ಮೈಸೂರು : ಪ್ರಸಿದ್ಧ ಬರಹಗಾರ್ತಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರು ಈ ಬಾರಿ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “ಕರ್ನಾಟಕದ ಹೆಮ್ಮೆಯ ಸಾಹಿತ್ಯಕಾರ್ತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಕರಾಗಲಿದ್ದಾರೆ” ಎಂದು ತಿಳಿಸಿದ್ದಾರೆ.
ಬಾನು ಮುಷ್ತಾಕ್ ಯಾರು?
ಬಾನು ಮುಷ್ತಾಕ್ (ಜನನ: ಏಪ್ರಿಲ್ 3, 1948) ಕನ್ನಡದ ಪ್ರಮುಖ ಬರಹಗಾರ್ತಿ, ಸಮಾಜಸೇವಕಿ ಹಾಗೂ ವಕೀಲೆಯಾಗಿದ್ದಾರೆ. ದೀಪಾ ಭಸ್ತಿ ಇಂಗ್ಲಿಷ್‌ಗೆ ಅನುವಾದಿಸಿದ ಅವರ ಕಥಾ ಸಂಕಲನ ಹಾರ್ಟ್ ಲ್ಯಾಂಪ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸಿತವಾಗಿದ್ದು, 2025ರಲ್ಲಿ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದಿದೆ.
ಹಾಸನದಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಬಾನು ಮುಷ್ತಾಕ್, ಬಾಲ್ಯದಲ್ಲೇ ಕನ್ನಡ ಭಾಷೆಯ ಮಿಷನರಿ ಶಾಲೆಯಲ್ಲಿ ವಿದ್ಯಾಭ್ಯಾಸ ಪ್ರಾರಂಭಿಸಿದರು. ಕೇವಲ ಆರು ತಿಂಗಳಲ್ಲಿ ಕನ್ನಡ ಓದು-ಬರಹ ಕಲಿತು, ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡರು.ಇದನ್ನು ಓದಿ –ಕುಸುಮಾ ಮತ್ತು ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಇಡಿ ದಾಳಿ
ಅವರು ಕೆಲ ಕಾಲ ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಕೆಲಸ ಮಾಡಿದ್ದರು. ಜೊತೆಗೆ ಬೆಂಗಳೂರಿನ ಆಲ್ ಇಂಡಿಯಾ ರೇಡಿಯೋದಲ್ಲೂ ಸೇವೆ ಸಲ್ಲಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿನ ತಮ್ಮ ಅದ್ಭುತ ಕೊಡುಗೆಯಿಂದ ಬಾನು ಮುಷ್ತಾಕ್ ಅವರು ಕನ್ನಡದ ಹೆಮ್ಮೆ ಹೆಚ್ಚಿಸಿರುವ ವ್ಯಕ್ತಿಯಾಗಿದ್ದಾರೆ.