ಬೆಲ್ ಅಥವಾ ಬೇಲ ಅಸಾಮಾನ್ಯ ಹಣ್ಣು ಮತ್ತು ಪೌಷ್ಟಿಕಾಂಶಗಳ ಆಗರ. ಇದನ್ನು ಸಾಮಾನ್ಯವಾಗಿ ಸೇವನೆ ಮಾಡದೇ ಇದ್ದರೂ, ಇದರಲ್ಲಿರುವ ಔಷಧೀಯ ಗುಣದಿಂದಾಗಿ ಇದನ್ನು ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಸಾಂಪ್ರದಾಯಿಕ ಔಷಧದಲ್ಲಿ ಅನೇಕ ಉಪಯೋಗಗಳನ್ನು ಹೊಂದಿರುವ ಈ ಪ್ರಮುಖ ಔಷಧೀಯ ಸಸ್ಯದ ಹಣ್ಣು ಮಾತ್ರವಲ್ಲ ಬೇರು, ಎಲೆ, ಕಾಂಡ, ಹಣ್ಣು ಮತ್ತು ಬೀಜದ ಬೀಜಗಳು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಉಪಯೋಗ ಮಾಡಲಾಗುತ್ತದೆ.
ಮಧುಮೇಹದಿಂದ ಹಿಡಿದು, ಮಲಬದ್ಧತೆ ನಿವಾರಣೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ.
ರೂಟೇಸಿ ಕುಟುಂಬಕ್ಕೆ ಸೇರಿದ ಬೇಲದ ವೈಜ್ಞಾನಿಕ ಹೆಸರು ಫೆರೋನಿಯ. ಇದಕ್ಕೆ ಕಪಿತ್ಥ , ದಂತಶಠ ಅಂತಲೂ ಕರೆಯುತ್ತಾರೆ. ಮಹಾಗಣಪತಿಗೆ ಪ್ರಿಯವಾದ ಹಣ್ಣು. ರಾಮನಿಗೆ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಲು ಕಪಿಗಳು ಈ ಹಣ್ಣನ್ನು ಕೊಟ್ಟವು ಎಂಬ ಪ್ರತೀತಿ ಕೂಡ ಇದೆ. ಇದಕ್ಕೆ ಕರಭ ವಲ್ಲಭ ಎಂದೂ ಕರೆಯುತ್ತಾರೆ. ಅಂದರೆ ಆನೆಗಳಿಗೆ ಇಷ್ಟ ಎಂದರ್ಥ. ಹಾಗಾಗಿಯೇ ಇಂಗ್ಲಿಷ್ ಭಾಷೆಯಲ್ಲಿ ಇದಕ್ಕೆ ಎಲಿಫೆಂಟ್ ಆಪಲ್ ಎಂದು ಕರೆಯುತ್ತಾರೆ. ವುಡ್ ಆಪಲ್ ಎಂಬುದು ಸಾಮಾನ್ಯವಾಗಿ ಎಲ್ಲರೂ ಕರೆಯುವ ಹೆಸರು. ರಾಮನವಮಿಯ ದಿನ ಇದರ ಪಾನಕವನ್ನು ಸೇವಿಸಲು ಕಪಿಗಳಿಗೆ ಇಷ್ಟ ಎಂಬುದೊಂದೇ ಕಾರಣ ಇರಲಿಕ್ಕಿಲ್ಲ. ಈ ಹಣ್ಣಿಗಿರುವ ಗುಣಗಳು ಬೇಸಿಗೆಗೆ ಎಂದೇ ಮಾಡಿದಂತಿದೆ. ಸಿಹಿ, ಹುಳಿ ರುಚಿಗಳನ್ನು ಹೊಂದಿದ್ದು ಜಿಡ್ಡಿನ ಅಂಶ ಮತ್ತು ತಂಪು ಗುಣವನ್ನು ಹೊಂದಿದೆ. ಹಾಗಾಗಿ ಸಹಜವಾಗಿ ನಮಗೆ ಬೇಸಿಗೆಯಲ್ಲಿ ಉಷ್ಣತೆಯ ಕಾರಣದಿಂದ ಉಂಟಾಗುವ ಹಲವು ತೊಂದರೆಗಳನ್ನು ಇದು ತಡೆಯುತ್ತದೆ ಮತ್ತು ಆಗಲೇ ತೊಂದರೆಗಳನ್ನು ಅನುಭವಿಸುತ್ತಿರುವವರಿಗೆ ರೋಗ ನಿವಾರಣೆಯಲ್ಲಿ ಕೂಡ ಅನುಕೂಲ ಮಾಡಿಕೊಡುತ್ತದೆ. ಸಂಹಿತೆಗಳಲ್ಲಿ ಇದರ ವಿವರಣೆ ಮಾಡುವಾಗ ತ್ರಿದೋಷಜಿತ್ ಎಂದು ಕರೆದಿದ್ದಾರೆ. ಅಂದರೆ ವಾತ, ಪಿತ್ತ ಮತ್ತು ಕಫ ಮೂರೂ ದೋಷಗಳನ್ನು ನಿಯಂತ್ರಿಸುತ್ತದೆ ಎಂದರ್ಥ.
ಕಾಡಿನಲ್ಲಿ ಬೆಳೆಯುವ ಬೇಲದ(ಕಪಿತ್ಥ) ಹಣ್ಣುಗಳಲ್ಲಿ ಮನುಷ್ಯನ ಆರೋಗ್ಯಕ್ಕೆ ಬೇಕಾದ ವಿಟಮಿನ್‌ಗಳು ಸಿಗುತ್ತವೆ.ಈ ಹಣ್ಣಿನಲ್ಲಿ ಪ್ರೋಟೀನ್, ವಿಟಮಿನ್, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ವಿಟಮಿನ್ ಬಿ-ಕಾಂಪ್ಲೆಕ್ಸ್, ಖನಿಜಗಳು, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂ, ಸತು, ತಾಮ್ರ ಮತ್ತು ಕಬ್ಬಿಣದ ಅಂಶಗಳಿವೆ.
ಈ ಹಣ್ಣಿನ ತಿರುಳು ಹುಳಿಮಿಶ್ರಿತ ಸಿಹಿಯಾಗಿದ್ದು, ಪಾನಕ ಮಾಡಿ ಕುಡಿಯಲು ಯೋಗ್ಯವಾಗಿದೆ. ಬಿಸಿಲಿನ ತಾಪಕ್ಕೆ ಇದು ತಂಪನ್ನೀಯುತ್ತದೆ. ಮರದ ಅಂಟನ್ನು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಬೇಲದ ಹಣ್ಣಿನ ತಿರುಳಿಗೆ ಬೇಧಿ, ಆಮಶಂಕೆ ಮತ್ತಿತರ ಕಾಯಿಲೆಗಳಿಗೆ, ಒಸಡನ್ನು ಗಟ್ಟಿಗೊಳಿಸಲು, ಗಂಟಲು ಹುಣ್ಣಿನ ಉಪಶಮನಕ್ಕೆ, ಸಿಪ್ಪೆಯ ಕಷಾಯ ಜ್ವರ ನಿವಾರಣೆಗೂ ಇದು ರಾಮಬಾಣ.
ಬೇಲದ ಹಣ್ಣಿನ ಉಪಯೋಗಗಳು :

- ಈ ಹಣ್ಣನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ, ಹಾಗೂ ಮಲಬದ್ಧತೆಗಳಂತ ಸಮಸ್ಯೆಗಳನ್ನು ನಿವಾರಿಸುತ್ತದೆ.ಹೊಟ್ಟೆಯಲ್ಲಾಗುವ ಅಲ್ಸರ್ಗಳಿಗೆ ಇದು ರಾಮ ಬಾಣವಾಗಿ ಕೆಲಸ ಮಾಡುತ್ತದೆ.
- ಇದರಲ್ಲಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
- ಈ ಹಣ್ಣು ಮಕ್ಕಳಲ್ಲಿ ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತದೆ. .
- ಬೇಸಿಗೆಯಲ್ಲಿ ಕಾಡುವ ಸುಸ್ತು, ನಿಶಕ್ತಿ, ತಲೆಸುತ್ತಿಗೆ ಈ ಹಣ್ಣನ್ನ ತಿಂದರೆ ಇಲ್ಲವೇ ಇದರ ಜ್ಯೂಸ್ ಮಾಡಿ ಕುಡಿದರೆ ದೇಹದಲ್ಲಿ ಚೈತನ್ಯ ಮೂಡುವುದು ಮಾತ್ರವಲ್ಲ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
- ಅಧಿಕ ಬಿಪಿ ಸಮಸ್ಯೆಯಿಂದ ತೊಂದರೆಗೆ ಒಳಗಾದವರು ಅಂದರೆ, ಅಧಿಕ ರಕ್ತದೊತ್ತಡ ಹೊಂದಿರುವವರು ಪ್ರತಿದಿನ ಬೇಲದ ಜ್ಯೂಸ್ ಅನ್ನು ಸೇವಿಸಬಹುದು. ಇದರಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಕಂಡುಬರುತ್ತದೆ ಮತ್ತು ಇದು ಹೈ ಬಿಪಿಯನ್ನು ಕಡಿಮೆ ಮಾಡಲು ಕೆಲಸ ಮಾಡುತ್ತದೆ. ಇದಲ್ಲದೆ ಇದು ನರಗಳನ್ನು ಶಾಂತಗೊಳಿಸಲು ಕೆಲಸ ಮಾಡುತ್ತದೆ.
- ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇರುವವರಿಗೂ ಬೇಲದ ಜ್ಯೂಸ್ ಉತ್ತಮ ಪರಿಹಾರವಾಗಿದೆ. ಬೇಲದ ಹಣ್ಣಿನಲ್ಲಿ ಸಾಕಷ್ಟು ಕಬ್ಬಿಣಾಂಶವಿದ್ದು, ಇದು ರಕ್ತ ಮತ್ತು ರಕ್ತದ ಶುದ್ದೀಕರಣವನ್ನು ಮಾಡುತ್ತದೆ.
- ವಿಟಮಿನ್ ಎ, ಬಿ ಮತ್ತು ಸಿ ಸೇರಿದಂತೆ ದೇಹವನ್ನು ಆರೋಗ್ಯವಾಗಿಡಲು ಕೆಲಸ ಮಾಡುವವಂತ ವಿಟಮಿನ್‌ಗಳು ಬೇಲದ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದು ಹೃದಯವನ್ನು ಆರೋಗ್ಯವಾಗಿಡುತ್ತದೆ ಮತ್ತು ದೃಷ್ಟಿ ಸುಧಾರಿಸುತ್ತದೆ.
ಬಲ್ಲವರೇ ಬಲ್ಲರು ಬೇಲದ ರುಚಿ
ಹಣ್ಣಿನ ಜಾಮ್ : ಬೇಕಾಗುವ ಸಾಮಗ್ರಿ: ಬೇಲದ ಹಣ್ಣಿನ ಪಲ್ಪ್ ಒಂದು ಕಪ್, ಸಕ್ಕರೆ 2 ಕಪ್, ನೀರು ಅರ್ಧ ಕಪ್, ಏಲಕ್ಕಿ 4,
ಮಾಡುವ ವಿಧಾನ: ಮೊದಲಿಗೆ ಸಕ್ಕರೆ ಮತ್ತು ನೀರು ಹಾಕಿ ಕುದಿಯಲು ಬಿಡಿ. ಕುದಿ ಬಂದ ನಂತರ ಹಣ್ಣಿನ ಪಲ್ಪ್ ಹಾಕಿ. ಪಾಕ ಬರುವವರೆಗೂ ಕುದಿಸಿ. ಕೊನೆಯಲ್ಲಿ ಏಲಕ್ಕಿ ಪುಡಿ ಸೇರಿಸಿದರೆ ಬೇಲದ ಹಣ್ಣಿನ ಜಾಮ್ ಸವಿಯಲು ಸಿದ್ಧ.
ರುಚಿಯಾದ ಚಟ್ನಿ

ಬೇಕಾಗುವ ಸಾಮಗ್ರಿ: ಬೇಲದ ಹಣ್ಣು ಅರ್ಧ, ಕೊತ್ತಂಬರಿ ಸೊಪ್ಪು ಒಂದು ಕಟ್ಟು, ತೆಂಗಿನ ಕಾಯಿ ಒಂದು ಕಪ್, ಉಪ್ಪು, ಒಣ ಮೆಣಸು
ಮಾಡುವ ವಿಧಾನ: ಒಗ್ಗರಣೆಗೆ ಎಣ್ಣೆ, ಸಾಸಿವೆ, ಜೀರಿಗೆ ಕರಿಬೇವು, ಮೊದಲು ಒಣಮೆಣಸು ಮತ್ತು ಕೊತ್ತುಂಬರಿ ಸೊಪ್ಪನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಉಳಿದ ಎಲ್ಲಾ ವಸ್ತುಗಳನ್ನು ಹಾಕಿ ನುಣ್ಣನೆ ರುಬ್ಬಿ, ಒಗ್ಗರಣೆ ಕೊಡಿ. ಈಗ ಸವಿಯಲು ಚಟ್ನಿ ಸಿದ್ದ. ಇದು ಹುಳಿ, ಸಿಹಿ ಮತ್ತು ಖಾರ ಮಿಶ್ರಿತವಾಗಿರುತ್ತದೆ.
ಪುಳಿಯೋಗರೆ

ಬೇಕಾಗುವ ಸಾಮಗ್ರಿಗಳು: ಬೇಲದ ಹಣ್ಣು, ಉಪ್ಪು, ಒಣಮೆಣಸು ಉದುರಾದ ಅನ್ನ, ಒಣಮೆಣಸು ಆರು, ಉದ್ದಿನ ಬೇಳೆ 2 ಚಮಚ, ಕಡಲೇಬೇಳೆ 2 ಚಮಚ, ಕೊತ್ತಂಬರಿ ಬೀಜ 2 ಚಮಚ, ಜೀರಿಗೆ 2 ಚಮಚ, ಮೆಂತೆ , ಇಂಗು, ಅರಿಷಿಣ, ಕೊಬ್ಬರಿ ತುರಿ, ಕೊಬ್ಬರಿ ಎಣ್ಣೆ, ಒಗ್ಗರೆಣೆಗೆ ಎಣ್ಣೆ , ಶೇಂಗಾ, ಉದ್ದಿನ ಬೇಳೆ, ಕರಿಬೇವು.
ಮಾಡುವ ವಿಧಾನ: ಮೊದಲು ಎಲ್ಲಾ ಮಸಾಲ ಪದಾರ್ಥಗಳನ್ನು ಹುರಿದು ಪುಡಿಮಾಡಿಕೊಳ್ಳಿ. ಒಗ್ಗರೆಣೆಗೆ ಇಟ್ಟು ಉಳಿದ ವಸ್ತು ಹಾಕಿ. ಅದಕ್ಕೆ ಬೇಲದ ಹಣ್ಣನ್ನು ಕಿವುಚಿ ಹಾಕಿ. ಉಪ್ಪು ಹಾಕಿ, ಕುದಿಸಿ. ಆಮೇಲೆ ಮಸಾಲ ಪುಡಿ ಹಾಕಿ, ಕುದಿಸಿ, ಇಳಿಸಿ. ನಂತರ ಉದುರಾದ ಅನ್ನ ಹಾಕಿ ಕಲೆಸಿ. ಈಗ ಬೇಲದ ಹಣ್ಣಿನ ಪುಳಿಯೊಗರೆ ರೆಡಿ. ಹಣ್ಣಿನ ಹುಳಿ ಮತ್ತು ಸಿಹಿಯ ಪ್ರಮಾಣ ನೋಡಿಕೊಂಡು, ಬೇಕಾದರೆ ಸ್ವಲ್ಪ ಸೇರಿಸಿಕೊಳ್ಳಿ.
ತಂಪಿಗೆ ಪಾನಕ
ಬೇಕಾಗುವ ಸಾಮಗ್ರಿ: ಬೇಲದ ಹಣ್ಣು 1, ಬೆಲ್ಲ , ಏಲಕ್ಕಿ ಪುಡಿ ಸ್ವಲ್ಪ, ನೀರು, ಚಿಟಿಕೆ ಉಪ್ಪು
ಮಾಡುವ ವಿಧಾನ: ಮೊದಲು ಹಣ್ಣಿನ ಪಲ್ಪ್ ತೆಗೆದುಕೊಳ್ಳಿ. ಅದಕ್ಕೆ ಸ್ವಲ್ಪ ನೀರು ಹಾಕಿ ಕಿವುಚಿ. ನಂತರ ಶೋಧಿಸಿ. ಉಪ್ಪು ಮತ್ತು ಸಿಹಿಗಾಗಿ ಬೆಲ್ಲ ಹಾಕಿ. ಚೆನ್ನಾಗಿ ಕದಡಿ. ಏಲಕ್ಕಿ ಪುಡಿ ಹಾಕಿ. ಅಗತ್ಯವಿರುವಷ್ಟು ತಣ್ಣನೆ ನೀರು ಹಾಕಿ. ಪಾನಕ ಕುಡಿಯಲು ಸಿದ್ಧ.

ಶ್ರೀಮತಿ ಸೌಮ್ಯ ಸನತ್ ✍️