ಬೆಂಗಳೂರು :ರಾಜ್ಯ ಸರ್ಕಾರ ಮೂವರು ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಹೊಸ ಆದೇಶ ಹೊರಡಿಸಿದೆ.
ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಯಾಗಿ ಡಾ. ಮಂಜುಳಾ ಎನ್ ಅವರನ್ನು ನಿಯೋಜಿಸಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ. ಎಕರೂಪ್ ಕೌರ್ ಅವರನ್ನು ಕೇಂದ್ರ ಸೇವೆಗೆ ನಿಯೋಜಿಸಲಾಗಿರುವುದರಿಂದ ಹುದ್ದೆ ತೆರವಾಗಿತ್ತು. ಮಂಜುಳಾ ಅವರಿಗೆ ಹೆಚ್ಚುವರಿಯಾಗಿ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹುದ್ದೆಯ ಸಮವರ್ತಿತ ಪ್ರಭಾರವನ್ನು ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ತಿಳಿಸಿದೆ.
ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಪೂವಿತ್ ಎಸ್ ಅವರನ್ನು ವರ್ಗಾಯಿಸಲಾಗಿದೆ. ಶರತ್ ಬಿ. ಅವರ ವರ್ಗಾವಣೆಯಿಂದ ಈ ಹುದ್ದೆ ತೆರವಾಗಿತ್ತು.
ಅದೇ ರೀತಿ ಮೂಲಸೌಕರ್ಯ ಅಭಿವೃದ್ಧಿ, ಬಂದರು, ಒಳನಾಡು ಹಾಗೂ ಜಲಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಗೋವಿಂದ ರೆಡ್ಡಿ ಅವರಿಗೆ ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಆಯುಕ್ತರ ಹುದ್ದೆಯ ಸಮವರ್ತಿತ ಪ್ರಭಾರವನ್ನು ನೀಡಲಾಗಿದೆ. ಈ ಹುದ್ದೆ ರವಿಕುಮಾರ್ ಎಂ.ಆರ್ ಅವರ ವರ್ಗಾವಣೆಯಿಂದ ತೆರವಾಗಿತ್ತು.ಇದನ್ನು ಓದಿ –ಮಂಡ್ಯ: ಭೀಕರ ಅಪಘಾತ – ಸ್ಕೈವಾಕ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರ ದುರ್ಮರಣ
ಈ ಮೂಲಕ ರಾಜ್ಯದಲ್ಲಿ ಮೂರು ಪ್ರಮುಖ ಐಎಎಸ್ ಅಧಿಕಾರಿಗಳ ಹುದ್ದೆ ಬದಲಾವಣೆ ಹಾಗೂ ಹೆಚ್ಚುವರಿ ಜವಾಬ್ದಾರಿಗಳನ್ನು ಸರ್ಕಾರ ಹಂಚಿಕೆ ಮಾಡಿದೆ.








