ಮೊಳಕೆ ಬರಿಸಿದ ಕಾಳುಗಳು ಅತ್ಯಂತ ಆರೋಗ್ಯಕರ ಆಹಾರ ಪದಾರ್ಥಗಳಲ್ಲಿ ಒಂದಾಗಿದ್ದು ದೇಹಕ್ಕೆ ಬಹಳಷ್ಟು ಉತ್ತಮ. ಮೊಳಕೆ ಬರಿಸಿದ ಕಾಳುಗಳನ್ನು ಬೆಳಗ್ಗೆ ತಿನ್ನುವುದು ತುಂಬಾನೇ ಒಳ್ಳೆಯದು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಮೊಳಕೆ ಕಾಳುಗಳು ಸಸ್ಯಾಹಾರಿ ಪ್ರೋಟೀನ್ ಮೂಲಗಳಲ್ಲಿ ಒಂದಾಗಿದ್ದು, ಹುರುಳಿ, ಹೆಸರು, ಕಡಲೆ, ಮುಂತಾದ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ. ಇವು ಪ್ರೋಟೀನ್, ಕ್ಯಾಲ್ಸಿಯಂ, ಫೈಬರ್, ವಿಟಮಿನ್ಗಳಂತಹ ಪ್ರಮುಖ ಪೋಷಕಾಂಶಗಳನ್ನು ಒಳಗೊಂಡಿದ್ದು, ಮಕ್ಕಳಿಗೆ, ಗರ್ಭಿಣಿಯರಿಗೆ, ವೃದ್ಧರಿಗೆ ಸೇರಿದಂತೆ ಎಲ್ಲಾ ವಯೋಮಾನದವರು ಸೇವಿಸಬಹುದು. ಇವುಗಳನ್ನು ಬೆಳಗಿನ ಉಪಾಹಾರವಾಗಿ ಸೇವಿಸುವುದರಿಂದ ರೋಗ ನೀರೋಧಕ ಶಕ್ತಿಯು ಹೆಚ್ಚುತ್ತದೆ. ಜತೆಗೆ ಕ್ಯಾನ್ಸರ್‌ನಂತಹ ಹಲವು ಗಂಭೀರ ಕಾಯಿಲೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಮನುಷ್ಯನ ಸಮಗ್ರ ಆರೋಗ್ಯಕ್ಕೆ ಉಪಯುಕ್ತವಾಗುವಂಥ ವಿಟಮಿನ್ ಹಾಗೂ ಖನಿಜಾಂಶಗಳಿಂದ ಮೊಳಕೆ ಕಾಳುಗಳು ಸಮೃದ್ಧವಾಗಿರುತ್ತವೆ. ಯಾವುದೇ ಬೀಜ ಅಥವಾ ಕಾಳುಗಳನ್ನು ನೀರಲ್ಲಿ ನೆನೆಸಿಟ್ಟಾಗ ಅವು ಮೊಳಕೆಯೊಡೆದು ಬೆಳೆಯಲಾರಂಭಿಸುತ್ತವೆ. ಈ ಕ್ರಿಯೆಯನ್ನು ಮೊಳಕೆಯೊಡೆಯುವಿಕೆ ಎಂದು ಕರೆಯಲಾಗುತ್ತದೆ. ಮೊಳಕೆಕಾಳು ತಯಾರಿಸುವುದು ಹಾಗೂ ಅವನ್ನು ಆಹಾರದಲ್ಲಿ ಬಳಸುವುದು ತುಂಬಾ ಸುಲಭ ಹಾಗೂ ಅರೋಗ್ಯದಾಯಕವು.
ಮೊಳಕೆಕಾಳುಗಳಲ್ಲಿರುವ ಪೌಷ್ಟಿಕಾಂಶಗಳ ವಿವರಗಳು
ಕಾಳು, ಬೀಜ ಅಥವಾ ಧಾನ್ಯಗಳು ಮೊಳಕೆಯೊಡುವ ಸಂದರ್ಭದಲ್ಲಿ ಅವುಗಳಲ್ಲಿನ ಪೌಷ್ಟಿಕಾಂಶಗಳ ಪ್ರಮಾಣ ದುಪ್ಪಟ್ಟಾಗುತ್ತದೆ. ಹೀಗಾಗಿ ಇವು ಪ್ರೊಟೀನ್, ಮೆಗ್ನೇಶಿಯಂ, ಫಾಸ್ಫರಸ್, ಮ್ಯಾಂಗನೀಸ್, ಫೊಲೇಟ್, ವಿಟಮಿನ್ ಸಿ ಹಾಗೂ ವಿಟಮಿನ್ ಕೆ ಗಳಿಂದ ಸಮೃದ್ಧವಾಗಿರುತ್ತವೆ. ಮೊಳಕೆಯೊಡುವುದರಿಂದ ಕಾಳಿನಲ್ಲಿನ ಪ್ರೊಟೀನ್ ಅಂಶ ಹೆಚ್ಚಾಗುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅಲ್ಲದೆ ಮೊಳಕೆಕಾಳುಗಳು ಆಂಟಿ ಆಕ್ಸಿಡೆಂಟ್‌ಗಳು ಹಾಗೂ ಅಮಿನೋ ಆಸಿಡ್ಸ್‌ಗಳನ್ನು ಹೇರಳ ಪ್ರಮಾಣದಲ್ಲಿ ಒಳಗೊಂಡಿರುತ್ತವೆ. ಮೊಳಕೆ ಬರಿಸುವ ಸಂದರ್ಭದಲ್ಲಿ ಕಾಳುಗಳಲ್ಲಿ ಉತ್ಪತ್ತಿಯಾಗುವ ಪ್ರೊಟೀನ್‌ಗಳನ್ನು ದೇಹ ಬಲುಬೇಗ ಹಾಗೂ ಸುಲಭವಾಗಿ ಜೀರ್ಣಿಸಿಕೊಂಡು ಅವುಗಳಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳುತ್ತದೆ.
ಮೊಳಕೆಕಾಳುಗಳ ಆರೋಗ್ಯ ಭಾಗ್ಯ ಗುಣಗಳು

1) ವಿಟಮಿನ್ಗಳಾದ ಎ,ಬಿ,ಸಿ ಮತ್ತು ಇ ಮೊಳಕೆ ಕಾಳುಗಳಲ್ಲಿದ್ದು ಕಾಳುಗಳಲ್ಲಿ ಕೆಲವೇ ದಿನಗಳಲ್ಲಿ ಹುಟ್ಟಿಕೊಳ್ಳುವ ಮೊಳೆಕಯು 20% ದಷ್ಟು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಬೀನ್ಸ್ ಕಾಳು 285% ದಷ್ಟು ವಿಟಮಿನ್ ಬಿ1 ಅನ್ನು ಒಳಗೊಂಡಿದೆ ಎಂಬುದಾಗಿ ಅಧ್ಯಯನವು ತಿಳಿಸಿದೆ.
2) ಮೊಳಕೆ ಒಡೆದ ಕಾಳುಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿಯೇ ಸೇವಿಸುವುದು ಉತ್ತಮ. ಯಾಕೆಂದರೆ ಮೊಳಕೆ ಕಾಳುಗಳನ್ನು ಬೇಯಿಸಿದಾಗ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ.
3) ನಮ್ಮ ಕೂದಲಿನ ಆರೋಗ್ಯಕ್ಕೆ ಮೊಳಕೆ ಕಾಳುಗಳು ಅತ್ಯುತ್ತಮವಾಗಿದೆ. ವಿಟಮಿನ್ ಸಿ ಅಂಶವನ್ನು ಇದು ಒಳಗೊಂಡಿದ್ದು, ಕೂದಲನ್ನು ಉದ್ದ ಮತ್ತು ದಟ್ಟವಾಗಿಸುತ್ತಲ್ಲದೆ ಬಿಳಿ ಕೂದಲಿನ ಸಮಸ್ಯೆಯನ್ನು ದೂರಗೊಳಿಸುತ್ತದೆ.
4) ದೇಹಕ್ಕೆ ಆಮ್ಲಜನಕವನ್ನು ಪೂರೈಸುವ ಕಬ್ಬಿಣದ ಅಂಶವನ್ನು ಮೊಳಕೆ ಕಾಳುಗಳು ಒಳಗೊಂಡಿವೆ. ಮಾನವನ ದೇಹಕ್ಕೆ ಅಗತ್ಯವಾಗಿರುವ ಕಬ್ಬಿಣದ ಅಂಶವು ಮೊಳಕೆ ಕಾಳುಗಳಿಂದ ದೊರೆಯಲಿದ್ದು ದೇಹಕ್ಕೆ ಸಾಮರ್ಥ್ಯವನ್ನು ಒದಗಿಸುತ್ತದೆ.
5) ದೇಹವನ್ನು ಕ್ಷಾರೀಕರಣ ಮಾಡುವುದರಲ್ಲಿ ಮೊಳಕೆ ಕಾಳುಗಳ ಪಾತ್ರ ಹಿರಿದು. ಕ್ಯಾನ್ಸರ್‌ನಂತಹ ಪ್ರಾಣಾಂತಿಕ ಕಾಯಿಲೆಗಳೊಂದಿಗೆ ಇದು ಹೋರಾಡಿ ದೇಹದಲ್ಲಿ ಆಮ್ಲತೆಯನ್ನು ತಡೆಯುತ್ತದೆ.
6) ಮೊಳಕೆ ಕಾಳುಗಳಲ್ಲಿ ಫ್ಯಾಟಿ ಆಸಿಡ್ಗಳು ಹೇರಳವಾಗಿದೆ. ನಾವು ಸೇವಿಸುವ ಆಹಾರದಲ್ಲಿ ಈ ಫ್ಯಾಟಿ ಆಸಿಡ್ಗಳು ಇರುವುದಿಲ್ಲ. ಮೊಳಕೆ ಕಾಳುಗಳನ್ನು ಸೇವಿಸಿ ದೇಹಕ್ಕೆ ಬೇಕಾಗಿರುವ ಈ ಪೋಷಕಾಂಶಗಳನ್ನು ನಾವು ಒದಗಿಸಬೇಕು.
7) ಮೊಳಕೆಯೊಡೆದ ಹಸಿರು ಬಟಾಣಿಗಳನ್ನು ಸೇವಿಸುವುದು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಈ ಬೇಳೆಕಾಳುಗಳನ್ನು ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿಡಬಹುದು.
8) ಹೃದ್ರೋಗಗಳನ್ನು ತಪ್ಪಿಸಲು ಮೊಳಕೆಯೊಡೆದ ಹೆಸರು ಕಾಳುಗಳನ್ನು ಸೇವಿಸುವುದು ಬಹಳ ಮುಖ್ಯ. ಇದನ್ನು ತೆಗೆದುಕೊಳ್ಳುವುದರಿಂದ ಗಂಭೀರ ಕಾಯಿಲೆಗಳನ್ನು ತಡೆಯಬಹುದು. ಹಾಗೆಯೇ ನಿಮ್ಮ ಹೃದಯವೂ ಆರೋಗ್ಯವಾಗಿರುತ್ತದೆ.
9) ಮೊಳಕೆಯೊಡೆದ ಹೆಸರು ಕಾಳುಗಳು ತಾಯಿಯ ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೆ ಕೆಲಸ ಮಾಡುತ್ತದೆ. ಹಾಗಾಗಿ ಗರ್ಭಿಣಿಯರು ವಾರಕ್ಕೆ ಎರಡು ಬಾರಿಯಾದರೂ ಮೊಳಕೆ ಬರಿಸಿದ ಕಡಲೆಯನ್ನು ತಿನ್ನಬಹುದು. ಆದರೆ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.
10) ಮೊಳಕೆಯೊಡೆದ ಕಡಲೆಯನ್ನು ತಿನ್ನುವುದು ತೂಕ ನಷ್ಟಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಅನಗತ್ಯ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಅಲ್ಲದೆ, ಇದರ ಸೇವನೆಯು ದೀರ್ಘಕಾಲದವರೆಗೆ ಹಸಿವನ್ನು ಉಂಟುಮಾಡುವುದಿಲ್ಲ, ಹೀಗಾಗಿ ತೂಕವನ್ನು ಸಮತೋಲನಗೊಳಿಸುತ್ತದೆ.
11) ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಪ್ರೋಟೀನ್ ಗ ಳು, ಫೈಬರ್ ಗಳು ಕಾರ್ಬೋಹೈಡ್ರೆಟ್ಗಳು, ಕ್ಯಾಲ್ಸಿಯಂ, ಕಬ್ಬಿಣ, ಖನಿಜಗಳು ಮತ್ತು ವಿಟಮಿನ್ಗಳು ಸಮೃದ್ಧವಾಗಿವೆ. ಆದ್ದರಿಂದ ಇದರ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
12) ಮೊಳಕೆಯೊಡೆದ ಹೆಸರು ಕಾಳು ವಿಟಮಿನ್ ಗಳು, ಖನಿಜಗಳು ಮತ್ತು ಪ್ರೋಟೀನ್ ಗಳು ಸಮೃದ್ಧವಾಗಿದೆ. ಇದು ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಂತಹ ಪ್ರಮುಖ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ.
ನೆನಪಿನಲ್ಲಿಡಬೇಕಾದ ಅಂಶಗಳು
ಮೊಳಕೆಯಲ್ಲಿ ವಿಟಮಿನ್ ಗಳು ಬೇಗ ಹಾಳಾಗುವುದರಿಂದ ತಾಜಾ ಇರುವಾಗಲೇ ಸೇವಿಸುವುದು ಉತ್ತಮ ಹಾಗೂ ಮೊಳಕೆಯನ್ನು ತಯಾರಿಸಲು ಬಳಸುವ ನೀರು ಶುದ್ಧವಾಗಿರಬೇಕು. ಇಲ್ಲದಿದ್ದರೆ ಕೆಟ್ಟ ಬ್ಯಾಕ್ಟಿರಿಯಾಗಳು ದೇಹಕ್ಕೆ ಸೇರಿ ಅನಾರೋಗ್ಯ ಉಂಟುಮಾಡುತ್ತದೆ.
ಇದನ್ನು ಓದಿ –ಚಿನ್ನದ ದರದಲ್ಲಿ ಭಾರೀ ಏರಿಕೆ: 24K ಚಿನ್ನದ ದರ ಹೆಚ್ಚಳ
ಯಾರೆಲ್ಲಾ ಹೆಸರುಕಾಳು ತಿನ್ನಬಾರದು ?

ಆಯುರ್ವೇದ ತಜ್ಞ ಡಾ.ಅಲ್ಕಾ ಪ್ರಕಾರ,. ಕಳಪೆ ಜೀರ್ಣಕ್ರಿಯೆ ಅಥವಾ ವಾತ ಅಥವಾ ಪಿತ್ತ ಪ್ರಕೃತಿ ಇರುವವರು ಅದನ್ನು ತಪ್ಪಿಸಬೇಕು. ಕಫ ಪ್ರಕೃತಿ ಹೊಂದಿರುವ ಜನರು ಮೊಳಕೆಗಳನ್ನು ಜೀರ್ಣಿಸಿಕೊಳ್ಳಲು ಸಮರ್ಥರಾಗಿದ್ದಾರೆ ಮತ್ತು ಅದನ್ನು ಹೆಚ್ಚಾಗಿ ಸೇವಿಸಬಹುದು. ಆದರೆ ವಾರಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ; ಅದಕ್ಕಿಂತ ಹೆಚ್ಚಾಗಿ ಸೇವಿಸಲೇಬಾರದು’ ಎಂದು ತಿಳಿಸುತ್ತಾರೆ. ಕಫದ ಸಮಸ್ಯೆ ಇರುವವರು ಹೆಸರು ಕಾಳು ಸೇವಿಸುವ ಮುನ್ನ ಹೆಚ್ಚು ಜೀರ್ಣವಾಗುವಂತೆ ಮಾಡಲು, ಸ್ವಲ್ಪ ಪ್ರಮಾಣದ ತೆಂಗಿನ ಎಣ್ಣೆ, ಅಥವಾ ತುಪ್ಪ ಅಥವಾ ಬೆಣ್ಣೆ ಮತ್ತು ಮಸಾಲೆಗಳಾದ ಜೀರಿಗೆ, ಅಜ್ವೈನ್ ಮತ್ತು ಒಣ ಶುಂಠಿ ಪುಡಿಯೊಂದಿಗೆ ಬೇಯಿಸಿ ತಿನ್ನುವ ಅಭ್ಯಾಸ ಒಳ್ಳೆಯದು.

ಸೌಮ್ಯ ಸನತ್. ✍️