ನಮಗೆಲ್ಲರಿಗೂ ಗೊತ್ತಿರುವ ಹಾಗೆ ಅನೇಕ ಮನೆಮದ್ದುಗಳು ಮತ್ತು ಅಡುಗೆ ಪದಾರ್ಥಗಳು ದೇಹದಲ್ಲಿರುವ ವಿಷದ ಅಂಶಗಳನ್ನು ತೆಗೆಯಲು ಸಹಾಯ ಮಾಡುತ್ತವೆ. ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತವೆ ಇವುಗಳಲ್ಲಿ ಎಪ್ಸಮ್ ಸಾಲ್ಟ್ ಕೂಡ ಒಂದು. ಅನೇಕ ಶತಮಾನಗಳಿಂದ ಬಳಕೆಯಲ್ಲಿರುವ ಎಪ್ಸಮ್ ಸಾಲ್ಟ್’ನಿಂದ ಅನೇಕ ಪರಿಹಾರಗಳು ಹಾಗೂ ಉಪಯೋಗಗಳಿದ್ದು ಇದು ಸುಲಭವಾಗಿ ಕೈಗೆಟಕುವುದರಿಂದಲೂ ಹೆಚ್ಚು ಜನಪ್ರಿಯತೆ ಗಳಿಸಿದೆ.
ಏನಿದು ಎಪ್ಸಮ್ ಸಾಲ್ಟ್?
ಎಪ್ಸಮ್ ಉಪ್ಪು ವಾಸ್ತವವಾಗಿ ಉಪ್ಪಲ್ಲ, ಬದಲಾಗಿ ಮೆಗ್ನೀಸಿಯಮ್ ಮತ್ತು ಸಲ್ಫೇಟ್ ನಿಂದ ಕೂಡಿದ ನೈಸರ್ಗಿಕವಾಗಿ ರೂಪುಗೊಳ್ಳುವ ಶುದ್ಧ ಖನಿಜ ಸಂಯುಕ್ತವಾಗಿದೆ. ಅನೇಕ ಕಾಯಿಲೆಗಳಿಗೆ ನೈಸರ್ಗಿಕ ಪರಿಹಾರವೆಂದು ಪ್ರಶಂಸಿಸಲ್ಪಟ್ಟ ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ. ಎಪ್ಸಮ್ ಉಪ್ಪನ್ನು 17 ನೇ ಶತಮಾನದಿಂದಲೂ ಬಳಸಲಾಗುತ್ತಿದ್ದು, ಇದನ್ನು ಮೊದಲು ಕಂಡುಹಿಡಿದದ್ದು ಇಂಗ್ಲೆಂಡ್‌ನ ಎಪ್ಸಮ್ ಎಂಬ ಸಣ್ಣ ಪಟ್ಟಣದಿಂದ ಹಾಗಾಗಿ ಇದಕ್ಕೆ ಈ ಹೆಸರು ಬಂದಿದೆ.

ಎಪ್ಸಮ್ ಪಟ್ಟಣದ ಬುಗ್ಗೆಗಳು ನೈಸರ್ಗಿಕವಾಗಿ ಖನಿಜಗಳಿಂದ ಸಮೃದ್ಧವಾಗಿವೆ ಮತ್ತು ಬುಗ್ಗೆಗಳಿಂದ ನೀರು ಆವಿಯಾದಾಗ, ಅದು ಸಣ್ಣ ಸ್ಫಟಿಕದಂತಹ ನಿಕ್ಷೇಪಗಳನ್ನು ಬಿಡುತ್ತದೆ. ಈ ನಿಕ್ಷೇಪಗಳೇ ಎಪ್ಸಮ್ ಉಪ್ಪು ಎಂದು ಕರೆಯಲ್ಪಡುತ್ತವೆ. ಎಪ್ಸಮ್ ಉಪ್ಪಿನ ವೈಜ್ಞಾನಿಕ ಹೆಸರು ಮೆಗ್ನೀಸಿಯಮ್ ಸಲ್ಫೇಟ್, ಮತ್ತು ಅದರಲ್ಲಿರುವ ರಾಸಾಯನಿಕ ಅಂಶಗಳು ಮೆಗ್ನೀಸಿಯಮ್, ಸಲ್ಫರ್ ಮತ್ತು ಆಮ್ಲಜನಕ. ಎಪ್ಸಮ್ ಸಾಲ್ಟ್ ಪ್ರಮುಖ ಖನಿಜಗಳು, ಮೆಗ್ನೀಶಿಯಂ ಸಲ್ಫೇಟ್ ಅನ್ನು ಹೊಂದಿದ್ದು ನೀರಿನಲ್ಲಿ ಕರಗಿದ ನಂತರ ಮೆಗ್ನೀಶಿಯಮ್ ಮತ್ತು ಸಲ್ಫೇಟ್ ಅಯಾನುಗಳನ್ನು ಬಿಡುಗಡೆ ಮಾಡುತ್ತದೆ. ನಂತರ ಅವು ನೀರಿನಲ್ಲಿ ಹೀರಲ್ಪಡುತ್ತವೆ ಮತ್ತು ಉತ್ತಮ ಆರೋಗ್ಯ ಪ್ರಯೋಜನಗಳನ್ನು ನೀಡಲು ಅವು ಕೆಲಸ ಮಾಡುತ್ತವೆ.
ಮೆಗ್ನೀಸಿಯಮ್
ಮೆಗ್ನೀಸಿಯಮ್ ನಮ್ಮ ದೇಹದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ – ಆರೋಗ್ಯಕರ ಸ್ನಾಯು ಮತ್ತು ನರಗಳ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ಪರಿಣಾಮಕಾರಿ ಶಕ್ತಿ ಉತ್ಪಾದನೆಯನ್ನು ಖಚಿತಪಡಿಸುತ್ತದೆ ಮತ್ತು ನಮ್ಮ ಮೂಳೆಗಳ ಆರೋಗ್ಯ ಮತ್ತು ಹೃದಯದ ಕಾರ್ಯವನ್ನು ಸುಧಾರಿಸುತ್ತದೆ.
ಸಲ್ಫರ್
ನಮ್ಮ ದೇಹದ ಆರೋಗ್ಯಕರ ಕಾರ್ಯನಿರ್ವಹಣೆಗೆ ಸಲ್ಫರ್ ಮತ್ತೊಂದು ಪ್ರಮುಖ ರಾಸಾಯನಿಕ ಅಂಶವಾಗಿದೆ. ಇದು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕರ ಚರ್ಮ, ಕೀಲುಗಳು, ಮೂಳೆಗಳು, ಕೂದಲು ಮತ್ತು ಉಗುರುಗಳನ್ನು ಬೆಂಬಲಿಸುವ ಕಾಲಜನ್ ಮತ್ತು ಕೆರಾಟಿನ್ ಉತ್ಪಾದನೆಯಲ್ಲಿಯೂ ಸಹಾಯ ಮಾಡುತ್ತದೆ. ದೇಹದಲ್ಲಿನ ಅನೇಕ ನಿರ್ವಿಶೀಕರಣ ಪ್ರಕ್ರಿಯೆಗಳಿಗೆ ಸಲ್ಫರ್ ಸಹ ಮುಖ್ಯವಾಗಿದೆ.
ಎಪ್ಸಮ್ ಸಾಲ್ಟ್ ಬಳಸುವುದರಿಂದಾಗುವ ಪ್ರಯೋಜನಗಳು
ಎಪ್ಸಮ್ ಸಾಲ್ಟ್ ಪ್ರಯೋಜನಗಳು ಇನ್ನೂ ಅಧ್ಯಯನದ ಹಂತದಲ್ಲಿದ್ದರೂ, ಅನೇಕರು ಥೆರಪಿಟಿಕ್ ಬಳಕೆ ಮತ್ತು ಕೆಲವು ಔಷಧಿಗಳಿಗೆ ಪರ್ಯಾಯ ಪರಿಹಾರವಾಗಿ ಇದನ್ನು ಬಳಸುತ್ತಾರೆ.
ಸ್ನಾಯು ನೋವು ಮತ್ತು ಸೆಳೆತ ನಿವಾರಣೆ:
ಎಪ್ಸಮ್ ಸಾಲ್ಟ್ ನಲ್ಲಿ ಸ್ನಾನ ಮಾಡುವುದರಿಂದ ಸ್ನಾಯು ನೋವು, ಸೆಳೆತ ಮತ್ತು ಊತವನ್ನು ಕಡಿಮೆ ಮಾಡಬಹುದು. ಮೆಗ್ನೀಸಿಯಮ್ ದೇಹದಲ್ಲಿ ಸ್ನಾಯುಗಳ ವಿಶ್ರಾಂತಿಗೆ ಮತ್ತು ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ಮೆಗ್ನೀಶಿಯಂ ಬಳಸುವುದರಿಂದ ಇನ್ನೊಂದು ಪ್ರಯೋಜನವೆಂದರೆ ಇದು ವ್ಯಾಯಾಮದ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ತೀವ್ರವಾದ ವ್ಯಾಯಾಮದ ನಂತರ ಚೇತರಿಸಿಕೊಳ್ಳಲು ಎಪ್ಸಮ್ ಸಾಲ್ಟ್ ಅನ್ನು ಕೆಲವರು ಸ್ನಾನ ಮಾಡುವಾಗ ಬಳಸುತ್ತಾರೆ.
ಒತ್ತಡ ಕಡಿಮೆ ಮಾಡುತ್ತದೆ:
ಎಪ್ಸಮ್ ಉಪ್ಪು ಸ್ನಾನವು ಖಿನ್ನತೆ, ನಿದ್ರೆ, ಆತಂಕ, ಅಧಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸುತ್ತದೆ..
ಚರ್ಮದ ಸಮಸ್ಯೆಗಳು:
ಚರ್ಮದ ತುರಿಕೆ, ಸೊಳ್ಳೆ ಕಡಿತ ಮತ್ತು ಸಣ್ಣ ಸುಟ್ಟಗಾಯಗಳನ್ನು ಶಮನಗೊಳಿಸಲು ಎಪ್ಸಮ್ ಉಪ್ಪನ್ನು ಬಳಸಬಹುದು. ಇದು ಚರ್ಮದ ಸೋಂಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.
ಮಲಬದ್ಧತೆ ನಿವಾರಣೆ:
ಮಲಬದ್ಧತೆಯಿಂದ ಬಳಲುತ್ತಿರುವವರು ಎಪ್ಸಮ್ ಉಪ್ಪನ್ನು ಮೌಖಿಕವಾಗಿ ಸೇವಿಸುವುದರಿಂದ ಪರಿಹಾರ ಪಡೆಯಬಹುದು. ಮೆಗ್ನೀಶಿಯಂ ಮಲಬದ್ಧತೆಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುವ ನೈಸರ್ಗಿಕ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಅನೇಕ ಸಂಶೋಧಕರ ಪ್ರಕಾರ, ಹೆಚ್ಚಿನ ಮೆಗ್ನೀಶಿಯಂ ಮಟ್ಟವು ಕರುಳಿನ ಚಲನೆಯನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ. ಆದ್ದರಿಂದ ಜೀರ್ಣಕಾರಿ ಸಮಸ್ಯೆಗಳನ್ನು ಎದುರಿಸಲು ಎಪ್ಸಮ್ ಸಾಲ್ಟ್ ಪರಿಣಾಮಕಾರಿ ಪರಿಹಾರವೆಂದು ಹೇಳಲಾಗುತ್ತದೆ. ಆದ್ದರಿಂದ 2-3 ಟೇಬಲ್ ಸ್ಪೂನ್ ಎಪ್ಸಮ್ ಸಾಲ್ಟ್ ನೀರಿನಲ್ಲಿ ಬೆರೆಸಿ ತೆಗೆದುಕೊಳ್ಳುವುದು ಒಳ್ಳೆಯದು. ಆದರೆ ಇದನ್ನು ತುಂಬಾ ಸೇವಿಸುವುದರಿಂದ ಉಬ್ಬುವಿಕೆಗೆ ಕಾರಣವಾಗಬಹುದು.

ಮೆಗ್ನೀಸಿಯಮ್ ಮಟ್ಟವನ್ನು ಹೆಚ್ಚಿಸುತ್ತದೆ:
ಎಪ್ಸಮ್ ಉಪ್ಪು ಮೆಗ್ನೀಸಿಯಮ್ ಅನ್ನು ಚರ್ಮದ ಮೂಲಕ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೇಹದಲ್ಲಿ ಮೆಗ್ನೀಸಿಯಮ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೈಸರ್ಗಿಕ ನೋವು ನಿವಾರಕ
ದೀರ್ಘಕಾಲದ ನೋವಿನಿಂದ ಬಳಲುತ್ತಿರುವ ಜನರು ಅಥವಾ ಯಾವುದೇ ರೀತಿಯ ಊತ ಹೊಂದಿದ್ದರೆ ಎಪ್ಸಮ್ ಸಾಲ್ಟ್’ನಲ್ಲಿ ಸ್ನಾನ ಮಾಡಲು ಹೇಳುತ್ತಾರೆ ತಜ್ಞರು. ಎಪ್ಸಮ್ ಸಾಲ್ಟ್ ಸಂಧಿವಾತ ಮತ್ತು ಫೈಬ್ರೊಮ್ಯಾಲ್ಗಿಯಾಗೆ ಸಂಬಂಧಿಸಿದಂತೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಲಾಗುತ್ತದೆ.
ನೀರಿನಲ್ಲಿ ಎಪ್ಸಂ ಸಾಲ್ಟ್ ಮಿಕ್ಸ್ ಮಾಡಿ ಅದರಿಂದ ಸ್ನಾನ ಮಾಡುವು ದರಿಂದ ಚರ್ಮದ ಭಾಗಕ್ಕೆ ಮೆಗ್ನೀಷಿಯಮ್ ಸಿಕ್ಕಂತೆ ಆಗುತ್ತದೆ. ಇದು ಚರ್ಮದ ಭಾಗದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ ಮತ್ತು ಉರಿಯುತವನ್ನು ದೂರ ಮಾಡುತ್ತದೆ. ಇದು ಪಾದಗಳನ್ನು ಹಗುರವಾಗಿರಿಸುತ್ತದೆ. ಉಗುರು ಬೆಚ್ಚಗಿನ ನೀರಿನಲ್ಲಿ ಟೀ ಟ್ರೀ ಆಯಿಲ್ ಹಾಕಿ ಕಾಲು ಅದ್ದಿ ಕೂರುವುದರಿಂದ ಪಾದಗಳ ಭಾಗದಲ್ಲಿ ಕಂಡು ಬರುವಂತಹ ಫಂಗಸ್ ಮತ್ತು ಸೂಕ್ಷ್ಮಾಣುಗಳನ್ನು ಇದು ತೊಡೆದು ಹಾಕುತ್ತದೆ. ಪಾದಗಳ ಹಾಗೂ ಕಾಲಿನ ಬೆರಳುಗಳ ಭಾಗದಲ್ಲಿ ಕಂಡುಬರುವಂತಹ ಸೋಂಕುಗಳಿಗೆ ಇದು ಪರಿಹಾರವಾಗಿ ಕೆಲಸ ಮಾಡುತ್ತದೆ.
ಅಪಧಮನಿಗಳ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಳ್ಳುತ್ತದೆ :
ನಿಯಮಿತವಾಗಿ ಎಪ್ಸಮ್-ಉಪ್ಪು ಸ್ನಾನ ಮಾಡುವುದರಿಂದ ನಮ್ಮ ಅಪಧಮನಿಗಳು ಗಟ್ಟಿಯಾಗುವುದನ್ನು ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ ಎಂದು ನಂಬಲಾಗಿದೆ. ಇದು ಹೃದಯಾಘಾತ ಸೇರಿದಂತೆ ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಗಟ್ಟುವಲ್ಲಿ ಹೆಚ್ಚಿನ ಕೊಡುಗೆ ನೀಡುತ್ತದೆ.
ದೇಹವು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ:
ಎಪ್ಸಮ್ ಉಪ್ಪಿನಲ್ಲಿ ಸಲ್ಫರ್ ಇದ್ದು ಅದು ನಮ್ಮ ದೇಹದಿಂದ ವಿಷವನ್ನು ಹೊರಹಾಕುತ್ತದೆ. ಹತ್ತು ನಿಮಿಷಗಳ ಕಾಲ ಎಪ್ಸಮ್-ಸೋಕ್ ಮಾಡುವುದರಿಂದ ದೇಹದಿಂದ ಸಂಗ್ರಹವಾದ ಸುಮಾರು 20% ವಿಷವನ್ನು ಹೊರಹಾಕಬಹುದು. ಇದು ಜೀವಕೋಶಗಳ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ರೋಗಗಳ ಸಂಭವವನ್ನು ಕಡಿಮೆ ಮಾಡುತ್ತದೆ, ಮುಖ್ಯವಾಗಿ ಚರ್ಮಕ್ಕೆ ಸಂಬಂಧಿಸಿದವುಗಳು.
ಪಾದದ ವಾಸನೆಯನ್ನು ನಿವಾರಿಸುತ್ತದೆ :
ಈ ತಂತ್ರಜ್ಞಾನದಲ್ಲಿರುವ ಹಲವಾರು ಬ್ಯೂಟಿ ಸಲೂನ್‌ಗಳು ಪೆಡಿಕ್ಯೂರ್ ದಿನಚರಿಗಳಿಗೆ ಎಪ್ಸಮ್ ಉಪ್ಪನ್ನು ಬಳಸುತ್ತವೆ. ಎಪ್ಸಮ್ ಉಪ್ಪಿನೊಂದಿಗೆ ಬೆರೆಸಿದ ಬೆಚ್ಚಗಿನ ನೀರಿನಲ್ಲಿ ಪಾದಗಳನ್ನು ನೆನೆಸುವುದು ಕ್ರೀಡಾಪಟುವಿನ ಪಾದ, ಬ್ಯಾಕ್ಟೀರಿಯಾ/ಶಿಲೀಂಧ್ರ ಸೋಂಕುಗಳು, ದುರ್ವಾಸನೆಯ ಪಾದಗಳಿಗೆ ಚಿಕಿತ್ಸೆ ನೀಡಲು ಮತ್ತು ಸತ್ತ ಜೀವಕೋಶಗಳನ್ನು ಸ್ಕ್ರಬ್ ಮಾಡಲು ಪರಿಣಾಮಕಾರಿಯಾಗಿದೆ
ಸಂಧಿವಾತ ನೋವನ್ನು ನಿವಾರಿಸುತ್ತದೆ:
ಎಪ್ಸಮ್ ಉಪ್ಪು ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿರುವುದರಿಂದ, ಗೌಟ್ ಚಿಕಿತ್ಸೆಯಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿದೆ. ಒಂದು ಬಕೆಟ್ ಬೆಚ್ಚಗಿನ ನೀರಿಗೆ ಒಂದು ಹಿಡಿ ಎಪ್ಸಮ್ ಉಪ್ಪನ್ನು ಸೇರಿಸಿ ಮತ್ತು ಬಾಧಿತ ದೇಹದ ಭಾಗವನ್ನು ನೆನೆಸಿ.
ತೋಟಗಾರಿಕೆ ಉಪಯೋಗಗಳು:
ಸಸ್ಯಗಳ ಬೆಳವಣಿಗೆಗೆ ಸಹಾಯ:
ಎಪ್ಸಮ್ ಉಪ್ಪು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ಹೂವುಗಳು ಮತ್ತು ಹಣ್ಣುಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕೀಟ ನಿಯಂತ್ರಣ:
ಎಪ್ಸಮ್ ಉಪ್ಪು ಗೊಂಡೆಹುಳುಗಳು ಮತ್ತು ಇತರ ಕೀಟಗಳನ್ನು ತಡೆಯಲು ಸಹಾಯ ಮಾಡುತ್ತದೆ, ಎಂದು ಉದ್ಯಾನ ನಿರ್ವಹಣೆ ತಾಣವೊಂದು ಹೇಳಿದೆ.
ಪೋಷಕಾಂಶಗಳ ಹೀರಿಕೊಳ್ಳುವಿಕೆ:
ಎಪ್ಸಮ್ ಉಪ್ಪು ಸಸ್ಯಗಳು ಇತರ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಎಚ್ಚರವಹಿಸಬೇಕಾದ ಅಂಶಗಳು
ಎಪ್ಸಮ್ ಸಾಲ್ಟ್ ಬಳಕೆಗೆ ಸುರಕ್ಷಿತವಾಗಿದ್ದರೂ, ಕೆಲವು ಜನರು ಅಡ್ಡಪರಿಣಾಮಗಳನ್ನು ಅನುಭವಿಸಿದ್ದಾರೆ. ಎಪ್ಸಮ್ ಉಪ್ಪನ್ನು ಮೌಖಿಕವಾಗಿ ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ. ಇದರಲ್ಲಿರುವ ಹೆಚ್ಚಿನ ಮೆಗ್ನೀಶಿಯಂ ನಿಮ್ಮ ಜೀರ್ಣಕ್ರಿಯೆಗೆ ಅಡ್ಡಿ ಉಂಟು ಮಾಡಬಹುದು. ಆದ್ದರಿಂದ, ಎಪ್ಸಮ್ ಸಾಲ್ಟ್ ಅನ್ನು ತಜ್ಞರು ಶಿಫಾರಸ್ಸು ಮಾಡಿದಷ್ಟು ಮಾತ್ರ ಸೇವಿಸಬೇಕು. ಅಪರೂಪದ ಸಂದರ್ಭಗಳಲ್ಲಿ, ಮೆಗ್ನೀಶಿಯಂ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ಹೃದಯದ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಎಪ್ಸಮ್ ಉಪ್ಪನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಆದ್ದರಿಂದ ಈ ರೀತಿಯ ಮನೆಮದ್ದು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಯಾವಾಗಲೂ ಬಳಕೆಯ ಮೊದಲು ಸ್ವಲ್ಪ ಜಾಗರೂಕರಾಗಿರಬೇಕುಎಪ್ಸಮ್ ಉಪ್ಪು ಸ್ನಾನವನ್ನು ಮಿತವಾಗಿ ಬಳಸುವುದು ಮುಖ್ಯ. ಹೆಚ್ಚು ಹೊತ್ತು ಸ್ನಾನ ಮಾಡುವುದರಿಂದ ಚರ್ಮ ಒಣಗಬಹುದು.

ಶ್ರೀಮತಿ ಸೌಮ್ಯ ಸನತ್