ಜಮ್ಮು ಮತ್ತು ಕಾಶ್ಮೀರ: ಲಷ್ಕರ್-ಎ-ತೋಯ್ಬಾ (LET) ಸಂಘಟನೆಯ ಶಂಕಿತ ಉಗ್ರನೊಬ್ಬನು ಭದ್ರತಾ ಪಡೆಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನದಿಗೆ ಹಾರಿ ಸಾವಿಗೀಡಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ಮೃತನನ್ನು 23 ವರ್ಷದ ಇಮ್ತಿಯಾಜ್ ಅಹ್ಮದ್ ಮ್ಯಾಗ್ರೆ ಎಂದು ಗುರುತಿಸಲಾಗಿದೆ. ಭದ್ರತಾ ಪಡೆಗಳು ಮತ್ತು ತನಿಖಾ ಸಂಸ್ಥೆಗಳೊಂದಿಗೆ ಸಂಚಾಲಿತ ಕಾರ್ಯಾಚರಣೆಯ ವೇಳೆ ಆತನು ಉಗ್ರರ ಅಡಗುತಾಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಭಯಭೀತನಾದ ಇಮ್ತಿಯಾಜ್, ವಿಶಾ ನದಿಗೆ ಹಾರಿ ಪಾರಾಗಲು ಪ್ರಯತ್ನಿಸಿದಾಗ ನೀರಿನ ಸೆಳೆತಕ್ಕೆ ಸಿಲುಕಿ ಸಾವಿಗೀಡಾದ ಎಂದು ಮೂಲಗಳು ತಿಳಿಸಿದ್ದಾರೆ.
ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡಿದ್ದು, ನದಿಗೆ ಹಾರುತ್ತಿರುವ ದೃಶ್ಯಗಳು ಕಣ್ಣಿಗೆ ಬಿದ್ದಿವೆ. ಈಜಲು ಪ್ರಯತ್ನಿಸಿದರೂ ಸಹ ಆತನು ಮುಳುಗಿದ್ದು, ನಂತರ ಪತ್ತೆಯಾಗದೆ ಮೃತಪಟ್ಟಿರುವುದು ದೃಢಪಟ್ಟಿದೆ.
ಇದೀಗ, ಮೃತನ ಕುಟುಂಬದವರು ಹೊಸ ಆಕ್ಷೇಪಣೆ ಎತ್ತಿದ್ದು, ಇಮ್ತಿಯಾಜ್ ಪೊಲೀಸ್ ಕಸ್ಟಡಿಯಲ್ಲಿ ಕೊಲೆಯಾದಂತೆಯೇ ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರಿಂದಲೇ ಹಿಂಸಾತ್ಮಕ ವರ್ತನೆ ನಡೆದಿದೆ ಎಂದು ಆರೋಪಿಸಿದ್ದಾರೆ.
ಮೂಲಗಳ ಪ್ರಕಾರ, ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವಿಚಾರಣೆಯ ಭಾಗವಾಗಿ ಇಮ್ತಿಯಾಜ್ ಅನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶನಿವಾರ ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆಯ ಸಮಯದಲ್ಲಿ ಆತನು ಕುಲ್ಗಾಮ್ ಜಿಲ್ಲೆಯ ತಂಗ್ಮಾರ್ಗ್ ಕಾಡಿನಲ್ಲಿ ಅಡಗಿದ್ದ ಉಗ್ರರಿಗೆ ಆಹಾರ ಹಾಗೂ ಲಾಜಿಸ್ಟಿಕಲ್ ಸಹಾಯ ಒದಗಿಸಿದ್ದಾಗಿ ಒಪ್ಪಿಕೊಂಡಿದ್ದನು.ಇದನ್ನು ಓದಿ –ರಾಜ್ಯದ ಅಭಿವೃದ್ಧಿಗೆ ₹1.33 ಲಕ್ಷ ಕೋಟಿ ಮೀಸಲಾತಿ: ಸಿಎಂ ಸಿದ್ದರಾಮಯ್ಯ ಘೋಷಣೆ
ಉಗ್ರರ ಅಡಗುತಾಣ ಬಹಿರಂಗವಾಗುವ ಭಯದಿಂದ ಆತನು ಈ ರೀತಿ ನದಿಗೆ ಹಾರಿದಿರುವ ಶಂಕೆ ವ್ಯಕ್ತವಾಗಿದೆ. ಘಟನೆಯ ಕುರಿತು ಮತ್ತಷ್ಟು ತನಿಖೆ ಮುಂದುವರೆದಿದೆ.