ಬಳ್ಳಾರಿ: “ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಡಿ.ಕೆ. ಶಿವಕುಮಾರ್ (ಡಿಕೆಶಿ) ಅವರನ್ನು ಸಿಎಂ ಆಗಲು ಬಿಡುವಂತಿಲ್ಲ. ಈಗಾಗಲೇ ಒಳಗಿನ ರಾಜಕೀಯ ಪ್ಲಾನ್ ಆಗಿದ್ದು, ಡಿಕೆಶಿ ಅವರು ಸಿಎಂ ಆಗುವ ಸಾಧ್ಯತೆ ಇಲ್ಲ” ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಈಗ ಎರಡು ವರ್ಷದ ವಯಸ್ಸಾಗಿದೆ. ಡಿಕೆಶಿ ಸಿಎಂ ಆಗಲು ಆಕಾಂಕ್ಷೆ ಹೊಂದಿದರೂ, ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಭದ್ರಪಡಿಸಲು ಎಷ್ಟೋ ಮಟ್ಟಿಗೆ ಪ್ರಯತ್ನಿಸುತ್ತಿದ್ದಾರೆ. ಇದೀಗ ದೆಹಲಿಯಲ್ಲಿ ಸಿಎಂ ಮತ್ತು ಡಿಸಿಎಂ ಕೂಡಾ ಚರ್ಚೆ ನಡೆಸುತ್ತಿದ್ದಾರೆ. ಇದರಿಂದಾಗಿ, ನಾಯಕತ್ವ ಬದಲಾವಣೆಯ ಸಾಧ್ಯತೆ ಇದೆ” ಎಂದರು.
“ಸಿದ್ದರಾಮಯ್ಯ ಅವರು ಶಿಕ್ಷಣ, ಸಾರಿಗೆ, ಆರೋಗ್ಯ ಸೇರಿದಂತೆ ಹಲವೆಡೆ ದಿವಾಳಿಯಾಗಿ ರಾಜ್ಯವನ್ನು ನಿರ್ವಹಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ. ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ನೀಡಿ ತಾರತಮ್ಯ ಮಾಡಲಾಗುತ್ತಿದೆ. ಇದರಿಂದ ಅಭಿವೃದ್ಧಿಗೆ ಬ್ರೇಕ್ ಬಿದ್ದಿದೆ” ಎಂಬುದಾಗಿ ದೂರಿದರು.
ಅವರು ಮುಂದುವರೆದು, “ಸಿದ್ದರಾಮಯ್ಯ ಅವರನ್ನು ರಾಷ್ಟ್ರಮಟ್ಟದ ಹಿನ್ನಲೆಯಲ್ಲಿ ಹಿಂದುಳಿದ ಸಮುದಾಯಗಳ ಸಮಿತಿಗೆ ನೇಮಕ ಮಾಡಲಾಗಿದೆ. ಆದರೆ ಅವರು ಸಿಎಂ ಸ್ಥಾನವನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಕೃಷ್ಣ ಬೈರೇಗೌಡ ಅವರ ಹೆಸರು ಕೂಡಾ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿದೆ. ಈ ಎಲ್ಲಾ ರಾಜಕೀಯ ಲೆಕ್ಕಾಚಾರಗಳ ಮಧ್ಯೆ ಡಿಕೆಶಿ ಮಂಕಾಗಿದ್ದಾರೆ” ಎಂದು ಹೇಳಿದರು.
“ರಾಜ್ಯ ಸರ್ಕಾರದ ಮೇಲಿನ ಜನರ ನಂಬಿಕೆ ಕಳೆದು ಹೋಗಿದೆ. ಗುಡ್‌ಬಾಯ್ ಹೇಳಲು ಸಮಯ ಬಂದಿದೆ. ಮಧ್ಯಂತರ ಚುನಾವಣೆ ಬಂದರೂ ಬಿಜೆಪಿ ಇದನ್ನು ಎದುರಿಸಲು ಸಿದ್ಧವಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳ್ಳಾರಿ ಗ್ರಾಮೀಣ ಶಾಸಕನನ್ನು ಉಲ್ಲೇಖಿಸಿ, “ಅವರು ಈಗ ಆಯ್ ರಾಮ್ ಘಯಾ ರಾಮ್ ಸ್ಥಿತಿಗೆ ಬಂದಿದ್ದಾರೆ. ಅವರ ಕೆಲಸ ಫೋಟೋ, ರೀಲ್ಸ್‌ಗಳಿಗೆ ಮಾತ್ರ ಸೀಮಿತವಾಗಿದೆ” ಎಂಬ ಟೀಕೆಯನ್ನು ಕೂಡಾ ಮಾಡಿದರು.ಇದನ್ನು ಓದಿ –ರಾಮನಗರ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಹತ್ಯೆ: ಆರೋಪಿ ಬಂಧನ
ಇದೇ ವೇಳೆ, “ನಾನು ಕೂಡ್ಲಿಗಿಯಿಂದ ಸ್ಪರ್ಧೆ ಮಾಡಲು ಇಚ್ಛೆ ಹೊಂದಿದ್ದೇನೆ” ಎಂದು ಶ್ರೀರಾಮುಲು ಖಚಿತಪಡಿಸಿದರು.
ವಿಜಯೇಂದ್ರ ಅವರ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಾಲ್ಮೀಕಿ ನಿಗಮ ಹಣದ ದುರುಪಯೋಗದ ಬಗ್ಗೆ ಮಾತನಾಡಿ, “ಭರತ್ ರೆಡ್ಡಿ, ಜೇ.ಎನ್. ಗಣೇಶ್, ಬಿ. ನಾಗೇಂದ್ರ ಹಾಗೂ ಡಾ. ಶ್ರೀನಿವಾಸ್ ಅವರು ವಾಲ್ಮೀಕಿ ನಿಗಮದ ಹಣವನ್ನು ಬಳಸಿಕೊಂಡು ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಇದಕ್ಕೆ ಡಿಜಿಟಲ್ ಪುರಾವೆಗಳಿವೆ. ಈಗ ಸಿಬಿಐ ತನಿಖೆ ನಡೆಯುತ್ತಿದೆ. ನಾಗೇಂದ್ರ ಜೈಲಿಗೆ ಹೋದರೂ ಅಚ್ಚರಿಯಿಲ್ಲ” ಎಂದು ಹೇಳಿದರು.
“ದೇಶದಲ್ಲಿ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿದವರು ತಪ್ಪಿಸಿಕೊಳ್ಳುವ ಇತಿಹಾಸವಿಲ್ಲ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುತ್ತದೆ” ಎಂಬ ಆತ್ಮವಿಶ್ವಾಸವನ್ನು ಅವರು ತೋರಿಸಿದರು.