ಈ ಚಹಾ ಅನ್ನೋದು ಉತ್ತರ ಕರ್ನಾಟಕದ ಮಂದಿಗೆ ಬಹಳ ಪ್ರೀತಿಯ ಪದ. ಯಾರಾದರೂ ಮನೆಗೆ ಬಂದರೆ ಚಹಾ ಕುಡಿತೀರೇನು ಎಂದು ನಾವು ಕೇಳುವದಿಲ್ಲ ಬದಲಾಗಿ ಚಹಾ ಮಾಡ್ತೀನಿ…. ಎಂದು ಟೊಂಕಕಟ್ಟಿ ಅಡುಗೆ ಮನೆಗೆ ಹೋಗೋದುಂಟು. ನಾನು ಬೆಳೆದದ್ದು ಹಳ್ಳಿಯ ಊರಿನ ಗೌಡ್ರ ಮನೆಯ ಮಗಳಾಗಿ…. ಸಿರಿತನ, ಊರಿನ ಗೌಡ್ರು, ಇವೆಲ್ಲ ಕಂಡಿದ್ದು ಬರೀ ಹೆಸರಿನಲ್ಲಿ ಬಿಟ್ಟರೆ ಮನೆ ತುಂಬ ಒಟ್ಟಿದ ಧಾನ್ಯಗಳ ಚೀಲಗಳು…. ದುಡ್ಡಿನ ಸಿರಿತನ ಕಂಡವರಲ್ಲ…ದುಡ್ಡಿನಲ್ಲಿ ಅಷ್ಟಕಷ್ಟೇ. ಆದರೂ ಅದು ಗೌಡರ ಮನೆ.
ನಮ್ಮ ಮನೆಯ ಕಟ್ಟಿಗೆ… ಅಥವಾ ಜಗುಲಿಗೆ ಯಾವಾಗಲೂ ಜನ. ಅಣ್ಣ ತಮ್ಮಂದಿರ ವ್ಯಾಜ್ಯ, ಹೊಲ ಅಳೆಯುವುದು, ಬ್ಯಾಂಕಿನಲ್ಲಿ ಖಾತೆ ತೆರೆಯಲು, ಸಾಲ ಮಾಡಲು, ನೋಟೀಸ್ ಓದಲು, ಅರ್ಜಿ ಬರೆಯಲು ಹೀಗೆ ನಾನಾ ಅಹವಾಲು… ಎಲ್ಲವೂ ಪುಗಸಟ್ಟೆ ಕೆಲಸ… ಆದರೆ ತಂದೆಗೋ ಅದೊಂದು ಮಾಡಲೇಬೇಕಾದ ಕರ್ತವ್ಯ ಎಂಬಷ್ಟು ನಿಷ್ಠೆ!! ಹೀಗೆ ಬರುವವರಿಗೆ, ಹೋಗುವರಿಗೆ ಸದಾಕಾಲ ಸರಬರಾಜು ಆಗುತ್ತಿದ್ದದ್ದು ಚಹಾ….. ನಮ್ಮ ಅಮ್ಮ ದಿನದಲ್ಲಿ ಕನಿಷ್ಠ ಹತ್ತುಸಾರಿಯಾದರೂ ಚಹಾ ಮಾಡಲೇ ಬೇಕಿತ್ತು…. ಚಹಾದೊಲೆ ಎಂದು ಅದಕ್ಕೆ ಪ್ರತ್ಯೇಕ ಒಲೆ ಕೂಡ ಇತ್ತು…. ಚಹಾದೊಲೆ, ಚಹಾದಗುಂಡಿ(ತಪ್ಪೇಲಿ) ಯಾವಾಗಲೂ ಬಿಸಿ ಇರುತ್ತಿದ್ದವು. ಪಾಪಾ ಅವಳೂ ಕೂಡ ಎಂತಹ ಕೆಲಸದ ಕರಕರೆಯಲ್ಲೂ ಪುರಸೊತ್ತು ಮಾಡಿಕೊಂಡು ಚಹಾ ಮಾಡುತ್ತಿದ್ದಳು. ಕೆಲವೊಮ್ಮೆ ಮಾತ್ರ ” ಕಟ್ಟಿ ಗೆ ಕೂತ ಚಹಾ ಚಹಾ ಅನಕೋತ…. ನನಗ ಹಚಾ ಹಚಾ ಅಂತಾರ” ಎನ್ನುವ ಗೊಣಗಾಟ. ಮನೆಯ ಜಗುಲಿಗೆ ” ಕಪ್ಪಿನ ಮಾಡ” ಎಂಬುವ ಒಂದು ಗೂಡು. ಅದರಲ್ಲಿ ಎಂಟು ಹತ್ತು ಕಪ್ಪುಗಳು. ಚಹಾ ಮಾಡಿ ಸಣ್ಣ ಕೊಳಗದಾಗ ಸೋಸಿ ಜಗುಲಿಗೆ ಇಟ್ಟರೆ ಅವರೆಲ್ಲ ತಾವೇ ಕಪ್ಪುಗಳಿಗೆ ಬಸಿದುಕೊಂಡು ಚಹಾಕುಡಿದು ಮತ್ತೆ ಕಪ್ಪು ತೊಳೆದು ಸ್ವಸ್ಥಾನಕ್ಕೆ ಇಟ್ಟು ಹೋಗುತಿದ್ದರು… ಆದರೆ ಈಗ ಈ ಪದ್ಧತಿ ಇಲ್ಲ… ಹಾಗೆ ಕುಡಿಯುವಾಗ ಮತ್ತೆ ಯಾರಾದರೂ ಮನೆಯಮುಂದೆ ದಾಟಿ ಹೋದರೂ ಅವರನ್ನು ಚಹಾ ಕೆ ಕರಿಯಬೇಕು.ಮತ್ತೆ ಚಹಾದ ಗುಂಡಿ ,ಒಲೆ ಸಜ್ಜಾಗಬೇಕು.ಹುಡಿ ಮರಳುವ ಖಮಟುವಾಸನೆ ಸದಾ ಮನೆಯಲಿ.

ಹಾಗೆ ನೋಡಿದರೆ ಉತ್ತರ ಕರ್ನಾಟಕದ ಜನ ಚಹಾ ಸೊಪ್ಪು ಬೆಳೆಯುವರು ಅಲ್ಲ, ಕಬ್ಬು ಸಕ್ಕರೆ ಉತ್ಪಾದನೆ ಕೂಡ ಇಲ್ಲ…. ಸುರಿಯುವ ಮಳೆಯೂ ಇಲ್ಲ, ಆದರೂ ಬಿರು ಬಿಸಲಾಗ ಸದಾ ಚಹಾ. ಚಹಾದ ಮೂಲಕ ಅವರವರ ಗತ್ತು ಗೈರತ್ತು ಅಳೆಯುವ ಕಾಲವೂ ಇತ್ತು… ” ಅವರ ಮನ್ಯಾಗ ಬರೇ ಹಾಲಾಗಿನ ಚಹಾ… ” ಅಂದರೆ ಅವರು ಶ್ರೀಮಂತರು. ಗಂಗಾಳ ತುಂಬ ಬೆಲ್ಲದ ಚಹಾ ಕುಡಿಯುವ ರೈತರು… ಕರಿ ಚಹಾ ಕುಡಿಯುವ ಹೈನು ಇರದ ಮನೆಯವರು…. ಹೀಗೆ. ಅವರಿಗೆ ಸುಗರ್ ಸಪ್ಪನ ಚಹಾ ಎನ್ನುವ ಸಕ್ಕರೆ ಕಾಯಿಲೆಯವರು.
ಇಲ್ಲಿಯ ಜನ ಸಿಟ್ಟು ಕೂಡ ಚಹಾದ ಮೂಲಕ ತೋರಿಸುವರು. ” ಅವರ ಮನ್ಯಾಗ ಕಪ್ ಚಹಾ ಸುದ್ದಾ ಕುಡಿಯಂಗಿಲ್ಲ ನಾ ” ಎನ್ನುವುದು ಜರ್ಬು ಆದರೆ ” ಬಂದವರಿಗೆ ಕಪ ಚಹಾ ಕೇಳೋ ಪದ್ಧತಿ ಇಲ್ಲ ಅವರಿಗೆ, ನಾಚಿಗೇಡಿ ತಂದು! ‘” ಎಂಬ ಹೀನಾಯಮಾನ ಸ್ಥಿತಿ. ” ನೆಟ್ಟಗ ಒಂದು ಕಪ್ ಚಹಾ ಮಾಡ ಅನ್ನು ಮೊದಲು ಅಕೀಗ….” ಎಂದು ಏನು ಬರದವರಿಗೆ ಮಾಡುವ ಟೀಕೆ.
” ಸತ್ತರ ಜಲ್ದಿ ಒಂದ ಕಪ್ ಚಹಾ ತಂದ ಕೊಡಲಿಲ್ಲ ಅವರ ಮನೀಗ , ಎಂತಹಾ ಖೌಂಟ ಅವ ರೀ, ಅವರ ಓಣಿ ಮಂದಿ” ಹೀಗೆ ಸಾರಾಸಗಟಾ ಓಣಿಯನ್ನು ಜರಿದು ಬಿಡುವ ಜಿಬಕುತನ. ” ಮನಿಗ ಹೋದರೆ ಕಪ್ ಚಹಾ ಹುಟ್ಟಂಗಿಲ್ಲ… ಎಂತಹ ಖನಗ್ಯಾ ಇದ್ದಾಳ್ರೀ ಅಕೀ ಅತ್ತೀ” ಹೀಗೆ ಅತ್ತೆಯ ಘಮಂಡ ತೋರಿಸುದು.
ಏನು ಬೇಡ ಎಂದು ಹೊರಟ ಅವಸರದ ಅತಿಥಿಗಳಿಗೆ” ಕಪ್ ಚಹಾನಾದ್ರೂ ಕುಡಿದು ಹೋಗ್ರೀ” ಎಂಬುದು ವಾಡಿಕೆ. ಇನ್ನು ಸತ್ತವರ ಮನೆಯಲ್ಲಿ ಮಾತನಾಡಿಸಲು ಬಂದವರನ್ನು ಪರಸ್ಪರ ” ಚಹಾ ಕುಡಿಯೋಣ ಬರ್ರೀ”… ಅಥವಾ” ಬೀಗರಿಗೆ ಚಹಾ ಕುಡಸಬೇಕು” ಎಂಬ ಔಪಚಾರಿಕತೆ ಕೂಡ ಉಂಟು. ಓಣಿಯಲ್ಲಿ ಯಾರಾದರೂ ವಿಧಿವಶವಾದರೆ ಅಕ್ಕಪಕ್ಕದ ಮನೆಯವರು ಅವರು ಸ್ನಾನ ಶುದ್ದಿ ಆದ ಕೂಡಲೇ ಚಹಾ ಮಾಡಿತಂದುಕೊಡುವ ಪದ್ಧತಿ.
ಚಹಾ ಮಾಡುವುದು ಒಂದು ಕಲೆ! ಹಾಲು ಮತ್ತು ನೀರು ಒಂದು ಸರಿಯಾದ ಕೆಮಿಕಲ್ ಇಕ್ಕ್ವೇಷನ ರೀತಿಯಲ್ಲಿ ಬೆರಸಿ ಅದಕ್ಕೆ ಪ್ರಮಾಣ ಬದ್ಧವಾಗಿ ಸಕ್ಕರೆ ಮತ್ತು ಚಹಾ ಪುಡಿಯನ್ನು ಹಾಕಬೇಕು, ಅವೆಲ್ಲವೂ ಮಿಳಿತಗೊಂಡು ಮೊದಲ ಮಳೆ ಗೆ ಗೇರು ಮಣ್ಣಿನ ರಾಡಿಯಂತಹ ಕಂದು ಅಲ್ಲದ ಕೆಂಪು ಬಣ್ಣಕ್ಕೆ ಬರುವ ಹಾಗೆ ಕುದಿಸಬೇಕು. ಏಲಕ್ಕಿ ಮತ್ತು ಶುಂಠಿಯನ್ನು ಗುದ್ದಿ, ಹೆರದು ಹಾಕಬೇಕು. ನಂತರ ಕೆಲವು ಸೆಕೆಂಡು ಮುಚ್ಚಿಟ್ಟರೆ ಖಾಟು ಚಹಾಪುಡಿಯ ಜೊತೆಗೆ ಏಲಕ್ಕಿ ಪರಿಮಳ ಬೆರೆತು ವಿಭಿನ್ನ ವಿಶೇಷ ವಾಸನೆ…ಇದು ಒಂದು ರೋಮಾನ್ಸ ಇದ್ದಂಗೆ…. ಪ್ರಮಾಣಬದ್ದವಾದ ವಿಶೇಷ ಸವಿ. ಬಿಸಿ ಇರುವಾಗಲೇ ಕುಡಿಯಬೇಕು.
ಇನ್ನು ಮದುವೆಯಾದ ಹೊಸತರಲ್ಲಿ ತೆಳ್ಳನೆಯ ರೊಟ್ಟಿ ಮಾಡಿ ಅಹುದಹುದು ಎಂದು ಪಟ್ಟಗಿಟ್ಟಿಸಿದವಳಿಗೆ ಗೊತ್ತಿರಲಿಲ್ಲ ಆ ರೊಟ್ಟಿ ತಟ್ಟುವ ಪಟ್ಟ ಕಾಯಂ ಆಗಿ ನಮಗೇ ಸಿಗುವುದು ಎಂದು. ಅದಕ್ಕೆ ಇಂದಿನವರಗೂ ನಾ ಒಳ್ಳೆಯ ಚಹಾಮಾಡೋದು ಕಲಿತೇ ಇಲ್ಲ…. ಮನೆಯ ಸರ್ವ ಕೆಲಸದ ಜವಾಬ್ದಾರಿ ನನ್ನದಾದರೂ ಚಹಾ ಮಾಡುವ ಉಸ್ತುವಾರಿ ನಮ್ಮ ಅತ್ತೆ ಅವರದು. ಅದರಲ್ಲೂ ಅವರು ಚಹಾ ಮಾಡುವದರಲ್ಲಿ ನಿಷ್ಣಾತರು… ಅಂದಿಗೂ ಇಂದಿಗೂ ಒಂದೇ ರುಚಿಯ ಚಹಾ ಮಾಡುವರು. ಮಾಡುವುದರಲ್ಲೂ ತುಂಬಾ ಉತ್ಸಾಹ. ತಾವೇ ಚಹಾ ಮಾಡಿ ಕೈ ಗೆ ಕೊಡುತ್ತಾರೆ. ಅದು ಕೂಡ ಕೆಲವೇ ನಿಮಿಷಗಳಲ್ಲಿ. ಈ ವಿಷಯದಲ್ಲಿ ನಾನು ಪುಣ್ಯವಂತೆ!
ಇಂದಿಗೂ ಕೂಡ ಉತ್ತರ ಕರ್ನಾಟಕದ ಬಹುತೇಕ ಸಂಪ್ರದಾಯದ ಮನೆಗಳಲ್ಲಿ ಪ್ರತ್ಯೇಕ ಚಹಾದ ಒಲೆಗಳನ್ನು ನೋಡಬಹುದು. ಅವುಗಳಿಗೆ ಚಹಾಕಾಪಿ ಗ್ಯಾಸ, ಒಲೆ ಅಂತ ಹೆಸರಿಸುತ್ತಾರೆ. ಇನ್ನು ಚಹಾ ಚನ್ನಾಗಿರಲಿಲ್ಲ ಅಂದರೆ ಅದನ್ನು ಅಲಂಕಾರಿಕವಾಗಿ ಹೇಳುತ್ತಾರೆ… ” ಚಹಾ ಆರಿ ಅಂಗಾರಾಗಿತ್ತು! “
” ಚಹಾ ಅಲ್ಲ ಅದು ಗೋಮೂತ್ರ ಇದ್ದಂಗ ಇತ್ತು”
” ಚಹಾ ಕೆಟ್ಟಸ್ಟಾಂಗ ವಿಷ ಆಗಿತ್ತು “
” ಸಕ್ಕರೆ ಬಹಳ ಆಗಿ ಚಹಾ ಪಾಯಸಾಗಿತ್ತು”
” ಚಹಾ ನೋ ಪಾನಕ ನೋ ತಿಳಿಲಿಲ್ಲ”
” ನೀರ ನಿಕಟಿ ಚಹಾ “
” ಚಹಾ ಏನ ಅದು… ಸಣ್ಣ ಹುಡುಗರು ಕುಡಿಯುವ ಬೋರಮಿಟಾ ಇದ್ದಂಗ ಇತ್ತು… ಹಾಲನ್ಯಾಗ ಸ್ವಲ್ಪ ಪುಡಿ ಹಾಕಿ ಕೊಟ್ಟಾಂಗ”
” ಚಹಾ ಮಾಡಿದ್ದ ಮತ್ತ ಬಿಸಿ ಮಾಡಿರೇನು…. ಕಮರ ವಾಸನೆ ಹಿಡದಿತ್ತು”
” ಹೊಗಿಸುತ್ತ ವಾಸನೀ ಚಹಾ ನೀವ ಕುಡೀರಿ…. ಇದ್ದಲಿ ಒಲಿ ಮ್ಯಾಲ ಮಾಡಿರೇನು? “
” ಚಹಾಪುಡಿ ಹಾಕಿರೋ ಅಡ್ಡೆದಾಗಿನ ಕಟಗಿಪುಡಿ ಹಾಕಿರೋ… ರುಚಿ ನೇ ಇಲ್ಲ… “
” ಚಹಾಕಿಂತ ನೀರ ಛಲೋ ಇತ್ತು. “
” ಸಪ್ಪ ಸಗಟಿ ಚಹಾ, ಸಕ್ಕರೆ ನೇ ಇಲ್ಲ! “
ಹೀಗೆ… ಒಳ್ಳೆಯ ಚಹಾ ಮಾಡೋದು ಒಂದು ಕಲೆ… ಆ ಕಲೆ ನನಗೆ ಬರುವದಿಲ್ಲ…. ಮದುವೆಯಾಗಿ ಇಪ್ಪತ್ತು ವರುಷಗಳಾದರೂ ಸಿದ್ದಿಸಿಲ್ಲ( ಬೇಕಂತಲೇ).
ಯಾರಾದರೂ ಜನ ಬರುವರಿದ್ದರೆ, ಅವರ ತಾಯಿ ಊರಲ್ಲಿ ಇರದೇ ಇದ್ದಾಗ ನನ್ನ ಪತಿ ಹೇಳುವುದುಂಟು… ” ಮಾನಾ ಕಳೀಬ್ಯಾಡಾ… ಹೆಂಗರಮಾಡಿ ಚಲೋ ಚಹಾ ಮಾಡು”
ನಾ ಮತ್ತೆ ಹೆಂಗೆಂಗೋ ಮಾಡೋದು.
” ಅವರು ಚಹಾ ಕುಡುದು ಅಕಡೆ ಇಕಡೆ ಪ್ಲಾಸ್ಟಿಕ್ ಚೀಲ ಸಿಗತದ ಏನೋ ಅಂತ ಹುಡಕಲಿತಿದ್ದರು…. ನನ ಕಣ್ ತಪ್ಪಿಸಿ ಅದರೊಳಗ ಹಾಕಿಕಟಗೊಂಡ ಕಿಸದಾಗ ಇಟಗೊಂಡ ಹೋಗತಿದ್ದರು” ಎನ್ನುವ ಪ್ರಶಂಸೆ. … ಅವರ ಪುಣ್ಯ ಮಗ ಮತ್ತು ಮಗಳು ಒಳ್ಳೆಯ ಚಹಾ ಮಾಡುವುದನ್ನು ಕಲತಿರುವರು.
ಹೀಗೆ ಒಮ್ಮೆ ಸಾಯಂಕಾಲ ನಮ್ಮತ್ತೆ ಮಠಕ್ಕೆ ತಯಾರಾಗಿ ಹೊರಟಿದ್ದರು. ಅಟೋ ಬರುವದರಲ್ಲಿತ್ತು .. ನಾನು ಟಿವಿ ಮುಂದೆ ವಿಶ್ರಾಮ ಸ್ಥಿತಿಯಲ್ಲಿ ಕುಳಿತಿದ್ದ, ಆಗ ನನ್ನ ಗೆಳತಿಒಬ್ಬಳು ಮನೆಗೆ ಬಂದಳು. ನಾವು ಹರಟುತ್ತಿರುವಾಗ ನಮ್ಮ ಅತ್ತೆಯವರು ಟೀ ಮಾಡಿ ನಮ್ಮ ಮುಂದೆ ಇಟ್ಟು ಲಗುಬಗೆಯಿಂದ ಅಟೋ ಹತ್ತಿ ಹೋದರು ಅವಳು ಆಶ್ಚರ್ಯದಿಂದ ” ಭಾರಿ ಇಟ್ಟಿಲೇ ನೀ ಮನ್ಯಾಗ ನಿಂದ ಜರ್ಬು! ಇಂತಹ ಅವಸರದಾಗನೂ ಪಾಪ ನಿಮ್ಮ ಅತ್ತಿ ನೇ ಚಹಾ ಮಾಡಿಕೊಟ್ಟ ಹೋದರು ” ಎಂದಳು… ನಾನು ಹೌದೌದು ಎಂದು ಗೋಣಾಡಿಸಿದೆ. ಅವರ ಅತ್ತೆ ಒಪ್ಪತ್ತು ಅಡಿಗೆ ಅಶ್ ಉಶ್ ಅನ್ನುತ್ತ ಮಾಡಿ ಹಾಕುವುದು ಅವಳಿಗೆ ಪಾಪ ನೆನಪಿರಲಿಲ್ಲವೇನೋ… ಈ ಸಂಬಂಧಗಳು ಕೂಡ ಹಾಗೆ, ಎಲ್ಲೋ ಬೆಳೆದ ಚಹಾದ ಎಲೆ, ಎಲ್ಲೋ ಬೆಳದ ಕಬ್ಬಿನ ಸಕ್ಕರೆ ಬಯಲು ನಾಡಿನ ಮನೆಗಳಲ್ಲಿ, ಒಲೆಯಲ್ಲಿ ಹಿತಮಿತವಾಗಿ ಮಿಳಿತಗೊಂಡು ಶುದ್ಧ ಮನದ , ಮನೆಯ ಹಾಲನು ಪ್ರಮಾಣಕ್ಕೆ ಸೇರಿಸಿದರೆ ಅತ್ತೆ ಸೊಸೆಗಳೆಂಬ ಖಾಟುರುಚಿಯ ಉತ್ತಮ ಚಹಾ ಸಿದ್ಧ!! ಬಿಸಿ ಆರದಿರಲಿ ಹೆಚ್ಚು ಮರಳಿ ಚಹಾಕೆ ಕಹಿ ತಾಕದಿರಲಿ.
ಎಲ್ಲರಿಗೂ ವಿಶ್ವ ಚಹಾ ದಿನದ ಶುಭಾಶಯಗಳು.

ಸಾಕ್ಷಿ ಶ್ರೀಕಾಂತ ತಿಕೋಟಿಕರ.