ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಎಂಬ ಚಲನಚಿತ್ರದ ಸಾಲುಗಳು,ಹತ್ತು ದೇವರನ್ನು ಪೂಜಿಸುವುದಕ್ಕಿಂತ ಹೆತ್ತ ತಾಯಿಯನ್ನು ಪೂಜಿಸಬೇಕು ಎನ್ನುವ ಗಾದೆಗಳು ತಾಯಿಯ ಮಹತ್ವವನ್ನು ಬಣ್ಣಿಸುತ್ತವೆ.ಇಷ್ಟೆಲ್ಲ ಗೊತ್ತಿದ್ದರೂ ಯುವ ಜನಾಂಗಕೆ ತಾಯಿಯ ಅರಿವಾಗುತ್ತಿಲ್ಲವೇಕೆ.ನಾವು ಏನೇ ಹೇಳಿದರೂ ಅಮ್ಮಾ ಕೇಳುತ್ತಾಳೆ ಎಂಬ ಬಲವಾದ ನಂಬಿಕೆಯೋ ಅಥವಾ ಅಹಂಕಾರದ ತಾಪವೋ?
ತಾಯಂದಿರ ದಿನ ಬಂತೆಂದರೆ ಸಾಕು ಎಲ್ಲೆಲ್ಲೋ ಅಮ್ಮನ ಕುರಿತು ಸ್ಟೇಟಸ್ ಹಾಕಿ ಅಮ್ಮಾ ಐ ಲವ್ ಯು ಅಂದ ಮರುಕ್ಷಣವೇ ನುಡಿದ ಮಾತನು ಆಲಿಸದೆ ತಿರಸ್ಕರಿಸಿ ತನ್ನದೇ ಲೋಕದಲ್ಲಿ ತೇಲಾಡುವುದು.ಹೀಗಾದರೆ ಅಮ್ಮನ ದಿನಕ್ಕೆ ಅರ್ಥವುಂಟೆ ಅಥವಾ ಅಮ್ಮನಾಗಿದ್ದೆ ತಪ್ಪೇ? ಆಗ ತಾಯಿಯ ಕರುಳು ಚುರ್ ಎನ್ನದೆ ಇದ್ದೀತೆ? ತನ್ನ ಮನದಲ್ಲಿ ದೇವರನ್ನು ಶಪಿಸುತ ದೇವರೇ ಯಾಕಾದರೂ ನನ್ನ ಹುಟ್ಟಿಸಿದೆ ಎಂದು ಮನದಲ್ಲಿಯೇ ನೊಂದುಕೊಳ್ಳುತ ಚಿಂತಾಕ್ರಾಂತಳಾಗುವಳು.
ತಾವು ಹೇಳಿದ್ದೆ ಆಗಬೇಕು ಇಲ್ಲದಿದ್ದರೆ ತಾಯಿಗೆ ಬಾಯಿಗೆ ಬಂದಂತೆ ಮಾತನಾಡುತ ಅವಳ ತಾಳ್ಮೆ ಸಹನೆಯನ್ನು ಮೀರಿ ಅತಿರೇಕದಿ ವರ್ತಿಸುವುದು.ಇಲ್ಲದಿರೆ ಜೋರಾಗಿ ಚಿರುತ ಮಾತನಾಡಿ ಅಂತಃಕರಣವನು ಕೆಣಕಿ ಕೆರಳಿಸುವುದು ಸರಿಯೇ?ಅವಳನ್ನು ಮರುಗಿಸಿ ನಾವು ಸಂತಸದಿಂದ ಇರಲಾದೀತೇ?ಮಕ್ಕಳ ಸ್ವಭಾವವೇ ಹೀಗೆ ಎನ್ನುತ ಸಹಿಸಿಕೊಂಡು ಸುಮ್ಮನಿರುವಳು.
ಸ್ನೇಹಿತರ ಮುಂದೆ ಗುರುಗಳ ಮುಂದೆ ಅಮ್ಮನ ಗುಣಗಾನ ಮಾಡುತ ಮನೆಗೆ ಬಂದು ಗುರಾಯಿಸುತ ಅಸಡ್ಡೆ ತೋರುತ ಅಹಂಕಾರದಿ ವರ್ತಿಸಿದರೆ ತಾಯಿಗೆ ಹೇಗಾದಿತು? ಯೋಚನೆ ಮಾಡಿದ್ದೀರಾ.ನನ್ನ ಮಗ/ಮಗಳು ಒಳ್ಳೆಯ ರೀತಿಯಲ್ಲಿ ಬೆಳೆಯಲಿ ಎಂದು ತಮ್ಮೆಲ್ಲ ಬಯಕೆಗಳನ್ನು ತ್ಯಾಗ ಮಾಡುತ ಮಕ್ಕಳ ಬಯಕೆಗಳನು ಈಡೇರಿಸಲು ಮುಂದಾಗುತ್ತಾರೆ. ನೂರೆಂಟು ಸಮಸ್ಯೆ,ಸವಾಲುಗಳನ್ನು ಎದುರಿಸಿ ಅವರಿವರ ಬಳಿ ಸಾಲ ಶೂಲ ಮಾಡಿ ಶಾಲಾ/ಕಾಲೇಜು ಶುಲ್ಕ ಕಟ್ಟಿ ಕಂಡ ಕಂಡ ದೇವರಲ್ಲಿ ಪ್ರಾರ್ಥಿಸುತ ಪ್ರತಿ ದಿನ ಚಿಂತೆಯಲ್ಲಿಯೇ ಕಳೆಯುವರು.
ಆಧುನಿಕ ದಿನಮಾನಗಳಲ್ಲಿ ತಾಯಿ ಮಕ್ಕಳ ನಡುವಿನ ಸಂಬಂಧ ಕ್ಷೀಣಿಸುತ್ತ ಸಾಗುತ್ತಿರುವುದು ನೋವಿನ ಸಂಗತಿ.ತಾಯಿಯ ಮೇಲೆ ಮಗನ ಹಲ್ಲೆ,ಅಮ್ಮನಿಗೆ ಚಾಕು ಇರಿದು ಕೊಲೆ ಮಾಡಿದ ಕ್ರೂರಿ ಮಗ,ಈ ರೀತಿ ಆಗಾಗ ದಿನಪತ್ರಿಕೆಗಳಲ್ಲಿ ಕೇಳುತ್ತಾ ಇರುತ್ತೇವೆ. ಐಷಾರಾಮಿ ಜೀವನ ಮತ್ತು ನಂಬಿಕೆ ವಿಶ್ವಾಸಗಳಿಲ್ಲದಿರುವುದೇ ಬಲವಾದ ಕಾರಣ.ಜೀವದ ಅರಿವು ಇಲ್ಲ ಜೀವನದ ತಿರುವು ಗೊತ್ತಿಲ್ಲದೆ ಬಂದಂಗೆ ಹೋಗ್ತಾ ಇರುವುದೇ ಪ್ರಸ್ತುತ ಸಮಾಜಕೆ ಅಭ್ಯಾಸವಾಗಿದೆ.
ಊಟವು ಇಷ್ಟದ್ದು ಮಾಡದಿದ್ದರೆ ಇದನ್ನಾ ತಿನ್ನೋದಾ ನನಗೆ ಊಟವೇ ಬೇಡ ಬಿಡು.ನಿನಗೆ ಮೊದಲೇ ಹೇಳಿದ್ದೆಯಲ್ಲ ಅಮ್ಮಾ ಹೇಳಿದರೂ ಹೀಗೆ ಮಾಡತೀಯಾ ಎಂದು ಜೋರಾಗಿ ಆರ್ಭಟಿಸಿದನು ಮಗನೇ ಪರಿಸ್ಥಿತಿ ತಿಳಿದೂ ಹೀಗೆ ಮಾತಾಡಬೇಡ ನಿಮ್ಮಪ್ಪನ ಆರೋಗ್ಯವು ಏರುಪೇರಾಗಿದೆ ಅವರು ಕೆಲಸಕ್ಕೆ ಹೋಗುತ್ತಿಲ್ಲ ಆದಾಯವು ಇಲ್ಲ ಹಾಗಾಗಿ ಇದ್ದದ್ದರಲ್ಲೇ ಅಡುಗೆ ಮಾಡಿದೆ ಎಂದಾಗಲೂ ಕೇಳಲಿಲ್ಲ. ತಾಯಿಯ ಮನಸಿಗೆ ನೋವಾಗುತ್ತೆ ಎಂಬ ಅರಿವು ಕೂಡ ಇಲ್ಲದೆ ಕ್ರೂರವಾಗಿ ವರ್ತಿಸಿದನಲ್ಲ. ತಾಯಿಯ ಬೆಲೆ ಗೊತ್ತಿದ್ದರೆ ಹೀಗೆ ಮಾಡುತ್ತಿರಲಿಲ್ಲ.ತಾಯಿ ಜೊತೆ ಕೂಡಿ ಸಮಯ ಕಳೆಯುವ ವ್ಯವಧಾನವಿಲ್ಲ.ಹೆತ್ತತಾಯಿ ಎಂಬ ಕರುಣೆ ದಯೆ ಇಲ್ಲದಿರೆ ಬದುಕಾದರೂ ಹೇಗೆ ರೂಪಗೊಂಡಿತು. ಹೀಗಾಗಿಯೇ ಇಂದು ಅದೆಷ್ಟೋ ಯುವಕರು ಜೀವನ ಅತಂತ್ರ ಮಾಡಿಕೊಂಡು ತಾಯಿ ಮಾತನು ಧಿಕ್ಕರಿಸಿ ಅಡ್ಡ ಹಾದಿ ಹಿಡಿಯುತ್ತಿರುವುದು ಅಧಿಕವಾಗುತ್ತಿದೆ. ತಾಯಿ ಮಾತು ಕೇಳಿದ್ದೆ ಆಗಿದ್ದಲ್ಲಿ ಯುವಕರು ಸುಂದರ ಬದುಕು ರೂಪಿಸಿಕೊಂಡು ಸುಂದರ ಜೀವನ ನಡೆಸಬಹುದಿತ್ತು.ತಾಯಿ ಮರುಗಿಸಿದರೆ ಎಷ್ಟು ಹರಕೆ ಹೊತ್ತರೂ ಬಿಡಲಾರದು.
ಶಿಕ್ಷಣ, ಉದ್ಯೋಗ ನೆಪದಿ ದೂರ ತೆರಳುತ ಭವಿಷ್ಯದ ಬಗ್ಗೆ ಯೋಚಿಸುತ ತಾಯಿಯನ್ನೇ ಮರೆತು ಬಿಡುವ ಯುವಕರು ಅತ್ಯಧಿಕ.ನನ್ನ ಜೀವನವೇ ನನಗೆ ದುಸ್ತರವಾಗಿದೆ ನಿನ್ನನು ನೋಡಿಕೊಳ್ಳಲು ಆಗುವುದಿಲ್ಲ ಎಂದು ನೇರವಾಗಿ ಹೇಳುವ ಮಕ್ಕಳುಂಟು. ತಾಯಿಯ ಮನ ನೋಯಿಸಿ ಯುವ ಜನತೆ ಬದುಕು ನಡೆಸಿದರೆ ಆತ್ಮವಾದರೂ ಹೇಗೆ ಮೆಚ್ಚಿತು.ತಾಯಿಯೇ ಎಲ್ಲಕ್ಕಿಂತ ಮಿಗಿಲು ಇವಳಿಲ್ಲದಿರೆ ನಮ್ಮ ಜೀವನವೇ ಬುಡುಮೇಲಾಗುತ್ತಿತ್ತು ಎಂಬ ಪರಿಜ್ಞಾನವಿಲ್ಲದೆ ಅನಕ್ಷರಸ್ತರಂತೆ ವರ್ತಿಸುವರು.ಆಸ್ತಿಗಾಗಿ ಹೊಡೆದು ಬಡಿದು ತಾಯಿಯನ್ನು ಮನೆಯಿಂದ ಹೊರ ಹಾಕುವರು.
ತನಗೆ ಅನ್ನವಿಲ್ಲದಿದ್ದರೂ ಮಕ್ಕಳಿಗೆ ತುತ್ತು ಅನ್ನ ನೀಡಿ ಪೊರೆವ ಹೆತ್ತ ತಾಯಿಗೆ ತುತ್ತು ಅನ್ನ ನೀಡಲು ಆಗದಿದ್ದರೆ
ಇದ್ದು ನಿರರ್ಥಕ ಬದುಕು ವ್ಯರ್ಥ ತಾಯಿ ಮನಸು ನೋಯಿಸಿ ನೆಮ್ಮದಿಯಿಂದ ಬದುಕಿದವರಿಲ್ಲ.ಭವಿಷ್ಯ ಕಟ್ಟಿಕೊಂಡರು ದಿಢೀರ್ ನೆ ಬದುಕೇ ಸರ್ವನಾಶವಾಗದವರಿಲ್ಲ.
ನಮನ್ನು ಇಷ್ಟರ ಮಟ್ಟಿಗೆ ಬೆಳೆಸಿದ್ದಾಳೆ ಎಂದರೆ ತಾಯಿಯ ಜೀವ ಪಟ್ಟ ಕಷ್ಟ ಅಷ್ಟಿಷ್ಟಲ್ಲ ಬಡತನ ಬೆನ್ನತ್ತಿ ಕಾಡಿದರೂ ಕುಗ್ಗದೆ ದುಡಿಯುತ ಸಲಹಿದ ಮಹಾಮಾತೆ ತ್ಯಾಗಮಯಿ ಹಾಗಾಗಿ ಯುವ ಜನಾಂಗ ತಾಯಿಯ ಬೆಲೆಯರಿತು ಮನಸಿಗೆ ಘಾಸಿ ಆಗದಂತ ಮಾತುಗಳನ್ನಾಡದೆ ಆಗಾಗ ಸಾಂತ್ವನ ಹೇಳುತ ಧೈರ್ಯ ತುಂಬುತಲಿರಿ ಆಗ ತಾಯಿಗೂ ಹೆಮ್ಮೆ ಬದುಕಿಗೂ ಗರಿಮೆ ಸಮಾಜಕ್ಕೂ ಹಿರಿಮೆ.ತಾಯಿ ಋಣ ಎಂದು ತೀರಿಸಲಾಗದು ಅರಿತು ನಡೆದರೆ ಬದುಕಿಗೆ ಸಾರ್ಥಕತೆ ಲಭಿಸುವುದು.

ಅವಿನಾಶ ಸೆರೆಮನಿ
ಬೈಲಹೊಂಗಲ