ಮೈಸೂರು: ನಮ್ಮ ಪಕ್ಷದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಗೊಂದಲಗಳಿಲ್ಲ, ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾಹುಲ್ ಗಾಂಧಿ ಭೇಟಿ ಬಳಿಕ ಮಾತನಾಡಿದರು. ರಾಹುಲ್ ಗಾಂಧಿಯವರೊಂದಿಗೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರು ಗೂಡ್ಲೂರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿದ್ದು ಸ್ವಾಗತ ಮಾಡಲಾಗಿದೆ. ಸಂಜೆ ದೆಹಲಿಗೆ ತೆರಳುವಾಗಲೂ ಬೀಳ್ಕೊಡಲಾಗುವುದು ಎಂದರು.
ನಮ್ಮ ಪಕ್ಷದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅದೆಲ್ಲಾ ಟಿವಿ, ಪೇಪರ್ ನಲ್ಲಿ ಮಾತ್ರ ಬರುತ್ತಿರುವುದು. ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ಹೈಕಮಾಂಡ್ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ. ಶಾಸಕರಿಗೆ ಪಾಪ ಹೈಕಮಾಂಡ್ ವಿಚಾರ ಗೊತ್ತಿರುವುದಿಲ್ಲ. ಹಾಗಾಗಿ ಕೆಲವು ಶಾಸಕರು ಹೇಳಿಕೆ ಕೊಡುತ್ತಿದ್ದಾರೆ. ಅಧಿಕಾರ ಹಂಚಿಕೆ ವಿಚಾರ ನಾನು ಅಥವಾ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಬೇಕು. ಅಧಿಕಾರ ಹಂಚಿಕೆ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ವರಿಷ್ಠರ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ಶಾಸಕರಿಗಿಂತ ಹೆಚ್ಚಾಗಿ ಮಾಧ್ಯಮಗಳೇ ಈ ಕುರಿತು ಹೆಚ್ಚು ಮಾತನಾಡುತ್ತಿವೆ ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಸಿದ್ಧ:
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಸಿದ್ಧವಿದೆ. ಬೆಂಗಳೂರು ಮಾತ್ರವಲ್ಲ, ಜಿ.ಪಂ., ತಾ.ಪಂ. ಚುನಾವಣೆಗಳನ್ನೂ ನಡೆಸಲಾಗುವುದು. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ ರಾಜಕಾರಣಕ್ಕೆ ಮರಳುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಈಗ ಕುಮಾರಸ್ವಾಮಿ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು , ಕ್ರಿಯಾಶೀಲರಾಗಿದ್ದಾರೆ. ಅವರ ವರ್ತನೆ, ಹಾವಭಾವ ಇವುಗಳನ್ನು ಮಾಧ್ಯಮಗಳೇ ಗಮನಿಸಬೇಕು ನಾವು ಗಮನಿಸುವುದಿಲ್ಲ ಎಂದರು.
ಮಾರ್ಚ್ ಮೊದಲ ವಾರದಲ್ಲಿ ಬಜೆಟ್:
ಬಹುತೇಕ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿಗಳು ಇದೇ ಸಂದರ್ಭದಲ್ಲಿ ತಿಳಿಸಿದರು.
ಮುಖ್ಯಮಂತ್ರಿಯಾಗಿ ಸಾವಿರ ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಫೆ.13ರಂದು ಹಾವೇರಿಯಲ್ಲಿ ಸಾಧನಾ ಸಮಾವೇಶವನ್ನು ಆಯೋಜಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿಗಳು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಚರ್ಚೆಗೆ ಸಿಗದ ಸಮಯ
ಸಿಎಂ, ಡಿಸಿಎಂ ಅವರಿಂದ ರಾಹುಲ್ ಗಾಂಧಿ ಭೇಟಿ: ನಡೆಯದ ಚರ್ಚೆ
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಷ್ಟೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದು ಯಾವುದೇ ರಾಜಕೀಯ ಚರ್ಚೆ ಆಗಿಲ್ಲ.ಇದನ್ನು ಓದಿ – ಮೈಸೂರು ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಕ್ಷಿಪ್ರ ಭೇಟಿ
ತಮಿಳುನಾಡಿನ ಗುಡಲೂರು ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಯಿಂದ ವಿಶೇಷ ವಿಮಾನದಿಂದ 2.15ಕ್ಕೆ ಬಂದಿಳಿದರು. ಐದು ನಿಮಿಷಕ್ಕೆ ಮುಂಚೆ ಆಗಮಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನಕ್ಕೆ ಬಂದಿಳಿದ ರಾಹುಲ್ ಗಾಂಧಿಯನ್ನು ಹೂ ಗುಚ್ಛ ನೀಡಿ ಸ್ವಾಗತಿಸಿದರು. ಬಳಿಕ 2.20ಕ್ಕೆ ಪೂರ್ವನಿಗಧಿತ ಕಾರ್ಯಕ್ರಮದ ನಿಮಿತ್ತ ಬೇರೆ ವಿಮಾನದ ಮೂಲಕ ತಮಿಳುನಾಡಿನತ್ತ ಪಯಣಿಸಿದರು. ಸಚಿವರಾದ ಕೆ.ಜೆ.ಜಾರ್ಜ್, ಕೆ.ಎಚ್.ಮುನಿಯಪ್ಪ, ಡಾ.ಎಚ್.ಸಿ.ಮಹದೇವಪ್ಪ, ಸಿಎಂ ಮಾದ್ಯಮ ಕಾರ್ಯದರ್ಶಿ ಬ್ರಿಜೇಶ್ ಕಾಳಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಜಿಲ್ಲಾ ಕಾಂಗ್ರೆಸ್ ಮಾದ್ಯಮ ವಕ್ತಾರ ಕೆ.ಮಹೇಶ್ ಇನ್ನಿತರರು ಉಪಸ್ಥಿತರಿದ್ದರು.








