ಮೈಸೂರು: “ಈ ವರ್ಷದ ದಸರಾ ಆಚರಣೆಯ ಬೆಳವಣಿಗೆಗಳು ಕಳವಳಕಾರಿಯಾಗಿವೆ” ಎಂದು ಮೈಸೂರಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಕಟಣೆ ಹೊರಡಿಸಿರುವ ಅವರು, “ರಾಜ್ಯ ಸರ್ಕಾರ ಆಯೋಜಿಸಲು ಉದ್ದೇಶಿಸಿರುವ ದಸರಾ ಆಚರಣೆಗಳು, ವಿಶೇಷವಾಗಿ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ನಡೆಯುತ್ತಿರುವ ರಾಜಕೀಯ ಚಟುವಟಿಕೆಗಳು ತೀವ್ರ ಬೇಸರ ಮೂಡಿಸಿರುವುದಾಗಿದೆ” ಎಂದಿದ್ದಾರೆ.
“ನಾಡಹಬ್ಬದ ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆ ಜನರಲ್ಲಿ ಸಂಘರ್ಷಕಾರಿ ಅಭಿಪ್ರಾಯಗಳಿಗೆ ಕಾರಣವಾಗಿದೆ. ಜೊತೆಗೆ ಚಾಮುಂಡೇಶ್ವರಿ ದೇವಸ್ಥಾನ ಹಿಂದೂಗಳಿಗೆ ಸೇರಿಲ್ಲ ಎಂಬ ಸಂವೇದನಾರಹಿತ ಹೇಳಿಕೆ ಸಂಪೂರ್ಣ ಅನಗತ್ಯ. ಆ ದೇವಸ್ಥಾನ ಹಿಂದೂಗಳಿಗೆ ಸೇರದಿದ್ದರೆ, ಅದನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿಸಲಾಗುತ್ತಿರಲಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.ಇದನ್ನು ಓದಿ –ರಾಜ್ಯದಲ್ಲಿ ಮಳೆ ಮತ್ತಷ್ಟು ತೀವ್ರ – ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಅವರು ಮುಂದುವರೆದು, “ಸರ್ಕಾರ ಆಯೋಜಿಸುವ ದಸರಾ ಕೇವಲ ಸಾಂಸ್ಕೃತಿಕ ಆಚರಣೆಯಷ್ಟೆ. ಇಂತಹ ಉತ್ಸವಗಳಿಂದ ಧಾರ್ಮಿಕ ಪಾವಿತ್ರ್ಯ, ಸಂಪ್ರದಾಯ ಅಥವಾ ಪರಂಪರೆಯ ಪ್ರತಿಪಾದನೆ ಸಾಧ್ಯವಿಲ್ಲ. ಸರ್ಕಾರ ಆಯೋಜಿಸುವ ಕಾರ್ಯಕ್ರಮಗಳು ಧಾರ್ಮಿಕ ಸ್ವರೂಪದ್ದಾಗಿರಲಾರವು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.