ಮೈಸೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಆರೋಪ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಡಾ. ಯತೀಂದ್ರ ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಅನಧಿಕೃತವಾಗಿ “ವರ್ಗಾವಣೆ ಸಚಿವ”ರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. ಯತೀಂದ್ರ ಅವರ ನಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೆಟ್ಟ ಹೆಸರು ತರುತ್ತಿದ್ದು, ಅವರ ತಲೆ ತಗ್ಗಿಸುವ ಕೆಲಸವನ್ನು ಪುತ್ರನೇ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಅವರ ಮೊದಲ ಪುತ್ರ ರಾಕೇಶ್ ಸಿದ್ದರಾಮಯ್ಯ ಬದುಕಿದ್ದರೆ ತಂದೆಗೆ ಎಂದಿಗೂ ಮುಜುಗರ ಉಂಟಾಗುತ್ತಿರಲಿಲ್ಲ. ಆದರೆ ಯತೀಂದ್ರ ತಮ್ಮ ತಂದೆಯ ಅಧಿಕಾರವನ್ನು ಅತಿಯಾಗಿ ದುರುಪಯೋಗಪಡಿಸಿಕೊಂಡಿದ್ದಾರೆ. ಮಗನ ಕಾರಣದಿಂದ ಸಿದ್ದರಾಮಯ್ಯ ಪ್ರತಿಯೊಂದು ಹೆಜ್ಜೆಯಲ್ಲೂ ಮುಜುಗರಕ್ಕೆ ಒಳಗಾಗುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ರಾಜ್ಯದಲ್ಲಿ ಯತೀಂದ್ರರ “ಸೇಲ್ಸ್ ಟ್ಯಾಕ್ಸ್” ಕಡ್ಡಾಯವಾಗಿದೆ ಎಂಬಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದ ಅವರು, ಇಷ್ಟು ಆಸ್ತಿ ಯಾರಿಗಾಗಿ ಸಂಗ್ರಹಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಮನೆ, ತೋಟ, ಆಸ್ತಿ ಎಲ್ಲವೂ ಇದ್ದರೂ ಇನ್ನೂ ಯಾರಿಗಾಗಿ ಇಷ್ಟೆಲ್ಲಾ ಆಸ್ತಿ ಮಾಡುತ್ತಿದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು. ಎಲ್ಲರಿಗೂ ಗದರಿಸುವ ಮುಖ್ಯಮಂತ್ರಿ ತಮ್ಮ ಮಗನ ವಿಷಯದಲ್ಲಿ ಮಾತ್ರ ಮೌನ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು.
ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಮೇಲೂ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು. ವರ್ಷದಲ್ಲಿ ಸ್ವಾತಂತ್ರ್ಯ ದಿನೋತ್ಸವ, ಗಣರಾಜ್ಯೋತ್ಸವ ಮತ್ತು ದಸರಾದ ಸಮಯದಲ್ಲಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಕಾಣಿಸಿಕೊಳ್ಳುತ್ತಾರೆ. ಉಳಿದ ದಿನಗಳಲ್ಲಿ ಮೈಸೂರು ಅಭಿವೃದ್ಧಿ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಟೀಕಿಸಿದರು.ಇದನ್ನು ಓದಿ –ಲೋನ್ ನೆಪದಲ್ಲಿ ವಂಚನೆ: CID ದಾಳಿ
ಮೈಸೂರಿನಲ್ಲಿ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಯತೀಂದ್ರ ಅವರ ಬಾಯಿಂದ ಒಂದೇ ದಿನವಾದರೂ ಮೈಸೂರು ಅಭಿವೃದ್ಧಿ ಕುರಿತು ಮಾತು ಕೇಳಿಬಂದಿದೆಯೇ ಎಂದು ಪ್ರಶ್ನಿಸಿದರು. ನಾಳೆ ಬೆಳಿಗ್ಗೆಯೇ ಬಿಬಿಎಂಪಿ ಅಥವಾ ಮೈಸೂರು ಪಾಲಿಕೆ ಚುನಾವಣೆ ನಡೆದರೆ ಕಾಂಗ್ರೆಸ್ ಧೂಳೀಪಟವಾಗಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ಕಾಂಗ್ರೆಸ್‌ಗೆ ಧೈರ್ಯವಿಲ್ಲ ಎಂದು ಪ್ರತಾಪ್ ಸಿಂಹ ಆರೋಪಿಸಿದರು.








