ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಆಯೋಜಿಸಿದ್ದ ರಾಜಕೀಯ ರ್ಯಾಲಿಯ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಕನಿಷ್ಠ 40 ಜನರು ಸಾವನ್ನಪ್ಪಿದ್ದು, ಶತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಈ ಭೀಕರ ಘಟನೆಯ ಹಿನ್ನೆಲೆಯಲ್ಲಿ ನಟ ದಳಪತಿ ವಿಜಯ್ ತಮ್ಮ ಆಳವಾದ ದುಃಖವನ್ನು ವ್ಯಕ್ತಪಡಿಸಿ, ಮೃತಪಟ್ಟವರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ವಿಜಯ್ ಅವರು ಭಾವುಕರಾದ ಸಂದೇಶವನ್ನು ಹಂಚಿಕೊಂಡಿದ್ದು, “ನಿನ್ನೆ ಕರೂರಿನಲ್ಲಿ ನಡೆದ ದುರಂತದ ಬಗ್ಗೆ ಯೋಚಿಸಿದಾಗ ನನ್ನ ಹೃದಯ ಮತ್ತು ಮನಸ್ಸು ತುಂಬಾ ಭಾರವಾಗುತ್ತಿದೆ. ನಮ್ಮ ತಮ್ಮರು, ಸಂಬಂಧಿಕರನ್ನು ಕಳೆದುಕೊಂಡು ದುಃಖಿಸುತ್ತಿರುವ ನಿಮ್ಮ ನೋವನ್ನು ನಾನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ಕಣ್ಣುಗಳು ಕಣ್ಣೀರು ತುಂಬಿಕೊಂಡಿವೆ, ಮನಸ್ಸು ಬಳಲುತ್ತಿದೆ,” ಎಂದು ಹೇಳಿದ್ದಾರೆ.
ಅವರು ಮುಂದುವರಿಸಿ, “ನಾನು ಭೇಟಿಯಾದ ನಿಮ್ಮೆಲ್ಲರ ಮುಖಗಳು ನನ್ನ ಮನಸ್ಸಿನಲ್ಲಿ ಮೂಡುತ್ತಿವೆ. ನನ್ನ ಸಂಬಂಧಿಕರಂತಿರುವ ಜನರನ್ನು ಕಳೆದುಕೊಂಡಿರುವುದರಿಂದ ಹೃದಯ ಮತ್ತಷ್ಟು ಮಿಡಿಯುತ್ತಿದೆ. ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತಾ, ನಿಮ್ಮೊಂದಿಗೆ ಈ ನೋವನ್ನು ಹಂಚಿಕೊಳ್ಳುತ್ತೇನೆ. ಇದು ಸರಿದೂಗಿಸಲಾಗದ ನಷ್ಟ. ಯಾವುದೇ ಪರಿಹಾರವೂ ಪ್ರಿಯರನ್ನು ಮರಳಿಸಲಾರದು. ಆದರೆ, ನಿಮ್ಮ ಕುಟುಂಬದ ಒಬ್ಬನಾಗಿ, ಮೃತರ ಕುಟುಂಬಗಳಿಗೆ ತಲಾ 20 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 2 ಲಕ್ಷ ರೂ. ನೆರವು ನೀಡಲು ನಿರ್ಧರಿಸಿದ್ದೇನೆ,” ಎಂದು ತಿಳಿಸಿದ್ದಾರೆ.ಇದನ್ನು ಓದಿ –ಸರಸ್ವತಿ – ಜ್ಞಾನ ಮತ್ತು ಕಲೆಯ ಪ್ರತೀಕ
ಅದೇ ರೀತಿ, “ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ತಮಿಳಗ ವೆಟ್ರಿ ಕಳಗಂ ಪಾರ್ಟಿ ಎಲ್ಲ ರೀತಿಯ ನೆರವನ್ನು ಒದಗಿಸುತ್ತದೆ,” ಎಂದು ಭರವಸೆ ನೀಡಿದ್ದಾರೆ.








