ಗೊಮ್ಮಟೇಶನ ನೆಲೆವೀಡು, ಬೇಲೂರು- ಹಳೇಬೀಡು ಶಿಲ್ಪಕಲೆಗಳ ತವರೂರು ಎಂಬ ಖ್ಯಾತಿ ಪಡೆದು, ಸಪ್ತ ಮಾತೃಕೆ ದೇವತೆಗಳು ನೆಲೆಸಿದ ಪುಣ್ಯಕ್ಷೇತ್ರ ‘ಹಾಸನ’. ಇಲ್ಲಿ ನೆಲೆಸಿರುವ ಹಾಸನಾಂಬೆ ದೇವಿ ಗ್ರಾಮ ದೇವತೆ ಆಗಿದ್ದಾಳೆ. ದೇವಿ ನೆಲೆಸಿದ ಪೌರಾಣಿಕ ಹಿನ್ನೆಲೆ:- ಕಾಶಿಯ ( ಕಾಶಿ ರಾಜನ ಮಕ್ಕಳುಎನ್ನುತ್ತಾರೆ.) ಸಪ್ತಮಾತೃಕೆಯರಾದ ಬ್ರಾಹ್ಮಿ, ಕೌಮಾರಿ, ವೈಷ್ಣವಿ, ಮಾಹೇಶ್ವರಿ, ವಾರಾಹಿ, ಇಂದ್ರಾಣಿ, ಚಾಮುಂಡಿ, ಯರು ಸುತ್ತಾಡಲು ದಕ್ಷಿಣ ಭಾಗಕ್ಕೆ ಬಂದರು. ಇಲ್ಲಿನ ಸೊಬಗಿಗೆ ಬೆರಗಾಗಿ ಈ ಕ್ಷೇತ್ರದಲ್ಲಿ ನೆಲೆಸಿದರು.
ವೈಷ್ಣವಿ, ಕೌಮಾರಿ, ಮಾಹೇಶ್ವರಿ ದೇವಿ ಇವರು ನಗುವ ದೇವತೆಗಳಾದ ‘ಹಸನಾಂಬೆಯರು’ (ಹಸನ- ನಗು, ಅಂಬೆ- ತಾಯಿ). ಮೂವರು ದೇವಿಯರು ಹುತ್ತದ ರಚನೆಯಲ್ಲಿ ನೆಲೆಸಿದರು. ಈ ದೇವಿಯರು ನೆಲೆಸಿದ ಕ್ಷೇತ್ರ ‘ಹಾಸನಾಂಬೆ’ಯು ಆಡು ಮಾತಿನಲ್ಲಿ ‘ಹಾಸನ’ ವಾಯಿತು. ಮೊದಲು ಸಿಂಹಾಸನಾಪುರಿ ಎಂದು ಕರೆಯುತ್ತಿದ್ದರು. ಮತ್ತೆ ಮೂವರು ಚಾಮುಂಡಿ, ವಾರಾಹಿ ಮತ್ತು ಇಂದ್ರಾಣಿ ದೇವಿಯರು ಹಾಸನದ ಸಮೀಪ ಇರುವ ದೇವಿಗೆರೆ ಹೊಂಡದ ಬಾವಿಯಲ್ಲಿ ನೆಲೆಸಿದರೆ, ಬ್ರಾಹ್ಮಿದೇವಿ ಸಮೀಪದ ಕೆಂಚಮ್ಮನ ಕೋಟೆಯಲ್ಲಿ ನೆಲೆಸಿದ್ದಾಳೆ. ಹೊಯ್ಸಳರ ಕಾಲದಲ್ಲಿ ಈ ಪ್ರದೇಶವನ್ನು ಹಾಸನ ಪಟ್ಟಣ ಎಂದು ಆಳಿದರು. ಹೊಯ್ಸಳರ ರಾಜಧಾನಿ ಬೇಲೂರು ಮತ್ತು ಹಳೇಬೀಡು ಹತ್ತಿರವಿರುವುದರಿಂದ ಹಾಸನ ಪಟ್ಟಣ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕೇಂದ್ರವಾಯಿತು.
ಆಶ್ವಿಜಮಾಸದ ನವರಾತ್ರಿ ಮುಗಿದು ಅಂದರೆ ಅಕ್ಟೋಬರ್ ಕೊನೆ ಅಥವಾ ನವಂಬರ್ ಆರಂಭದಲ್ಲಿ ಬರುವ ಗುರುವಾರದ ದಿನ ದೇವಾಲಯದ ಬಾಗಿಲು ತೆರೆಯುತ್ತಾರೆ. ಬಾಗಿಲು ತೆಗೆಯುವ ಸಮಯದಲ್ಲಿ ಅರಸು ವಂಶದವರು – ಪುರೋಹಿತರು- ಜಿಲ್ಲಾಧಿಕಾರಿಗಳು- ಗಣ್ಯರು- ಪತ್ರಿಕಾ ಮಾಧ್ಯಮದವರೆಲ್ಲರ ಸಮ್ಮುಖದಲ್ಲಿ ಬಾಗಿಲು ತೆಗೆಯುತ್ತಾರೆ. ಬಾಗಿಲು ತೆಗೆಯುವ ಮೊದಲು ಅರಸು ಮನೆತನದ ಸಂಪ್ರದಾಯದಂತೆ ಗರ್ಭಗುಡಿಯ ಹೊರ ವಿವಿಧ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ಮಾಡಿ ಬಾಳೆಕಂಬ ಕಡಿದು ಗರ್ಭಗುಡಿ ಬಾಗಿಲು ತೆಗೆಯಬೇಕು. ಆಶ್ವಿಜ ಮಾಸದ ನವರಾತ್ರಿ ನಂತರದ ಗುರುವಾರ ಬಾಗಿಲು ತೆಗೆದರೆ ದೀಪಾವಳಿ ಬಲಿಪಾಡ್ಯಮಿ ದಿನ ಪೂಜೆ ಮಾಡಿ ಬಾಗಿಲು ಹಾಕುತ್ತಾರೆ. ಅಂದರೆ ಬಾಗಿಲು ತೆಗೆದ ಮೇಲೆ ಏಳು ದಿನಕ್ಕೆ ಕಡಿಮೆಯಾಗ ದಂತೆ 16 ದಿನಗಳೊಳಗೆ ದೇವಿ ದರ್ಶನಕ್ಕೆ ಅವಕಾಶವಿದೆ. ಬಾಗಿಲು ತೆಗೆದು ದಿನವೇ ದೇವಿ ದರ್ಶನ ಮಾಡಿದರೆ ಅದನ್ನು ವಿಶ್ವರೂಪ ದರ್ಶನ ಎನ್ನುತ್ತಾರೆ. ಆಗ ದೇವಿಗೆ ಯಾವ ಪೂಜೆ ಅಲಂಕಾರ ಇಲ್ಲದೆ ದೇವಿ ದರ್ಶನ ‘ವಿಶ್ವರೂಪ ದರ್ಶನ’. ಬಾಗಿಲು ತೆಗೆದ ನಂತರವೇ ದೇವಸ್ಥಾನದ ಅಲಂಕಾರ ಸುಣ್ಣ ಬಣ್ಣ ಮಾಡುತ್ತಾರೆ. ಮೊದಲ ಪೂಜೆ ವಿಶೇಷವಾಗಿದ್ದು ಭಕ್ತರ ದರ್ಶನಕ್ಕೆ ಅವಕಾಶ ಕೊಡುತ್ತಾರೆ.
ದೀಪಾವಳಿಯ ಬಲಿಪಾಡ್ಯಮಿಯ ದಿನಎಲ್ಲರ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲು ಹಾಕುತ್ತಾರೆ. ಒಂದು ವರ್ಷ ಕಳೆದ ಮೇಲೆ ಗರ್ಭಗುಡಿ ಬಾಗಿಲು ತೆಗೆಯು ವುದು. ಅಲ್ಲಿ ತನಕ ಗರ್ಭ ಗುಡಿಯ ದ್ವಾರಕ್ಕೆ ನಿತ್ಯ ಪೂಜೆ, ಸಪ್ತಾಹ ಪೂಜೆ ಹಾಗೂ ಮಾಸಿಕ ಪೂಜೆಗಳು ನಡೆಯುತ್ತವೆ. ಅಚ್ಚರಿ ಪಡುವ ವಿಷಯ ಎಂದರೆ ದೇವಸ್ಥಾನ ದಲ್ಲಿ ಪವಾಡ ಸದೃಶ ಘಟನೆಗಳು ನಡೆಯುತ್ತವೆ. ಆ ಆಸಕ್ತಿಕರ ಸಂಗತಿಗಳು ಹೀಗಿವೆ. ವರ್ಷಕ್ಕೊಮ್ಮೆ ದೇವಾಲಯದ ಬಾಗಿಲು ತೆಗೆದ ಮೇಲೆ ದರ್ಶನದ ವೇಳೆ ಅದೇ ವರ್ಷ ಹಚ್ಚಿಟ್ಟ ದೀಪ ಮುಂದಿನ ವರ್ಷ ಬಾಗಿಲು ತೆಗೆಯುವಾಗ ದೀಪ ಜ್ಯೋತಿ ನಂದದೆ ಹಾಗೆ ಇರುತ್ತದೆ. ದೇವಿಯ ಅಲಂಕಾರಕ್ಕೆ ಏರಿಸಿದ ತಾಜಾ ಹೂವುಗಳು ವರ್ಷವಾದರೂ ಬಾಡದೆ ಹಾಗೆ ನಳನಳಿಸುತ್ತಿರುತ್ತದೆ. ದೇವಿ ಮುಂದೆ ನೈವೇದ್ಯಕ್ಕೆಂದು ಇಟ್ಟ ಅಕ್ಕಿ ಅನ್ನ ಪ್ರಸಾದವಾಗಿರುತ್ತದೆ. ದೇವಿಯ ಇಂಥ ವಿಚಿತ್ರ ಲೀಲೆಯನ್ನು ಕಣ್ತುಂಬಿ ಕೊಳ್ಳಲು ನೆರೆಹೊರೆ ರಾಜ್ಯಗಳಿಂದಲೂ ಲಕ್ಷಾಂತರ ಜನರು ಬರುತ್ತಾರೆ
ಇತಿಹಾಸ ಹಿನ್ನೆಲೆ:- ಚೋಳರ ನಾಯಕ ಪಾಳೇಗಾರ ಕೃಷ್ಣಪ್ಪ ನಾಯಕನ ಆಳ್ವಿಕೆ ಯಲ್ಲಿ ಕೋಟೆ ಕಟ್ಟಿಸುತ್ತಾನೆ. ಇವನ ನಂತರ ಬಂದ ಸಂಜೀವಪ್ಪ ನಾಯಕ ಒಮ್ಮೆ ಹೊರಗೆ ಪ್ರಯಾಣ ಹೊರಟಾಗ ಹೋಗುವ ಮಾರ್ಗದಲ್ಲಿ ಒಂದು ಮೊಲ ಅಡ್ಡ ಬರುತ್ತದೆ. ಇದು ಅಪಶಕುನ ಎಂದು ಹಿಂದಿರುಗಲು ಹೊರಟಾಗ ಅದೇ ಸ್ಥಳದಲ್ಲಿ ದೇವಿ ‘ಹಸನಾಂಬೆ’ ಪ್ರತ್ಯಕ್ಷಳಾಗಿ ನಾಯಕ ಕೇಳು ನಾನು ನಿಂತಿರುವ ಇದೇ ಸ್ಥಳ ದಲ್ಲಿ ನನಗೆ ದೇವಾಲಯವನ್ನು ಕಟ್ಟಿಸು ನಾನು ‘ಹಸನಾಂಬೆ’ ಹೆಸರಿನಲ್ಲಿ ಇಲ್ಲಿಯೇ ನೆಲೆಸಿ ಗ್ರಾಮವನ್ನು ರಕ್ಷಿಸುತ್ತೇನೆ. ಬೇಡಿ ಬಂದ ಭಕ್ತರ ಎಲ್ಲ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ ಎಂದು ಮಾತು ಕೊಟ್ಟಳು. ‘ಹಸನಾಂಬೆ’ ಆಡು ಮಾತಿನಲ್ಲಿ ‘ಹಾಸನ’ ವಾಗಿ ಶಕ್ತಿರೂಪಿ ದೇವಿ, ನಗರದ ಹೃದಯ ಭಾಗದಲ್ಲಿ ನೆಲೆಸಿದ ದಿನದಿಂದಲೇ ದೇವಸ್ಥಾನ ಪ್ರಸಿದ್ಧಿಗೆ ಬಂದಿತು.
ಕಳ್ಳಪ್ಪನ ಗುಡಿ ಕಥೆ:- ಇದು ಜನಪದ ಕಥೆ: ದೇವಿ ಭಕ್ತಾದಿಗಳು ಅರ್ಪಿಸುವ ಆಭರಣಗಳಿಂದ ಸಾಲಂಕೃತಳಾಗಿ ಕಂಗೊಳಿಸುವ ದೇವಿಯನ್ನು ಕಂಡ ಕೆಲವು ಕಳ್ಳರು ಆಭರಣ ಕದಿಯಲು ಬಂದು ಬಾಗಿಲ ಬೀಗ ಒಡೆದು ಒಳ ಹೋಗಿ ದೇವಿಯ ಆಭರಣ ತೆಗೆಯಲು ಕೈ ಹಾಕಿದಾಗ ಕೋಪ ಗೊಂಡ ದೇವಿ ಕಳ್ಳರಿಗೆ ಅಲ್ಲಿಯ ಕಲ್ಲಾಗುವಂತೆ ಶಾಪ ಕೊಡುತ್ತಾಳೆ. ಹೀಗೆ ನಾಲ್ಕು ಕಳ್ಳರು ಕಲ್ಲಾದರು.
ಕಲ್ಲಾದ ನಾಲ್ಕು ಕಳ್ಳರಿಗೆ ಗರ್ಭಗುಡಿಯ ಪಕ್ಕದಲ್ಲೇ ಗುಡಿ ಕಟ್ಟಿದರು. ಇದನ್ನು ‘ಕಳ್ಳಪ್ಪನ ಗುಡಿ’ ಎಂದು ಕರೆಯುತ್ತಾರೆ. ಕಳ್ಳಪ್ಪನ ಗುಡಿಯ ಪಕ್ಕದಲ್ಲಿ 5 ಅಡಿ ಉದ್ದದ ಒಂದು ಕಂಬವನ್ನು ಸ್ಥಾಪಿಸಿದ್ದಾರೆ. ಇದು ಹಾಲಪ್ಪನ ಗದ್ದುಗೆ. ಇದಕ್ಕೆ ಪೂಜೆ ಸಲ್ಲಿಸುತ್ತಾರೆ.
ಸಪ್ತ ಮಾತೃಕೆ ಯರ ದೇವಿಯ ಗರ್ಭಗುಡಿಯ ಬಲಭಾಗದಲ್ಲಿ ‘ವೀರಭದ್ರ ಸ್ವಾಮಿ’ ನೆಲೆಸಿದ್ದು ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತದೆ. ದೇವಿಯ ಎಡ ಭಾಗದಲ್ಲಿ ‘ದರ್ಬಾರ್ ಗಣಪತಿ’ ನೆಲೆಸಿದ್ದಾನೆ. ಶೀಘ್ರವೇ ವರ ಪಾಲಿಸುವ ಪ್ರಥಮ ವಂದಿಪ ಗಣಪತಿ ಯನ್ನು ವಿಶೇಷವಾಗಿ ಪೂಜಿಸುತ್ತಾರೆ. ದೀಪಾವಳಿಯ ಬಲಿಪಾಡ್ಯಮಿ ದಿನ ಸಿದ್ದೇಶ್ವರ ಸ್ವಾಮಿ ಜಾತ್ರೆ ರಥೋತ್ಸವ ನಡೆಯುತ್ತದೆ. ಇಂದು ಮುಂಜಾನೆ ದೇವಿಗೆ ವಿಶೇಷವಾದ ಪೂಜೆ ಅರ್ಪಿಸಿ ನಂತರ ಜಾತ್ರೆ ನಡೆಸುತ್ತಾರೆ. ಮಾರನೇ ದಿನ ಕೆಂಡೋತ್ಸವ ಸೇವೆ ನಡೆಸುತ್ತಾರೆ. ದಸರಾ ಜಾತ್ರೆ ಯಂತೆ ಇಲ್ಲಿನ ಜಾತ್ರೆ ಕಂಗೊಳಿಸುತ್ತದೆ. ಸಾರ್ವಜನಿಕರಿಗೆ ಅನುಕೂಲವಾಗು ವಂತೆ ಶೌಚಾಲಯ ಪಾರ್ಕಿಂಗ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿರುತ್ತಾರೆ. ದೇವಿಯ ದರ್ಶನಕ್ಕೆ ಹಣ ಕೊಟ್ಟು ಟಿಕೆಟ್ ಪಡೆಯಬೇಕು.
ಅತ್ತೆ- ಸೊಸೆ ಕತೆ:- ಹಳ್ಳಿ ಸೊಗಡು ಕಥೆ ನಾವು ನೀವು ತಿಳಿದಂತೆ ಅಲ್ಲ. ನೂರಾರು ಜನರಿಗೆ ಭರವಸೆ ಕೊಡುವ ಕಥೆ. ಸಾವಿರಾರು ವರ್ಷಗಳ ಹಿಂದೆ ದೇವಾಲಯದ ಸಮೀಪವಿದ್ದ ಒಂದು ಕುಟುಂಬದ ಸೊಸೆ ನಿತ್ಯವೂ ಹಾಸನಂಬೆ ದೇವಿಯ ದರ್ಶನಕ್ಕೆ ಬರುತ್ತಿದ್ದಳು. ಅವಳಿಗೊಬ್ಬ ಕೆಟ್ಟ ಅತ್ತೆಯಿದ್ದಳು. ಅವಳೊಮ್ಮೆ ಸೊಸೆ ಮೇಲಿನ ಕೋಪದಿಂದ ಭಾರವಾದ ವಸ್ತುವನ್ನು ತೆಗೆದು ಸೊಸೆಯ ಮೇಲೆ ಬಿಸಾಕುತ್ತಾಳೆ ಅದು ಸೊಸೆಯ ಹಣೆಗೆ ಬಡಿದು ಗಾಯವಾಗಿ ರಕ್ತ ಹರಿಯುತ್ತದೆ.
ನೋವಿನಿಂದ ದೇವಿಯನ್ನು ಜೋರಾಗಿ ಕೂಗಿ ಕರೆದು ದೇವಾಲಯದ ಒಳಗೆ ಬಂದು ಅಳುತ್ತಾ ಕೂರುತ್ತಾಳೆ. ಸೊಸೆಯ ನಿಷ್ಕಾಮ ಕೂಗಿಗೆ ಹಾಸನಾಂಬೆ ದೇವಿ ಪ್ರತ್ಯಕ್ಷಳಾಗಿ ಆ ಸೊಸೆಗೆ ಇನ್ನೆಂದೂ ಇಂತ ಕಷ್ಟ ಬರದಿರಲಿ ಎಂದು ಅವಳನ್ನು ಕಲ್ಲಾಗಿಸಿ ತನ್ನ ಹತ್ತಿರವೇ ಇರಿಸಿಕೊಳ್ಳುತ್ತಾಳೆ. ‘ಸೊಸೆ ಕಲ್ಲು’ ಗುಡಿಯಲ್ಲಿ ಮಾತೃಕೆ ಯರ ಸಮೀಪವೇ ಇದೆ. ಪ್ರತಿ ವರ್ಷ ಈ ಕಲ್ಲು ದೇವಿಯ ಸಮೀಪ ಬರಲು ಒಂದು ಇಂಚಿಗಿಂತ ಕಡಿಮೆ ಚಲಿಸುತ್ತಿದೆ ಎನ್ನುತ್ತಾರೆ. ಆ ಕಲ್ಲು ದೇವಿಯ ಪಾದ ಮುಟ್ಟಿ ದಾಗ ಕಲಿಯುಗ ಅಂತ್ಯವಾಗುತ್ತದೆ ಎಂಬ ನಂಬಿಕೆ.
ಪೌರಾಣಿಕ ಕಥೆ:- ಈ ಪ್ರದೇಶದಲ್ಲಿ ‘ಅಂಧಕಾಸುರ’ಎಂಬ ರಾಕ್ಷಸ ಸಾಮಾನ್ಯ ಜನರಿಗೆ ತೊಂದರೆ ಕೊಡುತ್ತಿದ್ದನು. ಅವನನ್ನು ನಿಗ್ರಹಿಸಲು ಶಕ್ತಿ ಸ್ವರೂಪಿಣಿಯಾಗಿ ಬಂದ ಶ್ರೀ ಹಾಸನಾಂಬ ತನ್ನ ಪರಾಕ್ರಮ ಮೆರೆದು ರಾಕ್ಷಸನನ್ನು ಸಂಹರಿಸಿ ಈ ಪ್ರಾಂತ್ಯದ ಜನಗಳಿಗೆ ಸುಖ ಶಾಂತಿ ನೆಮ್ಮದಿ ಸಿಗುವಂತೆ ಮಾಡಿದಳು ಎಂಬ ಕಥೆ. ಈ ದೇಗುಲದ ಕೆತ್ತನೆ ದ್ರಾವಿಡ ಶೈಲಿಯಲ್ಲಿದೆ. ದೊಡ್ಡದಾದ ಸುಂದರ ರಾಜಗೋ ಪುರ ಇದೆ. ಈ ದೇವಾಲಯದ ರಚನೆಯು ಸಿದ್ದೇಶ್ವರ ಸ್ವಾಮಿ ಎಂದು ಕರೆಯುವ ಶಿವನಿಗೆ ಸಮರ್ಪಿತವಾಗಿದೆ. ಇಲ್ಲಿರುವ ಲಿಂಗಗಳು ಸ್ವಯಂಭೊ ಲಿಂಗಗಳಾಗಿವೆ. ದಶಕಂಠ ರಾವಣ ವೀಣೆಯನ್ನು ನುಡಿಸುವಂತಹ ಕುತೂಹಲ ವಾದ ವಿಗ್ರಹವನ್ನು ಇಲ್ಲಿ ಕಾಣಬಹುದು. ರಾವಣನ ಶ್ರದ್ಧೆ ಮತ್ತು ಭಕ್ತಿ ಗೌರವಿಸುವ ಭಕ್ತರು ಪ್ರತಿ ಅಮಾವಾಸ್ಯೆ ದಿನ ದೇವಾಲಯದಲ್ಲಿ ಸೇರುತ್ತಾರೆ. ದೇವಿ ಹಾಗೂ ಕ್ಷೇತ್ರದ ಕುರಿತಾದ ಹಲವಾರು ದಂತ, ಐತಿಹಾಸಿಕ ಹಾಗೂ ಪುರಾಣ ಕಥೆಗಳು ಸಾಕಷ್ಟು ಇದ್ದು ಇವೆಲ್ಲವೂ ಜನಗಳ ಭಕ್ತಿಗೆ ಪ್ರೇರಕ ಶಕ್ತಿಯಾಗಿದೆ.
ದಿನಾಂಕ 9.10.2025 ರ ಗುರುವಾರ ಹಾಸನಾಂಬೆ ದರ್ಶನ ಆರಂಭೋತ್ಸವ.
ಶ್ರೀ ವಿಶ್ವಾವಸು ಸಂವತ್ಸರ ದಕ್ಷಿಣಾಯನ ಶರತ್ ಋತು ಅಶ್ಪೀಜ ಮಾಸ ಕೃಷ್ಣಪಕ್ಷ ತದಿಗೆ ತಿಥಿ ( ತೃತಿಯಾ) ದಿನದಂದು ಹಾಸನಾಂಬೆ ದೇವಾಲಯದ ಬಾಗಿಲು ತೆಗೆಯುತ್ತಾರೆ. ಇಂಥ ಅಪರೂಪದ ಹಾಸನಾಂಬೆ ದೇವಿಯ ದರ್ಶನ ಭಾಗ್ಯಪಡೆದು ಕೃತಾರ್ಥರಾಗೋಣ.
ಮಾತಾ ಗಿರಿತಾತ ಯತಿಗೀತಾ ಪರಿಪೂತಾ
ಮಾಯಾ ರಮಣೀಯಾ ಗಣನೀಯಾ ಗುಣನೀಯಾ!
ಜಯದೇವಿ ಜಯದೇವಿ ಜಯದೇವಿ ಜಯದೇವಿ!!
ಆಶಾ ನಾಗಭೂಷಣ.








