ನವದೆಹಲಿ: ಶೌರ್ಯ, ಸಾಮಾಜಿಕ ಸೇವೆ, ಪರಿಸರ ಸಂರಕ್ಷಣೆ, ಕ್ರೀಡೆ, ಕಲೆ–ಸಂಸ್ಕೃತಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ 20 ಮಕ್ಕಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ ಪ್ರದಾನ ಮಾಡಿದರು.
ಈ ಪುರಸ್ಕೃತರಲ್ಲಿ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಕೂಡ ಸೇರಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿಜೇತ ಮಕ್ಕಳನ್ನು ಅಭಿನಂದಿಸಿ, “ಈ ಮಕ್ಕಳು ತಮ್ಮ ಕುಟುಂಬಗಳಿಗೆ ಮಾತ್ರವಲ್ಲ, ತಮ್ಮ ಸಮುದಾಯಗಳು ಮತ್ತು ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ” ಎಂದು ಹೇಳಿದರು. ಇಂತಹ ಪುರಸ್ಕಾರಗಳು ದೇಶಾದ್ಯಂತದ ಮಕ್ಕಳಿಗೆ ಪ್ರೇರಣೆಯಾಗಿ ಕೆಲಸ ಮಾಡಲಿದ್ದು, ಅವರ ಪ್ರತಿಭೆ ಮತ್ತು ಶ್ರಮಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ ಈ ಗೌರವ ನೀಡಲಾಗಿದೆ ಎಂದು ತಿಳಿಸಿದರು.
ಡಿಸೆಂಬರ್ 26ರಂದು ಆಚರಿಸಲಾಗುವ ವೀರ್ ಬಾಲ ದಿವಸ್‌ನ ಮಹತ್ವವನ್ನು ವಿವರಿಸಿದ ಅವರು, ಸುಮಾರು 320 ವರ್ಷಗಳ ಹಿಂದೆ ಹತ್ತನೇ ಸಿಖ್ ಗುರು ಗುರು ಗೋವಿಂದ್ ಸಿಂಗ್ ಮತ್ತು ಅವರ ನಾಲ್ವರು ಪುತ್ರರು ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಾ ಸರ್ವೋಚ್ಚ ತ್ಯಾಗ ಮಾಡಿದ ಇತಿಹಾಸವನ್ನು ಸ್ಮರಿಸಿದರು. ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಎಂಬ ಇಬ್ಬರು ಕಿರಿಯ ಸಾಹಿಬ್‌ಜಾದಾಸ್ ಅವರ ಧೈರ್ಯ ಮತ್ತು ತ್ಯಾಗವನ್ನು ಭಾರತದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಗೌರವದಿಂದ ಸ್ಮರಿಸಲಾಗುತ್ತಿದೆ. ಸತ್ಯ ಮತ್ತು ನ್ಯಾಯಕ್ಕಾಗಿ ಹೆಮ್ಮೆಯಿಂದ ಪ್ರಾಣ ತ್ಯಾಗ ಮಾಡಿದ ಈ ಮಹಾನ್ ಬಾಲ ವೀರರು ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದು ರಾಷ್ಟ್ರಪತಿ ಹೇಳಿದರು.
ಆಪರೇಷನ್ ಸಿಂಧೂರ್‌ನಲ್ಲಿ ಸೈನಿಕರಿಗೆ ನೆರವಾದ ಶ್ರವಣ್ ಸಿಂಗ್
ಆಪರೇಷನ್ ಸಿಂಧೂರ್ ವೇಳೆ ಭಾರತೀಯ ಸೈನಿಕರಿಗೆ ನೆರವು ನೀಡಿದ 10 ವರ್ಷದ ಬಾಲಕ ಶ್ರವಣ್ ಸಿಂಗ್‌ಗೆ ‘ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ’ವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರದಾನಿಸಿದರು. ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಮಾಮ್‌ಡೋಟ್ ಗ್ರಾಮದ ಶ್ರವಣ್, ಕಾರ್ಯಾಚರಣೆ ಸಮಯದಲ್ಲಿ ಸೈನಿಕರಿಗೆ ನೀರು, ಹಾಲು, ಚಹಾ, ಲಸ್ಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಭಯವಿಲ್ಲದೆ ತಲುಪಿಸುತ್ತಿದ್ದನು. ಈ ಸೇವೆಗೆ ಈಗಾಗಲೇ ಅವನಿಗೆ ‘ಕಿರಿಯ ನಾಗರಿಕ ಯೋಧ’ ಗೌರವವೂ ಲಭಿಸಿತ್ತು. ಶ್ರವಣ್‌ನ ಧೈರ್ಯ ಮತ್ತು ಸೇವೆಯನ್ನು ಶ್ಲಾಘಿಸಿರುವ ಭಾರತೀಯ ಸೇನೆ, ಅವನ ಸಂಪೂರ್ಣ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದೆ. ಮುಂದೊಂದು ದಿನ ಯೋಧನಾಗಿ ದೇಶಸೇವೆ ಮಾಡುವ ಕನಸು ಹೊಂದಿದ್ದಾನೆ ಎಂದು ಶ್ರವಣ್ ಹೇಳಿದ್ದಾನೆ.








