ನವದೆಹಲಿ: ಫೆಬ್ರವರಿ 1, 2026ರಿಂದ ಹೊಸ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಪಡೆಯುವ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ, ಫಾಸ್ಟ್‌ಟ್ಯಾಗ್ ವಿತರಣೆಯು ಇನ್ನಷ್ಟು ಸರಳ, ಪಾರದರ್ಶಕ ಹಾಗೂ ವ್ಯವಸ್ಥಿತವಾಗಲಿದೆ.
ಕಾಗದಪತ್ರಗಳ ಬಳಕೆಯನ್ನು ಕಡಿಮೆ ಮಾಡುವುದು, ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ವಿಳಂಬವನ್ನು ತಡೆಯುವುದು ಹಾಗೂ ವಾಹನ ಮಾಲೀಕರಿಗೆ ಹೆದ್ದಾರಿ ಪ್ರಯಾಣವನ್ನು ಸುಗಮಗೊಳಿಸುವುದು ಈ ಬದಲಾವಣೆಗಳ ಮುಖ್ಯ ಉದ್ದೇಶವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ನಿಯಮಗಳಂತೆ, ಬ್ಯಾಂಕುಗಳು ಹೊಸ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಅನ್ನು ಸಕ್ರಿಯಗೊಳಿಸುವ ಮೊದಲು ಎಲ್ಲಾ ವಾಹನದ ವಿವರಗಳನ್ನು ಪೂರ್ವಪರಿಶೀಲನೆ ಮಾಡಬೇಕು. ಇದುವರೆಗೆ ಅನೇಕ ಸಂದರ್ಭಗಳಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಮೊದಲು ಸಕ್ರಿಯಗೊಳಿಸಿ ನಂತರ ದಾಖಲೆ ಪರಿಶೀಲನೆ ನಡೆಸಲಾಗುತ್ತಿತ್ತು. ಇದರಿಂದ ಹಠಾತ್ ಟ್ಯಾಗ್ ನಿಷ್ಕ್ರಿಯಗೊಳಿಸುವಿಕೆ, ಪುನರಾವರ್ತಿತ ಎಚ್ಚರಿಕೆ ಸಂದೇಶಗಳು ಮತ್ತು ಮಾನ್ಯ ದಾಖಲೆಗಳಿದ್ದರೂ ವಾಹನ ಮಾಲೀಕರಿಗೆ ಗೊಂದಲ ಉಂಟಾಗುತ್ತಿತ್ತು. ಪರಿಷ್ಕೃತ ಪ್ರಕ್ರಿಯೆಯು ಈ ಸಮಸ್ಯೆಗಳನ್ನು ತಡೆಯುವ ಗುರಿಯನ್ನು ಹೊಂದಿದೆ.
ಹೊಸ ನಿಯಮದ ಪ್ರಮುಖ ಅಂಶವೆಂದರೆ ವಾಹನ ಪರಿಶೀಲನೆಗೆ ‘ವಾಹನ್’ ಪೋರ್ಟಲ್ ಅನ್ನು ಮುಖ್ಯ ಮೂಲವಾಗಿ ಬಳಸಲಾಗುವುದು. ಫಾಸ್ಟ್‌ಟ್ಯಾಗ್ ಸಕ್ರಿಯಗೊಳಿಸುವ ಮೊದಲು ಬ್ಯಾಂಕುಗಳು ವಾಹನ್ ಡೇಟಾಬೇಸ್‌ನಿಂದ ನೇರವಾಗಿ ವಾಹನದ ನೋಂದಣಿ ಸಂಖ್ಯೆ, ವಾಹನ ವರ್ಗ ಹಾಗೂ ಸಂಬಂಧಿತ ವಿವರಗಳನ್ನು ದೃಢೀಕರಿಸಬೇಕು. ವಾಹನ್‌ನಲ್ಲಿ ಮಾಹಿತಿ ಲಭ್ಯವಿಲ್ಲದಿದ್ದಲ್ಲಿ, ನೋಂದಣಿ ಪ್ರಮಾಣಪತ್ರದ ಆಧಾರದಲ್ಲಿ ಪರಿಶೀಲನೆ ನಡೆಸಬೇಕಿದ್ದು, ಅದರ ನಿಖರತೆಗೆ ಸಂಬಂಧಿಸಿದ ಸಂಪೂರ್ಣ ಜವಾಬ್ದಾರಿ ಬ್ಯಾಂಕುಗಳ ಮೇಲೆಯೇ ಇರುತ್ತದೆ.
ಇದಲ್ಲದೆ, ಹೊಸ ವಾಹನ ಮಾಲೀಕರಿಗೆ ದೊಡ್ಡ ರಿಲೀಫ್ ಎಂದರೆ ಪ್ರತ್ಯೇಕ ‘ನೋ ಯುರ್ ವೆಹಿಕಲ್’ (KYV) ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ. ಈ ಹಿಂದೆ ಫಾಸ್ಟ್‌ಟ್ಯಾಗ್ ವಿತರಿಸಿದ ಬಳಿಕವೂ ಮತ್ತೆ KYV ತಪಾಸಣೆ ನಡೆಸಲಾಗುತ್ತಿತ್ತು. ಫೆಬ್ರವರಿ 2026ರಿಂದ ಫಾಸ್ಟ್‌ಟ್ಯಾಗ್ ವಿತರಣೆಯ ಸಮಯದಲ್ಲೇ ನೋಂದಣಿ ಪ್ರಮಾಣಪತ್ರವನ್ನು ಒಮ್ಮೆ ಮಾತ್ರ ಪರಿಶೀಲಿಸಿ, ಒಂದೇ ಹಂತದಲ್ಲಿ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.ಇದನ್ನು ಓದಿ –ಅತ್ಯಾಚಾರ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
ಈ ಹೊಸ ನಿಯಮಗಳಿಂದ ಫಾಸ್ಟ್‌ಟ್ಯಾಗ್ ಪಡೆಯುವ ಪ್ರಕ್ರಿಯೆ ವೇಗವಾಗಿ, ಸುಗಮವಾಗಿ ಮತ್ತು ವಾಹನ ಮಾಲೀಕರಿಗೆ ಅನುಕೂಲಕರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.








