ವಿಜಯನಗರ: ಆಸ್ತಿ ವಿಚಾರದ ಕಲಹ ಹಿನ್ನೆಲೆ ತಮ್ಮನು ಸಂಬಂಧಿಯೊಂದಿಗೆ ಸೇರಿ ಅಣ್ಣನನ್ನೇ ಕೊಲೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಹಗರಿಶಿರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮರುಳಸಿದ್ದೇಶ್ (26) ಕೊಲೆಯಾದ ಯುವಕ. ಈ ಪ್ರಕರಣದಲ್ಲಿ ಅವರ ತಮ್ಮ ಪತ್ರಿಗೌಡ (24) ಮತ್ತು ಸಂಬಂಧಿ ನಾರಪ್ಪ (29)ರನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ರಿಗೌಡ ಮದ್ಯಪಾನದ ವ್ಯಸನಿಯಾಗಿದ್ದು, ಆಸ್ತಿಯಲ್ಲಿ ಪಾಲು ಬೇಕು ಎಂದು ಕೆಲ ದಿನಗಳಿಂದ ತಾಯಿಯೊಂದಿಗೆ ಜಗಳ ಮಾಡುತ್ತಿದ್ದನು. ಜೊತೆಗೆ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಲ್ಲಿ ಗಲಾಟೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ನಂತರ ಆಸ್ತಿ ವಿಚಾರವಾಗಿ ಸಂಬಂಧಿಯೊಂದಿಗೆ ಸೇರಿ ಅಣ್ಣನನ್ನೇ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಟವೆಲ್ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಬಳಿಕ, ತಲೆ ಮೇಲೆ ಕಲ್ಲು ಹಾಕಿ ಮೃತ್ಯುವನ್ನು ಅಪಘಾತವಾಗಿ ತೋರಿಸಲು ಯತ್ನಿಸಿದ್ದಾರೆ.
ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ನಂಬಿಸಲು ಆರೋಪಿಗಳು ಸಾಕ್ಷಿ ನಾಶ ಮಾಡುವ ಪ್ರಯತ್ನ ಕೂಡ ಮಾಡಿದ್ದರು.
ಆದರೆ ಮಗನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಕೈಗೊಂಡ ಅರಸೀಕೆರೆ ಪೊಲೀಸರು ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.








