ತಿರುಪತಿ ದೇವಸ್ಥಾನಕ್ಕೆ ವಿಐಪಿ ಟಿಕೆಟ್ ಕೊಡಿಸುತ್ತೇನೆ ಎಂದು ನನ್ನ ಪರಿಚಿತರಾರೋ ಹೇಳಿದ್ದಾರೆ. ನಂಜೊತೆ ನೀವೂ ಬರ್ತೀರಾ? ಎಂದು ಗೆಳತಿ ಸುಧಾ ಸಂಗೀತಾ ಇಬ್ಬರನ್ನೂ ಕೇಳಿದೆ. ತಾನು ಬೆಟ್ಟ ಹತ್ತಿ ಹೋಗಬೇಕು ಎಂದು ಸಂಗೀತ ಹೇಳಿದ್ದರಿಂದ ಒಂದು ಸೀಟ್ ಕಟ್ ಆಯಿತು. ಸುಧಾ ನನ್ನ ಜೊತೆ ಬರುತ್ತೇನೆ ಎಂದು ಸಂತೋಷದಿಂದ ಹೇಳಿದರು. ವಿಐಪಿ ಎಂದರೆ ಯಾರಿಗೆ ಗೊತ್ತಿಲ್ಲ? ವೆರಿ ಇಂಪಾಟೆAðಟ್ ಪರ್ಸನ್. ನಾನು ಒಮ್ಮೆಯಾದರೂ ವೆರಿ ಇಂಪಾರ್ಟೆಂಟ್ ಪರ್ಸನ್ ಆಗುತ್ತೇನೆ ಎನ್ನುವುದೇ ಯಾರಿಗಾದರೂ ಹೆಮ್ಮೆಯ ವಿಚಾರ ಅಲ್ವಾ? ತಿರುಪತಿ ತಿಮ್ಮಪ್ಪ ವಿಐಪಿ ದರ್ಶನ ಕೊಡುತ್ತಾನೆ ಎಂದರೆ ಯಾರಿಗೆ ಖುಷಿ ಆಗೋಲ್ಲ ಹೇಳಿ.
ತಿರುಪತಿ ತಿಮ್ಮಪ್ಪನನ್ನು ನೋಡುವುದು ಎಂದರೆ ಅದೆಷ್ಟೋ ಆಸ್ತಿಕ ಮನಸ್ಸುಗಳಿಗೆ ಅತ್ಯಂತ ಆನಂದದ ವಿಚಾರ. ಆಪಾಟಿ ರಷ್ ನ ನಡುವೆ ನೂಕು ನೂಕಲಾಟದಲ್ಲಿ ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಒಂದು ನಿಮಿಷ ಪೂರ್ತಿ ಕೂಡಾ ದೇವರು ಕಾಣದಿದ್ದರೂ ಕ್ಷಣ ಕಾಲವಾದರೂ ನೋಡಲೇಬೇಕು ಎಂಬ ಹಂಬಲ ಹೊತ್ತ ಭಕ್ತರು ಅದಕ್ಕಾಗಿ ದಿನಗಟ್ಟಲೆ ಸಮಯವನ್ನು ವ್ಯಯಿಸುತ್ತಾರೆ. ಅಂಥದ್ದರಲ್ಲಿ ವಿಐಪಿ ದರ್ಶನ ಸಿಗುತ್ತದೆ ಎಂದು ಗೊತ್ತಾದಾಗ ನನಗೆ ರೆಕ್ಕೆ ಬಂದಿದ್ದು ಸುಳ್ಳೇನಲ್ಲ.
ತಿರುಪತಿಯಲ್ಲಿ ವಿಐಪಿ ಬ್ರೇಕ್, ವಿಐಪಿ ದರ್ಶನ ಸಿಗುತ್ತದೆ ಎಂದ ಕೂಡಲೇ ಕೇಳಿದವರು ಕೂಡ ಕಣ್ಣರಳಿಸುತ್ತಾರೆ.
ತಿಮ್ಮಪ್ಪನ ಭಕ್ತರು ಕೋಟ್ಯಂತರ. ನಾನು ತಿರುಪತಿಗೆ ಹೋಗುತ್ತೇನೆ ಎಂದು ಹೇಳಿದಾಗ ನನ್ನ ಸಹೋದ್ಯೋಗಿ ಒಬ್ಬರು ೧೦ ದಿನಗಳ ಹಿಂದೆ ನನ್ನ ಆಂಟಿ ಹೋಗಿದ್ದಾಗ ೨೦ ಗಂಟೆಗಳ ಕಾಲ ಆಯಿತು ದರ್ಶನಕ್ಕೆ ಎಂದರು. ನನ್ನ ಮನಸ್ಸಿನಲ್ಲಿ ನಮಗೇನು ಆ ತಾಪತ್ರಯ ಏನಿಲ್ಲ ವಿಐಪಿ ಟಿಕೆಟ್ ಇದೆ, ನೇರವಾಗಿ ದೇವರ ಮುಂದೆ ತುಂಬಾ ಹೊತ್ತು ಮತ್ತು ತುಂಬಾ ಹತ್ತಿರದಲ್ಲಿರಬಹುದು ಎಂದು ಅಂದುಕೊಂಡೆ. ಬಹುಶಃ ಅದು ನನ್ನೊಳಗಿನ ಅಹಂ ಎಂದು ದೈವಕ್ಕೆ ಅನಿಸಿತು ಎಂದು ತೋರುತ್ತದೆ.
ಮಂಡ್ಯದಿಂದ ನಾನು ಸುಧಾ ಬೆಂಗಳೂರಿನಿಂದ ರೆಡ್ಡಿ ದಂಪತಿಗಳು ತಿರುಪತಿಗೆ ಹೊರಟೆವು. ಮುಳಬಾಗಿಲಿನಲ್ಲಿ ತಿಂಡಿಗೆ ನಿಲ್ಲಿಸಿ ರುಚಿಕಟ್ಟಾದ ಪೊಂಗಲ್ ದೋಸೆ ಇಡ್ಲಿ ವಡೆ ಎಲ್ಲವನ್ನು ಗುಳುಂ ಮಾಡಿ ಮುದ್ದು ಹನುಮನನ್ನು ನೋಡಲು ಹೊರಟೆವು. ಹೆಸರಿಗೆ ತಕ್ಕ ಹಾಗೆ ಹನುಮ ಮುದ್ದಾಗಿದ್ದ. ದೇವಸ್ಥಾನವು ಪ್ರಶಾಂತವಾಗಿದ್ದು ಪೂಜೆಯಾದ ಮೇಲೆ ಪುರೋಹಿತರು ತಿರುಪತಿ ತಿಮ್ಮಪ್ಪನ ದೇವಸ್ಥಾನದಿಂದ ಇದೀಗ ತಾನೇ ದೇವರಿಗೆ ಅಭಿಷೇಕ ಮಾಡಿದ ಅರಿಶಿನದ ನೀರು ತೀರ್ಥವಾಗಿ ಬಂದಿದೆ. ನಮ್ಮ ಭಾವನೇ ಅಲ್ಲಿ ಪೂಜೆ ಮಾಡುವುದು ತೆಗೆದುಕೊಳ್ಳಿ ಎಂದು ತೀರ್ಥ ಕೊಟ್ಟರು. ನಮ್ಮ ಆನಂದಕ್ಕೆ ಪಾರವೇ ಇಲ್ಲ ಹನುಮನ ಪುರೋಹಿತರು ಹೇಳಿದ ಪ್ರಕಾರ ಅರ್ಧ ಲೀಟರ್ ಅಬಿಷೇಕದ ತೀರ್ಥಕ್ಕೆ ಕೆಲವರು ಹತ್ತು ಸಾವಿರ ರೂಪಾಯಿ ಕೊಟ್ಟು ಕೂಡ ಕೊಳ್ಳುತ್ತಾರಂತೆ.
ನಮಗೆ ಅಯಾಚಿತವಾಗಿ ದೇವರ ಅಭಿಷೇಕದ ತೀರ್ಥ ಸಿಕ್ಕಿತು ಎಂದು ಕೂಡಲೇ ಗಗನಕ್ಕೆ ಹಾರಿದ ಅನುಭವ. ನಮಗೆ ತಿರುಪತಿ ತಿಮ್ಮಪ್ಪ ನೇರವಾಗಿ ತಾನೇ ಮುಂಭಾಗಲಿಗೆ ಬಂದು ಕೈ ಹಿಡಿದು ಕರೆದುಕೊಂಡೆಂತೆ. ಮೊದಲೇ ಕಟ್ಟಿಕೊಂಡ ಪುಟ್ಟ ರೆಕ್ಕೆಗೆ ದೊಡ್ಡ ರೆಕ್ಕೆ ಅಂಟಿಸಿಸಂತಾಯಿತು ಮನಸ್ಸು ಹಾರಾಡತೊಡಗಿತು. ಅಲ್ಲಿಂದ ಮುಂದೆ ಸಾಗಿ ಕಾಣಿಪಾಕಂ ವಿನಾಯಕನ ದರ್ಶನವೂ ಆಯಿತು. ಓಹೋ ವಿನಾಯಕನ ದರ್ಶನ ಇಷ್ಟು ಚಂದವಾದ ಮೇಲೆ ಎಲ್ಲವೂ ನಿರ್ವಿಘ್ನವಾಗಿ ನಡೆಯುತ್ತದೆ ಎಂದು ಅನಿಸಿದ್ದು ನಿಜ.
ಎಲ್ಲಾ ಅನಿಸಿಕೆಗಳೂ ಯಾವಾಗಲೂ ನಿಜವೇ ಆಗುತ್ತದೆ ಎಂದೇನಿಲ್ಲ.
ತಿರುಪತಿಗೆ ಸೇರಿ ಅಲ್ಲಿ ಕಷ್ಟವಿಲ್ಲದೆ ಆಲಮೇಲಮ್ಮನ ದರ್ಶನ ಪಡೆದು ನಾವು ಏನು ಬೇಡುತ್ತೇವೆಯೋ ಅದನ್ನೆಲ್ಲಾ ಈಡೇರಿಸುವಂತೆ ನಿನ್ನ ಗಂಡನಿಗೆ ಶಿಫಾರಸು ಮಾಡಮ್ಮ ಎಂದು ಕೇಳಿ ಅಲ್ಲಿಂದ ಗೋವಿಂದರಾಜ ಸ್ವಾಮಿಯನ್ನು ನೋಡುವುದಾಗಿತ್ತು. ಗೋವಿದರಾಜಸ್ವಾಮಿ ದೇಗುಲದಲ್ಲೇ ಒಂದೂವರೆ ಗಂಟೆಯಾಯಿತು. ಹನುಮನ ಬಾಲದ ಹಾಗಿದ್ದ ಕ್ಯೂ ನೋಡಿದಾಗಲೇ ತಿಮ್ಮಪ್ಪನ ಅಣ್ಣನನ್ನು ನೋಡಲೇ ಇಷ್ಟು ಕಷ್ಟವಾದ ಮೇಲೆ ತಿಮ್ಮಪ್ಪನನ್ನು ನೋಡುವುದು ಹೇಗೋ ಏನೋ ಎಂದು ಕ್ಷಣ ಮನ ಅಳುಕಿತು.
ಆದರೆ ವಿಐಪಿ ಟಿಕೆಟ್ ಇದೆಯಲ್ಲಾ…….. ನಮಗೇನು ಕಷ್ಟವಾಗುವುದಿಲ್ಲ ಬಿಡಿ ಎಂದು ಎಲ್ಲರೂ ನಮ್ಮೊಳಗೆ ನಾವೇ ಅಂದುಕೊAಡೆವು. ಆದರೆ ರೆಡ್ಡಿಯವರಿಗೆ ಮಾತ್ರ ಗೊತ್ತಿತ್ತು ಇನ್ನು ಟಿಕೆಟ್ ಕನ್ಫರ್ಮ್ ಆಗಿಲ್ಲ ಎಂದು. ಸಾಮಾನ್ಯವಾಗಿ ಅವರು ಹೇಳಿದರೆ ಸುಲಭವಾಗಿ ಟಿಕೆಟ್ ಆಗುತ್ತಿತ್ತು. ಹತ್ತಾರು ಬಾರಿ ಹಾಗೆ ಹೋಗಿ ಬಂದ ಅನುಭವ ಅವರದ್ದು.
ಗೋವಿಂದರಾಜನನ್ನು ನೋಡಿ ವಾಪಸ್ ರೂಮಿಗೆ ಬರುವಾಗ ಟಿಕೆಟ್ ವ್ಯವಸ್ಥೆ ಮಾಡುತ್ತಿದ್ದ ವ್ಯಕ್ತಿ ಸಿಕ್ಕು ಕನ್ಫರ್ಮ್ ಮಾಡುತ್ತೇನೆ ಕನ್ಫರ್ಮ್ ಮಾಡುತ್ತೇನೆ ಎಂದು ಮೂರು ನಾಲ್ಕು ಬಾರಿ ಹೇಳಿದಾಗಲೇ ನಮಗೆ ಇಲ್ಲೇನೋ ಎಡವಟ್ಟಾಗುತ್ತಿದೆ ಎಂಬ ಸೂಚನೆ ಸಿಕ್ಕಿದ್ದು. ಏನಿದು ಕನ್ಫರ್ಮ್ ಕನ್ಫರ್ಮ್ ಎಂದು ನಮ್ಮೊಳಗೆ ಮೆಲ್ಲಮೆಲ್ಲನೆ ಮಾತನಾಡಿಕೊಂಡು ಆದರೂ ನಾಳೆ ಮಧ್ಯಾಹ್ನ ತಾನೇ ದರ್ಶನ ಅಷ್ಟರಲ್ಲಿ ಕನ್ಫರ್ಮ್ ಆಗುತ್ತದೆ ಎಂದು ಮತ್ತೆ ಆಸೆ ಚಿಗುರಿತ್ತು.
ಮರ ಕಡಿದಾಗಲಿ ಹೆಚ್ಚು ಚಿಗುರುವುದು
ಬೆಳಿಗ್ಗೆ ಎಂಟು ಗಂಟೆಗೆ ರೂಮಿನಿಂದ ಹೊರಟು ಪ್ರಸನ್ನ ವೆಂಕಟರಮಣನ್ನು ನೋಡಿಕೊಂಡು ತಿರುಮಲೆಗೆ ಹೋಗುವುದು ಎಂದು ಮಾತುಕತೆಯಾಗಿತ್ತು. ನಾನು ನನ್ನ ಗೆಳತಿ ಇಬ್ಬರು ಒಂದೇ ತರಹದ ಸೀರೆಯನ್ನು ಉÄಟ್ಟು ಶಿಸ್ತಾಗಿ ಸಿಂಗರಿಸಿಕೊAಡು ಬೆಳಿಗ್ಗೆ ಎಂಟು ಗಂಟೆಗೆ ಲಗೇಜ್ ಹೊರಗಿಟ್ಟು ರೂಮಿನ ಬೀಗ ಹಾಕುವುದು ಒಂದು ಬಾಕಿ ಇತ್ತು. ಎದುರುಗಡೆ ಇದ್ದ ಆ ದಂಪತಿಗಳ ರೂಮಿನ ಬಾಗಿಲನ್ನು ಕುಟ್ಟಿ ನಾವು ರೆಡಿ ಎಂದೆವು.
ಬಾಗಿಲು ತೆಗೆದ ರೆಡ್ಡಿಯವರು ಲಗೇಜ್ ಈಗಲೇ ಹೊರಗೆ ತೆಗೆದುಕೊಂಡು ಹೋಗುವುದು ಬೇಡ ಒಳಗಿಡಿ. ಟಿಕೆಟ್ ಇನ್ನೂ ಕನ್ಫರ್ಮ್ ಆಗಿಲ್ಲ ತಿಂಡಿ ತಿಂದು ಬಂದ ಮೇಲೆ ನೋಡೋಣ ಎಂದರು.
ಬಲೂನು ಎಷ್ಟು ಊದುತ್ತದೆಯೋ, ಸಣ್ಣ ಮೊನೆ ತಾಕಿದರೂ ಅಷ್ಟೇ ಬೇಗ ಒಡೆದು ಹೋಗುತ್ತದೆ.
ನಮ್ಮ ಪರಿಸ್ಥಿತಿ ಹಾಗೆಯೇ ಇತ್ತು, ಬಲೂನು ಪುಸ್ ಪುಸ್ ಎನ್ನುತ್ತಿತ್ತು. ರೂಮಿನ ಬೀಗ ಹಾಕಿ ತಿಂಡಿಗೆ ಹೋಗಿ ತಿಂಡಿ ತಿಂದು ಅದೇ ಆವರಣದಲ್ಲಿದ್ದ ಕನ್ಯಕಾ ಪರಮೇಶ್ವರಿಯನ್ನು ನೋಡಿ ವಾಪಸ್ ಹೊರಟಾಗಲು ರೆಡ್ಡಿಯವರ ಮುಖದಲ್ಲಿ ಕಿಂಚಿತ್ತೂ ಗೆಲುವಿರಲಿಲ್ಲ. ವಾಪಸ್ ಹೋಟೆಲ್ ಬಾಗಿಲ ಬಳಿ ಕಾರು ನಿಲ್ಲಿಸಿ ಕಡೆಯ ಪಕ್ಷ ಒಂದು ಗಂಟೆ ಕಾರಿನಲ್ಲಿಯೇ ಕುಳಿತಿದ್ದೆವು. ಟಿಕೆಟ್ ಕನ್ಫರ್ಮ್ ಮಾಡುತ್ತೇನೆ ಎಂದು ಹೇಳಿದ ವ್ಯಕ್ತಿ ಆಗಾಗ ಫೋನ್ ಮಾಡಿ ಟೆಕ್ನಿಕಲ್ ಇಶ್ಯೂ ಇದೆ ಟಿಕೆಟ್ ಆಗಿಲ್ಲ ನಾಳೆಗೆ ಆಗಬಹುದೇನೋ ಎನ್ನುತ್ತಿದ್ದ.
ರೆಡ್ಡಿಯವರು ಕೂಡ ಕಡೆಯ ಪಕ್ಷ ೫೦ ರಿಂದ ೬೦ ಜನರಿಗೆ ಕರೆ ಮಾಡಿದ್ದರು. ಅವರಿಗೆ ಯಾರ್ಯಾರು ಗೊತ್ತೋ ಎಲ್ಲರಿಗೂ ಕರೆ ಮಾಡಿ ಯಾವುದಾದರು ಒಂದು ದರ್ಶನ ಮಾಡಿಸಿಕೊಡಿ. ಇಷ್ಟು ದೂರ ಕರೆದುಕೊಂಡು ಬಂದಿದ್ದಾಗಿದೆ ದರ್ಶನವಿಲ್ಲದೆ ಹೇಗೆ ವಾಪಸ್ ಕರೆದುಕೊಂಡು ಹೋಗುವುದು ಎಂದು. ‘ಇದೇ ಫಸ್ಟ್ ಹೀಗೆ ಆಗಿರುವುದು’ ಎಂದು ಎಷ್ಟು ಬಾರಿ ಅಲವತ್ತುಕೊಂಡರೋ ಲೆಕ್ಕವಿಲ್ಲ.
ನನಗಂತೂ ನಾಲ್ಕು ವರ್ಷದಿಂದ ತಳ್ಳಿ ತಳ್ಳಿ ಬೆಟ್ಟದ ಬುಡಕ್ಕೆ ಬಂದರೂ ದರ್ಶನವಿಲ್ಲದೆ ಹೋಗುವುದು ಹೇಗೆ ಎನ್ನುವುದು ತುಂಬಾ ನೋವು ತರುತ್ತಿತ್ತು. ಆದರೆ ಅದನ್ನು ತೋರಿಸಿಕೊಳ್ಳಲಾಗದೆ ‘ಇರಲಿ ಬಿಡಿ ಸರ್ ಪರವಾಗಿಲ್ಲ. ಪ್ರಯತ್ನ ಮಾಡ್ತಾನೇ ಇದ್ದೇರ. ನೀವು ತಾನು ಏನು ಮಾಡೋಕಾಗುತ್ತೆ? ನಮ್ಮ ಭಾಗ್ಯ ಹೇಗಿದೆಯೋ ಹಾಗೆ ಆಗುತ್ತೆ’ ಎಂದು ಅವರನ್ನೇ ಸಮಾಧಾನ ಮಾಡುತ್ತಿದ್ದೆ.
ಯಾರು ರೆಡ್ಡಿಯವರನ್ನು ನಮಗೆಂದು ಕಳುಹಿಸಿದ್ದರೋ ಅವರಿಗೆ ಉತ್ತರ ಕೊಡುವುದು ಹೇಗೆ ಎಂದು ರೆಡ್ಡಿಯವರಿಗೆ ದೊಡ್ಡ ಪ್ರಶ್ನೆಯಾಗಿತ್ತು.
ವಿ ಐ ಪಿ ದರ್ಶನ, ವಿ ಐ ಪಿ ದರ್ಶನ ಎಂದು ಹಾರಾಡುತ್ತಿದ್ದ ನಾವು ಕೊನೆಗೆ ಎಂಥದ್ದೋ ಒಂದು ದರ್ಶನ ಅಂತ ಆದರೆ ಸಾಕು. ತಿಮ್ಮಪ್ಪನ ಮುಖವನ್ನು ನೋಡದೆ ಹೋಗುವುದು ಹೇಗೆ ಎಂದು ಕಳವಳ ತುಂಬಿತ್ತು. ರೆಡ್ಡಿಯವರು ತಮಗೆ ಗೊತ್ತಿದ್ದ ಬಹುದೊಡ್ಡ ಪ್ರಭಾವಿ ವ್ಯಕ್ತಿಗಳಿಗೆಲ್ಲಾ ಕರೆ ಮಾಡಿದರು. ಈ ಕೊನೆ ಗಳಿಗೆಯಲ್ಲಿ ಏನು ಮಾಡುವುದು ಎಂದು ಅವರೆಲ್ಲ ಕೈ ಚೆಲ್ಲುತ್ತಿದ್ದರು. ನನಗೆ ಪರಿಚಯವಿದ್ದ ರಾಜಕೀಯ ವ್ಯಕ್ತಿಯ ಕಡೆಯವರನ್ನೂ ಕೇಳಿದೆ. ರೆಡ್ಡಿಯವರ್ ಮಂಡ್ಯದ ಮಾಜಿ ಎಂಪಿ, ಮಾಜಿ ಎಂ ಎಲ್ ಎಲ್ಲರಿಗೂ ಕರೆ ಮಾಡಿದರು. ಅವರು ಕೂಡ ಇಷ್ಟು ಕಡೆಯ ಗಳಿಗೆಯಲ್ಲಿ ಹೇಗೆ ಸಾಧ್ಯ? ಇನ್ನೆರಡು ಮೂರು ಗಂಟೆಯಲ್ಲಿ ದರ್ಶನ ಎಂದರೆ ಹೇಗೆ ಎಂದು ಬಿಟ್ಟರು. ನಾನಾದರೋ ೧೦,೦೦೦ ರೂಪಾಯಿನ ಟಿಕೆಟ್ ಆದರೂ ಪರವಾಗಿಲ್ಲ ತಿಮ್ಮಪ್ಪನನ್ನು ನೋಡಿಕೊಂಡು ಹೋಗೋಣ ಎಂದೆ. ಅದಕ್ಕೆ ರೆಡ್ಡಿಯವರು ‘ನಾನು ಈಗಾಗಲೇ ೧೦,೦೦೦ ಟಿಕೆಟ್ಗೆ ಕೂಡ ಹಣವನ್ನು ಕೊಟ್ಟಾಗಿದೆ ಆದರೆ ಕಂಪ್ಯೂಟರ್ನ ತೊಂದರೆತಿಂದ ಅದು ಕೂಡ ಆಗುತ್ತಿಲ್ಲ ಎಂದರು.
ಮುನ್ನೂರು ರೂಪಾಯಿನ ಟಿಕೆಟ್ಗೆ ಕ್ಯೂ ನಿಲ್ಲುವುದು. ಮುಂದೆ ನೋಡೋಣ ಎಂದುಕೊಂಡು ಟಿಕೆಟ್ ಕೌಂಟರಿನ ಹತ್ತಿರ ಕಾರು ನಿಲ್ಲಿಸಿ ನೋಡಿದರೆ ಬೆಳಗಿನ ಜಾವದಿಂದಲೇ ಜನ ಕ್ಯೂನಲ್ಲಿ ನಿಂತಿದ್ದಾರೆ. ಆಗಲೇ ೧೧:೧೫ ಆಗಿತ್ತು. ನಾವು ಮುನ್ನೂರು ರೂಪಾಯಿನ ದರ್ಶನದ ಟಿಕೆಟ್ ಕೌಂಟರ್ ನಲ್ಲಿ ಈಗ ನಿಂತರೂ ಅದು ಓಪನ್ ಆಗಿ ನಮಗೆ ಟಿಕೆಟ್ ಸಿಗುವುದು ಬಹುತೇಕ ಮಧ್ಯಾಹ್ನ ನಾಲ್ಕರ ಮೇಲೆಯೇ ಆಗುತ್ತಿತ್ತು ಮತ್ತು ದರ್ಶನದ ಸಮಯ ಮಧ್ಯರಾತಿಯೋ ಮರುದಿನ ಬೆಳಿಗ್ಗೆಯೋ, ಮಧ್ಯಾಹ್ನವೋ ತಿಳಿಯದು.
‘ಹೋಗಲಿ ಸರ್ ನಾಳೆ ದರ್ಶನವಾದರೂ ಪರವಾಗಿಲ್ಲ ಒಂದು ದಿನ ರಜಾ ಎಕ್ಸ್ಟೆಂಡ್ ಮಾಡುತ್ತೇನೆ’ ಎಂದು ಹೇಳಿದೆ. ನನ್ನ ಗೆಳತಿ ಸುಧಾ ಕೂಡ ಆಗಲಿ ಸರಿ ಏನು ಮಾಡುವುದು ದೇವರ ದರ್ಶನವಿಲ್ಲದೆ ಹೋಗುವುದು ಹೇಗೆ ಎಂದರು. ನಾವು ಮರುದಿನಕ್ಕಾರೂ ತಿಮ್ಮಪ್ಪನನ್ನು ನೋಡಲೇಬೇಕೆಂದು ಹಠ ತೊಟ್ಟ ಹಾಗೆ ನಮಗೇನೇ ಅನಿಸುತ್ತಿತ್ತು.
ಅಂಥ ಹಠವನ್ನೇ ಭಕ್ತಿ ಎನ್ನುವುದು.
ಮುನ್ನೂರು ರೂ ಟಿಕೆಟ್ ಕೌಂಟರಿನ ಹತ್ತಿರ ನಿಂತಾಗ ತಿರುಮಲೆ ಕಾಣುತ್ತಿತ್ತು. ನನ್ನ ಕಣ್ಣಲ್ಲಿ ನೀರು ತುಂಬಿ ಹೋಗಿತ್ತು ಎಷ್ಟು ಸತಾಯಿಸುತ್ತಾ ಇದ್ದಾನೆ ತಿಮ್ಮಪ್ಪ ಎಂದು.
ಬೆಟ್ಟದ ಕಡೆ ಕೈಮುಗಿದು ‘ಹೇಗಾದರೂ ದರ್ಶನ ಕೊಡು, ಒಟ್ಟಿನಲ್ಲಿ ನೀನು ಇವತ್ತು ನನಗೆ ದರ್ಶನ ಕೊಟ್ಟರೆ ಇನ್ನೊಂದು ಬಾರಿ ಸಾಧ್ಯವಾದರೆ ಪೂರ್ತಿ ಬೆಟ್ಟ ಹತ್ತುತ್ತೇನೆ ಇಲ್ಲವಾದರೆ ಅರ್ಧ ಬೆಟ್ಟವನ್ನು ಹತ್ತಿ ಬಂದು ನಿನ್ನ ದರ್ಶನ ಮಾಡುತ್ತೇನೆ’ ಎಂದು ಹರಕೆ ಹೊತ್ತುಕೊಂಡೆ. ಹರಕೆಯ ಮಾತು ಮುಗಿದು ಇನ್ನೂ ಮುಗಿದ ಕೈ ಮುಗಿದ ಹಾಗೆಯೇ ಇತ್ತು. ರೆಡ್ಡಿಯವರು ‘ಮೇಡಂ ಏನೋ ಒಂದು ವ್ಯವಸ್ಥೆ ಆಗುತ್ತಿದೆ ಈಗಲೇ ಬೆಟ್ಟಕ್ಕೆ ಬನ್ನಿ ಅಂದಿದ್ದಾರೆ ನಡೆಯಿರಿ ಹೋಗೋಣ’ ಎಂದರು. ನನ್ನ ಅಚ್ಚರಿಕೆ ಪಾರವಿಲ್ಲ. ಹರಕೆ ಹೊತ್ತು ೫ ಸೆಕೆಂಡ್ ಕೂಡಾ ಆಗಿಲ್ಲ ಆಗಲೇ ದರ್ಶನ ಕೊಡುತ್ತೇನೆ ಎಂದು ತಿಮ್ಮಪ್ಪ ಹೇಳಿದ.
‘ನೀನ್ ಯಾವ ಮಹಾ ವಿ ಐ ಪಿ? ವಿ ಐ ಪಿ ದರ್ಶನ ಎನ್ನುವ ಹೆಮ್ಮೆಯಾಗಲಿ ಅಹಂ ಆಗಲಿ ಇಲ್ಲದೆ ಕಡೆಯ ಪಕ್ಷ ಬಸ್ಸು ಕಾರಿನಲ್ಲೂ ಅಲ್ಲದೆ ನಡೆದುಕೊಂಡು ಕಷ್ಟಪಟ್ಟು ನಿನ್ನನ್ನು ನೋಡುತ್ತೇನೆ, ಅಷ್ಟು ಸಾಧಾರಣವಾಗಿ ಬರಿದೇ ಭಕ್ತಿ ಪ್ರಧಾನವಾಗಿ ನೋಡುತ್ತೇನೆ’ ಎಂದು ಹೇಳಿದ ಮೇಲೆಯೇ ಅವನು ದರ್ಶನ ಕೊಡಲು ಒಪ್ಪಿದ್ದು ಎನ್ನುವುದಾದರೆ ಇದಕ್ಕಿಂತ ಆಸ್ತಿಕರಿಗೆ ಬೇರೇನೂ ಆಶ್ಚರ್ಯ ಬೇಕು.
ಅದಕ್ಕೇ ಸಾಮಾನ್ಯವಾಗಿ ದೇವಸ್ಥಾನಗಳು ಊರಿನಿಂದ ದೂರವಾಗಿ, ನದಿ ತಟದಲ್ಲಿ, ಬೆಟ್ಟದ ಮೇಲೆಲ್ಲೋ ಅಥವಾ ಕಷ್ಟಪಟ್ಟು ಹೋಗುವ ಹಾಗೆಯೇ ಇರುತ್ತದೆ. ನಿಜವಾದ ಭಕ್ತಿ, ನಂಬಿಕೆ, ಶ್ರದ್ಧೆ ಇದ್ದವರು ಮಾತ್ರ ಅಲ್ಲಿ ತಲುಪಲಿ ಎಂಬAತೆ.
ಸುಲಭವಾಗಿ ದೊರೆತ ಯಾವುದಕ್ಕೂ ಬೆಲೆ ಮನುಷ್ಯನಿಗೆ ಬೆಲೆ ತಿಳಿಯದು.
ವೈಷ್ಣೋದೇವಿ, ಮುಕ್ತಿನಾಥ ಇವೆಲ್ಲವನ್ನೂ ನೋಡಿದಾಗ ನನಗೆ ಅನಿಸಿದ್ದು ಹಾಗೆಯೇ.
ನೋಡಲೇಬೇಕೆಂಬ ತೀವ್ರ ಶ್ರದ್ಧೆ ಇದ್ದರೆ ಮಾತ್ರ ದೈವ ಸ್ಥಾನಕ್ಕೆ ಹೋಗಲು ಸಾಧ್ಯ.
ಮನುಷ್ಯನ ಅಹಮಿಕೆಯನ್ನು ತಣಿಸುವ ಬಗೆಯಿದು.
ನಾನು ಹೀಗೆ ಹರಕೆ ಹೊತ್ತೆ ಎಂದು ಹೇಳಿದ ಕೂಡಲೇ ಸುಧಾ ಕೂಡ ಕೈಮುಗಿದು ‘ನಾನೂ ನಿಮ್ಮ ಜೊತೆ ಬೆಟ್ಟ ಹತ್ತಿ ಬರುತ್ತೇನೆ ಮುಂದಿನ ಬಾರಿ’ ಎಂದು ಅವರೂ ಹರಕೆ ಹೊತ್ತರು. ಯಾವ ವ್ಯವಸ್ಥೆ ಎಂದು ಇನ್ನೂ ಖಾತ್ರಿ ಆಗಿರಲಿಲ್ಲ. ಸದ್ಯ ಹೇಗೂ ದರ್ಶನವಾಗುತ್ತದೆ ಎಂದು ಪಟಪಟ ಹೊರಟು ೧೨ ಗಂಟೆಗೆ ತಲುಪಿ ಎಂದರೂ ೧೨:೨೦ ಆಗಿತ್ತು ನಾವು ಬೆಟ್ಟ ತಲುಪುವ ವೇಳೆಗೆ.
ದಾರಿಯುದ್ದಕ್ಕೂ ರೆಡ್ಡಿಯವರು ವ್ಯವಸ್ಥೆ ಮಾಡುವ ಯಾರದೋ ಜೊತೆ ಇವರು ಮಾತನಾಡುತ್ತಲೇ ಇದ್ದರು. ಅಲ್ಲಿ ಬನ್ನಿ ಇಲ್ಲಿ ಬನ್ನಿ ಎಂದು ಆತ ಹೇಳಿದರಂತೆ. ನಾವು ಕಾರನ್ನು ಸಮೀಪದಲ್ಲಿ ನಿಲ್ಲಿಸಿ ಪಟಪಟ ಓಡಿದೆವು. ಅವರು ಇಲ್ಲಿ ಅಲ್ಲಿ ಎಂದು ಓಡಾಡಿ ಮಾತನಾಡಿ ಎಂದು ಪೊಲೀಸಿನವರ ಕೈಗೆ ಫೋನ್ ಕೂಟ್ಟರೆ ಪೊಲೀಸ್ ನವರು ಕರೆ ತೆಗೆದುಕೊಳ್ಳಲು ಸಿದ್ದರಿಲ್ಲ. ಕೊನೆಗೆ ಅಲ್ಲಿ ಒಳಗೆ ಬಿಡಬೇಕಾದ ಪೊಲೀಸಿನವನೊಬ್ಬ ಅವನ ಕಡೆಯ ಯಾರನ್ನೋ ಒಳಗೆ ಬಿಡುವಾಗ ನಮ್ಮನ್ನೂ ಬಿಟ್ಟರು. ಎಂಥ ದರ್ಶನವೆಂದರೆ ಒಂದು ರೂಪಾಯಿಯೂ ಖರ್ಚಿಲ್ಲದ ಧರ್ಮದರ್ಶನ…!
ವಿಐಪಿ ದರ್ಶನವಿರಲಿ ಮುನ್ನೂರು ರೂಪಾಯಿನ ಟಿಕೆಟ್ ಕೂಡ ಅಲ್ಲದೆ ಧರ್ಮದರ್ಶನಕ್ಕೆ ತಿಮ್ಮಪ್ಪ ಒಪ್ಪಿಗೆ ನೀಡಿದ್ದು.
ಪ್ರೀತಿ ಮತ್ತು ಭಕ್ತಿಗೆ ಮಾತ್ರ ದೈವವೂ ಒಲಿಯುವುದು ಎಂಬುದಕ್ಕೆ ಈ ಘಟನೆ ನಿದರ್ಶನ.
ಸುಮಾರು ಮುಕ್ಕಾಲುವಾಸಿ ದೂರ ಕ್ರಮಿಸುವ ಇರಾದೆ ಇಲ್ಲದ ಜಾಗದಿಂದ ಒಳಕ್ಕೆ ಬಿಟ್ಟರು. ಅಲ್ಲಿಂದ ೨೪ ನೇ ಕೊಠಡಿ ಬನ್ನಿ ಎಂದು ಹೇಳಿದ್ದರಿಂದ ಸಂದಿಗೊAದಿಗಳಲ್ಲಿ ಹೋಗಿ ೨೪ ನೇ ರೂಮಿನ ಬಳಿ ಹೋಗಿ ಇಂಥವರು ಕಳಿಸಿದ್ದಾರೆ ಎಂದು ಅಲ್ಲಿ ಕುಳಿತ ಸೆಕ್ಯೂರಿಟಿಯವರಿಗೆ ಹೇಳಿದೆವು. ಮೊಬೈಲ್ ತೆಗೆದುಕೊಂಡು ಹೋಗಿರಲಿಲ್ಲ. ಮೊದಲೇ ಮೊಬೈಲ್ ಡೆಪಾಸಿಟ್ ಕೌಂಟರ್ ಇರುತ್ತದೆ. ಅಲ್ಲಿ ಇಟ್ಟರೆ ಮತ್ತೆ ಬಂದು ತೆಗೆದುಕೊಳ್ಳುವುದು ಕಷ್ಟ ಎಂದು ಕಾರಲೇ ಬಿಟ್ಟಿದ್ದೆವು. ಹಾಗಾಗಿ ನಮ್ಮ ಡ್ರೈವರ್ ನಂಬರ್ ಮತ್ತು ನಾವು ಯಾರನ್ನು ಸಂಪರ್ಕಿಸಬೇಕೋ ಅವರ ನಂಬರನ್ನು ನನ್ನ ಕೈಯಲ್ಲಿ ಬರೆದುಕೊಂಡು ಹೋಗಿದ್ದೆ.
ಕೈಯಲ್ಲಿ ಬರೆದುಕೊಂಡರೆ ಸಾಲ ಜಾಸ್ತಿಯಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಇಲ್ಲಿ ತಿಮ್ಮಪ್ಪನ ದರ್ಶನ ಮಾಡಲು ಕೈಯಲ್ಲಿ ಬರೆದುಕೊಂಡು ಹೋಗಿದ್ದೆ. ತಿಮ್ಮಪ್ಪನೇ ಇನ್ನೂ ಕುಬೇರನ ಸಾಲವನ್ನು ತೀರಿಸಿಲ್ಲ. ಅವನ ಜೊತೆಗೆ ನಾನೂ ಈಗ.
ನಮ್ಮ ಕೈನಲ್ಲಿದ್ದ ನಂಬರನ್ನು ನೋಡಿ ೨೪ನೇ ರೂಮಿನ ಬಳಿ ಇದ್ದ ವ್ಯಕ್ತಿ ಒಬ್ಬರು ‘ಓ ಇವರ ಕಡೆಯವರಾ? ನಿಮಗೆ ಅವರು ಏನಾಗಬೇಕು?’ ಎಂದೆಲ್ಲಾ ಪಶ್ನಿಸಿ ೨೮ನೇ ರೂಮಿಗೆ ನಡೆಯಿರಿ ಎಂದು ನೇರವಾಗಿ ೨೮ನೇ ಕೋಣೆಯತ್ತ ನಮ್ಮನ್ನು ಕರೆದುಕೊಂಡು ಹೋದರು. ೨೭ ಮತ್ತು ೨೮ನೇ ಕೋಣೆಯನ್ನು ಇನ್ನು ಕೆಲವೇ ನಿಮಿಷಗಳಲ್ಲಿ ತೆರೆಯುವವರಿದ್ದರು. ತೆರೆದರೆ ಅಲ್ಲಿಂದ ನಾವು ಕ್ಯೂನಲ್ಲಿ ದೇವಸ್ಥಾನಕ್ಕೆ ಹೋಗುವುದು. ಓಹೋ ಇನ್ನೇನು ಐದು ನಿಮಿಷದಲ್ಲಿ ಗೇಟ್ ತೆಗೆದುಬಿಡುತ್ತಾರೆ, ನಾವು ಕ್ಯೂನಲ್ಲಿ ಹೋಗಿಬಿಟ್ಟರೆ ಅರ್ಧ ಗಂಟೆಯಲ್ಲಿ ದೇವರ ದರ್ಶನ ಮಾಡುತ್ತೇವೆ ಎಂದುಕೊಂಡುಬಿಟ್ಟೆವು. ೨೮ನೇ ಕೋಣೆಯೊಳಗೆ ಹೊಕ್ಕ ನಮಗೆ ಆ ಕೋಣೆಯಲ್ಲಿ ಈಗಾಗಲೇ ೩೦೦ ಜನರಿದ್ದದ್ದು ಕಂಡಿತು. ಪಕ್ಕದ ೨೭ರಲ್ಲಿ ಒಂದು ೩೦೦ ಜನರಿದ್ದರು. ಅವರೆಲ್ಲಾ ಮಧ್ಯರಾತ್ರಿ ೧೨:೩೦ ಯಿಂದಲೇ ಕಾದು ಕುಳಿತಿದ್ದವರೆಂದು ತಿಳಿಯಿತು.
ಒಂದು ಕ್ಷಣ ನನ್ನಲ್ಲಿ ಪಾಪ ಪ್ರಜ್ಞೆಯೂ ಮೂಡಿತು. ಇವರೆಲ್ಲ ಅಷ್ಟು ಕಷ್ಟಪಟ್ಟು ಕುಳಿತಿದ್ದಾರೆ. ನಾವು ಈಗ ತಾನೇ ಬಂದು ಇವರ ಜೊತೆ ಸೇರಿ ಬಿಟ್ಟೆವಲ್ಲಾ ಎಂದು ಧರ್ಮದರ್ಶನದಲ್ಲೂ ಅಧರ್ಮವೇ ಎಂದು ನನ್ನೊಳಗೆ ಒಂದು ಕ್ಷಣ ಬಾಣ ಚುಚ್ಚಿತು.
ಮೇಲೆ ನಿಂತಿದ್ದ ನಾವು ಗೇಟ್ ತೆಗೆದರೆ ಬೇಗ ಕ್ಯೂ ಸೇರಬಹುದು ಎಂದು ಎಲ್ಲರನ್ನೂ ದಾಟಿ ಮೆಟ್ಟಿಲುಗಳಿಳಿದು ಗೇಟ್ ತೆಗೆಯುವ ಬಳಿ ನಿಂತೆವು. ಅಷ್ಟರಲ್ಲಿ ಅಲ್ಲಿ ಒಂದು ಯುದ್ಧ ಶುರುವಾಗಿತ್ತು. ಬೆಳಿಗ್ಗೆಯೂ ಅದೇ ರೀತಿ ಗುದ್ದಾಟ ಬಿದ್ದಾಟ ಆಗಿತ್ತಂತೆ. ಏನು ಮಾತುಕತೆಯಾಯಿತೋ ನನಗೆ ತಿಳಿಯದು. ಅಲ್ಲಿ ಪ್ರಸಾದ ಹಂಚುವ ಜಾಗದಲ್ಲಿ ಯಾರನ್ನೋ ಇನ್ನೊಬ್ಬರು ಹೊಡೆಯುವುದು ಕಾಣಿಸಿತು. ಕ್ಷಣಕ್ಷಣದಲ್ಲಿ ಗುಂಪು ದೊಡ್ಡದಾಗುತ್ತಾ ಹೋಗಿ ೨೦ ನಿಮಿಷಗಳಲ್ಲಿ ೧೫ ಜನ ಬಿದ್ದು ಎದ್ದು ಇವರ ತಲೆ ಅವರು ಕುಟ್ಟಿ, ಅವರ ಜುಟ್ಟು ಇವರು ಎಳೆದು, ಜೋರು ಜೋರು ಹೊಡೆದಾಟ ಶುರುವಾಗಿತ್ತು. ಹೆಣ್ಣು ಮಕ್ಕಳಂತೂ ಬಳೆಗಳೆಲ್ಲ ಒಡೆದುಕೊಂಡು, ಅವರ ಕೈಯಲ್ಲಿದ್ದ ಪ್ರಸಾದವೆಲ್ಲ ನೆಲದ ಪಾಲಾಗಿ, ಜೋರು ಮಾತುಕತೆ ಆಗುತ್ತಾ ಧುಮುಕಿ ಧುಮುಕಿ ಮೆಟ್ಟಿಲು ಮೇಲುಗಳಿಂದ ಅವರು ಉರುಳಿ ನಮ್ಮ ಕಾಲ ಬಳಿಯೇ ಬಂದು ಬಿಟ್ಟರು. ನನ ಗೆಳತಿ ಸುಧಾ ಮತ್ತು ರೆಡ್ಡಿಯವರ ಪತ್ನಿ ಗಾಯಿತ್ರಿ ಅವರ ಮುಖ ವಿವರ್ಣವಾಗಿತ್ತು. ಎಲ್ಲಿ ಹೊಡೆದಾಟದಲ್ಲಿ ನಮ್ಮ ಮೇಲೆ ಬಿದ್ದು ನಾವು ನಜ್ಜುಗುಜ್ಜಾಗುತ್ತೇವೆಯೋ ಎಂದು ಹೆದರಿಬಿಟ್ಟರು. ನಿಜಕ್ಕೂ ಹಳ್ಳಿಗಳಲ್ಲಿ ನಲ್ಲಿ ಜಗಳ ಆಗುತ್ತಲ್ಲಾ ತಲೆಗೂದಲು ಹಿಡಿದು ಜಗ್ಗಾಡಿ, ಬಳೆ ಒಡೆದು, ನಲ್ಲಿ ಮುರಿದು, ಬಿಂದಿಗೆ ಸೀಳಿ, ಹೆಣ್ಣುಮಕ್ಕಳ ಸದ್ದು ಮುಗಿಲಿಗೆ ಕೇಳುತ್ತಲ್ಲಾ ಅಷ್ಟು ದೊಡ್ಡ ಜಗಳವಾಗುತ್ತಿತ್ತು. ಒಬ್ಬನ ತಲೆಯನ್ನಂತೂ ಮೆಟ್ಟಿಲಿಗೆ ಕುಟ್ಟುತ್ತಿದ್ದರು. ತಲೆ ಒಡೆದು ಎಲ್ಲಿ ಆತ ಪ್ರಾಣ ಬಿಟ್ಟು ಬಿಡುತ್ತಾನೋ ಎಂದು ನನಗೂ ಒಂದು ಕ್ಷಣ ಭಯವಾಯಿತು. ಆದರೆ ಅವರಿಬ್ಬರಷ್ಟು ನಾನು ಹೆದರಲಿರಲಿಲ್ಲ. ಏಕೆಂದರೆ ನಾನು ನಮ್ಮ ಕೆಲವು ಶಾಖೆಗಳಲ್ಲಿ ಗ್ರಾಹಕರು ಹೀಗೆ ಕಿತ್ತಾಡುವುದನ್ನು ನೋಡಿದ್ದೆ. ಒಮ್ಮೆ ನನ್ನ ಹಳೆಯ ಶಾಖೆಯಲ್ಲಿ ಹೆಣ್ಣು ಮಗಳೊಬ್ಬಳು ತೀರಾ ಕೆಟ್ಟದಾಗಿ ಮಾತನಾಡುತ್ತಾ ಕುರ್ಚಿಯನ್ನು ಎಸೆದದ್ದನ್ನು ಕೂಡ ನಾನು ನೋಡಿದ್ದೆ. ಆದ್ದರಿಂದ ನಾನು ಹೆದರಲಿಲ್ಲ ಅಸಹ್ಯ ಪಟ್ಟುಕೊಂಡೆ.
ಮನುಷ್ಯ ಕೋಪಕ್ಕೆ ಬುದ್ಧಿ ಕೊಟ್ಟಾಗ ಪ್ರಾಣಿಯಾಗುತ್ತಾನೆ
ಜನ ಎಲ್ಲ ಪೊಲೀಸ್ ನವರನ್ನು ಕೂಗುತ್ತಿದ್ದರು. ಎಲ್ಲಿ ಯಾರ ಪ್ರಾಣಿಕ್ಕೆ ಅಪಾಯವಾದಿತೋ ಎಂದು ಹೆದರುವಷ್ಟು. ರಣಾಂಗಣವಾಗಿತ್ತು ೨೮ನೆಯ ಕೊಠಡಿ. ಇದೆಲ್ಲ ಮುಗಿಯುವ ವೇಳೆಗೆ ಅರ್ಧ ಗಂಟೆಯಾಗಿತ್ತು. ಅಷ್ಟರಲ್ಲಿ ಬಾಗಿಲು ತೆಗೆದು ನಾವು ಕ್ಯೂನಲ್ಲಿ ನಿಂತೆವು. ೨೮ನೇ ನಂಬರಿನ ಕೊಠಡಿಯಿಂದ ೨೭, ೨೬, ೨೫…. ಹೀಗೆ ಒಂದನೇ ಕೊಠಡಿಯ ತನಕ ಕ್ಯೂನಲ್ಲಿ ಹಾದುಹೋದರೆ ಮಾತ್ರ ನಾವು ದೇವಸ್ಥಾನದ ಆವರಣವನ್ನು ಸೇರಬಹುದು. ದೇವಸ್ಥಾನದ ಆವರಣಕ್ಕೆ ಸೇರಿದ ಮೇಲೆಯೂ ಒಂದು ಅರ್ಧ ಮುಕ್ಕಾಲು ಕಿಲೋಮೀಟರ್ ದೂರ ಸುತ್ತಿ ಸುತ್ತಿ ಸುಳಿದು ದೇವಾಲಯದ ಹೆಬ್ಬಾಗಿಲನ್ನು ತಾಕಬೇಕು.
ಹೀಗೆ ಕ್ಯೂನಲ್ಲಿ ನಿಂತು ೧೦ ನಿಮಿಷವಾಗಿದ್ದಿರಬಹುದು ನಮ್ಮ ಸ್ವಲ್ಪ ಹಿಂದೆ ನಿಂತಿದ್ದ ವ್ಯಕ್ತಿ ಒಬ್ಬ ಮೂರ್ಛೆರೋಗ ಬಂದು ಕೈ ಕಾಲು ಒದರಿ ಬಿದ್ದುಬಿಟ್ಟ. ಆಕೆಯ ಹೆಂಡತಿ ಏನು ಮಾಡಲು ತೋಚದೆ ಸಹಾಯಕ್ಕಾಗಿ ಕೇಳುತ್ತಿದ್ದಾಳೆ. ಸುತ್ತ ನಿಂತ ಎಲ್ಲರೂ ಜಾಗ ಬಿಟ್ಟು ಗಾಳಿ ಹಾಕಿದರು, ಆಕೆಗೆ ಧೈರ್ಯ ಹೇಳಿದರು. ಅವರನ್ನು ಎತ್ತಿಕೊಂಡು ಹೋಗೋಣವೆಂದರೆ ಒಂದೂ ಬಾಗಿಲಿಲ್ಲ. ಎಲ್ಲೆಲ್ಲೋ ಒಂದುಕಡೆ ಇದ್ದ ಎಲ್ಲ ಬಾಗಿಲುಗಳೂ ಮುಚ್ಚಿದ್ದವು. ನಾವು ಸರಳುಗಳ ಹಿಂದೆ ಕೈದಿಗಳ ಹಾಗೆ ನಿಂತ ಭಾವನೆ ಮೂಡಿತು. ಎಲಿಯ್ಲೂ ಒಬ್ಬ ವಾಲೆಂಟಿಯರ್ ಕೂಡಾ ಕಾಣಲಿಲ್ಲ, ಒಬ್ಬ ಸೆಕ್ಯೂರಿಟಿ ಕಾಣಲಿಲ್ಲ. ಎಲ್ಲರೂ ಎಮರ್ಜೆನ್ಸಿ ಎಮರ್ಜೆನ್ಸಿ ಎಂದು ಒಬ್ಬರಿಂದ ಒಬ್ಬರಿಗೆ ಕೂಗುತ್ತಾ ಹೋದೆವು. ಮುಂದೆ ಎಲ್ಲೋ ಯಾರೋ ಸಹಾಯಕರು ಅಥವಾ ಬಾಗಿಲು ಕಂಡರೆ ಬಾಗಿಲು ತೆಗೆದು ಇವರನ್ನು ಹೊರಗೆ ಸಾಗಿಸೋಣ ಎಂದು.
ತುಂಬಾ ರಶ್ ಇದ್ದಾಗ ತುಸು ಚಲನೆಯೂ ಕಷ್ಟ. ಆದರೆ ಆರ್ಗನೈಜ್ಡ್ ಆದರೆ ಚಲನೆ ಸುಲಭ. ಇದು ಭಾವನೆಗಳಿಗೂ ಪ್ರತಿಭೆಗೂ ಸಲ್ಲುತ್ತದೆ.
ಅಷ್ಟರಲ್ಲಾಗಲೇ ಮೂರ್ಛೆ ಬಂದಾತ ನಾಲಿಗೆ ಕಚ್ಚಿಕೊಂಡು ರಕ್ತ ಧೋ ಎಂದು ಬಾಯಿಂದ ಸುರಿಯ ತೊಡಗಿತ್ತು. ಎಲ್ಲರೂ ಅಸಹಾಯಕರಾಗಿ ನೋಡುತ್ತಿದ್ದೆವು. ಎಷ್ಟು ಕೂಗಿದರೂ ಪ್ರಯೋಜನವಾಗಲಿಲ್ಲ. ನನಗೆ ಆ ಕ್ಷಣದಲ್ಲಿ ಒಂದು ಯೋಚನೆ ಬಂತು. ಸರಳುಗಳ ನಡುವೆ ಕೈ ಹಾಕಿ ಜೋರಾಗಿ ಕೈಯಾಡಿಸತೊಡಗಿದೆ. ಕೂಗಿದ್ದು ಕೇಳದಿದ್ದರೂ ನಾವು ಕೈಯಾಡಿಸುವಾಗ ಯಾರಿಗಾದರೂ ಹೊರಗಿನವರಿಗೆ ಕಂಡೀತು ಎಂದು. ದೂರದಲ್ಲೆಲ್ಲೋ ನಾಲ್ಕೈದು ಜನ ಸ್ವಯಂಸೇವಕರು ಮಾತನಾಡುತ್ತಾ ನಿಂತಿದ್ದಿದ್ದು ಕಂಡ ಕೂಡಲೇ ನಾ ಇನ್ನೂ ಜೋರಾಗಿ ಕೈಯಾಡಿಸತೊಡಗಿದೆ. ಏಕೆಂದರೆ ನನ್ನ ಗಂಟಲು ಅವರನ್ನು ತಾಕಲು ಸಾಧ್ಯವೇ ಇರುತ್ತಿರಲಿಲ್ಲ. ಯಾವಾಗ ನಾನು ಕೈ ಆಡಿಸಲು ಶುರು ಮಾಡಿದೆನೋ ನನ್ನ ಸುತ್ತಮುತ್ತ ಇದ್ದ ನಲವತ್ತು ಐವತ್ತು ಜನ ದೊಡ್ಡ ದೊಡ್ಡ ಸರಳುಗಳ ನಡುವೆ ಕೈ ತೂರಿಸಿ ಹೆಲ್ಪ್ ಹೆಲ್ಪ್ ಎಂದು ಕೂಗಿ ಕೈ ಆಡಿಸ ತೊಡಗಿದರು.
ಕಷ್ಟದ ಸಮಯದಲ್ಲೇ ಮನುಷ್ಯತ್ವ ಜಾಗೃತವಾಗುವುದು ಮತ್ತು ಜಾಗೃತಾವಾಗಲೇಬೇಕಾದದ್ದು.
ಸಹಕಾರ ಎನ್ನುವುದು ಎಷ್ಟು ದೊಡ್ಡದು ಎನ್ನುವುದು ಆಗ ಅರಿವಾಯಿತು.
ಎಷ್ಟು ಹಣವಿದ್ದರೇನು ಅಂತಹ ಸಮಯದಲ್ಲಿ ಪರಸ್ಪರರ ಸಹಾಯ ಸಹಕಾರವೇ ಕೈ ಹಿಡಿಯುವುದು. ಒಬ್ಬರಿಗೊಬ್ಬರು ಕೈಜೋಡಿಸಿ ನಡೆದಾಗ ಎಂಥ ಕಷ್ಟವೂ ಸುಲಭ ಸಾಧ್ಯವಾಗುತ್ತದೆ ಎಂಬುದಕ್ಕೆ ಈ ಒಂದು ಘಟನೆ ಸಾಕ್ಷಿಯಾಯಿತು.
ಸ್ವಯಂಸೇವಕರು ನೋಡಿದರು ಏನೋ ಬೇಗ ಬಿಡಿ ಎನ್ನಲು ಕೈಯಾಡಿಸುತ್ತಿದ್ದಾರೆ ಎಂದು ಮೊದಲಿಗೆ ಸುಮ್ಮನಾದರೂ, ಯಾವಾಗ ಹೆಲ್ಪು ಎಮರ್ಜೆನ್ಸಿ ಎಂದು ಜೋರಾಗಿ ಕೂಗತೊಡಗಿದೆವೋ ಅವರಿಗೆ ಏನೋ ಅಪಾಯವಾಗಿದೆ ಎಂದು ಗೊತ್ತಾಯಿತು. ಕೂಡಲೇ ಒಬ್ಬ ವಾಲೆಂಟಿಯರ್ ಓಡುತ್ತಾ ಬಂದ. ಅಷ್ಟರಲ್ಲಿ ಮಲಗಿದ್ದ ಆತನನ್ನು ನಾಲ್ಕು ಜನ ಸೇರಿ ಹಿಂಭಾಗಕ್ಕೆ ಕರೆದುಕೊಂಡು ಹೋದರು. ಸ್ವಯಂ ಸೇವಕರು ಹಿಂಭಾಗದ ಬಾಗಿಲನ್ನು ತೆರೆದು ಸ್ಟೆçಚಸ್ ನಲ್ಲಿ ಅವನನ್ನು ಕರೆದುಕೊಂಡು ಹೋಗಿದ್ದು ಎಲ್ಲರಿಗೂ ಕಾಣಿಸಿತು. ಎಲ್ಲರೂ ಆಗ ತುಸು ನಿರಾಳವಾಗಿ ಉಸಿರಾಡಿದರು.
ಈ ನಡುವೆ ಸುಮಾರು ಎಂಭತ್ತರ ಬೆನ್ನು ಬಾಗಿದ ಹಣ್ಣು ಮುದುಕಿ ಒಬ್ಬರು ಲಗೇಜ್ ಹಿಡಿದುಕೊಂಡು ಸಂದಿಗೊಂದಿಗಳಲ್ಲಿ ಬರುತ್ತಿದ್ದರು. ಬಹುತೇಕ ಆಕೆ ರೂಮನ್ನು ತೆಗೆದುಕೊಳ್ಳುವ ಶಕ್ತಿ ಇಲ್ಲದವಳು ಎಂದು ಕಾಣುತ್ತದೆ. ಜೊತೆಗೆ ಯಾರೂ ಬಂದಿಲ್ಲ, ದೇವರನ್ನು ನೋಡಲೆಂದು ಆಸೆಪಟ್ಟು ಬಂದಿರಬೇಕು. ಅದಕ್ಕಾಗಿ ಕಿಟ್ ಬ್ಯಾಗ್ ಕೂಡ ಎತ್ತುಕೊಂಡು ತಾನೊಬ್ಬಳೇ ಸಂದಿಯಲ್ಲಿ ನುಗ್ಗಿಕೊಂಡು ಮೆತ್ತ ಮೆತ್ತಗೆ ಬರುತ್ತಿದ್ದರು.
ಅಯ್ಯೋ ಅಜ್ಜಿ ನೀವೊಬ್ಬರೇ ಯಾಕೆ ಬಂದಿದ್ದೀರಿ ಎಂದು ಎಷ್ಟೋ ಜನ ಕೇಳಿದರು. ಆಕೆ ಮೌನವಾಗಿ ಮುಂದೆ ಸಾಗುತ್ತಿದ್ದಳು. ಸೀನಿಯರ್ ಸಿಟಿಜನ್ ಎಂದು ಬೇರೆ ಕ್ಯೂ ಇದೆ ಎಂದು ಆಕೆಗೆ ಬಹುತೇಕ ಗೊತ್ತಿಲ್ಲ ಎನಿಸುತ್ತದೆ ಧರ್ಮದರ್ಶನಕ್ಕೆ ಎಂದು ಬಂದು ಬಿಟ್ಟಿದ್ದಳು.
ಪಾಪ ಈ ವಯಸ್ಸಿನಲ್ಲಿ ಆಕೆ ಈ ಸಂಧಿಯಲ್ಲಿ ಜನರ ನಡುವೆ ಓಡಿಕೊಂಡು ಓಡಾಡಿಕೊಂಡು ಹೇಗೆ ದರ್ಶನ ಮಾಡುತ್ತಾಳೋ ಎಂದು ನಮಗೇ ಕನಿಕರ ಎನಿಸಿತು. ಆದರೆ ನಾವು ದರ್ಶನ ಮುಗಿಸಿ ಎಕ್ಸಿಟ್ ಇಂದ ಹೊರಗೆ ಬಂದಾಗ ನಮಗಿಂತ ಮುಂಚೆ ಆ ಮುದುಕಿ ಇದ್ದಳು. ಈಗ ನಿಜಕ್ಕೂ ಸಖೇದಾಶ್ಚರ್ಯ.
ಆ ಮುದುಕಿ ನಾವು ಕ್ಯೂನಲ್ಲಿ ಕೆಲವೊಮ್ಮೆ ಓಡಿ ಓಡಿ ಮುಂದಕ್ಕೆ ಹೋಗುತ್ತಿದ್ದೆವು. ನಿಧಾನ ನಡೆಯುತ್ತಿದ್ದ ಈ ಮುದುಕಮ್ಮ ನಮಗಿಂತ ಆಚೆ ಹೇಗೆ ಮುಂಚೆ ಬರಲು ಸಾಧ್ಯ ?. ಯಾರೋ ಈ ಮುದುಕಿಯನ್ನು ನೋಡಿ ಸೀನಿಯರ್ ಸಿಟಿಜನ್ ಗೆ ಬೇರೆ ಕ್ಯೂ ಇದೆ ಎಂದು ಬೇರೆ ಕಡೆ ಕರೆದುಕೊಂಡು ಹೋಗಿಬಿಟ್ಟರೋ ಏನೋ ನಮಗೆ ಗೊತ್ತಿಲ್ಲ. ಆಕೆ ನಿರಾಯಾಸವಾಗಿ ನಮಗಿಂತ ಮುಂಚೆ ದರ್ಶನ ಮಾಡಿ ಹೊರ ಬಂದಿದ್ದಳು.
ಅನಾಥೋ ದೈವ ರಕ್ಷಕಃ ಎಂಬ ಮಾತು ಸತ್ಯ. ಇದು ಬದುಕಿನ ಬಹುದೊಡ್ಡ ಪಾಠ ಎನಿಸಿತು.
ನಾವು ಕ್ಯೂನಲ್ಲಿ ನಿಂತಿದ್ದಾಗ ನಮ್ಮ ತಲೆಯ ಮೇಲಿನ ಒಂದು ಸರಳಿನಲ್ಲಿ ಒಂದು ಪಾರಿವಾಳ ಕುಳಿತಿತ್ತು. ತುಂಬಾ ಹೊತ್ತು ಅಲ್ಲಿ ಕುಳಿತು ಆ ಕಡೆ ಈ ಕಡೆ ನೋಡುತ್ತಾ ಇತ್ತು. ನಾನು ನನ್ನ ಗೆಳತಿಗೆ ಹೇಳಿದೆ ‘ಈ ಪಾರಿವಾಳ ಬಹುಶಹ ಇಷ್ಟೊಂದು ರಶ್ ನೋಡಿ ಇವರೆಲ್ಲ ಯಾಕೆ ಹೀಗೆ ಗೂಡಿನೊಳಗೆ ಕುಳಿತಿದ್ದಾರೆ? ಯಾರಾದರೂ ಇವರನ್ನು ಬಂಧಿಸಿರಬಹುದು ಎಂದು ಯೋಚಿಸುತ್ತಿರಬಹುದು’ ಎಂದೆ. ಏನಾದರೂ ನಾವು ದೇವರ ದರ್ಶನಕ್ಕೆ ಎಂದು ಕಾದಿದ್ದೇವೆ ಎಂದು ಅದಕ್ಕೆ ತಿಳಿದಿದ್ದರೆ ಆಶ್ಚರ್ಯವನ್ನೂ ಪಡಬಹುದು. ಏಕೆಂದರೆ ಪ್ರಾಣಿ ಪಕ್ಷಗಳಿಗೆ ಯಾವ ದೇವರೂ ಇಲ್ಲ ಯಾವ ಭಕ್ತಿಯೂ ಇಲ್ಲ. ಆದರೂ ಅವು ಚಂದದ ಬದುಕನ್ನು ನಡೆಸುತ್ತಿವೆ ಯಾವ ದುರಾಸೆಯಿಲ್ಲದೆ.
ಯಾವ ಪ್ರಾಣಿ ಪಕ್ಷಿಗಳೂ ದೇವರನ್ನು ಸೃಷ್ಟಿಸಿಕೊಂಡಿಲ್ಲ, ದೇವರಿಗೆ ಭಕ್ತಿ ತೋರಿಲ್ಲ, ದೇವರಿಲ್ಲದೆ ತಮ್ಮ ಬದುಕಿಲ್ಲ ಎಂದುಕೊಂಡಿಲ್ಲ – ಮನುಷ್ಯ ಪ್ರಾಣಿಯ ಹೊರತಾಗಿ.
ಪ್ರಾಣಿ ಪಕ್ಷಿಗಳ ಬದುಕು ಪ್ರಕೃತಿಯ ಜೊತೆಗೆ ಜೊತೆಗೇ. ಮನುಷ್ಯ್ಯನಿಗೆ ಮಾತ್ರ ಯಾಕೆ ದೇವರು ಎಂದು ನನಗೆ ಇನ್ನೂ ಅರ್ಥವಾಗಿಲ್ಲ.
ಸುಮಾರು ಒಂದು ಗಂಟೆಗಳ ಕಾಲ ಕ್ಯೂನಲ್ಲಿ ಜರುಗಿದ ಮೇಲೆ ದೇವಸ್ಥಾನದ ಆವರಣಕ್ಕೆ ಬಂದಾಯ್ತು. ಅಲ್ಲಿನ ಕಲ್ಲು ಹಾಸು ನುಣುಪು. ಯಾವುದೋ ಕಾಲದಲ್ಲಿ ಚಪ್ಪಡಿ ಕಲ್ಲಿನ ಹಾಸನ್ನು ಹಾಸಿದ್ದು ಕೋಟ್ಯಂತರ ಜನರ ನಡೆಯಿಂದ ಅದು ನುಣುಪಾಗಿಬಿಟ್ಟಿದೆ.
ನಡೆದಷ್ಟೂ ನೆಲ ಸವೆದು ನುಣುಪು; ಮನುಷ್ಯ ನೊಂದಷ್ಟೂ ಹೊಳಪು.
ಅಂತೂ ಇಂತೂ ದೇವಸ್ಥಾನದ ಒಳಗೆ ಹೊಕ್ಕು ದೇವರನ್ನುಕಣ್ತುಂಬ ಕಂಡ ಮೇಲೆ ಆನಂದಕ್ಕೆ ಕಣ್ಣು ತುಂಬಿ ಕದಪುಗಳ ಮೇಲಿಂದ ಜಾರಿ ಸೀರೆಯ ಮೇಲೂ ನೀರು ಬಿತ್ತು. ಒದ್ದೆಯಾಗುವಷ್ಟು ಭಾವ ಉಕ್ಕಿತ್ತು. ಮನಸ್ಸು ತೃಪ್ತಿಯಾಗುವಷ್ಟು ನೋಡಿದ್ದಾಯಿತು. ಮನಸ್ಸು ಸಮಾಧಾನಗೊಂಡು ದೇವಸ್ಥಾನದ ಹೊಸ್ತಿಲು ದಾಟಿ ಹೊರಗೆ ಬರುವಾಗ ವ್ಯಕ್ತಿಯೊಬ್ಬರನ್ನು ಎತ್ತಿಕೊಂಡು ಹೋಗುತ್ತಿದ್ದು ಕಾಣಿಸಿತು. ಬಹುಶಃ ಸುಸ್ತಾಗಿ ಬಿದ್ದಿದ್ದರೋ ಕಾಯಿಲೆಯಿಂದ ಬಿದ್ದರೋ ಅಥವಾ ಸಾವೇ ಆಯಿತೋ ನನಗೆ ತಿಳಿಯಲಿಲ್ಲ. ಆದರೆ ಹೊತ್ತುಕೊಂಡು ಹೋಗುತ್ತಿದ್ದು ಮಾತ್ರ ಕಂಡಿತು.
ಸಾವು, ನೋವು, ಕಾಯಿಲೆ, ಸಂತೋಷ, ದುಃಖ ಇವು ಯಾವ ಜಾಗ ಎಂದು ನೋಡುವುದಿಲ್ಲ. ಇವು ಎಲ್ಲ ಕಡೆಯೂ ಸಲ್ಲುವಂಥದ್ದು.
ದರ್ಶನ ಮುಗಿಸಿ ಹುಂಡಿಗೆ ಕಾಣಿಕೆ ಹಾಕಲೆಂದು ಹೋದರೆ ಮೈಕೈ ಮಸಾಜ್ ಆಗುವಷ್ಟು ರಶ್ಶು. ಎಡಭಾಗದಿಂದ ಜನರ ಹಿಂದೆಯೇ ಹೋದರೂ ಹುಂಡಿಗೆ ಕಾಣಿಕೆ ಹಾಕಿ ವಾಪಸ್ ಬರುವಾಗ ಎದುರುಗಡೆಯಿಂದ ನಾವು ಬರುವ ಜಾಗದಲ್ಲೇ ಅನೇಕರು ಎದುರಿಗೆ ನುಗ್ಗಿ ಹುಂಡಿಗೆ ಹಣ ಹಾಕಲು ಬರುತ್ತಿದ್ದರು. ಆ ಪರಿ ಹೇಗಿತ್ತೆಂದರೆ ಪ್ರವಾಹಕ್ಕೆ ಎದುರಾಗಿ ಈಜುವಂತೆ. ಮದ ಗಜಗಳೆರಡು ಗುದ್ದಾಡಿದರೆ ಮಧ್ಯೆ ನಿಂತ ಮರಕ್ಕೆ ಕುತ್ತು ಎನ್ನುವ ಕಾವ್ಯದ ಮಾತುಗಳಂತೆ ಮಧ್ಯ ಸಿಕ್ಕಿಕೊಂಡವರ ಕಥೆ ಗೋವಿಂದ ಗೋವಿಂದ.
ದೇವರ ದರ್ಶನಕ್ಕೂ ಇಷ್ಟು ಕಷ್ಟವಾಗಿರಲಿಲ್ಲ. ಹುಂಡಿಗೆ ಕಾಣಿಕೆ ಹಾಕಿ ವಾಪಸ್ ಬಂದಾಗ ಹೋದ ಜೀವ ವಾಪಸ್ ಬಂದಂತೆ ಆಗಿತ್ತು.
ಅಲ್ಲಿಯೇ ಕೊಟ್ಟ ಚಿತ್ರಾನ್ನದ ಪ್ರಸಾದವನ್ನು ತಿಂದು ಕೈ ತೊಳೆದು ಲಡ್ಡು ಪ್ರಸಾದ ಕೊಂಡು ವಾಪಸ್ ಹೊರಟಾಗ ಬದುಕಿನ ಮತ್ತೊಂದು ಮಜಲಿನ ದರ್ಶನ ನೀಡಲೆಂದೇ ಭಗವಂತ ನಮಗೆ ಈ ಎಲ್ಲ ಘಟನೆಗಳನ್ನು ತೋರಿಸಿದ್ದು ಎನಿಸಿತು.
ಧರ್ಮ ದರ್ಶನ ಆಗಲೀ, ಮುನ್ನೂರು ರೂ ದರ್ಶನ ಆಗಲೀ, ಕಲ್ಯಾಣೋತ್ಸವ ಸೇವೆ ಆಗಲೀ, ವಿ ಐ ಪಿ ದರ್ಶನ ಆಗಿರಲಿ, ಭಿಕ್ಷುಕನಾಗಿರಲೀ ಅಥವಾ ಮಂತ್ರಿ ಮಹೋದಯರೇ ಆಗಿರಲಿ ಭಗವಂತ ಎಲ್ಲರಿಗೂ ಸಮಾನವಾಗಿಯೇ ಇರುತ್ತಾನೆ.
ಮಂತ್ರಿ ಬಂದರೆಂದು ಕಿರುನಗೆ ಬೀರುವುದಿಲ್ಲ, ಬಡವ ಎಂದು ಮೊಗ ತಿರುಗಿಸುವುದಿಲ್ಲ.
ಭಕ್ತಿ ಮಾರ್ಗವಾಗಿರಲಿ, ಯೋಗ ಮಾರ್ಗ ಆಗಿರಲಿ, ಹಠ ಮಾರ್ಗ ಆಗಿರಲಿ…
ದಾರಿ ಯಾವುದಾದರೂ ಅದು ತಲುಪುವುದು ಒಂದೇ ಗುರಿಯನ್ನು ಎಲ್ಲ ನದಿಗಳೂ ಸಾಗರವನ್ನೇ ಸೇರುವ ಹಾಗೆ.
ನಮ್ಮದು ಸರಿ ನಮ್ಮದು ಸರಿ ಎಂದು ಹುಂಬರು ಕಚ್ಚಾಡಬೇಕಷ್ಟೇ..
ನಮ್ಮ ಬದುಕಿನಲ್ಲಿ ನಡೆಯುವ ಅನೇಕ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಾವು ಎಲ್ಲಿ ಎಡುತ್ತಿದ್ದೇವೆ, ಎಲ್ಲಿ ಕಲಿಯಬೇಕು, ಏನು ಕಲಿಯಬೇಕು, ಹೇಗೆ ತಿದ್ದಿಕೊಳ್ಳಬೇಕು ಎಂದು ಅರ್ಥವಾಗುತ್ತದೆ.
ಕೆಲವು ಘಟನೆಗಳು ನಮ್ಮ ಬದುಕಿನಲ್ಲಿ ಘಟಿಸಿ ನಮಗೆ ಅನುಭವ ಮತ್ತು ಪಾಠವನ್ನು ಕಲಿಸಿದರೆ, ಮತ್ತೆ ಕೆಲವು ದೃಗ್ಗೋಚರವಾಗಿ ಮತ್ತೆ ಕೆಲವು ಕಿವಿಗೆ ಗೋಚರವಾಗಿ ನಾವು ಕಲಿಯಲಿ ಎಂದು ಸೂಚಿಸುತ್ತವೆ.
ಕಲಿತರೆ ಸಣ್ಣ ಉಳಿ ಪೆಟ್ಟುಗಳಿಂದ ಕಲ್ಲು ಒಳ್ಳೆಯ ಮೂರ್ತಿಯಾದಂತೆ ನಾವು ನಮ್ಮನ್ನು ಕಡೆದುಕೊಳ್ಳುತ್ತಾ ಒಳ್ಳೆಯ ಶಿಲ್ಪವಾಗುವಂತ ಹೆಜ್ಜೆ ಹಾಕುತ್ತೀವಿ. ಇಲ್ಲವಾದರೆ ಅವು ಸರಿಯಾದ ಪೆಟ್ಟಾಗದೆ ಶಿಲ್ಪ ಅಲ್ಲಲ್ಲಿ ಒಡೆದು ವಿಕೃತವಾಗುವಂತೆ ನಮ್ಮ ಬದುಕು ಆಗುತ್ತದೆ. ಅಹಮಿಕೆಯಿಂದ ನಾ ಜಗ್ಗಲಾರೆ ಎಂದು ಕಲ್ಲು ಸೆಟೆದುನಿಂತರೆ ಡೈನಮೇಟ್ ಸಿಡಿಸಿ ಚೂರು ಚೂರಾಗಿಸುತ್ತಾರೆ.
ಸಿಡಿದು ಚೂರಾಗಿ ಬಿಸಿ ಟಾರಿನ ಜೊತೆಗೂಡಿ ನೆಲಕ್ಕೆ ಸೇರಬೇಕೋ, ಅಲ್ಲಲ್ಲಿ ಬಿರುಕು ಮೂಡಿ ಯಾವುದಕ್ಕೂ ಬೇಡದ ಹಾಗೆ ಗಾಳಿ ಮಳೆ ಚಳಿಗೆ ಮೈಯೊಡ್ಡಿ ಒಂಟಿಯಾಗಬೇಕೋ, ಒಳ್ಳೆಯ ಮೂರ್ತಿಯಾಗಿ ಅನೇಕರಿಗೆ ಸಂತೋಷವನ್ನು ನೀಡುವಂತಾಗಬೇಕೋ ಆಯ್ಕೆ ನಮ್ಮದು.

-ಡಾ.ಶುಭಶ್ರೀಪ್ರಸಾದ್, ಮಂಡ್ಯ.








