ಬೆಂಗಳೂರು, ಏಪ್ರಿಲ್ 22 – ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ ನಂತರ, ನಿವೃತ್ತ ಸರ್ಕಾರಿ ನೌಕರರಿಗೆ ಬೇಕಾದ ಸೌಲಭ್ಯಗಳು ಸರಿಯಾಗಿ ದೊರೆಯುತ್ತಿಲ್ಲ ಎಂಬ ಆರೋಪಗಳ ನಡುವೆಯೇ, ಇದೀಗ ಆಡಳಿತ ವಿಭಾಗದ ಜಂಟಿ ನಿರ್ದೇಶಕರು ವಿಜಯ ಈ. ರವಿಕುಮಾರ್ ಅವರು ಮಹತ್ವದ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ.
ಈ ಪತ್ರದಲ್ಲಿ, ನಿವೃತ್ತಿಗೆ ಮುನ್ನ ಪಿಂಚಣಿ ಪ್ರಸ್ತಾವನೆಗಳನ್ನು ಮಹಾಲೇಖಪಾಲರ ಕಚೇರಿಗೆ ಸಮಯಕ್ಕೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಸರ್ಕಾರದ 14/03/2025ರ ದಿನಾಂಕದ ಪತ್ರವನ್ನು ಉಲ್ಲೇಖಿಸಿರುವ ಅವರು, 16/04/2024ರಂದು ಮಹಾಲೇಖಪಾಲರಿಂದ ಬಂದ ಪತ್ರದ ಆಧಾರದ ಮೇಲೆ ಶಾಲಾ ಶಿಕ್ಷಣ ಇಲಾಖೆಯ ಗ್ರೂಪ್ A ಮತ್ತು B ಗೆಜೆಟೆಡ್ ಅಧಿಕಾರಿಗಳ ಪಿಂಚಣಿ ಪ್ರಸ್ತಾವನೆಗಳು ಇನ್ನೂ ಸಲ್ಲಿಕೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಈ ಪಿಂಚಣಿ ಪ್ರಕ್ರಿಯೆಯ ವಿಳಂಬದಿಂದ 117 ನಿವೃತ್ತ ಅಧಿಕಾರಿಗಳ ಪಿಂಚಣಿ ವ್ಯವಹಾರ ಬಾಕಿಯಾಗಿದೆ. ಇದರ ಶೀಘ್ರ ಇತ್ಯರ್ಥಕ್ಕಾಗಿ ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಮುಖ್ಯ ಸೂಚನೆಗಳು ಹೀಗಿವೆ:
- ನಿವೃತ್ತಿಯ ಮುಂಚಿತವಾಗಿ ಕನಿಷ್ಠ ಮೂರು ತಿಂಗಳು ಮೊದಲು ಪಿಂಚಣಿ ಪ್ರಸ್ತಾವನೆ ಸಲ್ಲಿಸಬೇಕು
- ಬಾಕಿ ಇರುವ ಪಿಂಚಣಿ ಪ್ರಕರಣಗಳ ಬಗ್ಗೆ ಮಹಾಲೇಖಪಾಲರಿಗೆ ವರದಿ ಸಲ್ಲಿಸಬೇಕು
- ತ್ರೈಮಾಸಿಕವಾಗಿ ಪಿಂಚಣಿ ಪ್ರಸ್ತಾವನೆಗಳ ಸ್ಥಿತಿಗತಿಯ ಪರಿಶೀಲನೆ ಮಾಡಬೇಕು
- ನಿವೃತ್ತ ನೌಕರರ ವಿರುದ್ಧದ ದುರ್ಣಡತೆ ಅಥವಾ ಕರ್ತವ್ಯ ಲೋಪದ ಆರೋಪಗಳ ಇತ್ಯರ್ಥವನ್ನು ನಿವೃತ್ತಿಗೆ ಮೊದಲು ಪೂರ್ಣಗೊಳಿಸಬೇಕು
- ಆರೋಪ ಇತ್ಯರ್ಥವಾಗದೆ ಇದ್ದರೆ ಆರ್ಥಿಕ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟತೆ ನೀಡಬೇಕು
ಇದರಿಂದ ಎಚ್ಚರಿಕೆಯಾಗಬೇಕಾದ ಅಂಶ ಎಂದರೆ, ನಿವೃತ್ತಿ ಬಳಿಕ ಆಧಿಕೃತ ತನಿಖೆ ಅಥವಾ ಆರೋಪದ ವಿಚಾರಣೆ ಮುಂದುವರೆಯಬಾರದು. ಸಮಯಕ್ಕೆ ಮುಗಿಸಲು ಮುಂಚಿತವೇ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ಸೂಚಿಸಿದೆ.ಇದನ್ನು ಓದಿ –ಮಂಡ್ಯದಲ್ಲಿ 39 ವರ್ಷಗಳ ಬಳಿಕ ಜರುಗುತ್ತಿರುವ ಜಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿ
ಸರ್ಕಾರಿ ನೌಕರರ ಪಿಂಚಣಿ ಪ್ರಕ್ರಿಯೆಯಲ್ಲಿ ಶಿಸ್ತು, ಸಮಯ ಪಾಲನೆ ಮತ್ತು ಸ್ಪಷ್ಟತೆ ಅನಿವಾರ್ಯ ಎಂಬುದನ್ನು ಈ ಜ್ಞಾಪನೆ ಮೂಲಕ ಸರ್ಕಾರ ಇನ್ನೊಮ್ಮೆ ಸ್ಪಷ್ಟಪಡಿಸಿದೆ.