ಬೆಂಗಳೂರು: ಪ್ರಯಾಣಿಕರ ಅನುಕೂಲತೆ ಹೆಚ್ಚಿಸಿ, ಡಿಜಿಟಲ್ ಟಿಕೆಟ್ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ BMRCL ಒಂದು, ಮೂರು ಹಾಗೂ ಐದು ದಿನಗಳವರೆಗೆ ಅನಿಯಮಿತ ಪ್ರಯಾಣಕ್ಕೆ ಅವಕಾಶ ನೀಡುವ ಮೊಬೈಲ್ QR ಆಧಾರಿತ ನಿಯತಕಾಲಿಕ ಪಾಸ್‌ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಈ ಹೊಸ ಪಾಸ್‌ಗಳು ಜನವರಿ 15ರಿಂದ ‘ನಮ್ಮ ಮೆಟ್ರೋ’ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.
ಇದೀಗವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳನ್ನು ಸಂಪರ್ಕರಹಿತ ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಮಾತ್ರ ನೀಡಲಾಗುತ್ತಿತ್ತು. ಈ ಕಾರ್ಡ್‌ಗಳಿಗೆ ಪ್ರಯಾಣಿಕರು 50 ರೂಪಾಯಿ ಮರುಪಾವತಿಸಬಹುದಾದ ಭದ್ರತಾ ಠೇವಣಿಯನ್ನು ಪಾವತಿಸಬೇಕಾಗುತ್ತಿತ್ತು. ಆದರೆ, ಮೊಬೈಲ್ QR ಆಧಾರಿತ ಪಾಸ್‌ಗಳ ಮೂಲಕ ಯಾವುದೇ ಭದ್ರತಾ ಠೇವಣಿ ಇಲ್ಲದೆ, ಮೊಬೈಲ್ ಫೋನ್‌ನಲ್ಲೇ ಡಿಜಿಟಲ್ ರೂಪದಲ್ಲಿ ಅನಿಯಮಿತ ಪ್ರಯಾಣ ಸೌಲಭ್ಯ ಪಡೆಯಬಹುದು.
BMRCL ಮಾಹಿತಿ ಪ್ರಕಾರ, ಪ್ರಯಾಣಿಕರು ಅಪ್ಲಿಕೇಶನ್ ಮೂಲಕ ಸುಲಭವಾಗಿ ಪಾಸ್ ಖರೀದಿಸಬಹುದು. ನಿಲ್ದಾಣಗಳ ಸ್ವಯಂಚಾಲಿತ ಶುಲ್ಕ ಸಂಗ್ರಹ (AFC) ಗೇಟ್‌ಗಳಲ್ಲಿ ಫೋನ್‌ನಲ್ಲಿ ತೋರಿಸುವ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ರವೇಶ ಮತ್ತು ನಿರ್ಗಮನ ಸಾಧ್ಯವಾಗುತ್ತದೆ. ಇದರಿಂದ ಸಂಪೂರ್ಣ ಸಂಪರ್ಕರಹಿತ ಪ್ರಯಾಣದ ಅನುಭವ ದೊರೆಯಲಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಇತರೆ ಮೊಬೈಲ್ ಟಿಕೆಟ್ ಪ್ಲಾಟ್‌ಫಾರ್ಮ್‌ಗಳಿಗೂ ವಿಸ್ತರಿಸುವ ನಿರೀಕ್ಷೆಯಿದೆ.
ಹೊಸ ದರ ವ್ಯವಸ್ಥೆಯಂತೆ, ಒಂದು ದಿನದ ಅನಿಯಮಿತ ಪ್ರಯಾಣ ಪಾಸ್ ಬೆಲೆ 250 ರೂಪಾಯಿಯಾಗಿದ್ದು, ಸ್ಮಾರ್ಟ್ ಕಾರ್ಡ್ ಮೂಲಕ ನೀಡಲಾಗುತ್ತಿದ್ದ 300 ರೂಪಾಯಿಗಳಿಗಿಂತ ಕಡಿಮೆಯಾಗಿದೆ. ಮೂರು ದಿನಗಳ ಪಾಸ್‌ಗೆ 550 ರೂಪಾಯಿ ಮತ್ತು ಐದು ದಿನಗಳ ಪಾಸ್‌ಗೆ 850 ರೂಪಾಯಿ ದರ ನಿಗದಿಯಾಗಿದೆ. ಈ ಮೂಲಕ ಎಲ್ಲಾ ವಿಭಾಗಗಳಲ್ಲಿ ಮೊಬೈಲ್ QR ಆಯ್ಕೆಯೇ ಹೆಚ್ಚು ಅಗ್ಗದ ಆಯ್ಕೆಯಾಗಿದೆ.ಇದನ್ನು ಓದಿ –ಜ.17ರಂದು ಬಳ್ಳಾರಿಯಲ್ಲಿ ಬಿಜೆಪಿ ಪ್ರತಿಭಟನೆ: ವಿಜಯೇಂದ್ರ
ಸಮಯ ಉಳಿಸಲು, ಕಾರ್ಡ್ ವಿತರಣೆ ಹಾಗೂ ಠೇವಣಿ ಮರುಪಾವತಿಗೆ ಸರತಿ ಸಾಲುಗಳಲ್ಲಿ ನಿಲ್ಲುವ ಅವಶ್ಯಕತೆ ತಪ್ಪಿಸಲು ಮತ್ತು ಸುಗಮ ಪ್ರಯಾಣದ ಅನುಭವ ಪಡೆಯಲು ಪ್ರಯಾಣಿಕರು ಮೊಬೈಲ್ QR ಆಧಾರಿತ ಪಾಸ್‌ಗಳನ್ನು ಬಳಸುವಂತೆ BMRCL ಮನವಿ ಮಾಡಿದೆ.








