ಸೆಪ್ಟೆಂಬರ್ ಐದು ಎಂದರೆ ಥಟ್ಟನೆ ನೆನಪಿಗೆ ಬರುವುದು ಶಿಕ್ಷಕರ ದಿನವೆಂದು… 1962 ರಲ್ಲಿ ಭಾರತದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನ ಸೆಪ್ಟೆಂಬರ್ ಐದುರಂದು ಅವರ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಜನ್ಮದಿನವನ್ನು ಆಚರಿಸಿ ಎಂದು ಕೇಳಿಕೊಂಡಾಗ ರಾಧಾಕೃಷ್ಣನ್ ಅವರು ನನ್ನ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದರು.
ಅಂದಿನಿಂದ ಸೆಪ್ಟೆಂಬರ್ ಐದುರಂದು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ.
1831 ರಿಂದ 1897 ರ ಅವಧಿಯಲ್ಲಿ ಭಾರತದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಕಿರುಪರಿಚಯ. ಸಾವಿತ್ರಿಬಾಯಿ ಫುಲೆ ಅವರು 1831 ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನೈಗಾಂನ್ ನಲ್ಲಿ ಹುಟ್ಟಿದರು. ಸಾವಿತ್ರಿಬಾಯಿ ಫುಲೆ ಅವರ ತಂದೆ ನೇವಸೆ ಪಾಟೀಲ್ .ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆ ಅವರನ್ನು ಮದುವೆಯಾದರು.
ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಅವರ ತಂದೆತಾಯಿಯ ಪ್ರೋತ್ಸಾಹ , ಗಂಡನಿಗೆ ಹೆಂಡತಿಯ ಪ್ರೋತ್ಸಾಹ, ಹೆಂಡತಿಗೆ ಗಂಡನ ಪ್ರೋತ್ಸಾಹ ಸಿಕ್ಕಿದ್ದರೆ ಯಾರಾದರೂ ಗುರಿ ಮುಟ್ಟಿ ಯಶಸ್ಸನ್ನು ಗಳಿಸಬಹುದು ಎನ್ನುವುದಕ್ಕೆ ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾಫುಲೆ ಅವರುಗಳೆ ಒಂದು ನಿದರ್ಶನ…
ಬಾಲ್ಯವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಜ್ಯೋತಿಬಾ ಫುಲೆ ಅವರು ಸಾವಿತ್ರಿಬಾಯಿ ಅವರನ್ನು ಮದುವೆಯಾದಾಗ ಸಾವಿತ್ರಿಯವರಿಗೆ ಎಂಟು ವರ್ಷ ವಯಸ್ಸಾಗಿತ್ತು. ಜ್ಯೋತಿಬಾ ಫುಲೆ ಅವರಿಗೆ ಹನ್ನೆರಡು ವರ್ಷವಾಗಿತ್ತು.
ಸಾವಿತ್ರಿಬಾಯಿ ಫುಲೆ ಅವರಿಗೆ ಮನೆಯೇ ಮೊದಲ ಪಾಠಶಾಲೆ. ಪತಿ ಜ್ಯೋತಿಬಾ ಫುಲೆ ಅವರೇ ಮೊದಲ ಗುರುಗಳು. ನಂತರ 1847 ರಲ್ಲಿ ಸಾವಿತ್ರಿಬಾಯಿ ಫುಲೆ ಅವರು ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕರ ತರಬೇತಿ ಪಡೆದರು. ಆಗ ಅವರಿಗೆ 17 ವರ್ಷ ವಯಸ್ಸಾಗಿತ್ತು. ಹೀಗಾಗಿ ಮಹಾರಾಷ್ಟ್ರದಲ್ಲಿ ತರಬೇತಿ ಆದ ಮೊದಲ ಶಿಕ್ಷಕಿಯಾಗಿದ್ದರು.
ಆ ಕಾಲದಲ್ಲಿ ಸ್ತ್ರೀಯರು ಯಾವುದೇ ವೃತ್ತಿಯನ್ನು ಮಾಡಿದರೆ ಸಾಮಾಜಕ್ಕೂ, ಧರ್ಮಕ್ಕೂ ದ್ರೋಹ ಬಗೆದಂತೆ ಎಂದು ಜನರು ತಿಳಿದುಕೊಂಡಿದ್ದರು.ಇಂತಹ ಪರಿಸ್ಥಿತಿಯಲ್ಲಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯಲ್ಲಿ ಪ್ರಧಾನ ಶಿಕ್ಷಕಿಯಾದರು.
ಶಿಕ್ಷಕಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಭಿಸಿದ ಸಾವಿತ್ರಿಬಾಯಿ ಫುಲೆ ಅವರು ಶಾಲೆಗೆ ಹೊರಟು ಹೋಗುವಾಗ ದಾರಿಯಲ್ಲಿ ಜನರು ಇವರನ್ನು ಸಾಮಾಜಕ್ಕೆ, ಧರ್ಮಕ್ಕೆ ದ್ರೋಹ ಮಾಡುತ್ತಿರುವರೆಂದು ತಿಳಿದುಕೊಂಡು ಕೆಲವರು ಕೇಕೆ ಹಾಕಿ ನಗುತ್ತಾ ಅವರ ಮೇಲೆ ಸಗಣಿನೀರು,ಕೆಸರು ಎರಚಿ ಕಲ್ಲನ್ನು ಎಸೆಯುತ್ತಿದ್ದರು.
ಇದ್ಯಾವುದಕ್ಕೂ ಜಗ್ಗದೆ ಸಾವಿತ್ರಿಬಾಯಿ ಫುಲೆ ಅವರು ದೈರ್ಯವಾಗಿರುತ್ತಿದ್ದರು. ಪ್ರತಿನಿತ್ಯವೂ ತಮ್ಮ ಬ್ಲಾಗಿನಲ್ಲಿ ಇನ್ನೊಂದು ಸೀರೆಯನಿಟ್ಟುಕೊಂಡು ಹೋಗುತ್ತಿದ್ದರು. ಎಷ್ಟೆ ಕಲ್ಲು,ಕೆಸರು ಸಗಣಿನೀರು ಎರಚಿದರು ಶಾಲೆಗೆ ಹೋಗಿ ಮಕ್ಕಳು ಬರುವುದರೊಳಗೆ ಬಟ್ಟೆಯನ್ನು ಬದಲಾಯಿಸಿಕೊಂಡು ಪಾಠಮಾಡಲು ಸಿದ್ಧವಾಗಿರುತ್ತಿದ್ದರು.
ಉಳ್ಳವರು ಶಿವಾಲಯ ಮಾಡುವರು ನಾನೇನು ಮಾಡಲಿ ಬಡವನಯ್ಯ ಬಸವಣ್ಣನವರ ವಚನದಂತೆ ಶ್ರೀಮಂತರಿಗಷ್ಟೆ ವಿದ್ಯಾಭ್ಯಾಸ ಬಡವರಿಗೆ ನಿಲುಕದ ನಕ್ಷತ್ರದಂತೆ ಇದ್ದ ಕಾಲವದು.ಇಂತಹ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಸಿಗಬೇಕೆಂಬ ಆಸೆಯನ್ನು ಹೊತ್ತು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು 1848 ರಿಂದ 1852 ರ ಅವಧಿಯಲ್ಲಿ 18 ಪಾಠಶಾಲೆಗಳನ್ನು ತೆರೆದರು.
ಎಲ್ಲಾ ಶಾಲೆಗಳ ಜವಾಬ್ದಾರಿ ಸಾವಿತ್ರಿಬಾಯಿ ಅವರ ಮೇಲಿತ್ತು. ಅದನ್ನು ಅಚ್ಚುಕಟ್ಟಾಗಿ ಮಾಡುವುದರ ಜೊತೆಗೆ ಪತಿ ಜ್ಯೋತಿಬಾ ಫುಲೆ ಅವರಿಗೆ ನೆರವಾದರು.ಇವರ ಸಾಧನೆಯನ್ನು ಗುರುತಿಸಿದ ಅಂದಿನ ಬ್ರಿಟಿಷ್ ಸರ್ಕಾರ ಅವರಿಗೆ ಮೆಚ್ಚುಗೆ ಸೂಚಿಸಿದರು.
ಇಂದು ಭಾರತದ ಮಹಿಳೆಯರು ಸಾಮಾಜದಲ್ಲಿರುವ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡುವುದರ ಸಮಾನತೆಯ ಹಕ್ಕಿಗೆ ಕಾರಣವಾದವರು ಮಾತೆ ಸಾವಿತ್ರಿಬಾಯಿ ಫುಲೆ ಅವರು.
ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ.
ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ , ಬ್ರಿಟಿಷ್ ಸರಕಾರ ಇವರಿಗೆ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಬಿರುದು ಕೂಡ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ – ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.
ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ,ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆ ಅವರು . ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು.
ಮಹಿಳೆಯರಿಗೊಸ್ಕರ ಇಲ್ಲಿಂದ ಆರಂಭವಾದ ಶಿಕ್ಷಣ ನಿಂತ ನೀರಾಗದೆ ಹರಿಯುತ್ತಿರುವುದೇ ವಿಶೇಷ…
ಒಬ್ಬ ಶಿಕ್ಷಕನಿಗೆ ನೂರಾರು ಜನ ವಿದ್ಯಾರ್ಥಿಗಳು ಇರುತ್ತಾರೆ. ಎಲ್ಲರಿಗೂ ಒಂದೇ ರೀತಿಯಲ್ಲಿ ಪಾಠ ಮಾಡುತ್ತಾರೆ.. ಅಷ್ಟು ಜನರಲ್ಲಿ ಅವರಿಗೆ ಅಚ್ಚುಮೆಚ್ಚಾಗಿರುವ ವಿದ್ಯಾರ್ಥಿಗಳು ಅಷ್ಟೇ ಅವರಿಗೆ ನೆನಪಿರುತ್ತಾರೆ. ಯಾವಾಗಲಾದರೂ ಒಮ್ಮೆ ಒಬ್ಬ ಶಿಷ್ಯ ಬಂದು ಗುರುವನ್ನು ಚೆನ್ನಾಗಿ ಮಾತನಾಡಿಸಿದರೆ ಆ ಗುರುವಿಗೆ ಆಗುವ ಖುಷಿ ಅಷ್ಟಿಷ್ಟಲ್ಲ.. ಅಂತಹ ಶ್ರೇಷ್ಠ ವೃತ್ತಿ ಶಿಕ್ಷಕರದು…
ನಮ್ಮ ಭಾರತದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೊದಲ ಮಹಿಳಾ ಸಾಧಕಿಯರು ಆನೇಕ ಜನರಿದ್ದಾರೆ. ಉದಾಹರಣೆಗೆ ಲೀಲಾ ಸೇಠ್ ಮೊದಲ ಮಹಿಳಾ ನ್ಯಾಯಧೀಶೆ, ಭಾರತದ ಮೊದಲ ಮಹಿಳಾ ರಾಜ್ಯಪಾಲರಾದ ಸರೋಜಿನಿ ನಾಯ್ಡು ಇವರು ಕವಯಿತ್ರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿಯು ಆಗಿದ್ದರು. ಮೊದಲ ಐಪಿಎಸ್ ಅಧಿಕಾರಿ ಕಿರಣ್ ಬೇಡಿ, ಆಶಾ ಸಿನ್ಹಾ ಅವರು 1982 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಮಜಗಾನ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್‌ನಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಮೊದಲ ಮಹಿಳಾ ಕಮಾಂಡೆಂಟ್ ಆಗಿದ್ದರು. ಸರಳಾ ಥುಕ್ರಲ್ ಅವರು ಭಾರತದ ಮೊದಲ ಪೈಲಟ್ ಆಗಿದ್ದರು.
ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರು ತಾವು ವಿದ್ಯೆ ಕಲಿತರು ಸಾಮಾಜಕ್ಕಾಗಿ ಆನೇಕ ಸೇವೆಗಳನ್ನು ಮಾಡಿದರು. ಅಬ್ದುಲ್ ಕಲಾಂ ಅವರು, ಸರ್ವಪಲ್ಲಿ ರಾಧಾಕೃಷ್ಣನ್, ಇವರಂತೆ ಅನೇಕರು ಜನರು ಇದ್ದಾರೆ.
ನಮ್ಮ ಕರುನಾಡಿನ ಸುಧಾ ಮೂರ್ತಿ ಅವರನ್ನು ನೋಡಿ ಕಲಿಯುವುದು ಸಾಕಷ್ಟಿದೆ. ಅವರು ಇಂಜಿನಿಯರಿಂಗ್ ಓದುತ್ತಿದ್ದಾಗಲು ಅಷ್ಟೆ ಹುಡುಗಿಯಾಗಿ ಅವರೊಬ್ಬರೆ ಕಾಲೇಜಿನಲ್ಲಿ ಇದ್ದದ್ದು ಅಂತ ಎಷ್ಟೊಂದು ಬಾರಿ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಓದಿ ಸಾಧನೆ ಮಾಡುವುದರ ಜೊತೆಗೆ ಸಾಮಾಜಕ್ಕೂ ಒಳಿತನ್ನು ಮಾಡುತ್ತಿದ್ದಾರೆ. ಸರಳತೆಗೆ ಉದಾಹರಣೆ ಸುಧಾ ಮೂರ್ತಿ ಅವರು.
ಆಗ ಊರಿಗೊಂದು ಶಾಲೆಗಳು ಇರಲಿಲ್ಲ. ಹೋಬಳಿಯಲ್ಲಿ ಅಥವಾ ತಾಲ್ಲೂಕು ಕೇಂದ್ರಗಳಲ್ಲಿ ಶಾಲೆಗಳು ಇರುತ್ತಿದ್ದವು. ಹೋಗಲು ಸರಿಯಾಗಿ ಬಸ್ ಗಳು ಇರುತ್ತಿರಲಿಲ್ಲ. ಊರುಗಳಲ್ಲಿ ಅರಳಿಮರದ ಕೆಳಗೋ ಅಥವಾ ದೇವಸ್ಥಾನದ ಜಗುಲಿಕಟ್ಟೆಯ ಮೇಲೆ ದೂರದ ಊರಿನಿಂದ ಬಂದ ಶಿಕ್ಷಕರು ಪಾಠ ಮಾಡುತ್ತಿದ್ದರು. ಆಗ ಅವರಿಗೆ ಸಂಬಳ ನೂರು ರೂಪಾಯಿಯೇ ಜಾಸ್ತಿ.ಅಷ್ಟಕ್ಕೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು.ಈಗಲಾದರೂ ಸಂಬಳ ಜಾಸ್ತಿ…
ಇಂತವರೆಲ್ಲಾ ವಿದ್ಯಾವಂತರಾದರೂ ಸಾಮಾಜದ ಒಳಿತಿಗಾಗಿ ಏನೇನೋ ಸಹಾಯ ಮಾಡುತ್ತಾರೆ…ಆದರೆ ಎಲ್ಲದಕ್ಕಿಂತ ಮುಂಚೆ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು.ತಂದೆತಾಯಿ ಮಕ್ಕಳಿಗೊಸ್ಕರ ಹಗಲಿರುಳು ದುಡಿದು ಅವರಿಗೆ ಕಷ್ಟವಾದರೂ ಮಕ್ಕಳಿಗೆ ಕಷ್ಟವಾಗಬಾರದೆಂದು ತಿಳಿದುಕೊಂಡು ಅವರಿಗೆ ಶಿಕ್ಷಣ
ಕೊಡಿಸುತ್ತಾರೆ..
ಆದರೆ ರೆಕ್ಕೆ ಬಲಿತ ಹಕ್ಕಿ ತಾಯಿಯನ್ನೇ ಮರೆತು ಹಾರಿಹೋದಂತೆ ಮಕ್ಕಳು ವಿದ್ಯಾಭ್ಯಾಸ ಕಲಿತು ನೌಕರಿ ಸೇರಿಕೊಂಡರೆ ತಂದೆತಾಯಿಯನ್ನೆ ಮರೆಯುತ್ತಿದ್ದಾರೆ. ತಂದೆತಾಯಿ ಜೀವನದುದ್ದಕ್ಕೂ ಮಕ್ಕಳ ಏಳಿಗೆಗಾಗಿ ಶ್ರಮಿಸುವರು.ಅದನ್ನು ನೆನೆಯದೆ ನಡು ನೀರಿನಲ್ಲಿ ಕೈ ಬಿಟ್ಟು ಹೋದಂತೆ ಹೋಗುವುದು ವಿಷಾದನೀಯ. ಅವರ ಆರೋಗ್ಯ ಸರಿ ಇಲ್ಲದಿದ್ದಾಗ ಅವರಿಗೆ ದುಡ್ಡಿನ ಆವಶ್ಯಕತೆ ಇದ್ದು ,ದುಡ್ಡು ಅವರ ಬಳಿ ಇಲ್ಲದೆ ಹೋದಾಗ ಕೆಲವು ಮಕ್ಕಳು ಅವರಿಗೆ ದುಡ್ಡು ಕೊಡುವುದು ಇರಲಿ ಬಂದು ಸಹ ಆರೈಕೆ ಮಾಡದಿರುವುದು ಇನ್ನೂ ವಿಷಾದನೀಯ ಸಂಗತಿ..
ನಾವು ಸಮಾಜಕ್ಕೆ ಏನು ಮಾಡುತ್ತೇವೆ ಎನ್ನುವುದಕ್ಕಿಂತ ನಾವು ನಮ್ಮವರಿಗೆ ಏನು ಮಾಡುತ್ತೇವೆ ಎನ್ನುವುದು ಮುಖ್ಯ…
ನಾನೇಳುವುದು ಇಷ್ಟೆ…
ನಾವು ಸಾವಿತ್ರಿಬಾಯಿ ಫುಲೆ, ಜ್ಯೋತಿಬಾ ಫುಲೆ, ಅಬ್ದುಲ್ಲಾ ಕಲಾಂ, ಸುಧಾ ಮೂರ್ತಿ ಇವರಂತೆ ಪ್ರಪಂಚಕ್ಕೆ ಏನು ಮಾಡಲಿಕ್ಕೆ ಆಗದಿದ್ದರೂ ಪರವಾಗಿಲ್ಲ ತಂದೆತಾಯಿಯರನ್ನು ಪ್ರೀತಿಯಿಂದ, ಗೌರವ ಕೊಟ್ಟು ಅವರ ಸೇವೆ ಮಾಡಬೇಕು….. ಅವರೇ ನಮಗೆ ಮೊದಲ ಶಿಕ್ಷಣ ನೀಡಿದ ರೂವಾರಿಗಳು…. ಇವರನ್ನು ಚೆನ್ನಾಗಿ ನೋಡಿಕೊಂಡಾಗ ಮಾತ್ರ ನಮ್ಮ ಎಲ್ಲ ಆಸೆ ಆಕಾಂಕ್ಷೆಗಳು ನೆರವೆರುತ್ತದೆ.
ನಮಗೆ ಶಿಕ್ಷಣ ದೊರೆಯುವುದು ಮನೆಯಿಂದಲೇ..
ಮನೆಯಲ್ಲಿ ತಾಯಿ ಮಕ್ಕಳಿಗೆ ಬೇಕಾದ ಜ್ಞಾನದ ಶಿಕ್ಷಣ ನೀಡಿದರೆ,ತಂದೆ ಬದುಕಲು ಬೇಕಾದ ಮಹತ್ವದ ಜ್ಞಾನವನ್ನು ನೀಡುತ್ತಾರೆ. ಒಬ್ಬ ಗುರು ತನ್ನಲಿರುವ ವಿದ್ಯೆಯನ್ನು ಮಕ್ಕಳಿಗೆ ಧಾರೆಯೆರೆದೆ ಹೋದರೆ ಅವರ ವೃತ್ತಿ ಧರ್ಮಕ್ಕೆ ದ್ರೋಹ ಬಗೆದಂತೆ. ಇವರೆಲ್ಲರೂ ತಮ್ಮಲ್ಲಿರುವ ಜ್ಞಾನವನ್ನು ಮಕ್ಕಳಿಗೆ ನೀಡದೆ ಹೋದರೆ ಮಕ್ಕಳ ಬದುಕು ಕಷ್ಟ…
ಆದರಿಂದ ಇವರುಗಳಿಗೆ ಗೌರವ ಕೊಟ್ಟು ನಡೆದುಕೊಳ್ಳಬೇಕು.
ಈ ಎಲ್ಲಾ ಜ್ಞಾನವನ್ನು ಎರೆಯುವ ಗುರುಗಳಿಗೆ ಮತ್ತೊಮ್ಮೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

ಬಿ. ಆರ್. ಯಶಸ್ವಿನಿ.