ಬೆಂಗಳೂರು: ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಗಾರುಪಾಳ್ಯಂ ಸಮೀಪದ ಪಲಮಕುಲಪಲ್ಲಿ ಬಳಿ ಈ ಅಪಘಾತ ಸಂಭವಿಸಿದೆ.
ಬೆಂಗಳೂರು ಮೂಲದ ದಂಪತಿ ಹಾಗೂ ಅವರ ನಾಲ್ಕು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ವಿವರ
ಪಲಮನೇರ್ನಿಂದ ಚಿತ್ತೂರಿನತ್ತ ಬರುತ್ತಿದ್ದ ಬಸ್ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ, ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ದಂಪತಿ ಮತ್ತು ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮೃತದೇಹಗಳು ಕಾರಿನೊಳಗೆ ಸಿಲುಕಿಕೊಂಡಿದ್ದವು.
ಅಪಘಾತದ ಬಳಿಕ ಪೊಲೀಸರು ಜೆಸಿಬಿ ಸಹಾಯದಿಂದ ಕಾರನ್ನು ಬಸ್ನ ಹಿಂಭಾಗದಿಂದ ಹೊರತೆಗೆದಿದ್ದಾರೆ. ನಂತರ ಮೃತದೇಹಗಳನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಕುಟುಂಬವು ಇಂದು ಮಧ್ಯಾಹ್ನ 12 ಗಂಟೆಗೆ ತಿರುಪತಿ ದರ್ಶನಕ್ಕೆ ಟಿಕೆಟ್ ಪಡೆದಿದ್ದರೂ, ದುರಂತವು ಸಂಭವಿಸಿದೆ.ಇದನ್ನು ಓದಿ –ಬೇಸಿಗೆಯ ತಂಪಿಗೆ ಬಾರ್ಲಿ ಎಂಬ ಸಂಜೀವಿನಿ
ಸದ್ಯ ಪೊಲೀಸರು ಮೃತರ ವಿವರಗಳನ್ನು ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.








