ಬೆಳಗಾವಿ, ಮೇ 24 – 17 ವರ್ಷದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮೇಖಳಿಯ ರಾಮಮಂದಿರದ ಲೋಕೇಶ್ವರ ಮಹಾರಾಜ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಪೋಕ್ಸೋ (POCSO) ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದ್ದು, ಸ್ವಾಮೀಜಿಯನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಆರೋಪಿ ಸ್ವಾಮೀಜಿ ಬಾಲಕಿಗೆ ಯಾರಿಗಾದರೂ ಈ ಬಗ್ಗೆ ಹೇಳಿದರೆ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದರೆಂಬ ಆರೋಪವೂ ಕೇಳಿಬಂದಿದೆ. ಮಹಿಳಾ ಠಾಣೆಯಿಂದ ಪ್ರಕರಣವನ್ನು ಮೂಡಲಗಿ ಠಾಣೆಗೆ ವರ್ಗಾಯಿಸಲಾಗಿದೆ.
ಮೇ 13ರಂದು ಸ್ವಾಮೀಜಿ, ಬಾಲಕಿಯನ್ನು ಮನೆಗೆ ಬಿಡುವ ನೆಪದಲ್ಲಿ ರಾಯಚೂರಿಗೆ ಕರೆದೊಯ್ದು, ಮೇ 13 ಮತ್ತು 14ರಂದು ಇಬ್ಬರೂ ರಾಯಚೂರಿನಲ್ಲಿ ಎರಡು ದಿನವಿದ್ದು, ನಂತರ ಮೇ 15ರಂದು ಬಾಗಲಕೋಟೆಯಲ್ಲಿ ವಾಸ್ತವ್ಯ ಹೂಡಿದಾಗ ಬಾಲಕಿಗೆ ಅತ್ಯಾಚಾರ ಎಸಗಿದರೆಂಬ ಆರೋಪ ಕೇಳಿಬಂದಿದೆ. ಇದಾದ ಬಳಿಕ ಮೇ 16ರಂದು ಮಹಾಲಿಂಗಪುರ ಬಸ್ ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟುಹೋದರು. ಬಳಿಕ ಬಾಲಕಿ ನೀಡಿದ ದೂರಿನನಂತರ, ಮೇ 17ರಂದು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ವ ಹಿನ್ನೆಲೆ:
ಬಾಲಕಿಯ ತಂದೆ-ತಾಯಿ ಕೆಲವೊಮ್ಮೆ ಮಠದಲ್ಲೇ ವಾರಗಟ್ಟಲೇ ಮಗುವನ್ನು ಬಿಟ್ಟು ಹೋಗುತ್ತಿದ್ದರಂತೆ. ಇದೇ ಅವಕಾಶವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಠದಲ್ಲಿ ಈ ಹಿಂದೆ ಸಹ ಅಕ್ರಮ ಚಟುವಟಿಕೆಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. 2021ರಲ್ಲಿ ಗ್ರಾಮಸ್ಥರು ಸ್ವಾಮೀಜಿಗೆ ಬುದ್ಧಿವಾದ ನೀಡಿದ ಬಳಿಕ ಧರ್ಮದೇಟು ಕೊಟ್ಟಿದ್ದರು.ಇದನ್ನು ಓದಿ –ಮೇ 29ರಿಂದ ಮದ್ಯದಂಗಡಿ ಬಂದ್: ಲೈಸೆನ್ಸ್ ಶುಲ್ಕ ಹೆಚ್ಚಳಕ್ಕೆ ವಿರೋಧ
ಈ ಪ್ರಕರಣ ಬೆಳಕಿಗೆ ಬಂದ ನಂತರ ಗ್ರಾಮಸ್ಥರು ಕಾನೂನಾತ್ಮಕ ಕಠಿಣ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಸ್ವಾಮೀಜಿಗೆ ಯಾವುದೇ ರಿಯಾಯಿತಿ ನೀಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.