ಬೆಂಗಳೂರು: ಚಿಕ್ಕಬಾಣಾವರ ರೈಲು ನಿಲ್ದಾಣದಲ್ಲಿ ದಾರುಣ ಘಟನೆ ನಡೆದಿದೆ. ವಂದೇ ಭಾರತ್ ಹೈ-ಸ್ಪೀಡ್ ರೈಲಿಗೆ ಸಿಲುಕಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.
ಮೊದಲ ನೋಟಕ್ಕೆ ಇದು ಆತ್ಮಹತ್ಯೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದರೂ, ಪ್ರಾಥಮಿಕ ತನಿಖೆಯಲ್ಲಿ ಬೇರೆ ವಿಚಾರಗಳು ಬೆಳಕಿಗೆ ಬರುತ್ತಿವೆ.
ಕೇರಳ ಮೂಲದ ಸ್ಟೆರ್ಲಿನ್ ಎಲಿಜ ಶಾಜಿ (19) ಮತ್ತು ಜಸ್ಟಿನ್ ಜೋಸೆಫ್ (20) ಮೃತಪಟ್ಟ ವಿದ್ಯಾರ್ಥಿಗಳು. ಇಬ್ಬರೂ ಸಪ್ತಗಿರಿ ಕಾಲೇಜಿನಲ್ಲಿ ಪ್ರಥಮ ವರ್ಷದ BSc ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.
ರೈಲ್ವೆ ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಇಬ್ಬರು ತಮ್ಮ ಪಿಜಿಗೆ ಹೋಗುವ ವೇಳೆ ಟ್ರ್ಯಾಕ್ ಮೂಲಕ ಶಾರ್ಟ್‌ಕಟ್ ಪ್ರಯತ್ನಿಸಿದ್ದರೆಂಬ ಶಂಕೆ ಇದೆ. ಇದೇ ವೇಳೆಯಲ್ಲಿ ವಂದೇ ಭಾರತ್ ಹೈ-ಸ್ಪೀಡ್ ರೈಲು ದಾಟುತ್ತಿದ್ದು, ಅದಕ್ಕೆ ಸಿಲುಕಿ ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ UDR (ಅಸಹಜ ಸಾವಿನ ವರದಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಯುವಕ-ಯುವತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪೊಲೀಸರ ತಂಡ ಸಂಗ್ರಹಿಸುತ್ತಿದೆ. ಮೃತದೇಹಗಳನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸಾಗಿಸಲಾಗಿದೆ.








