ಶ್ರೀರಂಗಪಟ್ಟಣ-ಕುಶಾಲನಗರ ಹೆದ್ದಾರಿ ಕಾಮಗಾರಿ ವೇಳೆ ರೈತರ ಸೌಲಭ್ಯಕ್ಕಾಗಿ ಸರ್ವೀಸ್ ರಸ್ತೆ ನಿರ್ಮಾಣ ಮಾಡಲಾಗುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದ ರೈತರ ನಿಯೋಗವು ನವದೆಹಲಿಯಲ್ಲಿನ ಗಡ್ಕರಿ ಅವರ ಗೃಹ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿತು. ಹೆದ್ದಾರಿ ಪಕ್ಕದಲ್ಲಿ ಸರ್ವೀಸ್ ರಸ್ತೆ ಇಲ್ಲದಿದ್ದರೆ ರೈತರು ತಮ್ಮ ಜಮೀನುಗಳಿಗೆ ಹೋಗುವುದು, ಬೆಳೆದ ಬೆಳೆಗಳನ್ನು ಸಾಗಿಸುವುದು ಕಷ್ಟವಾಗುತ್ತದೆ. ಜೊತೆಗೆ ಶ್ರೀರಂಗಪಟ್ಟಣ ಐತಿಹಾಸಿಕ ಪ್ರವಾಸಿ ತಾಣವಾಗಿರುವುದರಿಂದಲೂ ಸರ್ವೀಸ್ ರಸ್ತೆ ಅಗತ್ಯವೆಂದು ನಿಯೋಗ ಒತ್ತಾಯಿಸಿತು.
ಮನವಿಗೆ ಸ್ಪಂದಿಸಿದ ಸಚಿವ ಗಡ್ಕರಿ, ನಿರ್ಮಾಣವಾಗುತ್ತಿರುವ ಹೆದ್ದಾರಿಯ ಎರಡೂ ಭಾಗಗಳಲ್ಲಿ ಎತ್ತರದ ತಡೆಗೋಡೆಗಳಿರುವುದರಿಂದ ತಾಂತ್ರಿಕ ಅಡೆತಡೆಗಳಿದ್ದರೂ, ರೈತರ ಪರವಾಗಿ ಕುಮಾರಸ್ವಾಮಿ ಖುದ್ದಾಗಿ ಮನವಿ ಮಾಡಿರುವುದನ್ನು ಪರಿಗಣಿಸಿ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಿ ಸರ್ವೀಸ್ ರಸ್ತೆ ನಿರ್ಮಿಸುವ ಭರವಸೆ ನೀಡಿದ್ದಾರೆ.
ಈ ಭರವಸೆಯಿಂದ ರೈತರು ಹರ್ಷ ವ್ಯಕ್ತಪಡಿಸಿ, ನಿತಿನ್ ಗಡ್ಕರಿ, ಹೆಚ್.ಡಿ. ಕುಮಾರಸ್ವಾಮಿ ಮತ್ತು ರವೀಂದ್ರ ಶ್ರೀಕಂಠಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರೈತ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ ಅವರು, “ರವೀಂದ್ರ ಶ್ರೀಕಂಠಯ್ಯ ಅವರ ಮಾತಿನಂತೆ 20ಕ್ಕೂ ಹೆಚ್ಚು ರೈತರ ನಿಯೋಗವನ್ನು ದೆಹಲಿಗೆ ಕರೆದುಕೊಂಡು ಬಂದು, ಕೇಂದ್ರ ಸಚಿವರನ್ನು ಭೇಟಿಯಾಗುವಂತೆ ಮಾಡಿದರು. ಕುಮಾರಸ್ವಾಮಿ ಅವರು ನಮ್ಮನ್ನು ಹೆಚ್ಚಿನ ಗೌರವದಿಂದ ಸ್ವಾಗತಿಸಿ, ಊಟೋಪಚಾರ ನೀಡಿ, ಖುದ್ದಾಗಿ ಗಡ್ಕರಿ ಅವರನ್ನು ಭೇಟಿಮಾಡಿಸಿ ರೈತರ ತಲೆನೋವಾಗಿ ಪರಿಣಮಿಸಿದ್ದ ಸರ್ವೀಸ್ ರಸ್ತೆ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ಇದಕ್ಕಾಗಿ ನಾವು ಎಲ್ಲರೂ ಆಭಾರಿಯಾಗಿದ್ದೇವೆ” ಎಂದು ಹೇಳಿದರು.ಇದನ್ನು ಓದಿ –ದಸರಾ ಸಂಭ್ರಮದ ಜೊತೆಗೆ ಸುರಕ್ಷತೆಗೂ ನಿಗಾವಹಿಸಿ
ಈ ಸಂದರ್ಭದಲ್ಲಿ ಪಾಲಹಳ್ಳಿ ಗ್ರಾಮದ ಡಾ. ಪ್ರಶಾಂತ್ ಡಿ.ಎ, ವೆಂಕಟೇಶ್, ರವಿ, ಎಂಪಿಸಿಎಸ್ ಅಧ್ಯಕ್ಷ ಲೊಕೇಶ್, ಸುನಿಲ್, ಚಂದನ್, ಸತ್ಯಪ್ಪ, ಸಾಯಿ ಕುಮಾರ್, ಅಶ್ವಥ್ ನಾರಾಯಣ, ಪ್ರೀತಂ, ಪ್ರವೀಣ್, ರಾಕೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.