ಸಿಂಹಾಸನಾಗತಾ ನಿತ್ಯಂ ಪದ್ಮಾಶ್ರಿತ ಕರದ್ವಯಾ
ಶುಭದಾಸ್ತು ಸದಾದೇವಿ ಸ್ಕಂದಮಾತಾ ಯಶಸ್ವಿನೀ’
ನವರಾತ್ರಿಯ ಐದನೆಯ ದಿನ ದೇವಿ ‘ಸ್ಕಂದ ಮಾತಾ’ ಎಂಬ ರೂಪದಿಂದ ಪ್ರಖ್ಯಾತಿ ಹೊಂದಿರುವಳು. ನಾಲ್ಕು ಕೈಗಳನ್ನು ಹೊಂದಿ, ದೇವ ಸೇನಾಪತಿ ಸ್ತಂದನನ್ನು ತೊಡೆಯ ಮೇಲೆ ಕೂರಿಸಿಕೊಂಡು ಸಿಂಹವಾಹಿನಿಯಾಗಿ ದೇವಿ ಅವತಾರ ತೋರುತ್ತಾಳೆ.
ಸ್ಕಂದ ಮಾತಾ ಎನಿಸಿಕೊಳ್ಳುವ ದೇವಿ ಪಾರ್ವತಿ ಶಿವನನ್ನು ಕುರಿತು ತಪಸ್ಸನ್ನು ಆಚರಿಸುತ್ತಿರುವಾಗ, ಶಿವನು ಉಮೆಯತ್ತ ಗಮನಿಸುವುದೇ ಇಲ್ಲ. ಅಂತಹ ಕಾಲದಲ್ಲಿ ತಾರಕಾಸುರನೆಂಬ ಅಸುರನು ಈಡೀ ಲೋಕವನ್ನು ತನ್ನ ಅಸುರೀ ಕೃತ್ಯದಿಂದ ಹಿಂಸಿಸುತ್ತಿರುತ್ತಾನೆ. ಆಗ ದೇವಾನು ದೇವತೆಗಳು ತಾರಕಾಸುರನ ಸಂಹಾರ ಶಿವ ಪಾರ್ವತಿಯರ ಸಂತಾನದಿಂದ ಮಾತ್ರ ಸಾಧ್ಯ ಎಂದು ಅರಿತು ಶಿವನನ್ನು ಪಾರ್ವತಿಯತ್ತ ಸೆಳೆಯಲು, ಮನ್ಮಥನನ್ನು ಕಳಿಸುವರು. ಆಗ ಮದನನು ಹೂಬಾಣ ಹೂಡಿ, ಶಿವನ ಮೂರನೇ ಕಣ್ಣಿಗೆ ಹೊಡೆವನು. ಕೋಪಗೊಂಡ ಶಿವನ ಕೆಂಗಣ್ಣಿಗೆ ಗುರಿಯಾಗಿ ಮದನನು ಸುಟ್ಟರೂ, ಪಾರ್ವತಿಯ ತಪಸ್ಸು ಫಲಿಸಿ, ಶಂಕರನು ಉಮೆಯನ್ನು ಒಲಿಯುವನು.
ಶಿವ ಪಾರ್ವತಿಯರ ವಿವಾಹವಾಗುತ್ತೆ. ರುದ್ರದೇವರ ಅಗ್ನಿಅಂಶದ ಪ್ರಭಾವ ಮತ್ತು ಪಾರ್ವತಿ ಪ್ರೀತಿಯೂ ಸೇರಿ ಒಂದು ಬೆಂಕಿಯ ಕಿಡಿ ಉಂಟಾಗುತ್ತೆ. ಇದನ್ನು ಅಗ್ನಿಯೂ ಕೂಡ ಇಟ್ಟು ಕೊಳ್ಳಲಾಗದೇ ಅದನ್ನು ಗಂಗೆಗೆ ಕೊಡುತ್ತಾನೆ. ಗಂಗೆಯು ಅದನ್ನು ಶರವನ್ ಎಂಬ ಕಾಡಿಗೆ ಕೊಟ್ಟಾಗ ಅವನು ಅದನ್ನು ತನ್ನ ಏಳುಜನ ಸೋದರಿಯರಿಗೆ ನೀಡುತ್ತಾನೆ. ಅವರನ್ನು ಕೃತ್ತಿಕೆಯರು ಎಂದು ಕರೆಯಲಾಗುತ್ತೆ. ಅವರು ಆ ಬೆಂಕಿಯ ಕಿಡಿಯನ್ನು ಪೋಷಿಸಿದಾಗ ಅದು ಒಂದು ಸುಂದರ ಗಂಡು ಮಗುವಾಗುತ್ತದೆ. ಕೃತ್ತಿಕೆಯರು ಪೋಷಿಸಿದ್ದರಿಂದ ಕಾರ್ತಿಕೇಯ ಎನಿಸಿಕೊಂಡ ಮಗು, ಶಿವಪಾರ್ವತಿಯರ ಮಗ ಸ್ಕಂದನೆನಿಸಿ ದೇವಸೇನಾಪತಿಯಾಗಿ ತಾರಕಾಸುರನ ಸಂಹಾರ ಮಾಡುವನು.
ಸ್ಕಂದಮಾತೆಯಾದ ದೇವಿ ತಾರಕಾಸುರನ ಸಂಹಾರಕ್ಕೆ ಹೀಗೆ ಕಾರಣಳಾಗುತ್ತಾಳೆ. ಸ್ಕಂದ ಮಾತೆಯಾದ ದೇವಿ ಆರು ಮುಖವುಳ್ಳ ಕುಮಾರನೊಂದಿಗೆ ನಾಲ್ಕು ಭುಜಗಳನ್ನು ಹೊಂದಿ, ಸಿಂಹವಾಹಿನಿಯಾಗಿ ದುಷ್ಟ ಶಕ್ತಿಗಳ ನಿಗ್ರಹ ಮಾಡುತ್ತಾಳೆ. ಪೂಜಿಸುವ ಭಕ್ತರಿಗೆ ಒಲಿಯುತ್ತಾಳೆ. ಸ್ಕಂದಮಾತೆ ಬುಧಗ್ರಹದ ಮೇಲೆ ಆಧಿಪತ್ಯ ಹೊಂದಿದ್ದಾಳೆ. ಬುಧಗ್ರಹ ದೋಷವಿದ್ದರೆ ಸ್ಕಂದಮಾತೆ ಪೂಜಿಸಲು ನಿವಾರಣೆಯಾಗುತ್ತೆ. ಸ್ಕಂದ ಕಮಲಸ್ಕಂದ ಮಾತಾಲಿ ವಿರಾಜಳಾದ ದೇವಿಗೆ ಪದ್ಮಾಸನಾ ದೇವಿ ಎಂದು ಕರೆಯಲಾಗುತ್ತೆ. ಪುತ್ರ ಸ್ಕಂದನನ್ನು ತೊಡೆಯ ಈ ಮೇಲೆ ಕೂರಿಸಿಕೊಂಡಿರುವುದರಿಂದ, ಪೂಜಿಸುವ ಭಕ್ತರಿಗೆ ಇಬ್ಬರ ಅನುಗ್ರಹವೂ ದೊರೆಯುತ್ತೆ.
ಶೇಷ ಮಾತೆಗೆ ವಿಶೇಷವಾಗಿ ಕೆಂಪು ಹೊಗಳು ಪ್ರಿಯ.
ಷೋಡಶೋಪೋಚಾರ ವಿಧಾನದಿಂದ ದೇವಿಯನ್ನು ಆರಾಧಿಸಲು ಸಕಲ ಸಂಪತ್ತು, ಸಮಾಧಾನ ನೆಮ್ಮದಿ, ಸಂತುಷ್ಟಿಯನ್ನು ನೀಡುವ ಸ್ಕಂದಮಾತೆ ನವರಾತ್ರಿಯಲ್ಲಿ ವಿಶೇಷವಾಗಿ ಪೂಜೆಗೊಳ್ಳುವಳು. ಸ್ಕಂದ ಮಾತೆ ಯಶಸ್ಸು, ಸಂಪದ ನೀಡುವ ಮಹಾಮಾತೆ ಆಕೆಯನ್ನು ನವರಾತ್ರಿಯ ಐದನೆಯ ದಿನ ಪೂಜಿಸಿ ಕೃತಾರ್ಥರಾಗೋಣ.

ಅಪರ್ಣಾ ದೇವಿ
ದಾವಣಗೆರೆ








