- 6ನೇ ಗ್ಯಾರಂಟಿ ಅಡಿಯಲ್ಲಿ ಭೂಮಿ ಹಕ್ಕು ಯೋಜನೆ ಜಾರಿ.
- ನವೆಂಬರ್ 1ರಿಂದ ಆನ್‌ಲೈನ್ ನೋಂದಣಿ ಪ್ರಾರಂಭ.
- ₹500 ಶುಲ್ಕದೊಂದಿಗೆ 100 ದಿನಗಳ ಅವಧಿಯಲ್ಲಿ ಅರ್ಜಿ ಸಲ್ಲಿಕೆ.
- 15 ಲಕ್ಷಕ್ಕೂ ಹೆಚ್ಚು ಆಸ್ತಿ ಮಾಲೀಕರಿಗೆ ಪ್ರಯೋಜನ.
- ಲಂಚಮುಕ್ತ, ಪಾರದರ್ಶಕ ಪ್ರಕ್ರಿಯೆ.
- ಎ ಖಾತೆ ಪರಿವರ್ತನೆಯಿಂದ ಆಸ್ತಿ ಮೌಲ್ಯ ಮತ್ತು ಗೌರವ ಹೆಚ್ಚಳ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಆರನೇ ಗ್ಯಾರಂಟಿಯಾಗಿ ಭೂಮಿ ಹಕ್ಕು ಯೋಜನೆಯನ್ನು ಜಾರಿಗೊಳಿಸಿದೆ. ಇದರಡಿ, ಬಿ ಖಾತೆಯ ಆಸ್ತಿಗಳನ್ನು ಎ ಖಾತೆಗಳಾಗಿ ಪರಿವರ್ತಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಇಂದು ವಿಧಾನಸೌಧದಲ್ಲಿ ಈ ಹೊಸ ಯೋಜನೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುಮಾರು 25 ಲಕ್ಷ ಆಸ್ತಿಗಳಿವೆ. ಅವುಗಳಲ್ಲಿ 7.5 ಲಕ್ಷ ಎ ಖಾತೆ ಮತ್ತು 7.5 ಲಕ್ಷ ಬಿ ಖಾತೆ ಆಸ್ತಿಗಳಿವೆ. ಬಿ ಖಾತೆಗಳನ್ನು ಎ ಖಾತೆಗಳಾಗಿ ಪರಿವರ್ತಿಸಿ ಜನರಿಗೆ ಕಾನೂನಾತ್ಮಕ ಹಕ್ಕು ನೀಡುವುದೇ ಸರ್ಕಾರದ ಉದ್ದೇಶ ಎಂದು ಹೇಳಿದರು.
ಈ ಪರಿವರ್ತನೆಯಿಂದ ಮನೆ ಮಾಲೀಕರು ಬ್ಯಾಂಕ್ ಸಾಲ ಪಡೆಯಲು, ಕಟ್ಟಡ ನಕ್ಷೆ ಅನುಮೋದನೆ ಪಡೆಯಲು ಹಾಗೂ ತಮ್ಮ ಆಸ್ತಿಯ ಕಾನೂನಾತ್ಮಕ ದಾಖಲೆ ಸಿದ್ಧಪಡಿಸಲು ಸಾಧ್ಯವಾಗುತ್ತದೆ. ಯಾವುದೇ ಅನಧಿಕೃತ ಕಟ್ಟಡ ಸಕ್ರಮೀಕರಣ ಇಲ್ಲ — ಕೇವಲ ಖಾತೆ ಪರಿವರ್ತನೆ ಮಾತ್ರ ಎಂದು ಸ್ಪಷ್ಟಪಡಿಸಿದರು.
ಯೋಜನೆಯ ಪ್ರಮುಖ ಅಂಶಗಳು:
- ಬಿ ಖಾತೆ ನಿವೇಶನಗಳನ್ನು ಎ ಖಾತೆಗಳಾಗಿ ಪರಿವರ್ತಿಸಲು 100 ದಿನಗಳ ಅವಧಿ ನೀಡಲಾಗಿದೆ.
- ನವೆಂಬರ್ 1ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ, ₹500 ಶುಲ್ಕ ಪಾವತಿಸಿ ನೋಂದಣಿ ಸಾಧ್ಯ.
- ಪ್ರತಿಯೊಂದು ಪಾಲಿಕೆಯಲ್ಲಿ ಸಹಾಯ ಕೇಂದ್ರಗಳು ಮತ್ತು ಬೆಂಗಳೂರು ಒನ್ ಕಚೇರಿಗಳು ತೆರೆಯಲಾಗುತ್ತವೆ.
- ಲಂಚ ಬೇಡ — ಅಧಿಕೃತ ಶುಲ್ಕ ಮಾತ್ರ ಪಾವತಿಸಬೇಕು ಎಂದು ಸಚಿವರ ಎಚ್ಚರಿಕೆ.
- 2000 ಚದರ ಮೀಟರ್‌ವರೆಗೆ ಇರುವ ನಿವೇಶನಗಳಿಗೆ ಸ್ವಯಂಚಾಲಿತ ಪರಿವರ್ತನೆ, ಅದಕ್ಕಿಂತ ಮೇಲ್ಪಟ್ಟವರಿಗೆ ದಾಖಲೆ ಪರಿಶೀಲನೆ ಕಡ್ಡಾಯ.
- ಪರಿವರ್ತನೆಯಾದ ಆಸ್ತಿಗಳಿಗೆ ವಿದ್ಯುತ್, ನೀರು, ಒಳಚರಂಡಿ ಹಾಗೂ ರಸ್ತೆ ಸೌಲಭ್ಯಗಳು ಒದಗಿಸಲಾಗುತ್ತವೆ.
- ಈ ಯೋಜನೆಯಿಂದ 15 ಲಕ್ಷ ಆಸ್ತಿ ಮಾಲೀಕರಿಗೆ ನೇರ ಪ್ರಯೋಜನ ದೊರೆಯಲಿದೆ.
- ಬಿ ಖಾತಾ ಫ್ಲ್ಯಾಟ್‌ಗಳು ಅಥವಾ ಅಪಾರ್ಟ್‌ಮೆಂಟ್‌ಗಳಿಗೆ ಯೋಜನೆ ಅನ್ವಯವಾಗದು.
ಕಳೆದ ಐವತ್ತು ವರ್ಷಗಳಲ್ಲಿ ಯಾರೂ ಕೈ ಹಾಕದ ಕೆಲಸವನ್ನು ನಮ್ಮ ಸರ್ಕಾರ ಕೈಗೊಂಡಿದೆ. ಜನರ ಆಸ್ತಿಗೆ ಕಾನೂನಾತ್ಮಕ ಮಾನ್ಯತೆ ಮತ್ತು ಗೌರವ ನೀಡುವುದು ಸರ್ಕಾರದ ಗುರಿಯಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಯಾರೂ ನಕಲಿ ದಾಖಲೆ ಸೃಷ್ಟಿಸಿ ಇತರರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಸಾಧ್ಯವಿಲ್ಲ. ವ್ಯವಸ್ಥೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ ಎಂದರು.ಇದನ್ನು ಓದಿ –ಸೆಂಥಿಲ್ ಮಾನಹಾನಿ ಪ್ರಕರಣ | ಜನಾರ್ದನ ರೆಡ್ಡಿಗೆ ನ್ಯಾಯಾಲಯದ ನೋಟಿಸ್
ಸರ್ಕಾರದ ಈ ಕ್ರಮದಿಂದ ಬಿ ಖಾತೆದಾರರಿಗೆ ಕಾನೂನಾತ್ಮಕ ಭದ್ರತೆ ದೊರೆಯುವುದರೊಂದಿಗೆ, ಆಸ್ತಿ ಮೌಲ್ಯವೂ ಹೆಚ್ಚಲಿದೆ.








