ಬೆಂಗಳೂರು, ಏ.25 – ರಾಜ್ಯದ ವಿವಿಧ ಭಾಗಗಳಲ್ಲಿ ಏಪ್ರಿಲ್ ತಿಂಗಳ ಅಂತ್ಯದವರೆಗೂ ಪೂರ್ವ ಮುಂಗಾರು ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ತಿಂಗಳ ಆರಂಭದಿಂದ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಹಾಗೂ ಉತ್ತರ ಒಳನಾಡು ಸೇರಿದಂತೆ ಹಲವೆಡೆ ಚದುರಿದ ರೀತಿಯಲ್ಲಿ ಹಗುರ ಅಥವಾ ಸಾಧಾರಣ ಮಳೆಯಾಗಿದೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿ ಕೃಷಿ ಚಟುವಟಿಕೆಗಳಿಗೆ ಪೋಷಣೆಯಾಗಿದೆ.
ಹವಾಮಾನ ತಜ್ಞರ ಪ್ರಕಾರ, ಒಳನಾಡು ಪ್ರದೇಶಗಳಲ್ಲಿ 0.9 ಕಿ.ಮೀ. ಎತ್ತರದಲ್ಲಿ ಟ್ರಫ್ ನಿರ್ಮಾಣವಾಗಿರುವುದರಿಂದ ಭಾಗಶಃ ಮೋಡದಿಂದ ಆವೃತ ವಾತಾವರಣ ಕಂಡುಬರುತ್ತಿದ್ದು, ಸಂಜೆ ಅಥವಾ ರಾತ್ರಿ ವೇಳೆ ಕೆಲವೆಡೆ ಮಳೆಯಾಗುವ ನಿರೀಕ್ಷೆಯಿದೆ.
ಕರಾವಳಿ, ಮಲೆನಾಡು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಕೆಲವೆಡೆ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೆ, ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಬೇಸಿಗೆ ಮಳೆ ಏಪ್ರಿಲ್ 30ರವರೆಗೆ ಮುಂದುವರಿಯಲಿದ್ದು, ಬೆಂಗಳೂರಿನಲ್ಲಿ ಏ.28 ರಿಂದ 30ರ ವರೆಗೆ ಗುಡುಗು-ಮಿಂಚಿನಿಂದ ಮಳೆಯಾಗುವ ಮುನ್ಸೂಚನೆ ಇದೆ.ಬೆಂಗಳೂರಿನಲ್ಲಿ ಭೀಕರ ಘಟನೆ: ಯುವ ವಕೀಲೆ ಹಾಗೂ ಯುವಕ ಶವವಾಗಿ ಪತ್ತೆ
ಸಿಡಿಲು, ಗುಡುಗು ಇರುವ ವೇಳೆ ಪಕ್ಕಾ ಕಟ್ಟಡಗಳಲ್ಲಿ ಆಶ್ರಯ ಪಡೆಯುವುದು, ನೀರಿನ ಮೂಲ, ವಿದ್ಯುತ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿರುವುದು, ಲೋಹದ ವಸ್ತುಗಳನ್ನು ಸ್ಪರ್ಶಿಸದಿರುವುದು, ಎತ್ತರದ ಮರಗಳ ಕೆಳಗೆ ನಿಲ್ಲದಿರುವುದು ಮತ್ತು ಉಪಕರಣಗಳನ್ನು ಅನ್‌ಪ್ಲಗ್ ಮಾಡುವಂತೆ ಸಲಹೆ ನೀಡಲಾಗಿದೆ.