ಕೊಪ್ಪಳ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನಗರದ ಮಹಮ್ಮದ್ ಸೋಯಿಬ್ ಎಂಬ ಅಪರಾಧಿಗೆ ಇಲ್ಲಿನ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹25,000 ದಂಡ ವಿಧಿಸಿ ಆದೇಶ ಹೊರಡಿಸಿದೆ.
ಈ ತೀರ್ಪನ್ನು ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ.ಕೆ ಅವರು ಪ್ರಕಟಿಸಿದರು.
ಪ್ರಕರಣದ ವಿವರಗಳಂತೆ, ಮಹಮ್ಮದ್ ಸೋಯಿಬ್ ಎರಡು ವರ್ಷಗಳ ಹಿಂದೆ ಬಾಲಕಿಯನ್ನು ಪ್ರೀತಿಸುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಪರಿಣಾಮವಾಗಿ ಬಾಲಕಿ ಗರ್ಭಿಣಿಯಾಗಿದ್ದು, ನಂತರ ಆಕೆಯನ್ನು ಅಪಹರಿಸಿದ ಘಟನೆ ಕೂಡ ನಡೆದಿದೆ. ಈ ಸಂಬಂಧ ಇಲ್ಲಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದನ್ನು ಓದಿ –ಮಾರ್ಚ್‌ನಲ್ಲಿ ರಾಜ್ಯ ಬಜೆಟ್ ಮಂಡನೆ: ಸತೀಶ್ ಜಾರಕಿಹೊಳಿ
ಆಗಿನ ಪಿಎಸ್‌ಐ ನಾಗಪ್ಪ ಅವರು ಪ್ರಾಥಮಿಕ ತನಿಖೆ ನಡೆಸಿ, ಮುಂದಿನ ತನಿಖೆಯನ್ನು ಆಂಜನೇಯ ಅವರು ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು. ವಿಚಾರಣೆಯ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿದೆ.








