ವಡೋದರಾ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ವರ್ಷಗಳ ಕಾಲ ಟ್ರೋಫಿಗಾಗಿ ಹೋರಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದೀಗ ಸತತ ಮೂರನೇ ಬಾರಿ ಚಾಂಪಿಯನ್ ಕಿರೀಟ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದೆ.
ಕಳೆದ ವರ್ಷ ಪುರುಷರ ತಂಡ 18ನೇ ಆವೃತ್ತಿಯಲ್ಲಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟಿದ್ದರೆ, ಅದಕ್ಕೂ ಮೊದಲು ಆರ್ಸಿಬಿ ಮಹಿಳಾ ತಂಡ ತನ್ನ ಎರಡನೇ ಆವೃತ್ತಿಯಲ್ಲೇ ಚಾಂಪಿಯನ್ ಆಗಿತ್ತು.
ಮಹಿಳಾ ತಂಡದ ಈ ಗೆಲುವನ್ನು ಪುರುಷರ ತಂಡವನ್ನು ಸದಾ ಬೆಂಬಲಿಸುತ್ತಾ ಬಂದ ಅಭಿಮಾನಿಗಳೂ ಹೆಮ್ಮೆಯಿಂದ ಕೊಂಡಾಡಿದರು. ಕೊನೆಯ ರನ್ ಸಿಡಿಯುತ್ತಿದ್ದಂತೆಯೇ ಅಭಿಮಾನಿಗಳು ಮೈದಾನದಲ್ಲೇ ಸಂಭ್ರಮಾಚರಣೆ ನಡೆಸಿ, ಆರ್ಸಿಬಿ ಪರ ಜಯಘೋಷಣೆ ಕೂಗಿದರು.
ಇನ್ನೊಂದೆಡೆ, ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್ನಲ್ಲಿ ಸೋಲು ಕಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿಯೂ ಫೈನಲ್ನಲ್ಲಿ ನಿರಾಸೆ ಅನುಭವಿಸಿ ಸತತ ನಾಲ್ಕನೇ ಬಾರಿ ರನ್ನರ್ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿತು.
ರೋಚಕ ಅಂತ್ಯದ ಪಂದ್ಯದಲ್ಲಿ ಕೊನೆಯ 9 ಎಸೆತಗಳಲ್ಲಿ 13 ರನ್ ಬೇಕಿದ್ದ ಸಂದರ್ಭದಲ್ಲಿ ಚಿನೆಲ್ಲೆ ಹೆನ್ರಿ ಎಸೆತದಲ್ಲಿ ಸ್ಮೃತಿ ಮಂಧಾನ ಕ್ಲೀನ್ ಬೌಲ್ಡ್ ಆಗಿದರು. ಮುಂದಿನ ಎಸೆತದಲ್ಲೇ ಕ್ರೀಸ್ಗೆ ಬಂದ ರಾಧಾ ಯಾದವ್ ಕ್ಯಾಚ್ ನೀಡಿದರೂ, ಮಿನ್ನು ಮಣಿ ಮಾಡಿದ ಯಡವಟ್ಟಿನಿಂದ ಕ್ಯಾಚ್ ಕೈಚೆಲ್ಲಲಾಯಿತು. ಇದರಿಂದ ಆರ್ಸಿಬಿಗೆ ಎರಡು ಹೆಚ್ಚುವರಿ ರನ್ ಲಭಿಸಿತು. ಬಳಿಕ ಮರು ಎಸೆತದಲ್ಲಿ ಒಂದು ರನ್ ಕದಿಯಲಾಯಿತು.
ಕೊನೆಯ ಓವರ್ನಲ್ಲಿ 10 ರನ್ ಅಗತ್ಯವಿದ್ದಾಗ ಶ್ರೀಚಾರಿಣಿ ಬೌಲಿಂಗ್ ನಡೆಸಿದರು. ಮೊದಲ ಎರಡು ಎಸೆತಗಳಲ್ಲಿ ಎರಡು ರನ್ ಬಂದವು. ಮೂರನೇ ಮತ್ತು ನಾಲ್ಕನೇ ಎಸೆತಗಳನ್ನು ರಾಧಾ ಯಾದವ್ ಸತತವಾಗಿ ಬೌಂಡರಿಗಟ್ಟಿದರು. ಎರಡನೇ ಬೌಂಡರಿ ವೇಳೆ ರಾಧಾ ಯಾದವ್ ಹಿಟ್ ವಿಕೆಟ್ ಆದರೂ, ಬೌಂಡರಿಯನ್ನು ಮಾನ್ಯಗೊಳಿಸಿ ಆರ್ಸಿಬಿಯನ್ನು ವಿಜಯಶಾಲಿಯಾಗಿ ಘೋಷಿಸಲಾಯಿತು.
ಈ ಮೂಲಕ ಆರ್ಸಿಬಿ ಮಹಿಳಾ ತಂಡ ಎರಡನೇ ಬಾರಿ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡು ಫ್ರಾಂಚೈಸಿಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದೆ.








