ಮಂಡ್ಯ : ದೃಶ್ಯ ಮಾಧ್ಯಮದ ಅಬ್ಬರದ ನಡುವೆಯೂ ಅಕ್ಷರ (ಪತ್ರಿಕೆ )ಮಾಧ್ಯಮವನ್ನು ಯಾರು ಕಡೆಗಣಿಸಲು ಸಾಧ್ಯವಿಲ್ಲ. ಪ್ರಬಲವಾದ ಮಾಧ್ಯಮದ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ಕಿವಿಮಾತು ಹೇಳಿದರು.
ನಗರದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಪತ್ರಿಕಾ ಮಿತ್ರರು ಹಾಗೂ ಹಿತೈಷಿಗಳ ಬಳಗದ ವತಿಯಿಂದ ಹಿರಿಯ ಪತ್ರಕರ್ತರಾದ ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತ ಮತ್ತೀಕೆರೆ ಜಯರಾಮ್ ಹಾಗೂ ಹೆಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಗ್ಗಡೆ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಿಕೆ ಎಂಬುದು ಇಂದಿಗೂ ಪ್ರಬಲ ಮಾಧ್ಯಮವಾಗಿದೆ. ದೃಶ್ಯ ಮಾಧ್ಯಮದ ನಡುವೆಯೂ ಪತ್ರಿಕೆಯು ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಪತ್ರಿಕೆಯಲ್ಲಿ ಸುದ್ದಿ ಬಂದೊಡನೆ ಸತ್ಯ ಎಂದು ನಂಬುವವರು ಇಂದಿಗೂ ನಮ್ಮ ನಡುವೆಯಿದ್ದಾರೆ. ಪತ್ರಿಕೆ ಹಲವರ ಜೀವನ ರೂಪಿಸಿದೆ. ಹಲವರ ಜೀವನವನ್ನು ಕಡೆಗಣಿಸಿದೆ ಎಂದು ಹೇಳಿದರು.
ಪತ್ರಿಕೆಯಿಂದ ಅನುಕೂಲ ಹಾಗೂ ಅನಾನುಕೂಲವೂ ಆಗಿದ್ದು, ಅನಾನುಕೂಲವಾಗದಂತೆ ಸುದ್ದಿಗಳ ಮೂಲ ಸಂಗ್ರಹಿಸಿ ಸತ್ಯಾಸತ್ಯೆಯ ಮೇರೆಗೆ ಸುದ್ದಿ ಮಾಡುವಂತೆ ಸಲಹೆ ನೀಡಿದರು.
ಬಸವರಾಜ ಹೆಗ್ಗಡೆಯೊಂದಿಗೆ ಸುಮಾರು 40 ವರ್ಷಗಳ ಒಡನಾಟವಿದ್ದು, ಜಿಲ್ಲೆಯ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡ ಹೆಗ್ಗಡೆ ನಮ್ಮಲ್ಲಿ ಆಸ್ಥಾನ ಪಂಡಿತರಿದ್ದಂತೆ. ನಮ್ಮ ಜೊತೆಯಲ್ಲಿ ಸದಾ ಹೆಜ್ಜೆ ಹಾಕಿದವರಾಗಿದ್ದಾರೆ. ನನ್ನ ಬೆಳೆವಣಿಗೆಯಲ್ಲಿ ಮತ್ತೀಕೆರೆ ಜಯರಾಮ್, ಬಸವರಾಜ ಹೆಗ್ಗಡೆ, ಕೆ.ಎನ್ .ರವಿ, ಕೃಷ್ಣಸ್ವರ್ಣಸಂದ್ರ ಅವರುಗಳೂ ಸೇರಿದಂತೆ ಹಲವರ ಕೊಡುಗೆಯಿದೆ ಎಂದು ನೆನೆದರು.
ದಿವ್ಯಾ ಸಾನಿಧ್ಯ ವಹಿಸಿದ್ದ ವಿಶ್ವ ಒಕ್ಕಲಿಗ ಮಠದ ಪೀಠಾಧ್ಯಕ್ಷ ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ಅವಿರತ ಕಷ್ಟಗಳನ್ನು ಅನುಭವಿಸಿ ಸಮಾಜಕ್ಕೆ ಕೊಡುಗೆಯನ್ನು ನೀಡಿದಾಗ ಜನರು ಪತ್ರಕರ್ತರನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದು ತಿಳಿಸಿದರು.
ಪತ್ರಕರ್ತರು ಜನಸಾಮಾನ್ಯರ ನಡುವಿನಲ್ಲಿದ್ದು ಸಮಸ್ಯೆ ಅರಿತವರಾಗಿರುತ್ತಾರೆ. ಕಷ್ಟದಲ್ಲಿರುವ ಪತ್ರಕರ್ತರಿಗೆ ಬೇಕಾದ ಸವಲತ್ತುಗಳನ್ನು ಒದಗಿಸುವಂತಹ ಹಿರಿಯ ಪತ್ರಕರ್ತರ ಕಾರ್ಯ ವೈಖರಿ ಪತ್ರಕರ್ತರಿಗೆ ಶಕ್ತಿಯನ್ನು ತುಂಬುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮಾಧ್ಯಮ ಸ್ನೇಹಿತರು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಸಮಾ ಜದ ಒಳಿತಿಗೆ ಕೊಡುಗೆ ನೀಡಬೇಕು. ಮತ್ತಿ ಕೆರೆ ಜಯರಾಮ್ ಅವರು ಉತ್ತಮ ಸಂಘಟಕರಾಗಿ ಪತ್ರಕರ್ತರ ಕ್ಷೇಮದ ಕಾಳಜಿ ವಹಿಸುವ ಕೆಲಸ ಮುಂದುವರೆಸಲಿ. ಬಸವರಾಜ ಹೆಗ್ಗಡೆಯವರು ೬೦ ವರ್ಷಗಳ ಸಾರ್ಥಕ ಜೀವನ ನಡೆಸುತ್ತಿದ್ದು, ಶತಾಯುಷಿಗಳಾಗಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಆಶಯ ನುಡಿಗಳನ್ನಾಡಿದರು.

ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ಮತ್ತೀಕೆರೆ ಜಯರಾಂ ಅವರು ಏನಾದರು ಬರೆದರು ಅದರಿಂದ ವ್ಯತ್ಯಾಸ ಗಳಾಗುತ್ತಿದ್ದವು. ರಾಜ್ಯ ಮಟ್ಟದ ಪತ್ರಿಕೆಗಳಿಗಿಂತ ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚು ಪ್ರಭಾವಕಾರಿ ಕೆಲಸ ಮಾಡುವಂತೆ ಮಾಡುತ್ತಿದ್ದವು. ಬಸವರಾಜ ಹೆಗ್ಗಡೆಯವರು ೬೦ ವರ್ಷಗಳವರೆಗೂ ಪತ್ರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು, ಮತ್ತಷ್ಟು ವರ್ಷಗಳ ಕಾಲ ಪತ್ರಿಕಾ ಸೇವೆಯಲ್ಲಿ ತೊಡಗಲಿ ಎಂದು ಶುಭ ಹಾರೈಸಿದರು.
ಪ್ರಾಸ್ತವಿಕ ನುಡಿಗಳನ್ನಾಡಿದ ಕೆ.ಸಿ.ಮಂಜುನಾಥ್, ಹಣ ನೀಡಿ ಪ್ರಶಸ್ತಿ, ಡಾಕ್ಟರೇಟ್ ಪಡೆಯುವ ಹೀನಾಯ ಸ್ಥಿತಿಯ ಕಾಲಗಟ್ಟದಲ್ಲಿಯೂ ೬೦ ವರ್ಷ ಸಲ್ಲುತ್ತಿರುವ ಬಸವರಾಜ ಹೆಗ್ಗಡೆಯವರು ಮೈಸೂರಿನಿಂದ ತಮ್ಮ ಛಾಯಾಗ್ರಹಕ ವೃತ್ತಿ ಆರಂಭಿಸಿ, ಸಚಿವರೂ ಕಾಯುವಂತಹ ಕಾಲವನ್ನು ಕಂಡವರಾಗಿದ್ದಾರೆ ಎಂದು ನುಡಿದರು.
ಅನೇಕ ಏಳು ಬೀಳುಗಳನ್ನು ಕಂಡ ಹೆಗ್ಗಡೆಯವರು, ಪರೋಕ್ಷವಾಗಿ ಪತ್ರಕರ್ತರ ಏಳ್ಗೆಗೆ ದುಡಿದಿದ್ದು, ಪತ್ರಕರ್ತರ ಆರ್ಥಿಕ ಸಂಕಷ್ಟದಲ್ಲಿಯೂ ನೆರವಾಗಿದ್ದಾರೆ. ತಲೆ ಮೇಲೆ ಬಂದದ್ದನ್ನು ಎದೆಗೆ ಹಾಕಿಕೊಳ್ಳಬೇಕು ಎಂಬ ಮಾತು ಸದಾ ನೆನೆಯುತ್ತೇನೆ. ಅವರು ನೂರಾರು ಜನಕ್ಕೆ ತಿಂಗಳುಗಳು, ವರ್ಷಗಳ ಮಟ್ಟಿಗೆ ಅನ್ನ ನೀಡಿದ ಋಣದಿಂದ ೬೦ ವರ್ಷಕ್ಕೆ ಕಾಲಿಡಲು ಕಾರಣರಾಗಿದ್ದಾರೆ ಎಂದು ಮೆಚ್ಚುವೆ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಂ ಅವರು, ಪೌರವಾಣಿ ಪತ್ರಿಕೆಯಿಂದ ಕೆಲಸ ಆರಂಭಿಸಿದ್ದು, ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಪ್ರಧಾನ ವರದಿಗಾರರಾಗಿ ಕೆಲಸ ನಿರ್ವಹಿಸಿ ತಮ್ಮದೇ ಪತ್ರಿಕೆಯನ್ನು ಆರಂಭಿಸಿದ್ದು, ಹಲವು ಪತ್ರಕರ್ತರನ್ನು ತಮ್ಮ ಲೇಕನ ಕುಂಚದಿಂದ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಅವರಿಗೆ ರಾಜಕೀಯದ ಗಮನಲೇ ಹೆಚ್ಚು, ರಾಜಕೀಯ ಬುದ್ದಿವಂತಿಕೆಯ ಲೇಕನಗಳು ಇಂದಿನ ಪತ್ರಕರ್ತರಲ್ಲಿ ಇಲ್ಲ, ಇದಕ್ಕೆ ಅವರಿಗೆ ಅವರೇ ಸರಿಸಾಟಿ. ಜಯರಾಮ್ ಅವರ ಹಾದಿಯಲ್ಲಿ ಯುವ ಪತ್ರಕರ್ತರೂ ಸಾಗಲು ಮುಂದಾಗಬೇಕೆಂದು ಕರೆ ನೀಡಿದರು.
ಕೆ.ಕೆ.ಶೆಟ್ಟಿ ಕುತ್ತಿಕಾರ್ ಪ್ರಶಸ್ತಿ ಪುರಸ್ಕೃತ ಮತ್ತೀಕೆರೆ ಜಯರಾಮ್ ಹಾಗೂ ಹೆಚ್.ಕೆ.ವೀರಣ್ಣಗೌಡ ಪ್ರಶಸ್ತಿ ಪುರಸ್ಕೃತ ಬಸವರಾಜ ಹೆಗ್ಗಡೆ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಇದನ್ನು ಓದಿ –ರಾಜ್ಯದಲ್ಲಿ ಪುರುಷರಿಗೂ ಉಚಿತ ಬಸ್ ಪ್ರಯಾಣದ ಬಗ್ಗೆ ಯೋಚನೆ: ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿಕೆ
ಈ ಸಂದರ್ಭದಲ್ಲಿ ಅಭಿನಂದಿತರ ಕುರಿತು ಹಿರಿಯ ಪತ್ರಕರ್ತರ ಕೆ.ಎನ್.ರವಿ ಮಾತನಾಡಿದರು. ಕಾರ್ಯಕ್ರಮದ ರೂವಾರಿಗಳಾದ ಕೆ.ಸಿ.ಮಂಜುನಾಥ್, ಶಶಿಧರ್, ಕೆ.ಶ್ರೀನಿವಾಸ್, ಶಿವನಂಜಯ್ಯ, ಎಂ.ಎಸ್.ಶಿವಪ್ರಕಾಶ್, ಎನ್.ನಾಗೇಶ್, ರವಿ ಸಾವಂದಿಪುರ, ಸಿ.ಎ.ಲೋಕೇಶ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಎನ್.ನವೀನ್‌ಕುಮಾರ್, ಮಾಜಿ ಅಧ್ಯಕ್ಷ ಬಿ.ಪಿ.ಪ್ರಕಾಶ್ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದರು.