂಧಿಸಲಾಯಿತು.ಇದನ್ನು ಓದಿ –BMTC Busನಲ್ಲಿ ವೃದ್ಧನಿಂದ ಮಹಿಳೆಗೆ ಲೈಂಗಿಕ ಕಿರುಕುಳ
ಬಂಧಿತರಿಂದ ₹1 ಲಕ್ಷ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.