- ಕೋಡಿಮಠದ ಶ್ರೀಗಳ ಎಚ್ಚರಿಕೆ
ಬಾಗಲಕೋಟೆ: “ಕೊರೋನಾ ವೈರಸ್ ತರ ಮತ್ತೊಂದು ಮಾರಕ ರೋಗ ಬರುತ್ತದೆ, ಯುದ್ಧ ಸಂಭವಿಸುತ್ತದೆ ಹಾಗೂ ಸಾವು ನೋವುಗಳು ಹೆಚ್ಚಾಗುವ ಸಂಭವವಿದೆ,” ಎಂದು ಬಾಗಲಕೋಟೆ ಜಿಲ್ಲೆಯ ಕೋಡಿಮಠದ ಶ್ರೀಗಳು ಭವಿಷ್ಯವಾಣಿ ಮಾಡಿದ್ದಾರೆ.
ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯ ಪರಿಸ್ಥಿತಿ ಗಂಭೀರವಾಗುತ್ತಿರುವ ಈ ವೇಳೆ ಶ್ರೀಗಳು ಈ ಎಚ್ಚರಿಕೆಯನ್ನು ನೀಡಿದ್ದಾರೆ.
ಶ್ರೀಗಳು ಮಾತನಾಡುವ ವೇಳೆ, “ನಾನು ಕೊರೋನಾ ಬರುವದನ್ನು ಹಿಂದೆಯೇ ತಿಳಿಸಿದ್ದೆ. ಮದ್ದಿಲ್ಲದ ರೋಗ ಬರುತ್ತದೆ, ಜನ ಸಾವಿಗೀಡಾಗುತ್ತಾರೆ ಎಂದು ಮೊದಲೇ ಹೇಳಿದ್ದೆ. ಆಗ ನನ್ನನ್ನು ನಂಬದವರು ಈಗ ಎಚ್ಚೆತ್ತುಕೊಳ್ಳಲಿ. ಈಗಲೂ ಮತ್ತೊಂದು ಅಪಾಯದ ಸೂಚನೆಗಳಿವೆ,” ಎಂದು ಹೇಳಿದರು.
“ಈ ಸಂವತ್ಸರದಲ್ಲಿ ಪ್ರಾಕೃತಿಕ ವಿಪತ್ತುಗಳ ಜೊತೆಗೆ ಆರೋಗ್ಯದ ತೀವ್ರ ಸಮಸ್ಯೆಗಳು, ಜಾಗತಿಕ ಮಟ್ಟದಲ್ಲಿ ಸಾವು ನೋವುಗಳು ಹೆಚ್ಚಾಗುತ್ತವೆ. ಕೊರೋನಾ ತರಹ ಮತ್ತೊಂದು ಅನಾರೋಗ್ಯಕರ ಪರಿಸ್ಥಿತಿ ಉಂಟಾಗಬಹುದು,” ಎಂದು ಶ್ರೀಗಳು ತಿಳಿಸಿದರು.ಇದನ್ನು ಓದಿ –ರಾಜ್ಯದ ಹಲವು ಜಿಲ್ಲೆಗಳಲ್ಲಿಭಾರಿ ಮಳೆಯ ಮುನ್ಸೂಚನೆ
ಈ ಭವಿಷ್ಯವಾಣಿ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಜನರಲ್ಲಿ ಆತಂಕವನ್ನು ಉಂಟುಮಾಡಿದೆ. ಶ್ರೀಗಳ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಜನರು ಮುನ್ನೆಚ್ಚರಿಕೆಯಿಂದ ಇರುವಂತೆ ಹಲವು ಭಕ್ತರು ಮನವಿ ಮಾಡುತ್ತಿದ್ದಾರೆ.