- ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು: ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಚಾರಣಿಗರ ಸುರಕ್ಷತೆಯನ್ನು ಖಚಿತಪಡಿಸಲು ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆಯಂತೆ, ಇನ್ನು ಮುಂದೆ ಚಾರಣಕ್ಕೆ ತೆರಳುವವರಿಗೆ ಟ್ರ್ಯಾಕಿಂಗ್ ಆಪ್ ಅಳವಡಿಕೆ ಹಾಗೂ ವಿಮೆ ಸೌಲಭ್ಯ ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ.
ಕೊಡಗು ಜಿಲ್ಲೆಯ ತಡಿಯಂಡಮೋಲ್ ಬೆಟ್ಟದಲ್ಲಿ ಕೇರಳದ ಯುವತಿ ನಾಪತ್ತೆಯಾಗಿ, ನಾಲ್ಕು ದಿನಗಳ ಬಳಿಕ ಪತ್ತೆಯಾದ ಘಟನೆ ಹಿನ್ನೆಲೆ ಈ ಹೊಸ ಮಾರ್ಗಸೂಚಿಗಳನ್ನು ರೂಪಿಸಲು ಸೂಚಿಸಲಾಗಿದೆ.
ಮುಖ್ಯ ಅಂಶಗಳು ಹೀಗಿವೆ:
ಟ್ರ್ಯಾಕಿಂಗ್ ಆಪ್ ಕಡ್ಡಾಯ: ಚಾರಣಿಗರು ಕಾಡಿನಲ್ಲಿ ದಾರಿ ತಪ್ಪದಂತೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಪತ್ತೆಹಚ್ಚಲು ಮೊಬೈಲ್ ಟ್ರ್ಯಾಕಿಂಗ್ ಆಪ್ ಅಳವಡಿಸಿಕೊಳ್ಳುವುದು ಕಡ್ಡಾಯವಾಗಲಿದೆ. ಇದರಿಂದ ಅವರ ಚಲನವಲನವನ್ನು ನಿಗಾದಲ್ಲಿ ಇಡಲು ಸಾಧ್ಯವಾಗುತ್ತದೆ.
ವಿಮೆ ಸೌಲಭ್ಯ: ಚಾರಣಕ್ಕೆ ತೆರಳುವ ಪ್ರತಿಯೊಬ್ಬರಿಗೂ ವಿಮೆ ಸೌಲಭ್ಯ ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ. ಅಪಘಾತ ಅಥವಾ ಅಪಾಯಕಾರಿ ಪರಿಸ್ಥಿತಿಯಲ್ಲಿ ಆರ್ಥಿಕ ರಕ್ಷಣೆ ಸಿಗಲಿದೆ.
ಹೊಸ ಮಾರ್ಗಸೂಚಿಗಳು: ಅರಣ್ಯ ಪ್ರದೇಶಗಳಲ್ಲಿ ಚಾರಣ ಮಾಡುವವರಿಗೆ ಸಮಗ್ರ ಮಾರ್ಗಸೂಚಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ‘ಅರಣ್ಯ ವಿಹಾರ’ ಪೋರ್ಟಲ್ ಮೂಲಕ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಚಾರಣಿಗರೊಂದಿಗೆ ಸ್ಥಳೀಯ ಮಾರ್ಗದರ್ಶಿಗಳಿರುವುದೂ ಕಡ್ಡಾಯವಾಗಲಿದೆ. ಪರಿಸರ ಸಮತೋಲನ ಕಾಪಾಡಲು ದಿನಕ್ಕೆ ಮಿತ ಸಂಖ್ಯೆಯವರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಕಟ್ಟುನಿಟ್ಟಿನ ಕ್ರಮ: ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಸ್ಯಾಟಲೈಟ್ ಆಧಾರಿತ ಸಾಧನಗಳ ಬಳಕೆ ಕುರಿತು ಪರಿಶೀಲನೆ ನಡೆಯುತ್ತಿದೆ. ಅನುಮತಿ ಇಲ್ಲದೆ ಅರಣ್ಯ ಪ್ರವೇಶಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ತಂಡಗಳನ್ನು ರಚಿಸಲಾಗುತ್ತಿದೆ.ಇದನ್ನು ಓದಿ –ಡ್ರಗ್ಸ್ ಜಾಲ ಬಯಲು; ಐವರು ವಿದ್ಯಾರ್ಥಿಗಳ ಬಂಧನ
ಈ ಕ್ರಮಗಳಿಂದ ಚಾರಣಿಗರ ಸುರಕ್ಷತೆ ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ.








