ಕೊಪ್ಪಳ: ಇಂದಿನಿಂದ ರಾಜ್ಯದಾದ್ಯಂತ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಮುಷ್ಕರವನ್ನು ಆರಂಭಿಸಿದ್ದು, ಇದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸುತ್ತಿದ್ದಾರೆ.
ಮತ್ತೊಂದೆಡೆ, ಮುಷ್ಕರದ ಮಧ್ಯೆ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಯಲಬುರ್ಗಾದಿಂದ ಬೆಂಗಳೂರಿಗೆ ತಡರಾತ್ರಿ ಹೊರಟಿದ್ದ ಬಸ್ ಮಸಬಹಂಚಿನಾಳ ಹತ್ತಿರ ತಲುಪಿದಾಗ ಈ ಹಲ್ಲೆ ನಡೆದಿದೆ. ಪರಿಣಾಮವಾಗಿ ಬಸ್‌ನ ಗಾಜುಗಳು ಒಡೆದು ಪುಡಿಪುಡಿಯಾಗಿವೆ.
ಘಟನೆಯ ನಂತರ ಬಸ್ ಚಾಲಕರು ವಾಹನವನ್ನು ಸುರಕ್ಷಿತವಾಗಿ ಡಿಪೋಗೆ ವಾಪಸ್ ಕೊಂಡೊಯ್ದರು. ಈ ಘಟನೆಯಿಂದಾಗಿ ಬಸ್‌ನಲ್ಲಿದ್ದ ಪ್ರಯಾಣಿಕರು ಮಧ್ಯರಾತ್ರಿ ರಸ್ತೆಯಲ್ಲಿ ಪರದಾಡಬೇಕಾದ ಸ್ಥಿತಿಗೆ ಸಿಲುಕಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಜನಸಾಮಾನ್ಯರು ತಮ್ಮ ಊರುಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.