ಅಂಧೋನಿ ಎಂಬ ಅಡವಿಯಲ್ಲಿ ಒಂದು ಬಲಿಷ್ಠ ಆನೆ ಇತ್ತು.ಅದರ ಭಾರಿ ಗಾತ್ರ
ಪುಂಡಾಟಿಕೆ ಕಂಡ ,ಕಾಡಿನ ಇತರೆ ಪ್ರಾಣಿಗಳು , ಅದು ಎದುರಾದರೆ ಸಾಕು ಎಲ್ಲೆಂದರಲ್ಲಿ ಅವಿತು ಕೊಳ್ಳುತ್ತಿದ್ದವು. ಅದೊಂದು ದಿನ ಎಲ್ಲ ಪ್ರಾಣಿಗಳು ಸೇರಿ ಗುಟ್ಟಾಗಿ ಸಭೆ ಮಾಡುತ್ತಿದ್ದವು.ಅದರ ಅಧ್ಯಕ್ಷತೆ ಕರಡಿ ಮಾಮ ವಹಿಸಿದ್ದ. ಆ ಸಭೆಯಲ್ಲಿ ಪುಂಡಾಟ ಮಾಡುತ್ತಿದ್ದ ಆ ಆನೆಯ ಕುರಿತೇ ಹೆಚ್ಚಿನ ಅಂಶ ಚರ್ಚೆ ಆಗುತ್ತಿತ್ತು.
ಈ ಪ್ರಾಣಿಗಳು ಸಭೆ ನಡೆಸುತ್ತಿದ್ದಾಗ ಅವುಗಳಿಗೆ ಗೊತ್ತಾಗದಂತೆ ಆ ಆನೆ ಪಕ್ಕದ ಗಿಡ ಗಂಟಿಗಳಲ್ಲಿ ಅವಿತು ನಿಂತು ಎಲ್ಲವನ್ನೂ ಆಲಿಸುತ್ತಿತ್ತು.ಸಭೆ ಇನ್ನೇನು ಮುಗಿಯುತ್ತ ಬಂದಿದೆ ಎಂದಾಗ ನರಿ,ತೋಳ,ಮೊಲ, ಚಿರತೆ, ಕಾಡು ಹಂದಿ ಮುಂತಾದವುಗಳು ಎದ್ದು ನಿಂತು,”ಆ ಆನೆಯ ಉಪಟಳದಿಂದಾಗಿ ಕಾಡಿನಲ್ಲಿ ನಮಗೆ ಆರಾಮಾಗಿ ಓಡಾಡಲು ಆಗದಂತಾಗಿದೆ”ಎಂದಾಗ ನರಿ-“ಒಮ್ಮೆ ಅದರ ಸೊಕ್ಕು ಇಳಿಸಿ ಸೋಲಿಸಿದರೆ ಅದಕ್ಕೆ ಬುದ್ಧಿ ಬರುತ್ತದೆ”ಎಂದು ಹೇಳಿತು.ಆಗ ಕರಡಿ ಮಾಮ “ನೀ ಹೇಳುವುದೇನೋ ಸರಿ,ಒಪ್ಪುತ್ತೇನೆ.. ಆದರೆ ವಿರುದ್ಧ ಪಂಥಕ್ಕೆ ಯಾರನ್ನು ನಿಲ್ಲಿಸುವಿ? ಒಂದು ವೇಳೆ ಹಾಗಾದರೆ ಆ ಆನೆಯನ್ನು ಪಂಥಕ್ಕೆ ಆಹ್ವಾನಿಸುವುದು ಯಾರು?
ವಿವರಿಸುವೆಯಾ?”ಎಂದು ಕೇಳಿತು. ಮುಂದುವರೆದ ನರಿ ,ಗಂಟಲು ಸರಿಪಡಿಸಿಕೊಂಡು”ನಾನೇ ಅದಕ್ಕೆ ಆಹ್ವಾನ ನೀಡುವೆ “ಎಂದು ಹೇಳಿ ಮುಗಿಸುವಷ್ಟರಲ್ಲಿ , ಅವಿತು ಕೊಂಡಿದ್ದ ಆನೆ ಕೋಪದಿಂದ ತನ್ನ ಸೊಂಡಿಲು ಅಲ್ಲಾಡಿಸುತ್ತ ಅಲ್ಲಿಗೆ ಬಂದು”ಏನಯ್ಯಾ…ನನ್ನನ್ನೇ ಸೋಲಿಸುವ ಉಪಾಯ ಹೇಳುತ್ತಿದ್ದಿಯಾ? ಈ ಕಾಡಲ್ಲಿ ನನ್ನನ್ನು ಸೋಲಿಸುವ ಧೈರ್ಯ ಶಾಲಿ ಯಾರೀದ್ದಾರೆ ತೋರಿಸು, ಆ ಪಂಥ ದಲ್ಲಿ ಒಂದು ಪಕ್ಷ ನಾನೇನಾದರೂ ಸೋತು ಹೋದರೆ,ಕಾಯಂ ಆಗಿ ನಾನು ಈ ಅಡವಿ ಬಿಟ್ಟು ಬೇರೆ ಕಡೆಗೆ ಹೋಗುವೆ, ನಾನು ಗೆದ್ದರೆ ಇಲ್ಲಿರುವ ಒಬ್ಬೋಬ್ಬರನ್ನೂ ಹೊಸಕಿ ಹಾಕುವೆ”ಎಂದಿತು.
ಆಗ ನರಿ ನಿನ್ನನ್ನು ಸೋಲಿಸುವವರು ಇದೇ ಕಾಡಲ್ಲಿ ಇದ್ದಾರೆ.ನಮ್ಮ ಈ ಸವಾಲನ್ನು ಎದುರಿಸುವುದಾದರೆ ನಾಳೆ ಬೆಳಿಗ್ಗೆ ನೀನು ಇದೇ ಕಾಡಿನ ಅಂಚಿನಲ್ಲಿ ಇರುವ ತೊರೆಯ ದಡದ ಮಾವಿನ ಮರದ ಹತ್ತಿರ ಬಂದರೆ ಸಾಕು ನಿನಗೇ ತಿಳಿಯುತ್ತೆ”ಎಂದಾಗ ಆನೆ “ಆಗಲಿ ನೋಡೇ ಬಿಡುವೆ..”ಎನ್ನುತ್ತ ಬಾಲ ಅಲ್ಲಾಡಿಸುತ್ತ ಹೊರಟು ಹೋಯಿತು. ಆನೆ ಅಷ್ಟು ದೂರ ಹೋಗಿರುವುದನ್ನು ಖಚಿತಪಡಿಸಿಕೊಂಡ ನರಿ ,ಅಲ್ಲಿದ್ದ ಮಂಗಗಳ ಗುಂಪಿನ ನಾಯಕನಿಗೆ”ನೋಡು.. ನಾಳೆ ಬೆಳಿಗ್ಗೆ ನಾನು ಈಗ ಹೇಳಿದೆನಲ್ಲಾ ನೀನು ನಿನ್ನ ಸಂಗಡಿಗರೊಂದಿಗೆ ಬಂದು ಆ ಮಾವಿನ ಮರದ ಪ್ರತಿ ಕೊಂಬೆಯಲ್ಲೂ ಅವಿತು ಕೊಳ್ಳಲು ತಿಳಿಸು…ಆ ದುಷ್ಟ ಆನೆ ಅಲ್ಲಿಗೆ ಬಂದ ನಂತರ ನಾನು ಕತ್ತೆತ್ತಿ ನಿನಗೆ ಸಂಜ್ಞೆ ಮಾಡುವೆ ಆಗ ನೀನು ನಿನ್ನ ಸಂಗಡಿಗರೊಂದಿಗೆ ಸೇರಿ ಅಲ್ಲಿರುವ ಕೆಂದಿರುವೆ ಗೂಡು ಇರುವ ಕೊಂಬೆಯನ್ನು ಜೋರಾಗಿ ಅಲ್ಲಾಡಿಸು ಸಾಕು… ಮಿಕ್ಕಿದ್ದು ಅಲ್ಲಿಯೇ ನೋಡು”ಎಂದು ಹೇಳಿತು.ಮಂಗಗಳ ನಾಯಕ “ಆಯ್ತು “ಎಂದು ತಲೆ ಅಲ್ಲಾಡಿಸಿತು.
ಮರುದಿನ ಬೆಳಿಗ್ಗೆ ಆನೆ ಆ ಮಾವಿನ ಮರದ ಕೆಳಗೆ ಬರುವ ಮೊದಲೇ ಮಂಗಗಳು ಬಂದು ಮರದ ಕೊಂಬೆ ಹಿಂದೆ ಅವಿತು ಕುಳಿತಿದ್ದವು.ಆನೆ ಬಂದು ನಿಂತಾಗ ಸೊಕ್ಕಿನಿಂದ ನರಿಗೆ “ಏಯ್ ಎಲ್ಲಿದೆ ನನ್ನನ್ನು ಸೋಲಿಸುವ ಪ್ರಾಣಿ! “ಎಂದಾಗ ನರಿ ಪೂರ್ವ ಯೋಜನೆಯಂತೆ ತನ್ನ ತಲೆ ಎತ್ತಿ ಮರದ ಮೇಲಿದ್ದ ಮಂಗಗಳ ನಾಯಕನಿಗೆ ಸಂಜ್ಞೆ ಮಾಡಿದ್ದೇ ತಡ ಅದು ತನ್ನ ಸಂಗಡಿಗರೊಂದಿಗೆ ಸೇರಿ ಕೆಂದಿರುವೆ ಇರುವ ಕೊಂಬೆಗಳನ್ನು ಜೋರಾಗಿ ಅಲ್ಲಾಡಿಸಿ ತೊಡಗಿತು.ಕ್ಷಣಾರ್ಧದಲ್ಲಿ ಸಹಸ್ರಾರು ಕೆಂದಿರವೆಗಳ ಗುಂಪು ಆ ಆನೆಯ ಬೆನ್ನಿನ ಮೇಲೆ, ದಪ್ಪ ಹೊಟ್ಟೆ ಮೇಲೆ,ಇಷ್ಟಗಲ ಕಿವಿ ಗಳ ಮೇಲೆ,ಕಣ್ಣಿನ ಮೇಲೆ, ಮತ್ತೆ ಕೆಲವು ಸೊಂಡಿಲಿನೊಳಗೆ ಸೇರಿ ಮನಬಂದಂತೆ ಅದಕ್ಕೆ ಕಚ್ಚತೊಡಗಿದವು.
ಆನೆ ತನ್ನ ಮೊಂಡು ಬಾಲ ಅತ್ತಿತ್ತ ಅಲ್ಲಾಡಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಿ ಸೊಂಡಿಲೊಳಗೆ ಕಿವಿ ಯೊಳಗೆ ಸೇರಿದ ನೂರೆಂಟು ಇರುವೆಗಳ ಕಚ್ಚುವಿಕೆ ತಾಳದೇ ನೋವಿನಿಂದ ಆ “ಆನೆ ಅಯ್ಯೋ ಉರೀ.ಉರೀ..”ಎನ್ನುತ್ತ “ಧೊಪ್ಪ”ಎಂದು ಕೆಳಗೆ ಉರುಳಿ ಬಿದ್ದಿತು.ಇದನ್ನೇ ಕಾಯುತ್ತಿದ್ದ ನರಿ ಓಡೊಡಿ ಅಲ್ಲಿಗೆ ಬಂದು “ಗೊತ್ತಾಯ್ತಾ..ನೀನೇ ಬಲಶಾಲಿ ಎಂದು ಜಂಬ ಮಾಡುತ್ತಿದ್ದೆ ನೋಡು ಈಗ ನಿನಗಿಂತ ಎಷ್ಟೋ ಪಾಲು ಪುಟ್ಟ ಇರುವ ಇರುವೆಗಳು ನಿನ್ನನ್ನು ಸೋಲಿಸಿ ಬಿಟ್ಟವಲ್ಲ…”ಎಂದು ಹೇಳಲಾರಂಭಿಸಿದಾಗ ಆ ಒಂದು ನೋವಿನಲ್ಲೂ ಆ ಆನೆ “ನಿಜ ಈ ಪಂಥ ದಲ್ಲಿ ನಾನು ಸೋತೆ,.. ಮಾತಿನಂತೆ ನಾನು ಈಗಲೇ ಈ ಅಡವಿ ಬಿಟ್ಟು ಬೇರೆ ಅಡವಿಗೆ ಹೋಗುವೆ”ಎಂದು ನಿಧಾನವಾಗಿ ಎದ್ದು ಹೊರಟು ಹೋಯಿತು.ಆಗ ಮರದ ಮೇಲಿದ್ದ ಮಂಗಗಳು ಸರಸರನೆ ಕೆಳಗಿಳಿದು ಬಂದು ನರಿಯೊಂದಿಗೆ ಸೇರಿ ಖುಷಿಯಿಂದ ಕೇ ಕೇ ಹಾಕುತ್ತ ಕುಣಿಯಡಗಿದವು.

ಅರವಿಂದ.ಜಿ.ಜೋಷಿ.
ಮೈಸೂರು.