ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮೂರು ದಿನಗಳ ಹಣಕಾಸು ನೀತಿ ಸಮಿತಿ (MPC) ಸಭೆಯ ನಂತರ ಪ್ರಮುಖ ರೆಪೊ ದರವನ್ನು ಶೇಕಡಾ 5.5 ಕ್ಕೆ ಬದಲಾಯಿಸದೆ ಉಳಿಸಿಕೊಳ್ಳಲಾಗಿದೆ.
ಕೇಂದ್ರ ಬ್ಯಾಂಕ್ ತಟಸ್ಥ ನಿಲುವು ಕೈಗೊಂಡಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಹಣದುಬ್ಬರ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಮೀಪದಿಂದಲೇ ಗಮನಿಸುತ್ತೇವೆ ಎಂದು ಸ್ಪಷ್ಟಪಡಿಸಿದೆ.
ಇಎಂಐ ಬದಲಾವಣೆ ಇಲ್ಲ
ಆರ್ಬಿಐನಿಂದ ಬ್ಯಾಂಕುಗಳು ಸಾಲ ಪಡೆಯುವ ರೆಪೊ ದರ ಬದಲಾಗದಿರುವುದರಿಂದ, ಬ್ಯಾಂಕುಗಳು ತಕ್ಷಣ ಸಾಲದ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಕಡಿಮೆ. ಇದರಿಂದ ಈಗಿರುವ ಫ್ಲೋಟಿಂಗ್-ರೇಟ್ ಗೃಹ ಸಾಲಗಳ ಮೇಲಿನ ಇಎಂಐಗಳು ಅದೆ ರೀತಿಯಾಗಿ ಮುಂದುವರಿಯಲಿವೆ. ಹೊಸ ಗೃಹಸಾಲ ಪಡೆಯಲು ಬಯಸುವವರಿಗೆ ಪ್ರಸ್ತುತ ದರಗಳು ಸ್ಥಿರವಾಗಿರುವುದರಿಂದ ಅನುಕೂಲಕರ ಪರಿಸ್ಥಿತಿ ಉಂಟಾಗಿದೆ.
ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಸ್ಥಿರತೆ
ಆರ್ಬಿಐ ನಿರ್ಧಾರವು ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ಸ್ಥಿರತೆ ಮತ್ತು ಆತ್ಮವಿಶ್ವಾಸವನ್ನು ತರುತ್ತದೆ ಎಂದು ಉದ್ಯಮ ತಜ್ಞರು ತಿಳಿಸಿದ್ದಾರೆ.
“ಈ ಕ್ರಮವು ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರ ನಿಯಂತ್ರಣದ ಅವಳಿ ಗುರಿಗಳನ್ನು ಸಮತೋಲನಗೊಳಿಸುವ ಎಚ್ಚರಿಕೆಯ ಹಾಗೂ ವಿವೇಕಯುತ ವಿಧಾನವನ್ನು ಪ್ರತಿಬಿಂಬಿಸುತ್ತದೆ” ಎಂದು ಕೃಷ್ಣ ಗ್ರೂಪ್ ಮತ್ತು ಕ್ರಿಸುಮಿ ಕಾರ್ಪೊರೇಷನ್ ಅಧ್ಯಕ್ಷ ಅಶೋಕ್ ಕಪೂರ್ ಹೇಳಿದ್ದಾರೆ.








