ಸಡನ್ ಆಗಿ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಅಥವಾ ಹಬ್ಬ ಹರಿದಿನಗಳು ಇಲ್ಲಾಂದ್ರೆ ಬೇರೆ ಏನಾದರೂ ಸಮಾರಂಭಗಳು ಇದ್ದಾಗ, ಸಾಮಾನ್ಯವಾಗಿ ಮನೆಯಲ್ಲಿ ಸಿಹಿ ತಿನಿಸುಗಳನ್ನು ಮಾಡುವುದು ಸಂಪ್ರದಾಯ. ಆದರೆ ಇತ್ತೀಚಿನ ದಿನಗಳಲ್ಲಿ ಬಿಡುವಿಲ್ಲದ ಜೀವನಶೈಲಿಯಿಂದಾಗಿ, ಮನೆಯ ಗೃಹಿಣಿಯರಿಗೆ ಬೇಗನೇ ಏನಾದರೂ ಅಡುಗೆ ಮಾಡಿ ಮುಗಿಸಿಬಿಟ್ಟರೆ, ಸಾಕು ಎಂದೆನಿಸುತ್ತದೆ.
ಇದಕ್ಕೊಂದು ಸಣ್ಣ ಉಪಾಯವಿದೆ ನೋಡಿ, ಫಟಾಫಟ್ ಆಗಿ ರೆಡಿ ಮಾಡ ಬಹುದಾದ ಹೆಸರು ಬೇಳೆ ಪಾಯಸವನ್ನು ಒಮ್ಮೆ ಟ್ರೈ ಮಾಡಿ ನೋಡಿ.. ಬಾಯಿಗೂ ತುಂಬಾ ರುಚಿಸುತ್ತದೆ, ಜೊತೆಗೆ ಆರೋಗ್ಯಕ್ಕೆ ಪ್ರಯೋಜನಗಳು ಕೂಡ ಸಾಕಷ್ಟು ಸಿಗುತ್ತದೆ.
ಹೆಸರುಬೇಳೆಯಲ್ಲಿ ವಿವಿಧ ಬಗೆಯ ಖನಿಜಾಂಶಗಳ ಜೊತೆಗೆ ಹಲವು ಬಗೆಯ ಪೋಷಕಾಂಶಗಳು ಅಡಗಿವೆ.ವಿಶೇಷವಾಗಿ ಮೆಗ್ನೀಸಿಯಂ, ಕಬ್ಬಿಣಾಂಶ, ಪೊಟ್ಯಾಶಿಯಂ ಹಾಗೂ ತಾಮ್ರದಂತಹ ಖನಿಜಾಂಶಗಳು ಹೇರಳವಾಗಿ ಈ ಪುಟ್ಟ ಕಾಳಿನಲ್ಲಿ ಕಂಡು ಬರುತ್ತದೆ. ಅಷ್ಟೇ ಏಕೆ ಈ ಹಳದಿ ಬಣ್ಣದ ಕಾಳಿನಲ್ಲಿ ನಮ್ಮ ಆರೋಗ್ಯವನ್ನು ವೃದ್ಧಿಸುವ ಉತ್ತಮ ಪ್ರಮಾಣದ ಪ್ರೋಟೀನ್, ಫೈಬರ್, ವಿಟಮಿನ್ಗಳು (ಫೋಲೇಟ್, ವಿಟಮಿನ್ ಸಿ ಮತ್ತು ವಿಟಮಿನ್ ಬಿ ನಾರಿನಾಂಶ, ಹಾಗೂ ಆರೋಗ್ಯಕ್ಕೆ ಬೇಕಾಗುವ ವಿವಿಧ ಬಗೆಯ ವಿಟಮಿನ್ಸ್ ಅಂಶಗಳು ಯಥೇಚ್ಛವಾಗಿ ಕಂಡುಬರುತ್ತದೆ.
ಹೆಸರು ಬೇಳೆಯ ಆರೋಗ್ಯಕರ ಪ್ರಯೋಜನಗಳು
- ಹೆಸರು ಕಾಳಿನಲ್ಲಿರುವ ಹೆಚ್ಚಿನ ಫೈಬರ್ ಮತ್ತು ಕಡಿಮೆ ಕೊಬ್ಬಿನ ಅಂಶವು ಅವುಗಳನ್ನು ಹೃದಯ ಆರೋಗ್ಯಕರವಾಗಿಸುತ್ತದೆ.
- ಹೆಸರು ಬೇಳೆಯಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಹೊಟ್ಟೆ ತುಂಬಿದ ಭಾವನೆ ಉಂಟುಮಾಡುತ್ತದೆ. ತೂಕ ನಿಯಂತ್ರಣದ ದಾರಿಗೆ ಹೆಜ್ಜೆ ಹಾಕುತ್ತಿರುವವರಿಗೆ ಹೆಸರು ಬೇಳೆ ಒಂದು ಉತ್ತಮ ಆಯ್ಕೆಯಾಗಿದೆ.
- ಹೆಸರುಬೇಳೆಯಲ್ಲಿರುವ ಪೋಷಕಾಂಶಗಳು ಉರಿಯೂತ ನಿವಾರಕ ಮತ್ತು ಸೂಕ್ಷ್ಮಜೀವಿ ನಿವಾರಕ ಗುಣಗಳನ್ನು ಹೊಂದಿರುತ್ತವೆ, ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
4.ಆಯುರ್ವೇದದ ಪ್ರಕಾರ, ಹೆಸರುಬೇಳೆ ತ್ರಿದೋಷಿಕವಾಗಿದೆ, ಅಂದರೆ ಇದು ದೇಹದ ವಾತ, ಪಿತ್ತ, ಮತ್ತು ಕಫ ದೋಷಗಳನ್ನು ಸಮತೋಲನಗೊಳಿಸುತ್ತದೆ. - ಹೆಸರುಬೇಳೆ ಪುಡಿ ಮತ್ತು ಬೇವಿನ ರಸದ ಮಿಶ್ರಣವನ್ನು ನೆತ್ತಿಗೆ ಹಚ್ಚುವುದರಿಂದ ತಲೆಹೊಟ್ಟನ್ನು ನಿವಾರಿಸಬಹುದು.
- ಹೆಸರುಬೇಳೆ ಕಡಿಮೆ ಗ್ಲೈಸೆಮಿಕ್ ಗುಣಾಂಕವನ್ನು ಹೊಂದಿದೆ. ಅಂದರೆ ಈ ಅಹಾರಗಳು ಸುಲಭವಾಗಿ ಜೀರ್ಣಗೊಂಡು ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ತಗ್ಗಿಸುತ್ತವೆ ಹಾಗೂ ರಕ್ತದಲ್ಲಿ ಗ್ಲುಕೋಸ್ ಮತ್ತು ಕೊಬ್ಬಿನ ಮಟ್ಟಗಳನ್ನೂ ಸರಿಪಡಿಸುತ್ತವೆ. ತನ್ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಕಡಿಮೆ ಇರಿಸುವ ಮೂಲಕ ಮಧುಮೇಹ ಎದುರಾಗುವ ಸಾಧ್ಯತೆಯನ್ನು ತಗ್ಗಿಸುತ್ತದೆ.
- ಹೆಸರುಬೇಳೆಯಲ್ಲಿರುವ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯ ವೃದ್ದಿಸುತ್ತದೆ. ಕ್ಯಾಲ್ಸಿಯಂ ಕೊರತೆ ಇದ್ದರೆ ಹೆಸರುಬೇಳೆ ಈ ಕೊರತೆಯನ್ನು ನೈಸರ್ಗಿಕವಾಗಿ ಪೂರೈಸುತ್ತದೆ ಹಾಗೂ ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ.
ಕೆಲವು ವೈದ್ಯಕೀಯ ಸಮಸ್ಯೆಗಳ ಸಂದರ್ಭದಲ್ಲಿ ಹೆಸರು ಕಾಳು ಮತ್ತು ಹೆಸರು ಬೇಳೆ ಸೇವಿಸಿದರೆ ಸಾಕಷ್ಟು ಹಾನಿಯಾಗುತ್ತದೆ.
- Bp ಹೆಚ್ಚಿದ್ದರೆ, ವೈದ್ಯರು ಬೇಳೆ ತಿನ್ನುವಂತೆ ಸಲಹೆ ನೀಡುತ್ತಾರೆ. ಆದರೆ, ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಹೆಸರು ಕಾಳು ಮತ್ತು ಬೇಳೆಯನ್ನು ಸೇವಿಸಬಾರದು. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ.
- ಹೊಟ್ಟೆ ಉಬ್ಬರ, ವಾಯು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವವರು ಹೆಸರು ಬೇಳೆ, ಹೆಸರು ಕಾಳನ್ನು ಸೇವಿಸಬಾರದು.
- ಕಡಿಮೆ ರಕ್ತದ ಸಕ್ಕರೆ ಹೊಂದಿರುವವರು ಸಾಮಾನ್ಯವಾಗಿ ತಲೆ ಸುತ್ತುವ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಯಲ್ಲಿ ಹೆಸರು ಕಾಳು, ಹೆಸರು ಬೇಳೆ ತಿಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತಷ್ಟು ಕಡಿಮೆಯಾಗುತ್ತದೆ. ಇದರಿಂದ ಮೂರ್ಛೆ ಹೋಗುವ ಅಪಾಯ ಕೂಡಾ ಇದೆ.
- ಹೈ ಯೂರಿಕ್ ಆಮ್ಲ ತೊಂದರೆಯಿಂದ ಬಳಲುತ್ತಿರುವವರು ಹೆಸರು ಬೇಳೆ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ, ಅದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಹೀಗಾದಾಗ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಚ್ಚರಿಕೆ ಅಗತ್ಯ.
ಬಯಸಿ ಪಡೆಯಬಹುದಾದ ಸೌಂದರ್ಯ ಹೆಸರುಬೇಳೆಯಲ್ಲಿದೆ.
ಹೆಸರು ಬೇಳೆ ಕೇವಲ ಅಡುಗೆಗೆ ಮಾತ್ರ ಉಪಯೋಗಕ್ಕೆ ಬರುವುದಿಲ್ಲ. ಇದು ದೇಹಕ್ಕೂ ಉತ್ತಮ ಸ್ಕ್ರಬ್. ನೈಸರ್ಗಿಕವಾಗಿ ತಮ್ಮ ತ್ವಚೆಯ ಹೊಳಪನ್ನು ಹೆಚ್ಚಿಸುಕೊಳ್ಳಲು ಇಚ್ಛಿಸುವವರು ಹೆಸರು ಬೇಳೆಯ ಬಹುಪಯೋಗವನ್ನು ಸಂಪೂರ್ಣವಾಗಿ ಪಡೆಯಬಹುದು.
- ತುಂಬಾ ಸೂಕ್ಷ್ಮ ತ್ವಚೆ ಹೊಂದಿರುವವರು ಹೆಸರು ಬೇಳೆಯ ಸ್ಕ್ರಬ್ ತಯಾರಿಸಿಕೊಳ್ಳಬಹುದು. ಹೆಸರು ಬೇಳೆಯ ಹಿಟ್ಟನ್ನು ಸ್ವಲ್ಪ ಜೇನಿನೊಂದಿಗೆ ಬೆರೆಸಿ ಮುಖಕ್ಕೆ ಮತ್ತು ದೇಹಕ್ಕೆ ಲೇಪಿಸಿಕೊಳ್ಳಬೇಕು.
- ಮನೆಯಲ್ಲೇ ತಯಾರಿಸಿದ ತುಪ್ಪದೊಂದಿಗೆ ಹೆಸರು ಬೇಳೆ ಹಿಟ್ಟನ್ನು ಬೆರೆಸಿ ಮೇಲ್ಮುಖವಾಗಿ ದೇಹಕ್ಕೆ ಮಸಾಜ್ ಮಾಡಬೇಕು. ತುಪ್ಪ ಚರ್ಮಕ್ಕೆ ಹೊಳಪು ನೀಡಿದರೆ ಹೆಸರಿನ ಹಿಟ್ಟು ಚರ್ಮದ ನಿರ್ಜೀವ ಕಣಗಳನ್ನು ಕಿತ್ತೊಗೆಯುತ್ತದೆ.

ಸೌಮ್ಯ ಸನತ್








