ಗಣಪತಿಯ ಸ್ಪಂದನೆಗಳು ಮತ್ತು ಪೃಥ್ವಿಯ ಚತುರ್ಥಿ ತಿಥಿಯ ಸ್ಪಂದನೆಗಳು ಒಂದೇ ರೀತಿಯದಾಗಿರುತ್ತವೆ.ಗಣೇಶನ ಸ್ಪಂದನೆಗಳು ಹೆಚ್ಚಿನ ಪ್ರಮಾಣದಲ್ಲಿ ಇರುವದರಿಂದ ಪ್ರತೀ ತಿಂಗಳು ಚತುರ್ಥಿದಿನ ಗಣಪತಿ ತತ್ವವು ಇತರ ದಿನಗಳ ತುಲನೆಯಲ್ಲಿ ಪೃಥ್ವಿಯ ಮೇಲೆ ನೂರು ಪಟ್ಟು ಹೆಚ್ಚಿಗೆ ಕಾರ್ಯನಿರತವಾಗಿರುತ್ತವೆ.
ಗಣೇಶನ ತತ್ವದ ಲಾಭ ಭಕ್ತರಿಗೆ ಹೆಚ್ಚಿಗೆ ಆಗುವದರಿಂದ ಶುಕ್ಲಪಕ್ಷದ ಚತುರ್ಥಿಗೆ ವಿನಾಯಕ ಚತುರ್ಥಿಯಂದು ಕೃಷ್ಣ ಪಕ್ಷದ ಚತುರ್ಥಿಗೆ ಸಂಕಷ್ಟಿಯೆಂದು ಕರೆಯಲಾಗುತ್ತದೆ.ಸಂಕಷ್ಟ ಚತುರ್ಥಿಯು ಯಾವುದೇ ತಿಂಗಳ ಕೃಷ್ಣಪಕ್ಷದ ಮಂಗಳವಾರ ಬಂದರೆ ಅದನ್ನು ಅಂಗಾರಕ ಸಂಕಷ್ಟ ಚತುರ್ಥಿಯೆಂದು ಆಚರಿಸಲಾಗುತ್ತದೆ.
ಇದು ಉಪವಾಸ ಆಚರಿಸಲು ಅತ್ಯಂತ ಶುಭದಿನವಾಗಿದೆ.ಅತ್ಯಂತ ಅಧ್ಯಾತ್ಮಿಕ ದಿನವೂ ಆಗಿದೆ.ಅಂಗಾರ್ಕ ಎಂಬ ಶಬ್ದವು ಅಂಗಾರಕ ಎಂಬ ಪದದಿಂದ ಬಂದಿದೆ.ಮಂಗಳವಾರ ಶಕ್ತಿ,ಶಿಸ್ತು,ಧೈರ್ಯ ಮತ್ತು ಕರ್ಮಕ್ರಿಯೆಯನ್ನು ಪ್ರತಿನಿಧಿಸುತ್ತದೆ.ಕೃಷ್ಣಪಕ್ಷದ ನಾಲ್ಕನೇಯ ದಿನ (ಸಂಕಷ್ಟ ಚತುರ್ಥಿ) ಮಂಗಳವಾರದೊಂದಿಗೆ ಸೇರಿದಾಗ ಗಣೇಶನ ಮತ್ತು ಮಂಗಳ ಗ್ರಹದ ಶಕ್ತಿಗಳು ಅಸಾಧಾರಣವಾದ,ಪ್ರಬಲವಾದ ಅಧ್ಯಾತ್ಮಕ ಕಿಟಕಿಯನ್ನು ಸೃಷ್ಟಿಸುತ್ತವೆ.
ಈ ಜೋಡಣೆಯು ನಿಯಮಿತ ಸಂಕಷ್ಟಚತುರ್ಥಿಗೆ ಹೋಲಿಸಿದರೆ ಈ ದಿನದಂದು ಮಾಡುವ ಉಪವಾಸ,ಪ್ರಾರ್ಥನೆ,ಮತ್ತು ಪೂಜೆಯ ಪ್ರಯೋಜನಗಳನ್ನು ಹಲವು ಪಟ್ಟು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.ಅಂಗಾರಕ ಸಂಕಷ್ಟಚತುರ್ಥಿಯನ್ನು ವಿಶೇಷವಾಗಿ ಜೀವನದಲ್ಲಿ ತೀವ್ರ ಅಡೆತಡೆಗಳು ,ಪುನರಾವರ್ತಿತ ವೈಫಲ್ಯಗಳು ,ಆರೋಗ್ಯ,ಆರ್ಥಿಕಸಮಸ್ಯೆ,ಕಾನೂನು ತೊಡಕು ವೃತ್ತಿ,ಮದುವೆಯಲ್ಲಿ ವಿಳಂಬ ಎದುರಿಸುತ್ತಿರುವ ಭಕ್ತರಿಗೆ ಈ ವೃತ ಶ್ರೇಷ್ಟವಾಗಿದೆ.ಗಣೇಶನು ಬುದ್ಧಿವಂತಿಕೆ ಮತ್ತು ಸ್ಥಿರತೆಯಿಂದ ಫಲ ನೀಡಿದರೆ ಮಂಗಳನು ಕ್ರಿಯೆ ಮತ್ತು ಪರಿಶ್ರಮದಿಂದ ಆಳುತ್ತಾನೆ.
ಸಾಂಪ್ರದಾಯಕವಾಗಿ ಸೂರ್ಯೋದಯದಿಂದ ಚಂದೋದಯದವರೆಗೂ ಭಕ್ತರು ಉಪವಾಸ ಮಾಡುತ್ತಾರೆ.ಭಕ್ತಿಯಿಂದ ಗಣೇಶನ ಪೂಜೆಮಾಡಿ ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಉಪವಾಸವನ್ನು ಮುರಿಯುತ್ತಾರೆ.ಈ ದಿನದಂದು ಗಣೇಶನ ಮಂತ್ರ ಪಠಣೆ,ಮೂಲಾಧಾರ ಚಕ್ರವನ್ನು ಧ್ಯಾನಿಸುವದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.ನಾವೂ ಭಕ್ತಿಯಿಂದ ಅಂಗಾರಕ ಸಂಕಷ್ಟಿಯಂದು ಗಣೇಶನನ್ನು ಪೂಜಿಸಿ ಅವನ ಆಶೀರ್ವಾದ ಪಡೆಯೋಣ.

ಗಿರಿಜಾ.ಎಸ್.ದೇಶಪಾಂಡೆ,ಬೆಂಗಳೂರು.








