ಚಾಮರಾಜನಗರ : ಮಹಿಳಾ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಕಿರುಕುಳದಿಂದ ಬೇಸತ್ತ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ದುರ್ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದೆ.
ಕೊಳ್ಳೆಗಾಲ ಪೊಲೀಸ್ ಠಾಣೆಯ ಪಿಎಸ್‌ಐ ವರ್ಷಾ ವಿರುದ್ಧ ದುಷ್ಯಂತ್ ಎಂಬ ಯುವಕ ಕಿರುಕುಳ ಆರೋಪವನ್ನು ಮಾಡಿರುವ ಘಟನೆ ಇದಾಗಿದೆ. ಪೊಲೀಸ್ ಅಧಿಕಾರಿಣಿ ವರ್ಷಾ ಪದೇಪದೆ ದುಷ್ಯಂತ್ ಅನ್ನು ಠಾಣೆಗೆ ಕರೆಯಿಸಿ, ಎನ್‌ಕೌಂಟರ್ ಮಾಡುವ ಬೆದರಿಕೆ ಹಾಕುತ್ತಿದ್ದರೆಂದು ಆರೋಪಿಸಲಾಗಿದೆ.
ಇಷ್ಟಕ್ಕೂ ನಿಂತಿಲ್ಲ, ಪಿಎಸ್‌ಐ ವರ್ಷಾ ದುಷ್ಯಂತ್ ಮನೆಗೆ ತೆರಳಿ, ಅವನ ತಾಯಿ ರಾಧಿಕಾ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ದೂರಲಾಗಿದೆ. ಹಣ ನೀಡದಿದ್ದರೆ ರೌಡಿಶೀಟ್ ತೆರೆಯುವುದಾಗಿ ಬೆದರಿಸಿದ್ದೂ ಬೆಳಕಿಗೆ ಬಂದಿದೆ.
ದುಷ್ಯಂತ್ ಕಳೆದ ಕೆಲ ದಿನಗಳ ಹಿಂದೆ ಯುವಕರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಘಟನೆಯನ್ನು ಪಿಎಸ್‌ಐ ತನ್ನ ವಿರುದ್ಧ ಅಸ್ತ್ರವನ್ನಾಗಿ ಬಳಸಿ, ಅವನ ಮೇಲೆ ನಿರಂತರ ಮಾನಸಿಕ ಒತ್ತಡ ತಂದಿದ್ದಾರೆ ಎಂಬ ಆರೋಪ ಇದೆ. ಇದರಿಂದ ಒತ್ತಡಕ್ಕೆ ಒಳಗಾದ ದುಷ್ಯಂತ್ ಮದ್ಯದಲ್ಲಿ ಡೊಮ್ಯಾಕ್ಸ್ ಬೆರೆಸಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ತಕ್ಷಣವೇ ಅಸ್ವಸ್ಥಗೊಂಡ ದುಷ್ಯಂತ್ ಅನ್ನು ಕೊಳ್ಳೆಗಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇದನ್ನು ಓದಿ –ಪಹಲ್ಗಾಮ್ ಉಗ್ರರ ದಾಳಿಗೆ ಪಾಕ್ ಸೇನಾ ಅಧಿಕಾರಿ ಹಾಶಿಂ ಮುಸಾ ನೇರ ಸಂಬಂಧ: ದೃಢ ಮಾಹಿತಿ
ಇದರ ಮಧ್ಯೆ, ದುಷ್ಯಂತ್ ಬಾರ್‌ನಲ್ಲಿ ಗಲಾಟೆ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋವನ್ನು ಪಿಎಸ್‌ಐ ವರ್ಷಾ ಹರಿಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಕೊಳ್ಳೆಗಾಲ ಠಾಣೆಯಲ್ಲಿ ಪಿಎಸ್‌ಐ ವರ್ಷಾ ವಿರುದ್ಧ ಅಧಿಕೃತ ದೂರು ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.