ಶ್ರಾವಣ ಬಂತು ಕಾಡಿಗೆ..ಬಂತು ನಾಡಿಗೆ ಎಂದು ವರಕವಿ ಬೇಂದ್ರೆಯವರು ಬರೆದು ಹಾಡಿದ್ದಾರೆ. ಆಷಾಢದ ಮಳೆ ಬಿರುಸಾದ ಹನಿಗಳನ್ನು ಹೊತ್ತು ತಂದು ರೈತನಿಗೆ ಉಳುಮೆ ಕಾರ್ಯಗಳನ್ನು ನೆರವೇರಿಸಲು ಸಹಾಯ ಮಾಡಿದರೆ ಉತ್ತು ಬಿತ್ತ ರೈತನಿಗೆ ಶ್ರಾವಣ ಮಾಸದಲ್ಲಿ ತುಸು ವಿರಾಮ. ನಿಧಾನವಾಗಿ ಬೀಜ ಮೊಳಕೆಯೊಡೆದು ಸಸಿಯಾಗಿ ಪೈರೊಡೆಯುವ ಕಾಲ.
ನೀರಾವರಿ ಹೊಲಗಳೇ ಇರಲಿ ಹೊರವೊಲಗಳೇ ಇರಲಿ ಆಗಾಗ ಮಳೆ ಬರುವುದರಿಂದ ಮೊಳಕೆಯೊಡೆದ ಸಸಿಗೆ ಪ್ರಕೃತಿಯೇ ನೀರುಣಿಸುವ ಕಾಲ. ಬೆಳೆಗೆ ನೀರು ಕಟ್ಟುವ,ನೀರನ್ನು ಹಾಯಿಸುವ ಕೆಲಸ ಕೂಡ ಅಷ್ಟಾಗಿ ಇರುವುದಿಲ್ಲ.
ಶ್ರಾವಣ ಮಾಸದಲ್ಲಿ ಇಡೀ ಪ್ರಕೃತಿಯು ಹಸಿರಿನ ಉಡುಗೆ ತೊಟ್ಟು ನಳನಳಿಸುತ್ತದೆ. ಭೂರಮೆಗೆ ವರುಣ ಸಿಂಚನದಿಂದಾಗಿ ನವ ಮದುಮಗಳ ಕಳೆ ಆವರಿಸಿರುತ್ತದೆ. ಹಸಿರಿನ ಎಲೆಗಳಲ್ಲೂ ಕೂಡ ಒಂದು ಬಗೆಯ ಆಕರ್ಷಣೆ. ವನ ದೇವತೆ ಹಸಿರಿನಿಂದ ಕಂಗೊಳಿಸಿದರೆ ಆ ಲಕ್ಷಣವೇ ಬೇರೆ. ಇನ್ನು ಎಲ್ಲಾ ಗಿಡ ಮರಗಳಲ್ಲೂ ನಾನಾ ವಿಧದ ಹೂ, ಪುಷ್ಪಗಳು ಪಲ್ಲವಿಸಿ ಘಮವನ್ನು ಸೂಸುತ್ತವೆ. ಹಣ್ಣುಗಳ. ಭಾರದಿಂದ ಗಿಡಗಳು ತಲೆದೂಗುತ್ತವೆ.
ಇದು ಪ್ರಕೃತಿಯ ಮಾತಾದರೆ, ಭಾರತೀಯ ಸಂಪ್ರದಾಯದಲ್ಲಿ ಶ್ರಾವಣ ಮಾಸಕ್ಕೆ ತನ್ನದೇ ಆದ ಮಹತ್ವವಿದೆ. ವರ್ಷದ ಉಳಿದ ಹನ್ನೊಂದು ತಿಂಗಳುಗಳಲ್ಲಿ ಕೇವಲ ಅಮಾವಾಸ್ಯೆ ಮತ್ತು ಹುಣ್ಣಿಮೆಗಳು ಬಂದರೆ ಶ್ರಾವಣ ಮಾಸದಲ್ಲಿ ಹಬ್ಬಗಳ ಸಾಲು ಸಾಲು ಮೆರವಣಿಗೆ. ನಮ್ಮ ಗ್ರಾಮೀಣ ಭಾಗದಲ್ಲಂತೂ ಶ್ರಾವಣ ಮಾಸದ ಪ್ರತಿದಿನವೂ ಒಂದು ಹಬ್ಬದಂತೆ.
‘ ಆ ಮಂತ್ರ ಈ ಮಂತ್ರ ಜಪಿಸಿ ಕೆಡಬೇಡ ಓ ಮನುಜ ಸೋಮಶೇಖರ ತನ್ನ ಭಾಮೆಗೆ ಹೇಳಿದ ರಾಮ ಮಂತ್ರವ ಜಪಿಸು’ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಶ್ರಾವಣ ಮಾಸದಲ್ಲಿ ಶಿವನು ತನ್ನ ಪತ್ನಿಯಾದ ಪಾರ್ವತಿ ದೇವಿಗೆ ರಾಮ ಮಂತ್ರವನ್ನು ಜಪಿಸಲು ಹೇಳಿದ ಪವಿತ್ರವಾದ ದಿನ. ಇತ್ತ ರಾಮ ಕೂಡ ಶಿವನನ್ನು ಪೂಜಿಸುವ ಮಹತ್ವದ ದಿನ ಸೋಮವಾರ. ಶ್ರಾವಣ ಮಾಸದ ಪ್ರತಿ ಸೋಮವಾರವು ಶಿವನ ವಾರವಾಗಿ ಆಚರಿಸಲ್ಪಡುತ್ತದೆ.
ನಮ್ಮ ಜನಪದರು ಶ್ರಾವಣ ಮಾಸದಾದ್ಯಂತ ಬರುವ ಎಲ್ಲಾ ಸೋಮವಾರಗಳನ್ನು ಸಣ್ಣ ಸೋಮವಾರ ಎಂದು ಕರೆದರೆ ಮಾಸದ ಕೊನೆಯಲ್ಲಿ ಬರುವ ಸೋಮವಾರವನ್ನು ಮಹಾ ದಿನವಾಗಿ ಆಚರಿಸುತ್ತಾರೆ… ಕಡೆ(ಕೊನೆಯ) ಸೋಮವಾರ ಎಂದು ಕರೆಯುವ ಈ ದಿನ ಎಲ್ಲಾ ಶಿವನ ದೇಗುಲಗಳಲ್ಲಿ ಲಿಂಗ ರೂಪದಲ್ಲಿರುವ ಶಿವನಿಗೆ ಪೂಜೆ, ಅಭಿಷೇಕ, ಬಿಲ್ವಾರ್ಚನೆ, ಮಹಾಪ್ರಸಾದ ಮತ್ತು ದಾಸೋಹಗಳು ಜರುಗುತ್ತವೆ. ಉಳಿದೆಲ್ಲ ಸೋಮವಾರಗಳಲ್ಲಿ ನಿಟ್ಟುಪವಾಸವನ್ನು ಮಾಡುವ ಭಕ್ತರು ಕೊನೆಯ ಸೋಮವಾರದಂದು ಕೂಡ ಪೂಜೆ, ಪ್ರಾರ್ಥನೆ, ಆರಾಧನೆಗಳ ನಂತರ ದೇವರಿಗೆ ನೈವೇದ್ಯವನ್ನು ಅರ್ಪಿಸಿ, ಪ್ರಸಾದ ಸೇವಿಸುವ ಮೂಲಕ ತಮ್ಮ ಶ್ರಾವಣ ಮಾಸದ ಉಪವಾಸವನ್ನು ಕೊನೆಗಾಣಿಸುತ್ತಾರೆ. ಈ ಸೋಮವಾರಕ್ಕಾಗಿ ಕಾಯುವ ಸಾಕಷ್ಟು ಜನ ಭಕ್ತರು ತಮ್ಮ ಇಷ್ಟ ದೈವಕ್ಕೆ ಕ್ಷೇತ್ರ ಪ್ರವಾಸ ಹೋಗಿ ದೈವ ದರ್ಶನ ಮಾಡಿ ಸಂತೃಪ್ತರಾಗುತ್ತಾರೆ.
ಕೈಲಾಸದಲ್ಲಿ ನೆಲೆಸಿರುವ ಪರ ಶಿವನನ್ನು ಮಂಜು ಘನೀಭವಿಸಿದ ಸ್ಥಿತಿಯಲ್ಲಿ ನಮಗೆ ಕಾಣಿಸುವುದು ಅಮರನಾಥದಲ್ಲಿ. ಅತ್ಯಂತ ಕಡಿದಾದ ಪ್ರಾಕೃತಿಕ ವಿಸ್ಮಯಗಳ ನಡುವಿನಲ್ಲಿ ಇರುವ ಹಿಮದ ಗುಹೆಯ ಮಧ್ಯದಲ್ಲಿ ಅಮಾವಾಸ್ಯೆಯ ಮರುದಿನದಿಂದಲೇ ಹಿಮದ ನೀರು ತೊಟ್ಟಿಕ್ಕಿ ಹುಣ್ಣಿಮೆಯ ಹೊತ್ತಿಗೆ ಬೃಹದಾಕಾರದ ಮಂಜಿನ ಶಿವಲಿಂಗವಾಗಿ ಮಾರ್ಪಡುತ್ತದೆ. ಹುಣ್ಣಿಮೆಯ ನಂತರ ನಿಧಾನವಾಗಿ ಕರಗುವ ಶಿವಲಿಂಗವು ಮುಂದಿನ ಅಮಾವಾಸ್ಯೆಯ ದಿನ ಸಂಪೂರ್ಣ ಕರಗಿ ಹೋಗಿರುತ್ತದೆ. ಅಂತಹ ಪ್ರಾಕೃತಿಕ ವಿಸ್ಮಯವನ್ನು ಹೊಂದಿರುವ ಅಮರನಾಥ ಯಾತ್ರೆಗೆ ಇಂದಿಗೂ ಲಕ್ಷಾಂತರ ಭಕ್ತರು ತಮ್ಮ ಜೀವವನ್ನು ಒತ್ತೆ ಇಟ್ಟು ಪ್ರಯಾಣಿಸಿ, ದರ್ಶಿಸಲು ಹೋಗುತ್ತಾರೆ ಅದೂ ಶ್ರಾವಣ ಮಾಸದಲ್ಲಿ ಎಂದರೆ ಊಹಿಸಿ ಭಾರತೀಯರ ಧಾರ್ಮಿಕ ಆಸ್ತೆಯನ್ನು.
ಸಣ್ಣಗೆ ಸುರಿಯುವ ಮಳೆ, ಬಿರುಸಾದ ಹಿಮದ ಗಾಳಿಯ ಹೊಡೆತ, ಆಳವಾದ ನದಿ, ಕಣಿವೆಗಳು, ಎತ್ತರವಾದ ಗಿರಿ ಶಿಖರಗಳು, ಪಾಕಿಸ್ತಾನ ಮತ್ತು ಚೀನಾದ ಗಡಿ ಭಾಗಗಳಲ್ಲಿ ಪಯಣಿಸಿ ಎಚ್ಚರದಿಂದ ಹೋದರೆ ಅಮರನಾಥ, ಎಚ್ಚರ ತಪ್ಪಿದರೆ ಆಳವಾದ ಕಣಿವೆಗೆ ಬಿದ್ದು ಕೈಲಾಸ ಸೇರಬೇಕು ಎಂದು ತಮಾಷೆಯಿಂದ ಹೇಳುವರು. ವೈಪರೀತ್ಯಗಳ ಮಧ್ಯೆಯು ಲಕ್ಷಾಂತರ ಭಕ್ತರು ಅಮರನಾಥ ಯಾತ್ರೆ ಮಾಡಿ ಬೃಹದಾಕಾರದ ಹಿಮದ ಲಿಂಗವನ್ನು ದರ್ಶಿಸಿ ಧನ್ಯತೆಯ ಭಾವವನ್ನು ಹೊಂದುತ್ತಾರೆ.
ಇನ್ನು ಪ್ರತಿ ಮಂಗಳವಾರಗಳಂದು ನವ ವಿವಾಹಿತ ಸುಮಂಗಲಿ ಸ್ತ್ರೀಯರು ಪತಿಯ ಆಯುರಾರೋಗ್ಯ ಹಾಗೂ ಮಕ್ಕಳ ಭಾಗ್ಯವನ್ನು ಪಡೆಯುವ ಆಶಯದಿಂದ ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ಮಣೆಯ ಮೇಲೆ ಅಕ್ಕಿಯನ್ನು ಸುರಿದು ಅದರ ಮೇಲೆ ನೀರು ತುಂಬಿದ ಕಳಸವನ್ನು ಕೂರಿಸಿ ಹಾಗೆ ಕೂರಿಸಿದ ತಂಬಿಗೆಗೆ ಅರಿಶಿಣ ಕುಂಕುಮವನ್ನು ಹಾಕಿ ಹೂವನ್ನು ಇಟ್ಟು ಐದು ಮಾವಿನ ಇಲ್ಲವೇ ವೀಳ್ಯದ ಎಲೆಗಳನ್ನು ಜೋಡಿಸಿ ಸಿಪ್ಪೆ ಇರುವ ಐದು ಎಳೆ ದಾರ ಸುತ್ತಿದ ಕಾಯಿಯನ್ನು ಇಟ್ಟು ಅದಕ್ಕೆ ಮಂಗಳಗೌರಿಯ ಮುಖವನ್ನು ಹೊಂದಿಸಿ ಜೋಡಿಸುತ್ತಾರೆ. ಉಡಿ ಬಟ್ಟಲು ಮಂಗಳ ದ್ರವ್ಯಗಳು ವಿವಿಧ ಬಗೆಯ ಹಣ್ಣುಗಳು, ಎಲೆ ಅಡಿಕೆ ಬೆಟ್ಟ ಗಳನ್ನು ಗೌರಿಯ ಮುಂದಿರಿಸಬೇಕು. ಕಂಕಣ ಕಟ್ಟಿ ಇರಿಸಬೇಕು. ಶ್ರೀಗಂಧವನ್ನು ತೇಯ್ದು ಅದಕ್ಕೆ ಅರಿಶಿಣವನ್ನು ಕಲಸಿ ಅರಿಶಿಣ ಗೌರಿಯನ್ನು ಮಾಡಿ ಬಳೆ ತೊಡಿಸಿ ತಾಳಿ, ಕಾಲುಂಗುರ ಕಿವಿಯೋಲೆ ಮೂಗುಬಟ್ಟುಗಳನ್ನು ದೇವಿಯ ಮುಖಕ್ಕೆ ತೊಡಿಸಿ ಬಳೆ ಇಡಬೇಕು. ಹೂವುಗಳಿಂದ ಅಲಂಕರಿಸಿ ಪೂಜಿಸ ಬೇಕು. ಮಂಗಳಗೌರಿಯ ವ್ರತ ಮಹಾತ್ಮೆಯನ್ನು ಓದಿ ಆಕೆಯ 108 ನಾಮಾವಳಿಗಳನ್ನು ಹೇಳಿ ಪುಷ್ಪಾರ್ಚನೆ ಮಾಡುತ್ತ ಧನ್ಯರಾಗಬೇಕು. ನಂತರ ಹೋಳಿಗೆಯ ನೈವೇದ್ಯವನ್ನು ಮಾಡುತ್ತಾರೆ. ಪ್ರತಿ ಮಂಗಳವಾರವೂ ಹೀಗೆ ಪೂಜೆ ಮಾಡಿ ಸುಮಂಗಲಿಯರಿಗೆ ಉಡಿ ತುಂಬುತ್ತಾರೆ. ಐದು ವರ್ಷಗಳ ಪೂಜೆಯ ನಂತರ ಉದ್ಧಾಪನೆಯನ್ನು ಮಾಡಿ ಐದು ಜನ ಮುತ್ತೈದೆಯರಿಗೆ ಬಾಗಿನವನ್ನು ನೀಡಿ ಪೂಜೆಯನ್ನು ಸಮಾಪ್ತಗೊಳಿಸುತ್ತಾರೆ…. ನಂತರವೂ ಪ್ರತಿ ವರ್ಷ ಪೂಜೆಯನ್ನು ಮುಂದುವರಿಸಲು ಇಚ್ಚಿಸುವವರು ಒಂದು ಬಾಗಿನವನ್ನು ತಮಗೆ ಇಟ್ಟುಕೊಳ್ಳುತ್ತಾರೆ.
ಇನ್ನು ಜನಪದರ ಹಬ್ಬವಾದ ನಾಗರ ಹಬ್ಬದಲ್ಲಿ ಅಮಾವಾಸ್ಯೆಯ ನಂತರ ಬರುವ ಮೂರನೇಯ ದಿನ ರೊಟ್ಟಿ ಹಬ್ಬವನ್ನು ಉತ್ತರ ಕರ್ನಾಟಕದಲ್ಲಿ ಆಚರಿಸುತ್ತಾರೆ. ಆ ದಿನ ವಿವಿಧ ಬಗೆಯ ತರಕಾರಿಗಳಿಂದ ತಯಾರಿಸಿದ ಪಲ್ಲೆಗಳು ವಿವಿಧ ಬಗೆಯ ಚಟ್ನಿಪುಡಿಗಳು ಹಸಿ ಸೊಪ್ಪಿನ ಪಚ್ಚಡಿಗಳನ್ನು ಮಾಡಿ ಈಗಾಗಲೇ ಎಳ್ಳು ಹಚ್ಚಿ ತೆಳ್ಳಗೆ ಬಡಿದ ಸಜ್ಜೆಯ ಮತ್ತು ಜೋಳದ ರೊಟ್ಟಿಗಳನ್ನು ಇರಿಸಿ ದೇವರಿಗೆ ನೈವೇದ್ಯ ಮಾಡಿ ಮನೆ ಮಂದಿ ಎಲ್ಲಾ ಕುಳಿತು ರುಚಿ ರುಚಿಯಾದ ವೈವಿಧ್ಯಮಯ ತರಕಾರಿಗಳಿಂದ ಕೂಡಿದ ಆಹಾರವನ್ನು ಸೇವಿಸುತ್ತಾರೆ.
ಮುಂಜಾನೆ ಎಲ್ಲಾ ತರಕಾರಿಗಳ ಪಲ್ಲೆಗಳನ್ನು ಮಾಡಿ ಅಡುಗೆ ಮಾಡುವ ಹೆಣ್ಣು ಮಕ್ಕಳು ಊಟವಾದೊಡನೆ ಈಗಾಗಲೇ ಹುರಿದಿಟ್ಟುಕೊಂಡ ಸೇಂಗಾ, ಎಳ್ಳು ಮತ್ತು ಅಂಗಡಿಯಿಂದ ತರಿಸಿದ ಡಾಣಿ, ಗುಳಿಗೆಗಳಿಗೆ ಬೇರೆ ಬೇರೆಯಾಗಿ ಪಾಕವನ್ನು ತಯಾರಿಸಿ ಅವುಗಳಿಗೆ ಸಾಕಾಗುವಷ್ಟು ಕೊಬ್ಬರಿ ಪುಡಿ, ಕಸ ಕಸೆ ಮತ್ತು ಏಲಕ್ಕಿ ಲವಂಗಗಳ ಪುಡಿಯನ್ನು ಹಾಕಿ ನಂತರ ಬಿಸಿಯಾದ ಪಾಕವನ್ನು ಹಾಕಿ ಉಂಡಿಯನ್ನು ಕಟ್ಟುತ್ತಾರೆ. ಇದರ ಜೊತೆಗೆ ಚಕ್ಕುಲಿ, ನಿಪ್ಪಟ್ಟು, ಹಚ್ಚಿದ ಅವಲಕ್ಕಿ ಮತ್ತು ಕೊಬ್ಬರಿ ಸಿಣ್ಣಿ( ಹಲಪಿ) ಯನ್ನು ಕೂಡ ತಯಾರಿಸಿಕೊಳ್ಳುತ್ತಾರೆ. ಇವುಗಳನ್ನು ಮಕ್ಕಳು ಆಸೆಯಿಂದ ತಿನ್ನಲು ಕೇಳಿದರೆ ಬೇಡ ಎನ್ನಲು ಸಾಧ್ಯವಿಲ್ಲದೆ ತಾಯಂದಿರು ಮೊದಲು ಕಟ್ಟಿದ ಕೂಡಲೇ ಒಂದೆರಡುಉಂಡೆಗಳನ್ನು ದೇವರ ನೈವೇದ್ಯಕ್ಕೆ ಎತ್ತಿಡುತ್ತಾರೆ. ಇದರ ಜೊತೆ ಜೊತೆಗೆ ತುಸು ಎಳ್ಳನ್ನು ಹುರಿದು ಪುಡಿ ಮಾಡಿಕೊಂಡು ಅದಕ್ಕೆ ಮತ್ತೆ ಬೆಲ್ಲವನ್ನು ಸೇರಿಸಿ ತುಸು ಏಲಕ್ಕಿ ಪುಡಿ ಹಾಕಿ ಎಳ್ಳಿನ ಚಿಗಳಿ ಮಾಡಿಕೊಳ್ಳುತ್ತಾರೆ. ಹೀಗೆ ಕೊಬ್ಬರಿ ಪುಡಿ ಮತ್ತು ಹುರಿದ ಶೇಂಗಾ ಬೀಜಗಳನ್ನು ಪುಡಿ ಮಾಡಿ ಅದಕ್ಕೆ ಬೆಲ್ಲವನ್ನು ಸೇರಿಸಿ ಅವುಗಳ ಚಿಗಳಿಯನ್ನು ಕೂಡ ಮಾಡಿಟ್ಟುಕೊಳ್ಳುತ್ತಾರೆ.
ಜೋಳವನ್ನು ಬಿಸಿಯಾದ ನೀರಿನಲ್ಲಿ ಒಂದು ಕುದಿ ಉಕ್ಕರಿಸಿವಂತೆ ಮಾಡಿ ಆರಲು ಹಾಕಿ ನಂತರ ಅವುಗಳನ್ನು ಬಾಣಲೆಯಲ್ಲಿ ಬೆಚ್ಚಗೆ ಮಾಡಿದರೆ ಹದವಾದ ಉರಿಯಲ್ಲಿ ಚಟಚಟನೆ ಸಿಡಿದು ಜೋಳದ ಕಾಳುಗಳು ಅರಳಾಗುತ್ತವೆ…. ಇವು ಕೂಡ ದೇವರ ನೈವೇದ್ಯಕ್ಕೆ.
ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ ಒಣಗಿಸಿದ ಗೋಧಿಯನ್ನು ಹದವಾದ ಉರಿಯಲಿ ಹುರಿದು ಹಿಟ್ಟು ಮಾಡಿಸಿ ಮರುದಿನ ನಾಗಪ್ಪನಿಗೆ ಹಾಲು ಹಾಕಲು ಹೋಗುವಾಗ ಬೇಕಾಗುವ ನೈವೇದ್ಯವಾದ ಅರಳಿಟ್ಟಿಗೆ ಕೂಡ ಹೆಣ್ಣು ಮಕ್ಕಳು ತಯಾರಿ ಮಾಡಿಕೊಂಡಿರುತ್ತಾರೆ. ಅಬ್ಬಾ! ನಮ್ಮ ಜನಪದರ ಸಂಭ್ರಮ ಇಷ್ಟಕ್ಕೆ ಮುಗಿಯದು.
ಮನೆ ಮನೆಗಳು ಜೇಡರ ಬಲೆಗಳಿಂದ ಮುಕ್ತವಾಗಿ ಸ್ವಚ್ಛವಾಗಿ ತೊಳೆಯಲ್ಪಟ್ಟು ಸುಣ್ಣ ಬಣ್ಣಗಳಿಂದ ಅಲಂಕೃತಗೊಂಡು ಎಲ್ಲಾ ಹಾಸಿಗೆ ಹೊದ್ದಿಕೆಗಳು ಕೂಡ ಮಡಿ ಮಾಡಲ್ಪಡುತ್ತವೆ. ಮನೆಯಲ್ಲಿನ ಎಲ್ಲಾ ಜಾನುವಾರುಗಳನ್ನು ಮೈ ತೊಳೆದು ಸಿಂಗರಿಸುತ್ತಾರೆ.
ಚೌತಿಯ ದಿನ ಮುಂಜಾನೆ ಮನೆಯನ್ನು ಸ್ವಚ್ಛಗೊಳಿಸಿ ಸ್ನಾನ ಪೂಜೆಗಳನ್ನು ಪೂರೈಸಿ ಬೆಲ್ಲದ ಪಾಕ ಹಾಕಿ ಕಲಸಿದ ಅರಳಿಟ್ಟು, ಕಡಲೆಕಾಳು ಪಲ್ಯ, ಒಗ್ಗರಣೆ, ವಿವಿಧ ಬಗೆಯ ಚಿಗಳಿಗಳನ್ನು ಒಂದು ತಟ್ಟೆಯಲ್ಲಿ ಹೊಂದಿಸಿಕೊಂಡರೆ, ಮತ್ತೊಂದು ತಟ್ಟೆಯಲ್ಲಿ ನೀರು ವಿಭೂತಿ, ತೇಯ್ದ ಗಂಧ ಬೆಲ್ಲವನ್ನು ಅಂಟಿಸಿದ ಕೊಬ್ಬರಿ ಬಟ್ಟಲು, ಐದೆಳೆಯ ನೂಲುಗಳು ಮನೆಯಲ್ಲಿ ಇರುವ ಜನರಷ್ಟೇ ಸಂಖ್ಯೆಯ ಹಂಗನೂಲು ಮತ್ತು ದೇವರಿಗೆ ಒಂದೆರಡು) ತೆಂಗಿನಕಾಯಿ ಕರ್ಪೂರ ತುಪ್ಪದ ಬತ್ತಿ, ಕಡ್ಲೆ ಬತ್ತಿಯ ಸರ, ಹೂವು ಜೋಳದ ಸಸಿಗಳು ಹೀಗೆ ಎಲ್ಲವನ್ನು ಸಜ್ಜು ಮಾಡಿಕೊಂಡು ಒಂದು ಸಣ್ಣ ಗಿಂಡಿಯಲ್ಲಿ ಹಾಲು ಎಲ್ಲವನ್ನು ಇಟ್ಟುಕೊಂಡು ಹೊಸ ಸೀರೆ ಉಟ್ಟ ಮಹಿಳೆಯರು, ಬಣ್ಣ ಬಣ್ಣದ ಹೊಸ ಬಟ್ಟೆಗಳನ್ನು ಧರಿಸಿದ ಮಕ್ಕಳನ್ನು ಕರೆದುಕೊಂಡು ಯಾವುದಾದರೂ ಗುಡಿಯ ಆವರಣದಲ್ಲಿ ಇರುವ ಇಲ್ಲವೇ ಮರದ ಕೆಳಗಿನ ನಾಗರ ವಿಗ್ರಹಗಳಿಗೆ ಇಲ್ಲವೇ ಅಲ್ಲಲ್ಲಿ ಇರುವ ಹುತ್ತಗಳಿಗೆ ಕೊಂಡೊಯ್ದು ಪೂಜೆ ಮಾಡಿ, ನಾಗಪ್ಪನಿಗೆ ಹಂಗನೂಲು ಹಾಕಿ ಕೇದಿಗೆ ಮತ್ತು ಗೋಧಿಯ ಸಸಿಗಳನ್ನು ಇರಿಸಿ ಬೆಲ್ಲವನ್ನು ಅಂಟಿಸಿದ ಕೊಬ್ಬರಿ ಬಟ್ಟಲಿನಲ್ಲಿ ತೆಂಗಿನ ಎಳನೀರು ಮತ್ತು ಹಾಲಿನಿಂದ ತನಿಯನ್ನು ಎರೆಯುತ್ತಾ ಮನೆಯ ಹಿರಿಯರ ಮತ್ತು ಸರ್ವ ಸದಸ್ಯರ ಹೆಸರನ್ನು ಹೇಳುತ್ತಾ ಅವರೆಲ್ಲರ ಪಾಲಿನ ಹಾಲನ್ನು ಹಾಕುತ್ತಾರೆ. ನಂತರ ನೈವೇದ್ಯ ಮಾಡಿ, ಮನೆಗೆ ಬಂದು ಎಲ್ಲರಿಗೂ ಹಬ್ಬದ ಅಡಿಗೆಯ ಊಟ ಬಡಿಸುತ್ತಾರೆ.
ಇನ್ನು ಪಂಚಮಿಯ ದಿನ ಮನೆಯಲ್ಲಿಯೇ ಮಣ್ಣಿನಿಂದ ತಯಾರಿಸಿದ ನಾಗನ ಮೂರ್ತಿಗೆ ಎಲ್ಲಾ ರೀತಿಯ ಪೂಜೆಯನ್ನು ಪೂರೈಸುತ್ತಾರೆ…. ಈ ಸಮಯದಲ್ಲಿ ಮನೆಯ ಎಲ್ಲಾ ಸದಸ್ಯರು ಮತ್ತೊಮ್ಮೆ ಮಣ್ಣಿನಿಂದ ತಯಾರಿಸಿದ ನಾಗಪ್ಪನ ಮೂರ್ತಿಗೆ ಹಾಲು ಹಾಕಿ ನೈವೇದ್ಯ ಮಾಡಿ ನಂತರ ತಾವು ಆಹಾರವನ್ನು ಸೇವಿಸುತ್ತಾರೆ.
ಈಗಾಗಲೇ ಮದುವೆ ಮಾಡಿ ಗಂಡನ ಮನೆಗೆ ಕಳುಹಿಸಿರುವ ಹೆಣ್ಣು ಮಕ್ಕಳನ್ನು ಈ ಹಬ್ಬಕ್ಕಾಗಿ ತವರಿಗೆ ಕರೆತರುವ ಜನಪದರು ನವ ದಂಪತಿಗಳಿಗೆ ಹಬ್ಬದ ಅಡುಗೆ ಮಾಡಿ ಉಣಬಡಿಸಿ ಬಟ್ಟೆ ಬರೆಗಳನ್ನು ಕೊಟ್ಟು ಸತ್ಕರಿಸುತ್ತಾರೆ.
ಇನ್ನು ಊರಿನಲ್ಲಿರುವ ದೊಡ್ಡ ದೊಡ್ಡ ಮರಗಳಿಗೆ ಹಗ್ಗದ ಜೋಕಾಲಿಗಳನ್ನು ಕಟ್ಟಿ ಜೀಕಿ ಸಂಭ್ರಮಿಸುತ್ತಾರೆ.
ಇದಲ್ಲದೆ ಹತ್ತು ಹಲವು ಗ್ರಾಮೀಣ ಕ್ರೀಡೆಗಳನ್ನು ಆಡಿ ಸಂಭ್ರಮ ಪಡುತ್ತಾರೆ. ಮನೆಗೆ ಬರುವ ಯಾವ ಅತಿಥಿಗಳೇ ಇರಲಿ ಭಿಕ್ಷೆಗೆ ಬರುವವರೇ ಇರಲಿ ಎಲ್ಲರಿಗೂ ಕೈತುಂಬ ಉಣಬಡಿಸಿ ತೃಪ್ತರಾಗುತ್ತಾರೆ.
ಪ್ರತಿ ಶುಕ್ರವಾರ ದಿನ… ಸಂಪತ್ ಶುಕ್ರವಾರ ಇಲ್ಲವೇ ಶುಕ್ರಗೌರಿ ವ್ರತವನ್ನು ಸುಮಂಗಲಿಯರು ಮಂಗಳ ಗೌರಿ ವ್ರತದಂತೆಯೇ ಈ ವ್ರತವನ್ನು 5 ವರ್ಷಕ್ಕೆ ಸಮಾಪ್ತಗೊಳಿಸದೆ ಪ್ರತಿ ವರ್ಷವೂ ಅನೂಚಾನವಾಗಿ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ.
ಇನ್ನು ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವೆಂದು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ನಾಡಿನ ಹಬ್ಬವೆಂದು ಗುರುತಿಸಲ್ಪಡುವ ಈ ದಿನ ರಜೆಗಳನ್ನು ಕೂಡ ಘೋಷಿಸಲಾಗುತ್ತದೆ.
ಶ್ರಾವಣ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ನೂಲ ಹುಣ್ಣಿಮೆ ಎಂದು ಆ ದಿನ ಸಹೋದರಿಯರು ತಮ್ಮ ಒಡಹುಟ್ಟಿದವರ ಹಣೆಗೆ ಗಂಧ, ತಿಲಕವನ್ನಿಟ್ಟು ಕೈಗೆ ರಕ್ಷಾಬಂಧನವನ್ನು ಕಟ್ಟಿ ಉಡುಗೊರೆಗಳನ್ನು ಪಡೆಯುತ್ತಾರೆ. ಅಣ್ಣ ತಂಗಿಯರ ನಡುವಿನ ಬಾಂಧವ್ಯದ ಬೆಸುಗೆಯನ್ನು ತೋರುವ ಈ ಹಬ್ಬದಂದು ಪ್ರತಿ ಹೆಣ್ಣು ಮಗಳು ತನ್ನ ಅಣ್ಣನಿಂದ ರಕ್ಷೆಯನ್ನು ಬಯಸುತ್ತಾಳೆ.
ಶ್ರಾವಣ ಮಾಸದಲ್ಲಿ ಕೇವಲ ಹಬ್ಬಗಳು ಮನೆಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ…. ಪ್ರತಿ ಊರಿನ ಪ್ರತಿ ದೇಗುಲಗಳು, ಮಠಗಳು ಗುಡಿಗಳು ಸುಣ್ಣ ಬಣ್ಣ ತೊಡೆದುಕೊಂಡು ಬಣ್ಣ ಬಣ್ಣದ ದೀಪಾಲಂಕಾರಗಳಿಂದ ಕಂಗೊಳಿಸುತ್ತವೆ. ಇಡೀ ತಿಂಗಳು ವಿಶೇಷ ಪೂಜೆ ಅಲಂಕಾರಗಳಿಂದ ಸಂಭ್ರಮವನ್ನು ಹುಟ್ಟು ಹಾಕುವ ಈ ಮಾಸದಲ್ಲಿ ಮಠಗಳಲ್ಲಿ ಪುರಾಣ ಪ್ರವಚನ ಕಾರ್ಯಕ್ರಮಗಳು ನೆರವೇರುತ್ತವೆ. ನಂತರ ದಾಸೋಹದ ವ್ಯವಸ್ಥೆ ಇರುತ್ತದೆ.
ತನು ಮನಗಳ ಜಡತ್ವವನ್ನು ಕಳೆಯುವ ಬದುಕಿಗೊಂದು ಹೊಸ ಅರ್ಥವನ್ನು ಕೊಡುವ ನಮ್ಮ ಗ್ರಾಮೀಣ ಹಬ್ಬಗಳು ನಮ್ಮಲ್ಲಿ ಉಂಟಾಗುವ ಆಲಸ್ಯದ ಜಾಡ್ಯವನ್ನು ಹೊಡೆದೋಡಿಸಿ ಸಂಭ್ರಮ, ಸಂತೃಪ್ತಿಯನ್ನು ಧಾರ್ಮಿಕ ಪೂಜೆ ಪುನಸ್ಕಾರಗಳಿಂದ ಉಂಟಾಗುವ ಮಾನಸಿಕ ನೆಮ್ಮದಿಯನ್ನು ಕರುಣಿಸುತ್ತವೆ ಎಂದರೆ ತಪ್ಪಿಲ್ಲ.
ಅಂತಹ ಶ್ರಾವಣ ಮಾಸದ ಸಮಯದಲ್ಲಿ ಉಂಡುಟ್ಟು ನಕ್ಕು ನಲಿಯುವ ಜೊತೆ ಜೊತೆಗೆ ಹಸಿದವರಿಗೆ ಉಣ
ಬಡಿಸಿ, ಮುತ್ತೈದೆಯರಿಗೆ ಉಡಿ ತುಂಬಿ ಮನೆಯ ಹೆಣ್ಣು ಮಕ್ಕಳಿಗೆ ಸೀರೆ ಕುಪ್ಪಸಗಳ ಕಾಣಿಕೆಯನ್ನು ನೀಡಿ ಎಲ್ಲರನ್ನು ಸಂತೃಪ್ತಗೊಳಿಸಿ ನಾವು ಕೂಡ ಸಂಭ್ರಮಿಸುವ, ನಕ್ಕು ನಲಿಯುವ ಎಂಬ ಆಶಯದೊಂದಿಗೆ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್