ನವದೆಹಲಿ: ಭಾರತದ ಮಾಜಿ ಆಲ್‌ರೌಂಡರ್ ಹಾಗೂ BCCI ಅಧ್ಯಕ್ಷರಾಗಿದ್ದ ರೋಜರ್ ಬಿನ್ನಿ ಅವರು ಅಧಿಕೃತವಾಗಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಬಿಸಿಸಿಐ ಉಪಾಧ್ಯಕ್ಷರಾಗಿದ್ದ ರಾಜೀವ್ ಶುಕ್ಲಾ ಮುಂದಿನ ಚುನಾವಣೆಯವರೆಗೆ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಬಿಸಿಸಿಐ ನಿಯಮಗಳ ಪ್ರಕಾರ, 70 ವರ್ಷ ಮೇಲ್ಪಟ್ಟ ಅಧಿಕಾರಿಗಳು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅರ್ಹರಲ್ಲ. ಇತ್ತೀಚೆಗೆ ಜುಲೈ 19ರಂದು ರೋಜರ್ ಬಿನ್ನಿ 70ನೇ ಹುಟ್ಟುಹಬ್ಬವನ್ನು ಆಚರಿಸಿದ್ದರಿಂದ ಅವರು ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
2017ರಲ್ಲಿ ಸುಪ್ರೀಂ ಕೋರ್ಟ್ ಶಿಫಾರಸು ಮಾಡಿದ ನಿಯಮದಂತೆ, ಬಿಸಿಸಿಐ ಸೇರಿದಂತೆ ಇತರ ಕ್ರೀಡಾ ಸಂಸ್ಥೆಗಳ ಅಧಿಕಾರಿಗಳು ಒಟ್ಟು 9 ವರ್ಷಗಳು ಅಥವಾ ಸತತ 6 ವರ್ಷಗಳ ಕಾಲ ಮಾತ್ರ ಹುದ್ದೆಯಲ್ಲಿ ಇರಬಹುದಾಗಿದೆ. ಈ ನಿಯಮವು ಹೊಸ ನಾಯಕತ್ವಕ್ಕೆ ಅವಕಾಶ ಕಲ್ಪಿಸುವುದೇ ಮುಖ್ಯ ಉದ್ದೇಶವಾಗಿದೆ.
ಆಗಸ್ಟ್ 29ರಂದು ನಡೆದ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ರಾಜೀವ್ ಶುಕ್ಲಾ ಅವರು ಮೊದಲ ಬಾರಿಗೆ ಹಂಗಾಮಿ ಅಧ್ಯಕ್ಷರಾಗಿ ನೇತೃತ್ವ ವಹಿಸಿದರು. ಸಭೆಯಲ್ಲಿ ಡ್ರೀಮ್ 11 ಒಪ್ಪಂದದ ಮುಕ್ತಾಯ ಹಾಗೂ ಮುಂದಿನ ಎರಡೂವರೆ ವರ್ಷಗಳ ಕಾಲ ಹೊಸ ಪ್ರಾಯೋಜಕರ ಹುಡುಕಾಟ ಕುರಿತು ಚರ್ಚೆ ನಡೆಯಿತು.ಇದನ್ನು ಓದಿ –ಹೃದಯಾಘಾತ – 4ನೇ ತರಗತಿ ವಿದ್ಯಾರ್ಥಿ ದುರ್ಮರಣ
ಈ ನಡುವೆ, ಏಷ್ಯಾ ಕಪ್ ಸೆಪ್ಟೆಂಬರ್ 10ರಿಂದ ಆರಂಭವಾಗಲಿದ್ದು, ಕೇವಲ ಎರಡು ವಾರಗಳು ಮಾತ್ರ ಬಾಕಿಯಿರುವುದರಿಂದ ಅಲ್ಪಾವಧಿಯ ಪ್ರಾಯೋಜಕರನ್ನು ಆಯ್ಕೆ ಮಾಡುವುದು ಬಿಸಿಸಿಐಗೆ ಸವಾಲಾಗಿದೆ. ಮೂಲಗಳ ಪ್ರಕಾರ, ಬಿಸಿಸಿಐ ಮುಂದಿನ 2027ರ ವಿಶ್ವಕಪ್ ವರೆಗೆ ದೀರ್ಘಾವಧಿಯ ಪ್ರಾಯೋಜಕರನ್ನು ಹುಡುಕುವಲ್ಲಿ ಹೆಚ್ಚಿನ ಗಮನ ಹರಿಸಿದೆ.