ಮಂಡ್ಯ : ಮದ್ದೂರು ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ಘಟನೆಯ ವಿರುದ್ಧವಾಗಿ ಹಿಂದೂ ಪರ ಸಂಘಟನೆಗಳು ಇಂದು ಮದ್ದೂರು ಬಂದ್‌ಗೆ ಕರೆ ನೀಡಿವೆ.
ಘಟನೆಯ ನಂತರ ಪಟ್ಟಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿದೆ. ಪಟ್ಟಣದಾದ್ಯಂತ ಭಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಜಿಲ್ಲಾಧಿಕಾರಿ ಮತ್ತು ಮೇಲ್ವಿಚಾರಕ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅನ್ಯಕೋಮಿನವರು ಗಣೇಶ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಪ್ರತಿಯಾಗಿ ಕೆಲವರು ಕಲ್ಲು ತೂರಾಟ ನಡೆಸಿದ ಪರಿಣಾಮ ಹಲವರಿಗೆ ಗಾಯಗಳಾದ್ದು, ಗಾಯಗೊಂಡವರನ್ನು ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಖಂಡನೆಗಾಗಿ ಹಿಂದೂ ಮತ್ತು ಮುಸ್ಲಿಂ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದಲ್ಲಿ ಅಶಾಂತಿ ತಡೆಗಟ್ಟುವ ಸಲುವಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಈ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಸ್ಥಳದಲ್ಲಿ ಇನ್ನೂ ಬಿಗಿ ಭದ್ರತೆ ಮುಂದುವರಿದಿದ್ದು, ಮೆರವಣಿಗೆಗೆ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.