ಮೈಸೂರು: ಅರಮನೆಯ ಪಶ್ಚಿಮಕ್ಕೆ ಇರುವ ವರಾಹ ಪ್ರವೇಶದ್ವಾರಗಳ ಛಾವಣಿಯ ಮೇಲ್ಪದರದ ಗಾರೆ ಕುಸಿದಿದೆ. ಅದೃಷ್ಟ ವಶಾತ್ ಪ್ರವಾಸಿಗರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.
ಅರಮನೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಅನೇಕ ಗುಮ್ಮಟಗಳು, ಕಮಾನುಗಳು, ಗೋಪುರಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆ. ಹಿಂದೊಮ್ಮೆ ಮಳೆ ಬಂದಾಗ ಅರಮನೆ ಸೋರುತ್ತಿದ್ದ ಉದಾಹರಣೆ ಸಹ ಇದೆ. ಇಂದು ಬೆಳಗ್ಗೆ ವರಾಹ ದ್ವಾರದ ಛಾವಣಿ ಗಾರೆಯ ಪದರಗಳು ಕೆಳಗೆ ಬಿದ್ದಿದೆ. ಅದೃಷ್ಟ ವಶಾತ್ ಕೆಳಗೆ ಬೈಕ್ ನಿಲ್ಲಿಸಿದ್ದರಿಂದ ಪದರಗಳು ಬೈಕ್ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಬೈಕ್ ಹ್ಯಾಂಡಲ್ ಬೆಂಡಾಗಿದೆ. ಅರಮನೆ ಮಂಡಳಿಗೆ ವಿಷಯ ತಿಳಿಯುತ್ತಿದ್ದಂತೆಯೆ ಪದರಗಳ ಅವಶೇಷಗಳನ್ನು ತೆರವುಗೊಳಿಸಿ ಸುತ್ತ ಬ್ಯಾರಿಕ್ಯಾಡ್ ನಿಲ್ಲಿಸಿ ಏನೂ ನಡೆದೇ ಇಲ್ಲವೆಂಬಂತೆ ತೋರ್ಪಡಿಸಿಕೊಳ್ಳಲಾಗಿದೆ.
ದಾಖಲೆ ಪ್ರವಾಸಿಗರ ಭೇಟಿ: ಅಂಬಾವಿಲಾಸ ಅರಮನೆಗೆ 2023-24ರಲ್ಲಿ ಸುಮಾರು 40,56,975 ಪ್ರವಾಸಿಗರು ಭೇಟಿ ನೀಡಿದ್ದು, ಈ ಪೈಕಿ 34,604 ಮಂದಿ ವಿದೇಶಿ ಪ್ರವಾಸಿಗರಿದ್ದರು. ಇನ್ನು ಏಪ್ರಿಲ್ 2024ರಿಂದ ಮಾರ್ಚ್ 2025ರವರೆಗೆ 39,35,108 ಪ್ರವಾಸಿಗರು ಭೇಟಿ ನೀಡಿದ್ದು ಈ ಪೈಕಿ 44,788 ಮಂದಿ ವಿದೇಶಿ ಪ್ರವಾಸಿಗರಿದ್ದಾರೆ. ಮೈಸೂರಿನ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಅಂಬಾವಿಲಾಸ ಅರಮನೆಯ ಕೊಡುಗೆ ಅಪಾರವಾಗಿದೆ.ಇದನ್ನು ಓದಿ –ಮೆದುಳಿನ ಕ್ಯಾನ್ಸರ್ಗೆ ಭಾರತದಲ್ಲಿ ಹೊಸ ಔಷಧ ಲಭ್ಯ
ಇಂತಹ ಅರಮನೆಯ ಹೊರ ಭಾಗದ ಗೋಡೆಗಳು ಬಿರುಕು ಬಿಡುತ್ತಿದ್ದು, ಇಂದು ವರಾಹ ಪ್ರವೇಶ ದ್ವಾರದ ಛಾವಣಿಯ ಮೇಲ್ಪದರದ ಗಾರೆ ಭಾಗಗಳು ಉದುರುತ್ತಿದ್ದು, ಕೆಲವು ಕಡೆ ಬಿರುಕುಗಳು ಕಾಣಿಸಿಕೊಂಡಿದೆ. ಚಾರಿತ್ರಿಕ ನಗರಿ ಮೈಸೂರಿಗೆ ಅರಮನೆಗಳ ನಗರಿ ಎಂಬ ಬಿರುದು ತಂದುಕೊಟ್ಟ ಅಂಬಾವಿಲಾಸ ಅರಮನೆಯ ಅಂದಕ್ಕೆ ಮತ್ತೊಂದು ಅರಮನೆ ಇಲ್ಲ. ಇಲ್ಲಿನ ವಾಸ್ತುಶಿಲ್ಪ, ದೀಪಾಲಂಕಾರ, ದರ್ಬಾರ್ ಹಾಲ್ ಹಾಗೂ ಐತಿಹಾಸಿಕ ಹಿನ್ನಲ್ಲೆಯಿಂದಾಗಿ ಅಂಬಾವಿಲಾಸ ಅರಮನೆ ಜಗತ್ತನ್ನು ಆಕರ್ಷಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಅರಮನೆಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವ ಈ ಅಂದದ ಅರಮನೆ ಕಟ್ಟಡಗಳ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಲರಾಮ ದ್ವಾರದ ಬಳಿ ಅರಮನೆ ಕಟ್ಟದ ಭಾಗಗಳು ಕುಸಿದು ಬಿದ್ದಿದ್ದು, ಅರಮನೆಯ ಅಂದಕ್ಕೆ ಅಡ್ಡಿಯುಂಟು ಮಾಡಿದೆ. ಸರಕಾರ ಈ ಕೂಡಲೇ ಅರಮನೆಯ ಕಟ್ಟಡ ಸಂರಕ್ಷಣೆಗೆ ಗಮನಹರಿಸಬೇಕೆಂಬುದೇ ಮೈಸೂರಿಗರ ಒತ್ತಾಸೆಯಾಗಿದೆ.








