ಹೈದರಾಬಾದ್: ತಿರುಮಲದ ಪವಿತ್ರ ಲಡ್ಡು ಪ್ರಸಾದ ತಯಾರಿಕೆಗೆ ಬಳಸಲಾಗಿದ್ದ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣದ ತನಿಖೆಯಲ್ಲಿ, ಕೇಂದ್ರ ತನಿಖಾ ದಳ (CBI) ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ₹234 ಕೋಟಿ ಮೌಲ್ಯದ ವಂಚನೆ ನಡೆದಿರುವುದನ್ನು ಪತ್ತೆಹಚ್ಚಿದೆ. ಈ ಸಂಬಂಧ ಎಸ್‌ಐಟಿ ಆಂಧ್ರಪ್ರದೇಶದ ನೆಲ್ಲೂರಿನ ಎಸಿಬಿ ಪ್ರಕರಣಗಳ ವಿಶೇಷ ನ್ಯಾಯಾಧೀಶರ ಮುಂದೆ 223 ಪುಟಗಳ ಅಂತಿಮ ಆರೋಪಪಟ್ಟಿ ಸಲ್ಲಿಸಿದೆ.
ತನಿಖೆಯ ಪ್ರಕಾರ, 2019ರಿಂದ 2024ರ ಅವಧಿಯಲ್ಲಿ ತಿರುಮಲ–ತಿರುಪತಿ ದೇಗುಲಕ್ಕೆ ಪೂರೈಸಲಾದ ತುಪ್ಪವನ್ನು ಹಾಲಿನ ಬದಲು ಸಸ್ಯಜನ್ಯ ಎಣ್ಣೆಗಳಿಂದ ತಯಾರಿಸಲಾಗಿತ್ತು. ಆದರೆ ಪ್ರಾಣಿಗಳ ಕೊಬ್ಬು, ಹಂದಿ ಕೊಬ್ಬು ಅಥವಾ ಮೀನಿನ ಎಣ್ಣೆ ಬಳಕೆಯ ಸಾಧ್ಯತೆ ವಿರಳವಾಗಿದೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
₹234 ಕೋಟಿ ವಂಚನೆ ಪ್ರಕರಣದಲ್ಲಿ ಹಲವು ಸಂಸ್ಥೆಗಳು ಸೇರಿ ಒಟ್ಟು 36 ಮಂದಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಉತ್ತರ ಪ್ರದೇಶದ ಭೋಲೆ ಬಾಬಾ ಆರ್ಗ್ಯಾನಿಕ್ ಡೇರಿ ಮಿಲ್ಕ್ ಪ್ರೈ. ಲಿ. ನಿರ್ದೇಶಕರಾದ ಪೋಮಿಲ್ ಜೈನ್ ಹಾಗೂ ವಿಪಿನ್ ಜೈನ್ ಅವರು ಉತ್ತರಾಖಂಡದ ರೂರ್ಕಿ ಸಮೀಪದ ಭಗವಾನ್‌ಪುರದಲ್ಲಿನ ಘಟಕದಲ್ಲಿ ಕಲಬೆರಕೆ ತುಪ್ಪ ತಯಾರಿಸಿದ್ದರು ಎನ್ನಲಾಗಿದೆ. ಬಳಿಕ ತಿರುಪತಿಯ ಶ್ರೀ ವೈಷ್ಣವಿ ಡೇರಿ, ಮಹಾರಾಷ್ಟ್ರದ ಮಲ್ಗಂಗಾ ಮಿಲ್ಕ್ ಹಾಗೂ ತಮಿಳುನಾಡಿನ ದಿಂಡಿಗಲ್‌ನ ಎಆರ್ ಡೇರಿ ಮೂಲಕ ಈ ತುಪ್ಪವನ್ನು ಪೂರೈಸಲಾಗುತ್ತಿತ್ತು ಎಂದು ಎಸ್‌ಐಟಿ ತಿಳಿಸಿದೆ.
ಹಸುವಿನ ಶುದ್ಧ ತುಪ್ಪದ ಬದಲಿಗೆ ಕೋಲ್ಕತ್ತದ ಬ್ಯೂಜ್ ಬಡ್ಜ್ ಕಂಪನಿಯಿಂದ ಪಡೆದ ಪಾಮ್ ಆಯಿಲ್, ಪಾಮ್ ಕರ್ನಲ್ ಎಣ್ಣೆ ಮತ್ತು ಪಾಮೊಲಿನ್ ಬಳಸಲಾಗಿದ್ದು, ಅಲ್ಪ ಪ್ರಮಾಣದ ಶುದ್ಧ ತುಪ್ಪದೊಂದಿಗೆ ಬೀಟಾ–ಕೆರೋಟಿನ್, ಅಸಿಟಿಕ್ ಆ್ಯಸಿಡ್ ಎಸ್ಟರ್ ಹಾಗೂ ಸಿಂಥೆಟಿಕ್ ತುಪ್ಪದ ಸುವಾಸನೆಯಂತಹ ರಾಸಾಯನಿಕಗಳನ್ನು ಮಿಶ್ರಣ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ಪತ್ತೆಯಾಗಿದೆ.
ಭೋಲೆ ಬಾಬಾ ಆರ್ಗ್ಯಾನಿಕ್ ಸೇರಿ ವಿವಿಧ ಡೇರಿಗಳಿಂದ ಒಟ್ಟು 59.7 ಲಕ್ಷ ಕೆ.ಜಿ ಕಲಬೆರಕೆ ತುಪ್ಪವನ್ನು ನೇರ ಮತ್ತು ಪರೋಕ್ಷವಾಗಿ ಪೂರೈಸಲಾಗಿದ್ದು, ಇದರಿಂದ ತಿರುಮಲ ತಿರುಪತಿ ದೇವಸ್ಥಾನಗೆ ₹234.51 ಕೋಟಿ ನಷ್ಟವಾಗಿದೆ. ಟಿಟಿಡಿಯ ಕೆಲ ನೌಕರರು ಚಿನ್ನಾಭರಣ, ಮೊಬೈಲ್ ಹಾಗೂ ಹಣದ ಆಮಿಷಕ್ಕೆ ಒಳಗಾಗಿ ನಕಲಿ ಪೂರೈಕೆದಾರರಿಗೆ ಅನುಕೂಲಕರ ವರದಿಗಳನ್ನು ನೀಡಿದ್ದಾರೆ; ನಕಲಿ ಎಫ್‌ಎಸ್‌ಎಸ್‌ಎಐ ದಾಖಲೆಗಳಲ್ಲಿ ಹಾಲು ಖರೀದಿ ಅಂಕಿಅಂಶಗಳನ್ನು ತಿರುಚಲಾಗಿದೆ ಎಂದು ಎಸ್‌ಐಟಿ ಹೇಳಿದೆ.
ಆರೋಪಪಟ್ಟಿಯಂತೆ, ಭೋಲೆ ಬಾಬಾ ಡೇರಿಯಿಂದ 9.9 ಲಕ್ಷ ಕೆ.ಜಿ, ವೈಷ್ಣವಿ ಡೇರಿಯಿಂದ 33 ಲಕ್ಷ ಕೆ.ಜಿ, ಮಲ್ಗಂಗಾ ಡೇರಿಯಿಂದ 15.8 ಲಕ್ಷ ಕೆ.ಜಿ ಹಾಗೂ ಎಆರ್ ಡೇರಿಯಿಂದ 0.68 ಲಕ್ಷ ಕೆ.ಜಿ ಕಲಬೆರಕೆ ತುಪ್ಪ ಪೂರೈಸಲಾಗಿದೆ. ಹಸುವಿನ ಹಾಲು ಅಥವಾ ಬೆಣ್ಣೆ ಬಳಸದೇ ತುಪ್ಪ ಉತ್ಪಾದನೆ ಮಾಡಲಾಗಿದೆ ಎಂಬುದೂ ಉಲ್ಲೇಖವಾಗಿದೆ. ಒಟ್ಟು 68 ಲಕ್ಷ ಕೆ.ಜಿ ನಕಲಿ ತುಪ್ಪ ಉತ್ಪಾದನೆಯಾಗಿದೆ ಎಂದು ತನಿಖೆ ದೃಢಪಡಿಸಿದೆ.ಇದನ್ನು ಓದಿ –ಲೋಕಾಯುಕ್ತ ದಾಳಿ: ಭೂಸ್ವಾಧೀನಾಧಿಕಾರಿ ಬಳಿ ಕೋಟ್ಯಂತರ ರು. ಆಸ್ತಿ ಪತ್ತೆ
ಇದೇ ನಡುವೆ, ಅಂತಿಮ ಆರೋಪಪಟ್ಟಿಯಲ್ಲಿ ಲಡ್ಡು ಪ್ರಸಾದಕ್ಕೆ ಬಳಸಿದ ತುಪ್ಪದಲ್ಲಿ ಯಾವುದೇ ಪ್ರಾಣಿಗಳ ಕೊಬ್ಬು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಕೆಯಾಗಿದೆ ಎಂದು ಆರೋಪಿಸಿ ರಾಜಕೀಯ ಲಾಭ ಪಡೆದಿದ್ದಾರೆ ಎಂದು ವೈ.ವಿ. ಸುಬ್ಬಾ ರೆಡ್ಡಿ ಆರೋಪಿಸಿದ್ದಾರೆ. ವೆಂಕಟೇಶ್ವರ ಸ್ವಾಮಿ ಭಕ್ತರಲ್ಲಿ ನಾಯ್ಡು ತಕ್ಷಣ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.








