ಬೆಂಗಳೂರು: ಕನ್ನಡ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದ ಹಿರಿಯ ಕಲಾವಿದ, ನಟ ಮತ್ತು ಕಲಾನಿರ್ದೇಶಕ ದಿನೇಶ್ ಮಂಗಳೂರು (Dinesh Mangaluru) ಅವರು ಇಂದು ಬೆಳಗಿನ ಜಾವ ಕುಂದಾಪುರದಲ್ಲಿ ಇಹಲೋಕ ತ್ಯಜಿಸಿದರು.
ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.
ದಿನೇಶ್ ಮಂಗಳೂರು ಅವರು ರಂಗಭೂಮಿಯಿಂದ ತಮ್ಮ ಕಲಾಜೀವನವನ್ನು ಪ್ರಾರಂಭಿಸಿ, ನೂರಾರು ನಾಟಕಗಳಲ್ಲಿ ನಟನೆ ಮಾಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದರು. ಬಳಿಕ ಚಿತ್ರರಂಗಕ್ಕೂ ಕಾಲಿಟ್ಟ ಅವರು, ಅನೇಕ ಚಿತ್ರಗಳಲ್ಲಿ ಪೋಷಕ ಪಾತ್ರಗಳ ಮೂಲಕ ವಿಶಿಷ್ಟ ಹೆಸರು ಗಳಿಸಿದರು.
‘ರಿಕ್ಕಿ’, ‘ಉಳಿದವರು ಕಂಡಂತೆ’, ‘ಕೆಜಿಎಫ್ ಚಾಪ್ಟರ್ 1’, ‘ಕೆಜಿಎಫ್ ಚಾಪ್ಟರ್ 2’, ‘777 ಚಾರ್ಲಿ’ ಸೇರಿದಂತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ ತಮ್ಮ ನಟನೆಗೆ ಶ್ರೇಷ್ಠತೆಯನ್ನು ತಂದುಕೊಟ್ಟಿದ್ದರು. ಅವರ ಪಾತ್ರಗಳು ಕಡಿಮೆ ಇದ್ದರೂ ಗಾಢವಾದ ಛಾಪು ಮೂಡಿಸುವಂತೆಯೇ ಇರುತ್ತಿದ್ದವು.
ಅವರ ಪಾರ್ಥಿವ ಶರೀರವನ್ನು ಇಂದು ಸಂಜೆ ಬೆಂಗಳೂರಿಗೆ ತರಲಾಗುತ್ತಿದ್ದು, ನಾಳೆ ಸುಮನಹಳ್ಳಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.