ಬೆಳಗಾವಿ: ರಾಜ್ಯದಲ್ಲಿ ಯಾವುದೇ ನಾಯಕತ್ವ ಬದಲಾವಣೆ ನಡೆಯುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ತಿಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಯತೀಂದ್ರ “ನನ್ನ ತಂದೆಯೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ”. ಕಾಂಗ್ರೆಸ್ ಹೈಕಮಾಂಡ್ ಕೂಡ ಇದೇ ಸಂದೇಶ ನೀಡಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಿಎಂ ಸಿದ್ದರಾಮಯ್ಯ ಈಗಾಗಲೇ ತಮ್ಮ ಪಕ್ಷದ ನಾಯಕರಿಗೆ, ಸಾರ್ವಜನಿಕವಾಗಿ ಯಾವುದೇ ಕುರ್ಚಿ ರಾಜಕೀಯದ ಬಗ್ಗೆ ಹೇಳಿಕೆ ನೀಡಬಾರದು ಎಂದು ಸೂಚನೆ ನೀಡಿದ್ದರು. ಆದರೆ ಪುತ್ರ ಯತೀಂದ್ರ ಈ ನಿಷೇಧದ ನಡುವೆಯೇ ಮತ್ತೆ ನಾಯಕತ್ವ ಚರ್ಚೆಯನ್ನು ಕೆದಕಿರುವುದು ಪಕ್ಷದ ಒಳ ವಲಯದಲ್ಲಿ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಎರಡು ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯಿತ್ತು. ಡಿಕೆಶಿ ಅವರ ಮನೆಯಲ್ಲೇ ನಡೆದ ಈ ಭೇಟಿ ಬಳಿಕ, ಸಿಎಂ “ಹೈಕಮಾಂಡ್ ಹೇಳುವವರೆಗೆ ನಾನೇ ಸಿಎಂ” ಎಂದು ಸ್ಪಷ್ಟಪಡಿಸಿದ್ದರು. ಇದರ ನಂತರ ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು ತಣ್ಣಗಾಗುತ್ತಿದೆಯೆಂಬ ಭಾವನೆ ಮೂಡಿತ್ತು.ಇದನ್ನು ಓದಿ –ಹೈ ಮೆಟ್ಟಿಲೇರಿದ ರಾಜಮಾತೆ
ಆದರೆ ಯತೀಂದ್ರ ಅವರ ಇತ್ತೀಚಿನ ಹೇಳಿಕೆ ಮತ್ತೆ ರಾಜಕೀಯ ಉಷ್ಣತೆ ಹೆಚ್ಚಿಸಿದ್ದು, ಪಕ್ಷದ ಒಳಗಡೆಯ ‘ಸಿಎಂ ಕುರ್ಚಿ ಕಿತ್ತಾಟ’ದ ಚರ್ಚೆ ಮತ್ತೆ ಮೈಮೇಲೆ ಏರಿದೆ.








