2026ರ ಮೊದಲ ಸೂರ್ಯಗ್ರಹಣ ಫೆಬ್ರವರಿ 17ರಂದು ಸಂಭವಿಸಲಿದೆ. ಇದು ಕಂಕೀಯ (ಆನ್ಯುಲಾರ್) ಸೂರ್ಯಗ್ರಹಣವಾಗಿದ್ದು, ‘ರಿಂಗ್ ಆಫ್ ಫೈರ್’ ಎಂದು ಕರೆಯಲಾಗುತ್ತದೆ. ಈ ಸಂದರ್ಭ ಚಂದ್ರನು ಸೂರ್ಯನ ಹೆಚ್ಚಿನ ಭಾಗವನ್ನು ಆವರಿಸಿದರೂ, ಸೂರ್ಯನ ಅಂಚು ಉಂಗುರದಂತೆ ಪ್ರಕಾಶಮಾನವಾಗಿ ಗೋಚರಿಸುತ್ತದೆ.
ಈ ಅಪರೂಪದ ರಿಂಗ್ ಪರಿಣಾಮ ಭಾರತದಲ್ಲಿ ಕಾಣಿಸದು. ಆನ್ಯುಲಾರ್ ಹಂತವು ಮುಖ್ಯವಾಗಿ ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಸಾಗರದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ. ಅಂಟಾರ್ಕ್ಟಿಕಾದ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಲ್ಲಿ ಅತ್ಯುತ್ತಮ ವೀಕ್ಷಣಾ ಪರಿಸ್ಥಿತಿಗಳು ಲಭ್ಯವಾಗುವ ಸಾಧ್ಯತೆ ಇದೆ.
ದಕ್ಷಿಣ ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಕೆಲವು ಪ್ರದೇಶಗಳನ್ನು ಒಳಗೊಂಡಂತೆ ದಕ್ಷಿಣ ಗೋಳಾರ್ಧದ ಇತರ ಭಾಗಗಳಲ್ಲಿ ಭಾಗಶಃ ಸೂರ್ಯಗ್ರಹಣ ಮಾತ್ರ ಗೋಚರಿಸುತ್ತದೆ.
ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋಗುವಾಗ, ಆಕಾಶದಲ್ಲಿ ಸೂರ್ಯನಿಗಿಂತ ಸ್ವಲ್ಪ ಚಿಕ್ಕದಾಗಿ ಕಾಣಿಸುವುದರಿಂದ ಸಂಪೂರ್ಣವಾಗಿ ಸೂರ್ಯನನ್ನು ಆವರಿಸಲಾಗುವುದಿಲ್ಲ. ಇದರಿಂದ ಚಂದ್ರನ ಸುತ್ತಲೂ ಪ್ರಕಾಶಮಾನವಾದ ಉಂಗುರದಾಕಾರದ ಬೆಳಕು ಕಾಣುತ್ತದೆ.
ಕೇಂದ್ರ ಮಾರ್ಗದ ಸಣ್ಣ ಪಟ್ಟಿಯಲ್ಲಿ ಸೂರ್ಯನ ಸುಮಾರು 96 ಶೇಕಡಾ ಭಾಗವನ್ನು ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಆವರಿಸಲಾಗುತ್ತದೆ. ಸಂಪೂರ್ಣ ಗ್ರಹಣದಂತೆ ಹಗಲು ಕತ್ತಲೆಯಾಗುವುದಿಲ್ಲ; ಆದರೆ ಬೆಳಕು ಮಂದವಾಗಿ ಕಾಣಿಸಿ, ನೆರಳುಗಳು ಹೆಚ್ಚು ಸ್ಪಷ್ಟವಾಗಿ ಗೋಚರಿಸುತ್ತವೆ.
‘ರಿಂಗ್ ಆಫ್ ಫೈರ್’ ಮುಖ್ಯವಾಗಿ ಅಂಟಾರ್ಕ್ಟಿಕಾ ಪ್ರದೇಶ ಮತ್ತು ಅದರ ಸುತ್ತಲಿನ ದಕ್ಷಿಣ ಸಾಗರ ಪ್ರದೇಶಗಳಲ್ಲಿ ಮಾತ್ರ ಸ್ಪಷ್ಟವಾಗಿ ಕಾಣಿಸಲಿದೆ.








