: ಪತಿ, ಅತ್ತೆ ವಿರುದ್ಧ ಕೊಲೆ ಆರೋಪ
ಬೆಂಗಳೂರು: ಆನೇಕಲ್ ತಾಲೂಕಿನ ಸೂರ್ಯನಗರದಲ್ಲಿ ಗೃಹಿಣಿ ಒಬ್ಬರ ಅನುಮಾನಾಸ್ಪದ ಸಾವು ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಮೂಲದ ದೀಪಾ (30) ಮೃತಪಟ್ಟಿದ್ದು, ಪತಿ ಉದಯ್ ಮತ್ತು ಅತ್ತೆ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ದೀಪಾ ಪೋಷಕರು ಮತ್ತು ಬಂಧುಗಳು, “ನಮ್ಮ ಮಗಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸುಮಾರು 12 ವರ್ಷಗಳ ಹಿಂದೆ ದೀಪಾ-ಉದಯ್ ಮದುವೆಯಾಗಿದ್ದು, ಮದುವೆ ಸಂದರ್ಭದಲ್ಲಿ ಜಮೀನು ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಹಾಗೂ ಚಿನ್ನಾಭರಣ ನೀಡಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದರು.
ಇತ್ತೀಚೆಗೆ ಉದಯ್, ಬ್ಯೂಟಿ ಪಾರ್ಲರ್ ಮಾಲಕಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿತ್ತು. ಇದರಿಂದ ದಂಪತಿಗಳ ನಡುವೆ ವೈಮನಸ್ಯ ಉಂಟಾಯಿತು.
ಅಕ್ರಮ ಸಂಬಂಧದ ವಿಚಾರ ಹಿರಿಯರ ಮಧ್ಯಸ್ಥಿಕೆಯಿಂದ ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಮಾತುಕತೆ ನಡೆದಿತ್ತು. ಆಗಸ್ಟ್ 6 ರಂದು ಉದಯ್, ದೊಣ್ಣೆಯಿಂದ ದೀಪಾಳ ಮೇಲೆ ಹಲ್ಲೆ ನಡೆಸಿದ ಘಟನೆ ಸಂಭವಿಸಿತು. “ಎಲ್ಲಿ ಹೋದರೂ ಹೋಗಿ ಸಾಯ್” ಎಂದು ಅವಮಾನ ಮಾಡಿದ ಕಾರಣ ದೀಪಾ ಮನನೊಂದು ಕ್ರಿಮಿನಾಶಕ ಔಷಧಿ ಸೇವಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಆಗಸ್ಟ್ 9ರಂದು ಅವರು ಸಾವನ್ನಪ್ಪಿದರು.
ಈ ಸಂಬಂಧ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.