ಶಿವಮೊಗ್ಗ: ₹40 ಸಾವಿರ ಲಂಚ ಸ್ವೀಕರಿಸುವಾಗ ರಾಷ್ಟ್ರೀಯ ಹೆದ್ದಾರಿ–206ರ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಹಿರಿಯ ಕೆಎಎಸ್ ಅಧಿಕಾರಿ ಸಿದ್ಧಲಿಂಗ ರೆಡ್ಡಿ ಮತ್ತು ಮಧ್ಯವರ್ತಿ ರಾಜೇಶ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಸಿದ್ಧಲಿಂಗ ರೆಡ್ಡಿ ಇತ್ತೀಚೆಗೆ ಹೆಚ್ಚುವರಿ ಜಿಲ್ಲಾಧಿಕಾರಿಯಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗದ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ತಾಲ್ಲೂಕಿನ ಓತಿಘಟ್ಟ ಗ್ರಾಮದ ವಿ. ಕೇಶವಮೂರ್ತಿ ಅವರು ತಮ್ಮ ಮಾರುತಿ ಎರ್ಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ಭೂಸ್ವಾಧೀನಾಧಿಕಾರಿ ಕಚೇರಿಗೆ ಬಾಡಿಗೆಗೆ ನೀಡಿದ್ದರು.
ನವೆಂಬರ್‌ನಿಂದ ಬಾಕಿ ಉಳಿದಿದ್ದ ಬಾಡಿಗೆ ಹಣ ಪಾವತಿಸಲು ₹40 ಸಾವಿರ ಲಂಚ ನೀಡುವಂತೆ ರಾಜೇಶ್ ಮೂಲಕ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಇದರಿಂದ ಕೇಶವಮೂರ್ತಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಶಿವಮೊಗ್ಗದ ನೆಹರೂ ಕ್ರೀಡಾಂಗಣದ ಬಳಿ ರಾಜೇಶ್ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ನೇತೃತ್ವದ ತಂಡ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದುಕೊಂಡಿತು. ಬಳಿಕ ಸಿದ್ಧಲಿಂಗ ರೆಡ್ಡಿಯನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಎಸ್ಪಿ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳು ಕೆ.ಪಿ. ರುದ್ರೇಶ್, ಗುರುರಾಜ್ ಮೈಲಾರ್, ವೀರಬಸಪ್ಪ ಎಲ್. ಕುಸಲಾಪುರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಲೋಕಾಯುಕ್ತ ಪೊಲೀಸರು ದೂರುದಾರರನ್ನು ನೆಹರೂ ಕ್ರೀಡಾಂಗಣದ ಬಳಿಯ ಹೋಟೆಲ್‌ಗೆ ಕರೆಸಿಸಿ, ಉತ್ತರ ಕರ್ನಾಟಕದವರ ದಿರಿಸಿನಲ್ಲಿ ಗಿರಾಕಿಗಳಂತೆ ಕುಳಿತು ಕಾರ್ಯಾಚರಣೆ ನಡೆಸಿದ್ದರು. ಹಣ ಸ್ವೀಕಾರ ದೃಢವಾದ ಕೂಡಲೇ ರಾಜೇಶ್ ಅವರನ್ನು ಬಂಧಿಸಲಾಯಿತು. ಸಂಜೆ ವಾಯುವಿಹಾರಕ್ಕೆ ಬಂದಿದ್ದ ಅನೇಕರು ಈ ಕಾರ್ಯಾಚರಣೆಗೆ ಸಾಕ್ಷಿಯಾದರು.








